ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಲ್ಮೀಕಿ: ಕರುಣರಸದ ಕಡಲಿನ ಒಡಲು

ಅಕ್ಟೋಬರ್ 13 ವಾಲ್ಮೀಕಿ ಜಯಂತಿ
Last Updated 13 ಅಕ್ಟೋಬರ್ 2019, 5:59 IST
ಅಕ್ಷರ ಗಾತ್ರ

ವಾಲ್ಮೀಕಿಮಹರ್ಷಿಯ ಬಗ್ಗೆ ರಾಮಾಯಣದಲ್ಲಿ ವಿವರಗಳು ದೊರೆಯುವುದಿಲ್ಲ; ಅವರೊಬ್ಬ ಮುನಿ, ಆಮೇಲೆ ಕವಿಯೂ ಆದರು – ಎನ್ನುವುದಷ್ಟೆ ಅಲ್ಲಿರುವ ಮಾಹಿತಿ. ರಾಮಾಯಣವೇ ಅವರ ವ್ಯಕ್ತಿತ್ವವನ್ನು ಸಾರುತ್ತಿರುವ ರಸಪ್ರಮಾಣವಾಗಿದೆ...

ಋಷಿಕವಿ ವಾಲ್ಮೀಕಿಯಂತೆ ಒಂದು ಜನಾಂಗದ ಮೇಲೆ ಗಾಢವಾದ ಪ್ರಭಾವದ ಮುದ್ರೆಯನ್ನು ಮೂಡಿಸಿರುವವರು ಇನ್ನೊಬ್ಬರಿಲ್ಲ – ವ್ಯಾಸರೊಬ್ಬರನ್ನು ಹೊರತು ಪಡಿಸಿ. ಇಡಿಯ ಭಾರತೀಯ ಸಂಸ್ಕೃತಿ ಈ ಇಬ್ಬರು ಮಹಾಕವಿಗಳಿಗೆ ಋಣಿಯಾಗಿದೆ.

ವಾಲ್ಮೀಕಿ ನಮ್ಮ ಆದಿಕವಿ. ಮೊದಲ ಕವಿ ಎನ್ನುವುದು ‘ಕೇವಲ ಮೊದಲಿಗ ಕವಿ’ ಎಂಬ ಎಣಿಕೆಗಷ್ಟೆ ಸೀಮಿತವಾದ ಹಣೆಪಟ್ಟಿಯಲ್ಲ; ಭಾರತೀಯ ಕಾವ್ಯಾಂಗನೆಯ ಹಣೆಬರಹವನ್ನು ರಸವತ್ತಾಗಿ ಬರೆದು ದಕ್ಕಿಸಿಕೊಂಡ ಶಾಶ್ವತ ಪದವಿ ಅದು. ವಾಲ್ಮೀಕಿಯ ರಾಮಾಯಣ, ಅದು ಆದಿಕಾವ್ಯವೇ ಮಾತ್ರವಲ್ಲ, ಪರಿಪೂರ್ಣ ರಸಕಾವ್ಯವೂ ಹೌದು. ಎಲ್ಲಿಯವರೆಗೂ ಭೂಮಿಯ ಮೇಲೆ ನದಿಗಳೂ ಪರ್ವತಗಳೂ ಇರುತ್ತವೆಯೋ ಅಲ್ಲಿಯವರೆಗೂ ರಾಮಾಯಣ ಬಾಳುತ್ತದೆ – ಎಂಬ ಬ್ರಹ್ಮನ ವರ, ಅದು ಸುಳ್ಳೇನೂ ಆಗಲಿಲ್ಲ; ಭೂಮಿಯನ್ನು ಹೊತ್ತ ಆದಿಶೇಷನು ರಾಮಾಯಣದ ಕವಿಗಳ ಭಾರದಲಿ ತಿಣುಕಾಡುತ್ತಿದ್ದಾನೆ ಎಂಬ ಕವಿವಾಣಿಯೂ ಕೇವಲ ಉತ್ಪ್ರೇಕ್ಷೆ ಎನಿಸಿಲ್ಲ. ನಮ್ಮ ದೇಶದಲ್ಲಿ ರಾಮಾಯಣ ಪರಂಪರೆ ದಿನದಿನವೂ ಬೆಳೆಯುತ್ತದೆ. ಮಾತ್ರವಲ್ಲ, ಒಟ್ಟು ಭಾರತೀಯ ಕವಿಪರಂಪರೆಯೇ ಆದಿಕವಿ ವಾಲ್ಮೀಕಿಗೆ ಋಣಿಯಾಗಿದೆ. ರಾಮಾಯಣವನ್ನು ಚಂಪೂಕಾವ್ಯವಾಗಿ ಸಂಸ್ಕೃತದಲ್ಲಿ ರಚಿಸಿದವನು ಭೋಜರಾಜ. ಅವನು ವಾಲ್ಮೀಕಿ ಮಹರ್ಷಿಯ ಬಗ್ಗೆ ಹೇಳಿರುವ ಈ ಪದ್ಯ ತುಂಬ ಮಾರ್ಮಿಕವಾಗಿದೆ:

ವಾಲ್ಮೀಕಿಗೀತರಘುಪುಂಗವಕೀರ್ತಿಲೇಶ್ಯೆಃ

ತೃಪ್ತಿಂ ಕರೋಮಿ ಕಥಮಪ್ಯಧುನಾ ಬುಧಾನಾಂ \

ಗಂಗಾಜಲೈರ್ಭುವಿ ಭಗೀರಥಯತ್ನಲಬ್ದೈಃ

ಕಿಂ ತರ್ಪಣಂ ನ ವಿದಧಾತಿ ಜನಃ ಪಿತೄಣಾಮ್‌ \\

ಇದರ ತಾತ್ಪರ್ಯ: ‘ವಾಲ್ಮೀಕಿ ಮುನಿಗಳು ಹಾಡಿದ ಶ್ರೀರಾಮನ ಕೀರ್ತಿಲೇಶಗಳನ್ನು ತೆಗೆದುಕೊಂಡು ನಾನು ಸಹೃದಯರಿಗೆ ತೃಪ್ತಿಯನ್ನು ಉಂಟು ಮಾಡಲು ಯತ್ನಿಸುತ್ತಿದ್ದೇನೆ. ಭಗೀರಥನು ಸಾಹಸದಿಂದ ತಂದ ಗಂಗಾನದಿಯ ಜಲದಿಂದ ಜನರು ತರ್ಪಣವನ್ನಿತ್ತು ಪಿತೃಗಳಿಗೆ ತೃಪ್ತಿಪಡಿಸುವುದಿಲ್ಲವೆ?’

ಇದನ್ನೂ ಓದಿ: ರಾಮಾಯಣ ರಸಯಾನ

ವಾಲ್ಮೀಕಿ: ಕರುಣರಸದ ಕಡಲಿನ ಒಡಲು

ರಾಮನ ಕಥೆಯಷ್ಟೆ ಇಲ್ಲಿ ಗಂಗಾಜಲವಲ್ಲ, ರಾಮಾಯಣ ಕಾವ್ಯವೂ ಗಂಗಾಜಲವೇ ಹೌದು. ಹೇಗೆ ಭಗೀರಥನು ಗಂಗೆಯನ್ನು ದೇವಲೋಕದಿಂದ ಭೂಲೋಕಕ್ಕೆ ತಂದನೋ ಅದೇ ರೀತಿಯಲ್ಲಿ ಕಾವ್ಯಗಂಗೆಯನ್ನು ಭೂಮಿಯಲ್ಲಿ ಹರಿಸಿದವರು ವಾಲ್ಮೀಕಿಮುನಿಗಳು. ಈ ಕಾವ್ಯಗಂಗೆ ದೊರೆಯದೇ ಹೋಗದಿದ್ದರೆ ಕವಿಗಳಿಗೆ ಕಾವ್ಯರಸವೇ ಒದಗುತ್ತಿರಲಿಲ್ಲವಷ್ಟೆ! ಕವಿ ಕ್ಷೇಮೇಂದ್ರನ ಮಾತೊಂದು ಇಲ್ಲಿ ಉಲ್ಲೇಖನೀಯ: ‘ನುಮಃ ಸರ್ವೋಪಜೀವ್ಯಂ ತಂ ಕವೀನಾಂ ಚಕ್ರವರ್ತಿನಂ‘ – ಎಂದರೆ ಎಲ್ಲಾ ಕವಿಗಳೂ ಕವಿಚಕ್ರವರ್ತಿಯಾದ ವಾಲ್ಮೀಕಿಗಳಿಂದ ಬದುಕುತ್ತಿರುವವರೇ ಹೌದು ಎನ್ನುವುದು ಈ ಮಾತಿನ ಸ್ವಾರಸ್ಯ. ಆದಿಕವಿಯಾದ ವಾಲ್ಮೀಕಿ ಮಹರ್ಷಿಗೆ ಕವಿಚಕ್ರವರ್ತಿಯ ಸಿಂಹಾಸನ ದೊರೆತದ್ದು ರಾಮಾಯಣದ ದೆಸೆಯಿಂದಲೇ; ಪ್ರಥಮ ಕಾವ್ಯವೇ ಪ್ರಥಮಸ್ತರದ ಕಾವ್ಯವೂ ಆದದ್ದು ಕಾವ್ಯಪ್ರಪ್ರಂಚದ ಅಚ್ಚರಿಗಳಲ್ಲೊಂದು. ಇಲ್ಲಿ ಡಿವಿಜಿಯವರ ಮಾತುಗಳನ್ನು ನೆನೆಯಬಹುದು:

‘ಶ್ರೀಮದ್ರಾಮಾಯಣವು ಕಾವ್ಯಮಾತ್ರವಲ್ಲ – ಆದಿಕಾವ್ಯ. ಅದರ ಆದಿತ್ವವು ಕಾಲಮಾನಮಾತ್ರದ್ದಲ್ಲ; ಗುಣಾಧಿಕ್ಯದಿಂದಲೂ ಸಿದ್ಧವಾದದ್ದು. ಪ್ರಪಂಚದ ಸಾಹಿತ್ಯಚರಿತ್ರೆಯಲ್ಲಿ ಇದು ಒಂದು ಅಚ್ಚರಿಯ ಸಂಗತಿ. ಪ್ರಪಂಚದಲ್ಲಿ ನಮಗೆ ದೊರೆತಿರುವ ಮೊಟ್ಟಮೊದಲನೆಯ ಕಾವ್ಯವೇ ಸಲ್ಲಕ್ಷಣಗಳಿಗೆ ಆದರ್ಶವೂ ಆಗಿದೆ. ಪ್ರಪಂಚದ ಇತರ ವಸ್ತುಗಳ ಚರಿತ್ರೆಯಲ್ಲಿ ಪ್ರಥಮಕೃತಿಗೂ ಆಮೇಲಿನದಕ್ಕೂ ನಡುವೆ ಒಂದು ಪರಿಷ್ಕಾರಕ್ರಮ ಕಂಡುಬರುತ್ತದೆ. ಮೊದಮೊದಲಿನ ಕೃತಿ ಒರಟಾಗಿ ಪೆಡಸಾಗಿರುತ್ತದೆ; ಆಮೇಲಿನದರಲ್ಲಿ ನಯ ನಾಜೂಕುಗಳು ಕಾಣುತ್ತವೆ... ಸರ್ವಾಂಗ ಪರಿಪೂರ್ಣವೂ ಸರ್ವಾಂಗಸುಂದರವೂ ಆದ ಒಂದು ಸಮಗ್ರ ಕಾವ್ಯವನ್ನು ಪ್ರಥಮವಾಗಿ ನಿರ್ಮಿಸಿದ ಯಶಸ್ಸು ವಾಲ್ಮೀಕಿಯದು.’

ವಾಲ್ಮೀಕಿ ಮಹರ್ಷಿಯ ಜೀವನದ ಬಗ್ಗೆ ರಾಮಾಯಣದಲ್ಲಿ ವಿವರಗಳು ದೊರೆಯುವುದಿಲ್ಲ; ಅವರೊಬ್ಬ ಮುನಿ, ಆಮೇಲೆ ಕವಿಯೂ ಆದರು – ಎನ್ನುವುದಷ್ಟೆ ಅಲ್ಲಿರುವ ಮಾಹಿತಿ. ಅವರ ಜೀವನವೃತ್ತಾಂತದ ವಿವರಗಳು ಎಂದು ಈಗ ಚಲಾವಣೆಯಲ್ಲಿರುವುದು ರಾಮಾಯಣದ ಬಳಿಕ ಸೇರಿಕೊಂಡ ಕಥೆಗಳು. ಹಾಗಾದರೆ ಅವರ ವ್ಯಕ್ತಿತ್ವವನ್ನು ಹೇಗೆ ಕಾಣುವುದು? ಇಡಿಯ ರಾಮಾಯಣವೇ ಅವರ ವ್ಯಕ್ತಿತ್ವವನ್ನು ಸಾರುತ್ತಿರುವ ರಸಪ್ರಮಾಣವಾಗಿದೆ.

ರಾಮಾಯಣ ಎಂಬ ಪರಿಪೂರ್ಣಕಾವ್ಯದ ಕರ್ತೃ ಎಂಬ ಒಂದೇ ಕಾರಣದಿಂದಷ್ಟೆ ವಾಲ್ಮೀಕಿ ಮಹರ್ಷಿ ಇಂದಿಗೂ ಜೀವಂತವಾಗಿಲ್ಲ; ಅವರ ಆ ಕಾವ್ಯದಲ್ಲಿ ಮೂಡಿಸಿರುವ ವಿವರಗಳು ಎಲ್ಲ ಕಾಲಕ್ಕೂ ಸಲ್ಲುವಂಥವು ಎನ್ನುವುದನ್ನೂ ಮರೆಯುವಂತಿಲ್ಲ. ರಾಮಾಯಣ ಆರಂಭವಾಗುವುದೇ ಪ್ರಶ್ನೆ ಒಂದರಿಂದ. ‘ಧರ್ಮವಂತನಾದ ವ್ಯಕ್ತಿ ಈಗ ಯಾರಿದ್ದಾರೆ?’ ಇದು ಅಲ್ಲಿಯ ಪ್ರಶ್ನೆ; ವಾಲ್ಮೀಕಿಗಳು ಎತ್ತಿದ ಪ್ರಶ್ನೆ. ಆದರೆ ಇದು ಎಲ್ಲ ಕಾಲದ ಪ್ರಶ್ನೆಯೂ ಹೌದು. ಜಗತ್ತಿನಲ್ಲಿ ಎದ್ದುಕಾಣುವಂಥದ್ದು ಅಧರ್ಮವೇ, ಕೆಟ್ಟದ್ದೇ. ಅದರ ಸಮ್ಮುಖದಲ್ಲಿಯೇ ಧರ್ಮದ ಹುಡುಕಾಟವೂ ಒಳಿತಿನ ಅನ್ವೇಷಣೆಯೂ ನಡೆಯಬೇಕು. ಹೀಗೆ ಸದಾ ಒಳಿತನ್ನು ಹಂಬಲಿಸಿ, ಅದಕ್ಕಾಗಿ ಪ್ರಶ್ನಿಸಿ, ಸಾಕ್ಷಾತ್ಕರಿಸಿಕೊಳ್ಳಬೇಕೆಂಬ ವೈಚಾರಿಕಸೂತ್ರದಲ್ಲಿ ಪೋಣಿಸಿದ ಮಹಾಕಾವ್ಯವೇ ರಾಮಾಯಣ. ‘ಜಗತ್ತಿನ ಪ್ರಥಮ ಮಂಗಳಕರ ನಾಮ’ ಎಂದು ಕೀರ್ತಿತವಾದ ರಾಮನಾಮದ ಮೂಲಕವೇ ಭಾರತೀಯ ದಾರ್ಶನಿಕತೆಗೆ ಸತ್ಯ ಶಿವ ಸುಂದರಗಳ ಆಯಾಮವನ್ನು ಒದಗಿಸಿದವರು ವಾಲ್ಮೀಕಿ.

ವಾಲ್ಮೀಕಿ: ಕರುಣರಸದ ಕಡಲಿನ ಒಡಲು

ವಾಲ್ಮೀಕಿ ಮಹರ್ಷಿಯ ವ್ಯಕ್ತಿತ್ವವನ್ನು ಪ್ರಕಟಪಡಿಸುವ ಮತ್ತೊಂದು ಸ್ವಾರಸ್ಯಪ್ರಸಂಗವೂ ರಾಮಾಯಣದಲ್ಲಿಯೇ ಕಾಣಸಿಗುತ್ತದೆ. ಅದೇ ರಾಮಾಯಣ ಎಂಬ ಕಾವ್ಯ ಹುಟ್ಟಿಕೊಂಡ ಸಂದರ್ಭ. ಪ್ರಣಯದಲ್ಲಿ ತೊಡಗಿದ್ದ ಕ್ರೌಂಚಪಕ್ಷಿಗಳ ಜೋಡಿಯಲ್ಲಿ ಗಂಡುಹಕ್ಕಿಯು ಬೇಡನ ಬಾಣಕ್ಕೆ ಗುರಿಯಾಯಿತು; ಹೆಣ್ಣುಹಕ್ಕಿ ತನಗೆ ಒದಗಿದ ವಿರಹದಿಂದ ರೋದಿಸಿತು. ಬೇಟೆಯು ಕಾಡಿನಲ್ಲಿ ನಡೆಯುವ ಸಹಜ ವ್ಯಾಪಾರವಾದರೂ ಆ ಹೆಣ್ಣುಹಕ್ಕಿಯ ರೋದನ ಮಾತ್ರ ಅರಣ್ಯರೋದನವಾಗಿ ವ್ಯರ್ಥವಾಗಲಿಲ್ಲ. ಇಡಿಯ ಜಗತ್ತಿಗೆ ಕರುಣರಸದ ಸಂದೇಶವನ್ನು ಸಾರುವ ಮಹಾಕಾವ್ಯದ ಮಹಾಘೋಷವಾಯಿತು. ಹಕ್ಕಿಯ ಸಂಕಟಕ್ಕೆ ವಾಲ್ಮೀಕಿಮಹರ್ಷಿಯ ಹೃದಯವೂ ಸ್ಪಂದಿಸಿತು, ಮರುಗಿತು. ಶೋಕವೇ ಶ್ಲೋಕವಾಯಿತು; ಶಾಪವೇ ಕಾವ್ಯವಾಯಿತು. ಅದುವರೆಗೂ ಮುನಿಯಾಗಿದ್ದವನು, ಋಷಿಯಾಗಿದ್ದವನು ಆ ಕ್ಷಣ ಕವಿಯೂ ಆದನು.

ಕವಿ ಎಂದರೆ ಯಾರು – ಎಂದು ಜಗತ್ತಿಗೆ ತಮ್ಮ ಜೀವನದ ಮೂಲಕವೂ ತಿಳಿಸಿಕೊಟ್ಟವರು ವಾಲ್ಮೀಕಿಮಹರ್ಷಿ. ಜಗತ್ತಿನ ಸಂಕಟಕ್ಕೆ ಮಿಡಿಯಬಲ್ಲ ಮನಸ್ಸು ಮಾತ್ರವೇ ದಿಟವಾದ ಕಾವ್ಯವನ್ನು ರಚಿಸಬಲ್ಲದು ಎಂಬುದಕ್ಕೆ ನಿದರ್ಶನವಾದವರು ಅವರು. ಹಕ್ಕಿಯಂಥ ಸಣ್ಣಜೀವಿಯೊಂದರ ಅಳುವಿಗೂ ಕಿವಿಯಾಗಬಲ್ಲವನೇಕವಿ ಎಂಬ ಮಹಾಸಂದೇಶವನ್ನು ರಾಮಾಯಣದ ಈ ಪ್ರಸಂಗದಲ್ಲಿ ಕಂಡರಿಸಿದವರು ಅವರು. ಹಕ್ಕಿಯ ರೋದನವನ್ನೂ ಕೇಳಬಲ್ಲಂಥ ಕವಿಯನ್ನೂ ಹೃದಯವನ್ನೂ ಹೊಂದಿದ್ದರಿಂದಲೇ ಸೀತೆಯ ಅಳುವನ್ನೂ ವಾಲ್ಮೀಕಿಮಹರ್ಷಿ ಕೇಳಬಲ್ಲವರಾದದ್ದು. ಅವರನ್ನು ವರ್ಣಿಸುವಾ‌ಗ ಕಾಲಿದಾಸನು ಹೇಳುವ ಮಾತೊಂದು ಅಪೂರ್ವವಾಗಿದೆ: ‘ರುದಿತಾನುಸಾರೀ ಕವಿಃ‘. ಸೀತೆಯ ಅಳುವನ್ನು ಅನುಸರಿಸಿಕೊಂಡು ಬಂದ ವಾಲ್ಮೀಕಿಯನ್ನು ಅವನು ವರ್ಣಿಸಿದ ಪರಿ ಇದು. ‘ಅಳುವನ್ನು ಅನುಸರಿಸಿ ಹೋಗುವವನೇ ಕವಿ’ ಎಂಬ ಕಲಾಸೂತ್ರವನ್ನೇ ಜಗತ್ತಿಗೇ ಕೊಟ್ಟ ಮಹಾಕವಿ ವಾಲ್ಮೀಕಿ. ‘ಕರುಣರಸ ಒಂದೇ ಇರುವುದು’ ಎಂಬ ಮೀಮಾಂಸೆಗೂ ಕಾರಣನಾದ ಕವಿ ಅವರು.

ಇನ್ನಷ್ಟು...

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT