ಸೋಮವಾರ, ಜೂನ್ 21, 2021
29 °C
ರಾಮನನ್ನು ಮೈ ಮೇಲೆ ಧರಿಸಿದ ಇವರಿಗೆ ಮಂದಿರದ ಗೊಡವೆಯಿಲ್ಲ

ರಾಮನಾಮಿಗಳು

ಡಿ. ಉಮಾಪತಿ Updated:

ಅಕ್ಷರ ಗಾತ್ರ : | |

Prajavani

‘ಗುಡಿಯಿಂದ ನಮ್ಮನ್ನು ದೂರವಿಟ್ಟರೆ ಏನಂತೆ? ಅಡಿಯಿಂದ ಮುಡಿಯವರೆಗೆ ರಾಮನೇ ನಮ್ಮನ್ನು ತುಂಬಿದ್ದಾನೆ ನೋಡಿ’ ಎಂದು ದೇಹದ ಮೇಲೆಲ್ಲ ‘ರಾಮ’ ನಾಮವನ್ನು ಹಚ್ಚೆ ಹಾಕಿಸಿಕೊಂಡು ಹೊಸ ಭಕ್ತಿ ಮಾರ್ಗವನ್ನೇ ಹುಟ್ಟುಹಾಕಿದ ಬುಡಕಟ್ಟು ಸಮುದಾಯದ ಕಥೆ ಇದು.

ಗುಡಿಯೊಳಕ್ಕೆ ಬಿಟ್ಟುಕೊಳ್ಳದ ಸವರ್ಣೀಯರ ಮೇಲರಿಮೆಗಳನ್ನು ಧಿಕ್ಕರಿಸಿ ತಾವು ನಂಬಿದ ರಾಮನ ಹೆಸರನ್ನು ಅಡಿಯಿಂದ ಮುಡಿತನಕ ಹಚ್ಚೆ ಹೊಯ್ಯಿಸಿಕೊಂಡು ಅಸ್ಮಿತೆಗಾಗಿ ಹಂಬಲಿಸಿದ ಅಸ್ಪೃಶ್ಯರ ಕಥೆಯಿದು.

ಗುಡಿಯಿಂದ ನಮ್ಮನ್ನು ದೂರ ಇಟ್ಟರೇನಂತೆ... ಗುಡಿಯೊಳಗಣ ನಿಮ್ಮ ಅದೇ ದೇವರು, ನಮ್ಮ ಮೈ ಮನಸುಗಳ ಮೇಲಿನ ಹಚ್ಚೆಯಾಗಿ, ಶ್ರದ್ಧೆಯಾಗಿ ಹಗಲಿರುಳು ನಮ್ಮೊಡನಿದ್ದಾನೆ ನೋಡಿರಯ್ಯಾ ಎಂದು ಸೋತು ಗೆದ್ದು ಅಣಕಿಸಿದವರ ವ್ಯಥೆಯಿದು.
ಶಿಲಾಮೂರ್ತಿ ರಾಮನ ಗೊಡವೆಯೇ ಬೇಡೆಂದು ಆತನನ್ನು ನಿರಾಕಾರನನ್ನಾಗಿಯೂ ನಿರ್ಗುಣನನ್ನಾಗಿಯೂ ಪ್ರೀತಿಸಿ ಪೂಜಿಸಿದ ಸಹನಶೀಲರು, ಪ್ರಗತಿಪರರು, ಪ್ರಬುದ್ಧರು ಛತ್ತೀಸಗಡದ ಚಮ್ಮಾರರು.

ಉಳ್ಳವರ ಶಿವಾಲಯವನ್ನು ಧಿಕ್ಕರಿಸಿ ದೇಹವೇ ದೇಗುಲವೆಂದ ಇವರಿಗೆ ನಮ್ಮ ಕ್ರಾಂತಿಕಾರಿ ಬಸವಣ್ಣನ ಪರಿಚಯ ಇರಲಿಲ್ಲ. ರಾಮನ ಹೆಸರೇ ಸಕಲ ಸರ್ವಸ್ವ ಎಂದು ನಂಬಿದ್ದರು. ‘ನೀನ್ಯಾಕೋ ನಿನ್ನ ಹಂಗ್ಯಾಕೋ, ನಿನ್ನ ನಾಮದ ಬಲವೊಂದಿದ್ದರೆ ಸಾಕೋ’ ಎಂಬ ಕನ್ನಡನಾಡಿನ ದಾಸರೂ ಇವರಿಗೆ ತಿಳಿದಿರಲಿಲ್ಲ. ಇವರೇ ಮಧ್ಯಭಾರತದ ರಾಮನಾಮಿಗಳು. ಜಾತಿವ್ಯವಸ್ಥೆಯ ಕ್ರೌರ್ಯದ ವಿರುದ್ಧ ತಣ್ಣಗೆ ಬಂಡೆದ್ದು ಬದುಕಿ ಬಾಳಿದ ಈ ಅನನ್ಯ ಪ್ರತಿಭಟನೆಯ ಪಂಥ ಈಗ ಗತದ ಕತ್ತಲಿಗೆ ಸರಿದಿದೆ. ಅಳಿದುಳಿದವರು ಪುನಃ ಹಿಂದೂ ಅಸ್ಪೃಶ್ಯರ ಕಳಂಕ ಧರಿಸಿ ಏಗುತ್ತಿದ್ದಾರೆ. ಹಿಂದೂ ಧರ್ಮದ ಏಣಿ ಶ್ರೇಣಿಗಳ ನಿಷ್ಕರುಣೆಯ ಸಹಸ್ರಬಾಹುಗಳು ಕೆಳಜಾತಿಗಳ ಪ್ರತಿಭಟನೆಯ ಪರಂಪರೆಗಳನ್ನು ಅಮುಕಿ ಅಳಿಸಿ ಹಾಕುತ್ತವೆ ಎಂಬ ಮಾತಿಗೆ ಮತ್ತೊಂದು ನಿದರ್ಶನವಿದು.

ಮಂದಿರ, ಮೂರ್ತಿಗಳ ಗೊಡವೆಯನ್ನು ಬಿಟ್ಟ ರಾಮನಾಮಿಗಳು ತುಳಸೀದಾಸರು ಬರೆದ ರಾಮಚರಿತ ಮಾನಸ ಗ್ರಂಥವನ್ನು ನಡುವಿನಲ್ಲಿಟ್ಟು ಸುತ್ತ ಕುಳಿತು ಭಜನೆ ಮಾಡಿದರು. ಅದು ಅವರ ಏಕೈಕ ಧಾರ್ಮಿಕ ಆಚರಣೆ. ಇವರ ಮೈಮೇಲಿನ ಹಚ್ಚೆಯಾದ ರಾಮ, ಜಂಗಮನೇ ಆಗಿಬಿಟ್ಟ. ರಾಮನನ್ನು ಸ್ಥಾವರವಾಗಿ ನೆಲೆಗೊಳಿಸಿದ ಮೇಲ್ಜಾತಿಗಳನ್ನು ರಾಮನಾಮಿಗಳು ಅಪ್ರತಿಭಗೊಳಿಸಿಬಿಟ್ಟಿದ್ದರು. ‘ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ’ ಎಂಬ ವಚನವನ್ನೂ ಇವರು ಕೇಳಿರಲಿಲ್ಲ. ಜಾತಿವ್ಯವಸ್ಥೆಯಿಂದ ತಮ್ಮ  ಬಿಡುಗಡೆಯ ದಾರಿಯಾಗಿ ಸಮಾನಾಂತರ ನೈತಿಕ ಜಗತ್ತೊಂದನ್ನು ನಿರ್ಮಿಸಿಕೊಂಡರು.

ತೋಳುಗಳ ಮೇಲೆ, ಹಣೆಯ ಮೇಲೆ, ನಖಶಿಖಾಂತ ರಾಮನಾಮದ ಹಚ್ಚೆ ಹೊಯ್ಯಿಸಿಕೊಂಡರು. ಕಡೆಯುಸಿರಿನ ತನಕ ಅಚ್ಚಳಿಯದ ಹಚ್ಚೆಯಿದು. ಹೀಗೆ ಹಚ್ಚೆ ಹೊಯ್ಯಿಸಿಕೊಳ್ಳುವುದು ಐಹಿಕ ಚೆಲುವನ್ನು ರಾಮಭಕ್ತಿ ಎಂಬ ಚೆಲುವಿಗೆ ಶರಣಾಗಿಸುವ ವಿಧಾನವೆಂದು ನಂಬಿದ್ದರು. ಮೈಮುರಿವ ದುಡಿತ ಮತ್ತು ಜಾತಿವ್ಯವಸ್ಥೆಯ ದಮನಕ್ಕೆ ಸಿಕ್ಕಿದ ಈ ಜನ ತಮ್ಮದೇ ಸಮ ಸಮಾಜದ ಕಿರು ಜಗತ್ತುಗಳನ್ನು ಸೃಷ್ಟಿಸಿಕೊಂಡರು. ವಿಶೇಷವಾಗಿ ತಯಾರಿಸಿದ ಶಾಯಿಯಲ್ಲಿ ರಾಮನಾಮ ಬರೆದ ದುಪ್ಪಟಿಗಳನ್ನು ಹೊದ್ದರು. ಮಾಂಸಾಹಾರ, ಮದ್ಯಪಾನ ತ್ಯಜಿಸಿದರು.

ಏಣಿಶ್ರೇಣಿಗಳು, ಸ್ವರ್ಗ ನರಕಗಳು, ಉಚ್ಚ ನೀಚವೆಂಬ ತರತಮಗಳನ್ನು ಇಂದಿಗೂ ಸಾವಿರ ಹೆಡೆಗಳ ಆದಿಶೇಷನಂತೆ ಜತನದಿಂದ ಕಾಯುತ್ತ ಬಂದಿರುವ ಸಾಮಾಜಿಕ ಧಾರ್ಮಿಕ ವ್ಯವಸ್ಥೆಯಿದು. ಇದರ ಅಂಚಿಗೆ ಜೋತು ಬಿದ್ದು, ಜೀವ ಹಿಡಿದುಕೊಂಡಿವೆ ಕೆಳಜಾತಿಗಳು. ನ್ಯಾಯಬದ್ಧ ಅಸ್ಮಿತೆಗೆ ಹಂಬಲಿಸಿ ಹಿಂದೂವಾದಿ ಚೌಕಟ್ಟಿನ ಒಳ-ಹೊರಗೆ ಕೈಕಾಲು ಬಡಿಯುತ್ತಲೇ ಬಂದಿವೆ. ಇಂತಹುದೇ ಒಂದು ಹೋರಾಟಗಾಥೆ ಅಂದಿನ ಮಧ್ಯಪ್ರದೇಶ ಮತ್ತು ಇಂದಿನ ಛತ್ತೀಸಗಡದ ರಾಮನಾಮಿ ಪಂಥದ್ದು. ತನ್ನದೇ ವಿಶಿಷ್ಟ ನೆಲೆ ರೂಪಿಸಿಕೊಂಡ ಅಧೋಲೋಕದ ಆಂದೋಲನ.

ಹತ್ತೊಂಬತ್ತನೆಯ ಶತಮಾನ ಮತ್ತು ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ಬ್ರಿಟಿಷರ ಆಡಳಿತದಡಿ ಉಂಟಾಗಿದ್ದ ಸಾಮಾಜಿಕ ಧಾರ್ಮಿಕ ತಳಮಳದ ಕಾಲಘಟ್ಟ.

ಜಾತಿ ವ್ಯವಸ್ಥೆಯ ವಿರುದ್ಧ ದನಿಯೆತ್ತಿ ಸಂತ ಕಬೀರ ಸಾರಿದ ಸಮಾನತೆಯ ತತ್ವಗಳ ಕಬೀರಪಂಥಕ್ಕೆ ಮಧ್ಯಭಾರತದ ಚರ್ಮಕಾರ ಅಸ್ಪೃಶ್ಯ ಜನಾಂಗ ಮನಸೋತಿತ್ತು. ಸಂತ ರವಿದಾಸ ಮತ್ತು ರಾಮಸ್ನೇಹಿ ಸಂಪ್ರದಾಯಗಳೂ  ಈ ಜನರನ್ನು ತಮ್ಮತ್ತ ಸೆಳೆದಿದ್ದವು. ಆದರೆ, ಮೇಲು ಕೀಳುಗಳ ಕಟ್ಟರ್‌ವಾದಿ ಕಟ್ಟು ಕಟ್ಟಳೆಗಳಿಗೆ ಪ್ರಬಲ ಸವಾಲು ಕಡೆದು ನಿಲ್ಲಿಸಿದ್ದು ಸತ್ನಾಮಿ ಸಮಾಜ. ಬಡ ಚಮ್ಮಾರ ರೈತ ಘಾಸೀದಾಸ ಹುಟ್ಟುಹಾಕಿದ ಪಂಥವಿದು. ಜನಿವಾರ ಧರಿಸಿ ಬಲವಂತವಾಗಿ ದೇವಾಲಯ ಪ್ರವೇಶಕ್ಕೆ ಮುಂದಾದ ಸತ್ನಾಮಿಗಳು ಸವರ್ಣೀಯರಿಂದ ತೀವ್ರ ಪ್ರತಿರೋಧ ಎದುರಿಸಿದ್ದ ದಿನಗಳು.

ಆಗ 1890ರಲ್ಲಿ ಪ್ರಬಲ ಶಕ್ತಿಯಾಗಿ ಮೈತಳೆದದ್ದು ರಾಮನಾಮಿ ಸಮಾಜ. ಈ ಪಂಥದ ಸ್ಥಾಪಕ ಕೂಡ ಅನಕ್ಷರಸ್ಥ ಚಮ್ಮಾರ. ಹೆಸರು ಪರಶುರಾಮ. ಇಪ್ಪತ್ತೈದರ ಹರೆಯದಲ್ಲಿ ಈತನಿಗೆ ತಗುಲಿದ ಕುಷ್ಠರೋಗವನ್ನು ರಾಮಾನಂದಿ ಜೋಗಿಯೊಬ್ಬ ಗುಣಪಡಿಸಿದ್ದ. ರಾಮಚರಿತ ಮಾನಸವನ್ನೇ ದೇವರೆಂದು ತಿಳಿದು ಅದರ ಪ್ರಚಾರಕ್ಕಾಗಿ ಬದುಕು ಸವೆಸುವಂತೆ ಆತ ಪರಶುರಾಮನಿಗೆ ಸೂಚಿಸಿದ್ದ. ಈ ಹೊತ್ತಿಗೆ ದೇವಾಲಯ ಪ್ರವೇಶ ದೊರೆಯದೆ ಉಚ್ಚಕುಲದವರ ಆಕ್ರೋಶಕ್ಕೆ ಗುರಿಯಾಗಿದ್ದ ಸತ್ನಾಮಿಗಳಿಗೆ ಕದನದ ಹಾದಿ ಸಾಕೆನಿಸಿತ್ತು. ಪರಶುರಾಮನ ರಾಮನಾಮ ಬೋಧನೆಯತ್ತ ಹೊರಳಿದರು. ರಾಮಾಯಣ ಕೇಳಿದರು. ರಾಮಭಜನೆಯಲ್ಲಿ ತೊಡಗಿದರು. ಒಲ್ಲೆನೆಂದರೂ ಪರಶುರಾಮನಿಗೆ ತಮ್ಮ ಗುರುವಿನ ಪಟ್ಟ ನೀಡಿದರು.

ರಾಮನಿಗೆ ಭಕ್ತಿಯನ್ನೂ ಹೊಸ ಗುರುವಿಗೆ ಶ್ರದ್ಧೆಯನ್ನೂ ತೋರುವ ಸಲುವಾಗಿ ಹಣೆಯ ಮೇಲೆ ‘ರಾಮ ರಾಮ’ ಎಂದು ಹಚ್ಚೆ ಹೊಯ್ಯಿಸಿಕೊಂಡರು. ಅಲ್ಲಿಯ ತನಕ ಕೆಳಜಾತಿಗಳು ಮತ್ತು ಅಸ್ಪೃಶ್ಯರ ಅಲಂಕರಣದ ಸಂಗತಿಯಾಗಿದ್ದ ಹಚ್ಚೆಗೆ ಹಠಾತ್ತನೆ ಧಾರ್ಮಿಕ ಆಯಾಮ ಒದಗಿತ್ತು. ಜನಿವಾರ ಧರಿಸಿದರೂ ನೈರ್ಮಲ್ಯ ಪಾಲಿಸಿದರೂ ದೇವಾಲಯ ಪ್ರವೇಶ ದೊರೆಯದ ಅಸ್ಪೃಶ್ಯರು ರಾಮನ ಹೆಸರನ್ನು ತಮ್ಮ ಮೈಮೇಲೆ ಉಸಿರಿರುವ ತನಕ ಅಳಿಯದಂತೆ ಚುಚ್ಚಿಸಿಕೊಂಡಿದ್ದರು. ಸತ್ಯನಾಮಿಗಳು ರಾಮನಾಮಿಗಳಾಗಿ ಬದಲಾದರು. ಮಂದಿರ ಪ್ರವೇಶಕ್ಕಾಗಿ ಸವರ್ಣೀಯ ಹಿಂದೂಗಳೊಂದಿಗೆ ಘರ್ಷಣೆ ಬೇಡವೆಂದು ಆದೇಶಿಸಿದ ಪರಶುರಾಮ, ರಾಮನಾಮ ಜಪ ಮತ್ತು ರಾಮಾಯಣ ವಾಚನವೇ ಮುಖ್ಯವೆಂದು ಹೇಳಿಕೊಟ್ಟ. ಸಮುದಾಯ ಸೇವೆ ಮತ್ತು ಸಾಮಾಜಿಕ ನ್ಯಾಯದ ಪರಿಕಲ್ಪನೆಗಳನ್ನು ತಿಳಿಸಿಕೊಟ್ಟ. ಅಸ್ಪೃಶ್ಯರೆಂಬ ಹಣೆಪಟ್ಟಿ ಹೊತ್ತ ತಮ್ಮ ಜಾತಿಯನ್ನು ಒಪ್ಪಿಕೊಂಡು ಘರ್ಷಣೆ ತ್ಯಜಿಸಿ ಬಾಳಬೇಕೆಂಬ ಶರಣಾಗತಿಯನ್ನೂ ಹೇಳಿಕೊಟ್ಟನೆಂಬ ಟೀಕೆ ಪರಶುರಾಮನ ವಿರುದ್ಧ ಕೇಳಿ ಬಂತು.

ರಾಮಾನಂದಿ ಮತ್ತು ರಾಮಸ್ನೇಹಿ ಬೋಧನೆಗಳಿಂದ ಪ್ರಭಾವಿತವಾಗಿದ್ದ ಕೆಲ ಮೇಲ್ಜಾತಿಗಳು ರಾಮನಾಮಿಗಳನ್ನು ಸಹಾನುಭೂತಿಯಿಂದ ನೋಡಿದವು. ಆದರೆ, ಬಹುಪಾಲು ಸವರ್ಣೀಯರು ವಿಷಕಾರಿದರು. ದೈಹಿಕ ಹಿಂಸಾಚಾರಕ್ಕೆ ಇಳಿದರು. ರಾಮನಾಮಿಗಳು ಹೊದೆಯುತ್ತಿದ್ದ ರಾಮನಾಮ ಬರೆದಿದ್ದ ಶಾಲುಗಳನ್ನು ಮತ್ತು ಅವರು ಟೋಪಿಗಳಿಗೆ ಸಿಕ್ಕಿಸಿಕೊಳ್ಳುತ್ತಿದ್ದ ನವಿಲುಗರಿಯನ್ನು ಅಪಹರಿಸಿ ಸುಟ್ಟರು. ರಾಮನಾಮಿಗಳನ್ನು ಅಪಹರಿಸಿ ರಾಮನಾಮ ಬರೆದಿದ್ದ ಹಣೆಯ ಚರ್ಮವನ್ನು ಸುಡುವ ಇಲ್ಲವೇ ಅದನ್ನು ಕೊಯ್ದು ಹಾಕುವ ಹೀನ ಕೃತ್ಯಗಳಿಗೆ ಇಳಿದರು. ರಾಮಭಕ್ತಿಯನ್ನು ಮತ್ತು ಪವಿತ್ರ ರಾಮನಾಮವನ್ನು ಚಮ್ಮಾರರು ಅಪವಿತ್ರಗೊಳಿಸುತ್ತಿದ್ದಾರೆಂಬುದು ಅವರ ಆಕ್ರೋಶವಾಗಿತ್ತು.

ಹಲ್ಲೆಗಳು ಎಲ್ಲೆ ಮೀರಿದಾಗ ಪರಶುರಾಮ ಬ್ರಿಟಿಷ್ ಆಡಳಿತಕ್ಕೆ ದೂರು ನೀಡಿದ. 1910ರಲ್ಲಿ ವಿಚಾರ ನ್ಯಾಯಾಲಯದ ಮೆಟ್ಟಿಲೇರಿತು. ಸವರ್ಣೀಯರು ಹಲ್ಲೆಗಳನ್ನು ಸಮರ್ಥಿಸಿಕೊಂಡರು. ರಾಮನಾಮ ಕೇವಲ ಸವರ್ಣೀಯರ ಸ್ವತ್ತು ಎಂದು ವಾದಿಸಿದರು. ಈ ವಾದವನ್ನು ನ್ಯಾಯಾಧೀಶರು ತಿರಸ್ಕರಿಸಿದರು. 1912ರ ಅಕ್ಟೋಬರ್ 12 ರಾಮನಾಮಿಗಳು ಕೇಸು ಗೆದ್ದ ದಿನ. ದೇವರ ಸ್ತುತಿಯಾದ ರಾಮನಾಮ ಸರ್ವರಿಗೂ ಸೇರಿದ್ದು ಎಂದು ತೀರ್ಪು ನೀಡಲಾಗಿತ್ತು. ರಾಮನಾಮಿಗಳು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದೇ ಆದರೆ ಅವರಿಗೆ ಪೊಲೀಸರ ರಕ್ಷಣೆ ನೀಡಬೇಕೆಂದು ಆದೇಶ ನೀಡಿತ್ತು ನ್ಯಾಯಾಲಯ.

ಬ್ರಾಹ್ಮಣ್ಯದ ಅಹಂಕಾರದ ವಿರುದ್ಧ ಗಳಿಸಿದ ವಿಜಯವೆಂದು ರಾಮನಾಮಿಗಳು ಬೀಗಿದರು. ಪಂಥದ ಜನಪ್ರಿಯತೆ ಪಸರಿಸಿತು. ಪರಶುರಾಮ 1920ರ ಸುಮಾರಿಗೆ ಕಡೆಯುಸಿರೆಳೆದ. ಆ ಹೊತ್ತಿಗೆ ಹಚ್ಚೆ ಹೊಯ್ಯಿಸಿಕೊಂಡಿದ್ದ ರಾಮನಾಮಿಗಳ ಸಂಖ್ಯೆ 20 ಸಾವಿರಕ್ಕೆ ಏರಿತ್ತಂತೆ. ಹೊಯ್ಯಿಸಿಕೊಳ್ಳದಿದ್ದ ರಾಮನಾಮಿಗಳು ನಲವತ್ತು ಸಾವಿರದಷ್ಟಿದ್ದರಂತೆ. ಪರಶುರಾಮ ಬೇಕೆಂದೇ ತನ್ನ ಉತ್ತರಾಧಿಕಾರಿಯನ್ನು ಆರಿಸಿರಲಿಲ್ಲ. ರಾಮನಾಮಿಗಳೆಲ್ಲ ಸಮಾನರಾಗಿ ಸಹಬಾಳ್ವೆಯ ಸಮುದಾಯವಾಗಿ ಬದುಕಬೇಕೆಂದು ಬೋಧಿಸಿದ್ದ.

ರಾಮನಾಮಿ ಪಂಥದ ಅಧಿಕೃತ ಧರ್ಮಗ್ರಂಥ ತುಳಸೀದಾಸರ ರಾಮಚರಿತ ಮಾನಸ. ಆದರೆ, ತುಳಸೀದಾಸರ ರಾಮನಿಗಿಂತ ಭಿನ್ನ ನೆಲೆಯಲ್ಲಿ ನಿಲ್ಲುವ ಬಹುಮುಖಿ ರಾಮನ ಮೌಖಿಕ ಕಥನ ಪರಂಪರೆಗಳನ್ನು ಈ ಆಂದೋಲನದ ಚರಿತ್ರೆ ಮತ್ತು ಆಚರಣೆಗಳಲ್ಲಿ ನೋಡಬಹುದು.

ಭೌತಿಕ ರೂಪದಲ್ಲಿ ರಾಮಚರಿತ ಮಾನಸ ಗ್ರಂಥವೇ ರಾಮನಾಮಿಗಳ ದೈವ ಎನಿಸಿಕೊಂಡಿತು. ಅದರ ಪಠಣವೇ ಪೂಜೆಯಾಯಿತು. ಕಾಲ ಉರುಳಿದಂತೆ ನಿರಾಕಾರ ನಿರ್ಗುಣ ರಾಮನ ಪರ್ಯಾಯ ಕಥನಗಳು ಭಜನೆಗೆ ಸೇರಿಕೊಂಡವು. ಮಾನಸದಲ್ಲಿ ರಾಮನಾಮವೊಂದೇ ಪ್ರಶ್ನಾತೀತ ಆಯಿತು. ಉಳಿದದ್ದೆಲ್ಲವೂ ಮರುವ್ಯಾಖ್ಯಾನಕ್ಕೆ ಒಳಗಾದವು. ತಮ್ಮ ನಂಬಿಕೆಗಳು ಮತ್ತು ಮೌಲ್ಯಗಳಿಗೆ ವ್ಯತಿರಿಕ್ತವಾದ ಅಂಶಗಳನ್ನು ರಾಮನಾಮಿಗಳು ಬದಿಗೆ ಸರಿಸಿದರು. ಹೀಗೆ ಮಾನಸವು ಏಕಕಾಲಕ್ಕೆ ಪವಿತ್ರ ಗ್ರಂಥವೂ, ಮರುವ್ಯಾಖ್ಯಾನಗಳು ಟೀಕೆ ಟಿಪ್ಪಣಿಗಳನ್ನು ಸೇರಿಸಿಕೊಂಡ ಮುಕ್ತ ಗ್ರಂಥವೂ ಆಯಿತು.

ರಾಮನಾಮಿಗಳ ಬದುಕಿನ ರೀತಿಗೆ ಮನಸೋತ ಕ್ಯಾಲಿಫೋರ್ನಿಯಾದ ಪ್ರೊಫೆಸರ್ ಒಬ್ಬರು ಅವರಲ್ಲೊಬ್ಬರಾಗಿ ಹತ್ತಾರು ವರ್ಷಗಳ ಕಾಲ ಛತ್ತೀಸಗಡದಲ್ಲೇ ಬದುಕಿದ್ದರು. ತಮ್ಮ ಹೆಸರನ್ನು ರಾಮದಾಸ ಎಂದು ಬದಲಾಯಿಸಿಕೊಂಡರು. ರಾಮನಾಮಿಗಳ ಬದುಕನ್ನು ಎಲ್ಲ ವಿವರಗಳೊಂದಿಗೆ ದಾಖಲಿಸಿದರು. ರಾಮದಾಸ್ ಲ್ಯಾಂಬ್ ಎಂಬ ಈ ಪ್ರೊಫೆಸರ್ ಹೀಗೆ ದಾಖಲಿಸದೆ ಹೋಗಿದ್ದರೆ ಗೆದ್ದವರೇ ಇತಿಹಾಸ ಬರೆಯುವ ಈ ವ್ಯವಸ್ಥೆಯಲ್ಲಿ ರಾಮನಾಮಿ ಪಂಥ ಹೇಳಹೆಸರಿಲ್ಲದೆ ಅಳಿಸಿ ಹೋಗುತ್ತಿತ್ತು.

ಕಾಲಪ್ರವಾಹದ ಹೊಡೆತ ರಾಮನಾಮಿಗಳನ್ನು ಪುನಃ ಯಥಾಸ್ಥಿತಿವಾದಿ ವ್ಯವಸ್ಥೆಗೆ ತಳ್ಳಿದೆ. ಪಂಥದ ಬೇರುಗಳು ಶಿಥಿಲವಾಗಿವೆ. ಹಚ್ಚೆಗಳು ಸಾಮಾಜಿಕ ತಾರತಮ್ಯದ ಕುರುಹುಗಳಾಗಿಬಿಟ್ಟಿವೆ. ಇಂದಿನ ಪೀಳಿಗೆ ಎದೆಯ ಮೇಲೆಯೋ, ತೋಳಿನ ಬದಿಯಲ್ಲೋ ರಾಮನಾಮದ ಒಂದು ಹಚ್ಚೆ ಹೊಯ್ಯಿಸಿಕೊಂಡರೆ ಅದೇ ಹೆಚ್ಚು. ರಾಮಾಯಣವನ್ನು ಓದಬೇಕೆಂಬ ಹಂಬಲ ಈ ಸಮುದಾಯವನ್ನು ಅಕ್ಷರಗಳತ್ತ ಮುನ್ನಡೆಸಿತು. ರಾಮನಾಮಿ ಸಮುದಾಯ ಇದೀಗ ಸಾಕ್ಷರ ಸಮುದಾಯ. ಸುಶಿಕ್ಷಿತ ಸಮುದಾಯ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು