ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವನ ವಿಸ್ತಾರಕ್ಕೆ ತಿರುಕ್ಕುರಳ್

Last Updated 4 ಜೂನ್ 2020, 3:30 IST
ಅಕ್ಷರ ಗಾತ್ರ

ಅಗರ ಮುದಲ ಎಳುತ್ತೆಲ್ಲಾಂ ಆದಿ ... ಎಂದು ತೊಡಗುವ ತಿರುಕ್ಕುರಳ್, ತಮಿಳಿನ ಜ್ಞಾನಪರಂಪರೆಯ ಹೃದಯ. ತಮಿಳುನಾಡಿನ, ತಮಿಳುಕಾವ್ಯಗಳ, ತಮಿಳು ಜನರ ಆರಾಧ್ಯನಾದ ಕವಿ, ಜ್ಞಾನಿ ತಿರುವಳ್ಳುವರ್. ಆತ ಹೇಳಿದ ಕುರಳ್ 1330 ಎಂದು ಲೆಕ್ಕ. ಅದರಲ್ಲಿಯೂ ಮೂರು ವಿಭಾಗಗಳು. ಅರಮ್, ಪೊರುಳ್ ಮತ್ತು ಇನ್ಬಮ್ (ಧರ್ಮ, ಸೊತ್ತು ಮತ್ತು ಪ್ರೇಮ) ಎನ್ನುವುದು ವಿಭಾಗ. ಆತನ ಕಾಲ, ಬರೆದ ಸಮಯ, ಇತ್ಯಾದಿ ವಿಚಾರಗಳಲ್ಲಿ ಭಿನ್ನಾಭಿಪ್ರಾಯಗಳಿವೆ. ತಮಿಳುನಾಡಿನ ಇತಿಹಾಸಗಳಲ್ಲಿ ‘ಸಂಗಂ ಕಾಲ‘ ಎನ್ನುವ ವಿಪರೀತ ಕಾಲವೊಂದಿದೆ. ಸಂಗಂಗಿಂತ ಮೊದಲೋ ನಂತರವೋ ಎಂದೆಲ್ಲಾ ಚರ್ಚೆಗಳಿವೆ.

ಪ್ರಪಂಚದ ಎಲ್ಲಾ ಅನುಭವಜನ್ಯವಾದ ವಸ್ತುವಿಷಯಗಳನ್ನು ಕುರಳ್ ಹೇಳಿದೆ. ಆ ನಿಟ್ಟಿನಲ್ಲಿ ತಮಿಳರ ಕಾರ್ಯ ಅತ್ಯಂತ ಶ್ಲಾಘನೀಯ. ತಮಿಳರು ತಮ್ಮ ಕಾವ್ಯವನ್ನು ಬೇಕಾದ ಹಾಗೆ ವಿಭಾಗಿಸಿ, ಅಧ್ಯಯನಗಳಲ್ಲಿ ಬಳಸಿ, ರಾಜಕೀಯ, ಸಾಹಿತ್ಯದ ಕ್ಷೇತ್ರಗಳಲ್ಲಿ ಉಪಯೋಗಿಸಿ ಇಂದಿಗೂ ಅದರ ಅವಶ್ಯಕತೆ, ಪ್ರಚಾರ ನಡೆಯುವಂತೆ ನೋಡಿಕೊಂಡಿದ್ದಾರೆ. ಉದಾಹರಣೆಗೆ, ಕರ್ನಾಟಕದ ಸಾರಿಗೆ ಬಸ್ಸುಗಳಲ್ಲಿ ಒಂದು ಸಾಲು ನೋಡಬಹುದು: ಡಿವಿಜಿಯವರ ‘ಹರುಷಕ್ಕಿದೆ ದಾರಿ’ ಎಂದು. ಆದರೆ ತಮಿಳುನಾಡಿನ ಸಾರಿಗೆಯಲ್ಲಿ ನೋಡಿ, ಒಂದೊಂದು ಬಸ್ಸುಗಳಲ್ಲಿ ನಾಲ್ಕೈದು ಕುರಳ್, ಅದೂ ಬೇರೆ ಬೇರೆ. ನಾವು ಒಂದು ವೇಳೆ ಒಂದು ತಿಂಗಳು ಬೇರೆ ಬೇರೆ ತಮಿಳುನಾಡಿನ ಬಸ್ಸುಗಳಲ್ಲಿ ಸಂಚರಿಸಿದರೆ ಒಂದು ಸಾವಿರ ಕುರಳ್ ಓದಬಹುದು. ಅರ್ಥವನ್ನು ಕಂಡಕ್ಟರ್ ಕೂಡ ಹೇಳಬಲ್ಲನು. ಇದು ಕುರಳ್ ಮೋಡಿ.

ಕುರಳ್ ಇಷ್ಟವಾಗಲು ಇನ್ನೊಂದು ಕಾರಣವೆಂದರೆ ಅತಿಯಲ್ಲದ ಪದಗಳು. ಸರ್ವಜ್ಞನ ವಚನಕ್ಕಿಂತ ಸಣ್ಣದು. ಎರಡು ಸಾಲಿನ ಮಾತುಗಳಲ್ಲಿ ಪ್ರಾಸವೂ ಇದೆ. ಉದಾಹರಣೆಗೆ:

ಮಲರ್’ಮಿಸೈ ಏಕಿನಾನ್ ಮಾನಾಟಿ ಸೇರ್ಂದಾರ್

ನಿಲಮಿಸೈ ನೀಡುವಾಳ್ ವಾರ್

ಈ ಸಾಲುಗಳಲ್ಲಿ ಮ ಅಕ್ಷರದ ಪುನರಾವರ್ತನೆಯೂ, ಎರಡನೇ ಸಾಲಿನಲ್ಲಿ ಬರುವ ಪ್ರಾಸವೂ ಓದುವುದಕ್ಕೆ ಬಹಳ ಖುಷಿ ಕೊಡುವಂತಹದ್ದು. ಕೆಲವೊಂದು ಕುರಳ್‌ಗಳನ್ನು ಹೊರತು ಪಡಿಸಿದರೆ, ಹೆಚ್ಚಿನದ್ದರಲ್ಲಿ ಈ ರೀತಿಯ ಆದಿಪ್ರಾಸಗಳು, ಪದಪ್ರಾಸಗಳು ಇವೆ. ಅರ್ಥವಿಸ್ತಾರದ ಸಾಧ್ಯತೆಯಂತೂ ಇದ್ದೇ ಇದೆ. ಉಪ್ಪಿನಕಾಯಿಯಂತೆ ಒಳ್ಳೆಯ ರುಚಿ – ಮೊಸರನ್ನಕ್ಕೂ ಆಗಬಹುದು, ಕುಡಿತಕ್ಕೂ ಒದಗಬಹುದು!

ಈ ಮೇಲಿನ ಸಾಲುಗಳು, ಎಲ್ಲರಲ್ಲಿಯೂ ಇರುವ ಭಗವಂತನ ಸ್ಮರಣೆ ಮಾಡುವವರಿಗೆ ಆತನು ಆಯುಷ್ಯವನ್ನು ವೃದ್ಧಿಸುತ್ತಾನೆ ಎನ್ನುವುದೇ ಆಗಿದೆ. ಆದರೆ ಇದೇ ಕುರಳ್ ತೆಗೆದುಕೊಂಡು ಒಂದು ದೊಡ್ಡ ಲೇಖನವನ್ನೂ ಪ್ರವಚನವನ್ನೂ ಮಾಡಬಹುದು; ಮಾಡಿದವರೂ ಇರಬಹುದು. ಇತ್ತೀಚೆಗೆ ಒಂದು ಉಪನ್ಯಾಸ ಕೇಳುವಾಗ ‘ಮಲರ್’ಮಿಸೈ ಏಕಿನಾನ್’ ಎಂದು ದೇವರನ್ನು ಹೇಳಿದ ಬಗೆಗೇ ಒಂದು ದೊಡ್ಡ ಚರ್ಚೆಯನ್ನು ಕೇಳಿದ್ದೆ.

ದೈವ, ಪ್ರೀತಿ, ಕೃತಜ್ಞತೆ, ಸಹಾಯ, ಆರೋಗ್ಯ, ದಾನ, ಹೊಗಳಿಕೆ, ತಪಸ್ಸು, ಕಾಮ, ಕರುಣೆ, ಭ್ರಮೆ – ಎಲ್ಲ ರೀತಿಯ ಭಾವಗಳನ್ನೂ ಕಲಿಕೆಗಳನ್ನೂ ಈ ತಿರುಕ್ಕುರಳ್ ಕೊಡುತ್ತದೆ. ಸುಲಭವಾಗಿ ಅರ್ಥವಾಗಲು ಈಗ ಬಹಳಷ್ಟು ಸಾಧ್ಯತೆಗಳೂ ಇವೆ. ಇನ್ನೊಂದು ಉದಾಹರಣೆ ಕೊಡುವುದಾದರೆ ‘ಮಿಗಿಲುಂ ಕೊರೆಯಿಲುಂ ನೋಯ್ ಸೈಯ್ಯುಂ ನೂಲೋರ್ ವಳಿಮುದಲಾ ಎಣ್ಣಿಯ ಮೂನ್ರ್’ ಎನ್ನುವ ಕುರಳ್ ಅರ್ಥವಾಗಲು ಸ್ವಲ್ಪ ಓದಿನ ಅವಶ್ಯಕತೆ ಇದೆ. ಈ ಮೂರು ಗುಣಗಳ ಹೆಚ್ಚಾಗುವಿಕೆ ಅಥವಾ ಕಡಿಮೆಯಾಗುವಿಕೆಯೇ ಮನುಷ್ಯದ ದೈಹಿಕವಾದ ನೋವಿಗೆ ಕಾರಣ ಎನ್ನುವುದು ಅರ್ಥವಾದರೂ ಈ ಮೂರು ಯಾವುದು ಎಂದು ಇಲ್ಲಿಲ್ಲ. ವಾತ, ಪಿತ್ಥ, ಕಫಗಳೇ ಇವು ಎಂದು ಅರ್ಥವಾಗಲಿಕ್ಕೆ ಸ್ವಲ್ಪ ಓದಿನ ಜ್ಞಾನ ಬೇಕಾಗುತ್ತದೆ. ಹೀಗೇ ಬಹಳಷ್ಟು ಸಾಧನೆಗಳ, ಪರಂಪರೆಯ, ಜ್ಞಾನದ ಕುರಳ್ ನಮ್ಮನ್ನು ಇನ್ನಷ್ಟು ವಿಸ್ತಾರ ಮಾಡುವುದರಲ್ಲಿ ಎರಡು ಮಾತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT