ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಚನ ವಾಣಿ: ಶರಣರ ವಚನಗಳ ವಾಚನ, ಅರ್ಥವಿವರಣೆ ಮತ್ತು ವಚನ ಗಾಯನ ಸರಣಿ–7

Last Updated 31 ಆಗಸ್ಟ್ 2020, 3:50 IST
ಅಕ್ಷರ ಗಾತ್ರ

ಆವ ಮಡಕೆಯಾಗಲಿ ಸ್ವಾದ ಸಾಕಾರದಲ್ಲಿ ಭೇದವಿಲ್ಲ.
ಮಣ್ಣ ಮಡಕೆ ಒಕ್ಕಲಿಗನಲ್ಲಿ,
ಚಿನ್ನದ ಮಡಕೆ ಅರಮನೆಯಲ್ಲಿ.
ಅರಮನೆ ಗುರುಮನೆ ಹಿರಿದಾದ ಕಾರಣ
ಹಾದರ ಸಲ್ಲದು ಕಾಣಾ ತ್ರಿಪುರಾಂತಕಲಿಂಗವೆ!
ಕಿನ್ನರಿ ಬ್ರಹ್ಮಯ್ಯ


ಸಮಾನತೆ, ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರಧಾನ ತತ್ವ. ಇದನ್ನು ಒಂಬೈನೂರು ವರ್ಷಗಳ ಹಿಂದೆಯೇ ತಮ್ಮ ಬದುಕು ಮತ್ತು ವ್ಯಕ್ತಿತ್ವಗಳಲ್ಲಿ ಪ್ರಯೋಗಿಸಿ, ಅದರ ಫಲಿತಗಳನ್ನು ಸಮುದಾಯದ ಸುಸ್ಥಿತಿಗಾಗಿ ಧಾರೆಯೆರೆದರು ಕನ್ನಡ ಶರಣರು. ವರ್ಗ, ವರ್ಣ, ಲಿಂಗಭೇದಗಳಿಲ್ಲದ ಸಾಮಾಜಿಕ ವ್ಯವಸ್ಥೆ ನಿರ್ಮಿಸುವ ಗುರಿ ಹೊಂದಿದ್ದ ಅವರು, ಸಾಧ್ಯವಿರುವಲ್ಲೆಲ್ಲ ಸಮಾನತೆ ಎಂಬ ಕ್ರಿಯಾಪರಿಕಲ್ಪನೆಯನ್ನು ಪ್ರಯೋಗಗಳ ಮೂಲಕ ತೋರಿಸಿದರು. ಕಿನ್ನರಿ ಬ್ರಹ್ಮಯ್ಯನ ಪ್ರಸ್ತುತ ವಚನ ಅಂಥದಕ್ಕೆ ಉದಾಹರಣೆ.

ಕಿನ್ನರಿ ಬ್ರಹ್ಮಯ್ಯ ಇಲ್ಲಿ ಎಲ್ಲರ ಮನೆಗಳಲ್ಲೂ ಉಪಯೋಗಿಸುವ ಮಡಕೆಯ ರೂಪಕ ಬಳಸಿ, ಆ ಮೂಲಕ ವಿವಿಧ ಜನವರ್ಗದ ಸ್ತರಗಳ ಭೇದಗಳನ್ನು ತೋರಿಸುತ್ತಾನೆ. ಮಣ್ಣಿನ ಮಡಕೆ ಬಳಸುವವರು ರೈತರು ಅಥವಾ ಶ್ರಮಜೀವಿಗಳು-ಶೂದ್ರರು, ಬಂಗಾರದ ಮಡಕೆ ಉಪಯೋಗಿಸುವವರು ಅರಮನೆ ಮತ್ತು ಗುರುಮನೆಗಳಲ್ಲಿ ವಾಸಿಸುವವರು. ಆದರೆ, ಮಡಕೆ ಮಣ್ಣಿನದೇ ಇರಲಿ, ಚಿನ್ನದ್ದೇ ಇರಲಿ ಅದರ ಆಕಾರ ಮತ್ತು ಅದರಲ್ಲಿ ಮಾಡಿದ ಅಡುಗೆಯ ರುಚಿ ಒಂದೇ ತೆರನಾಗುರುವುದು ವಾಸ್ತವ. ಇಲ್ಲಿ ವ್ಯತ್ಯಾಸವೆಂದರೆ, ಎರಡೂ ಮಡಕೆಗಳು ಬಳಕೆಯಾಗುವ ಸ್ಥಳ ಮತ್ತು ಸ್ತರಗಳು ಮಾತ್ರ.

ನಮ್ಮ ಸಮಾಜೋ-ಧಾರ್ಮಿಕ ವ್ಯವಸ್ಥೆಯಲ್ಲಿ ಶ್ರಮಜೀವಿಗಳೆಂದರೆ ಕೀಳು ಹಾಗೂ ಅರಸರು-ಗುರುವರ್ಗದವರು ಮೇಲು ಅಥವಾ ಶ್ರೇಷ್ಠ ಎಂಬ ವಿಕೃತ ಸಿದ್ಧಾಂತವು ಪರಂಪರಾಗತವಾಗಿ ಜಾರಿಯಲ್ಲಿತ್ತು. ಆಯಾ ವರ್ಗದ ಜನರ ಅಧಿಕಾರ ಮತ್ತು ಅಂತಸ್ತುಗಳಿಗೆ ಅನುಗುಣವಾಗಿ ಅವರು ಬಳಸುವ ವಸ್ತುಗಳು, ಅವರ ಜೀವನದ ಸ್ತರ, ಶೈಲಿಗಳಲ್ಲಿ ವ್ಯತ್ಯಾಸಗಳಿದ್ದವು. ಮೇಲ್ವರ್ಗ ಮತ್ತು ಮೇಲ್ವರ್ಣದವರಿಗೆ ಅವರ ಸುಖಭೋಗ ಮತ್ತು ನಡತೆಗಳಲ್ಲಿ ಇದ್ದ ಅವಕಾಶಗಳು ಶ್ರಮಿಕ-ಶೂದ್ರ ವರ್ಗದವರಿಗೆ ಇರಲಿಲ್ಲ. ಈ ಸತ್ಯವನ್ನೇ ಕಿನ್ನರಯ್ಯ ಇಲ್ಲಿ ದಾಖಲಿಸುತ್ತಾನೆ. ಜೊತೆಗೇ, “ಅರಮನೆ ಗುರುಮನೆ ಹಿರಿದಾದ ಕಾರಣ ಹಾದರ ಸಲ್ಲದು ಕಾಣಾ”ಎಂದು ಮೇಲ್ವರ್ಗದ ಜನರಿಗೆ ಎಚ್ಚರಿಕೆಯನ್ನೂ ನೀಡುತ್ತಾನೆ. ವಚನದ ಮಹತ್ವ ಇರುವುದೇ ಇಲ್ಲಿ.

ಕೆಳವರ್ಗ-ವರ್ಣದವರಿಗೆ ಮಾತ್ರ ನೀತಿ-ನಿರ್ಬಂಧ, ಅವು ತಮಗಲ್ಲವೆಂದೇ ಮೆರೆಯುತ್ತಿದ್ದ ಮೇಲ್ವರ್ಗವರಿಗೆ ಇದು ದೊಡ್ಡ ಪಾಠ. ಅಷ್ಟೇ ಅಲ್ಲ; ಯಾರು ಮಾಡಿದರೂ ಹಾದರ ಅನೈತಿಕವೇ ಎಂಬ ವಿವೇಕದ ಗಟ್ಟಿದನಿ ಕೂಡ ಇಲ್ಲಿದೆ.

ಸಮಾನತೆ ತತ್ವ ಎಲ್ಲರಿಗೂ ಸಮಾನವಾಗಿಯೇ ಅನ್ವಯವಾಗಬೇಕೆಂಬ ಸಮಾಜವಾದಿ ಅಪೇಕ್ಷೆಯನ್ನು ಶರಣರು ಶತಶತಮಾ£ಗಳ ಹಿಂದೆಯೇ ದಾಖಲಿಸಿದ್ದು ಐತಿಹಾಸಿ ಕ್ರಾಂತಿ. ಜೊತೆಗೆ, ಅನೈತಿಕತೆ ಎಲ್ಲಿಯೂ ಸಲದು ಎಂಬ ಅವರ ಸಮಾಜಸ್ವಾಸ್ಥ್ಯದ ಧ್ವನಿಯೂ ಇಲ್ಲಿ ಅತ್ಯಂತ ಮುಖ್ಯವಾಗುತ್ತದೆ. ಕಿನ್ನರಿ ಬ್ರಹ್ಮಯ್ಯನ ವೈಚಾರಿಕತೆ ಮತ್ತು ಉನ್ನತ ಜ್ಞಾನಕ್ಕೆ ಸಾಕ್ಷಿಯಾಗುವ ಈ ವಚನದ ಆಶಯ ಈಗಲೂ ಇದು ಪ್ರಸ್ತುತವಲ್ಲವೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT