ಮಂಗಳವಾರ, ಡಿಸೆಂಬರ್ 7, 2021
24 °C

ವೇದವ್ಯಾಸರ ಶಿವಪುರಾಣದ ಕುಮಾರಖಂಡಸಾರ | ಗಣಪತಿ ಆಕ್ರಮಣಕ್ಕೆ ತಲ್ಲಣಿಸಿದ ಗಣಗಳು

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ Updated:

ಅಕ್ಷರ ಗಾತ್ರ : | |

ಶಿವನ ಆಜ್ಞೆಯಂತೆ ಬಾಲ ಗಣಪನ ಬಳಿ ಬಂದ ಶಿವಗಣಗಳು ‘ಬಾಲಕ ನೀನಾರು? ಏಕೆ ಇಲ್ಲಿಗೆ ಬಂದಿರುವೆ? ಇಲ್ಲಿ ನಿನಗೇನು ಕೆಲಸ? ನಿನಗೆ ಜೀವದ ಮೇಲೆ ಆಸೆಯಿದ್ದರೆ ಇಲ್ಲಿಂದ ದೂರ ಹೋಗು’ ಎಂದರು. ಶಿವಗಣಗಳ ಮಾತನ್ನು ಕೇಳಿ ಗಣಪತಿಯು ಹೆದರಲಿಲ್ಲ. ತಾನು ಪಾರ್ವತಿಯ ಪುತ್ರ. ಅಮ್ಮನ ಅಪ್ಪಣೆ ಇಲ್ಲದೆ ಯಾರನ್ನೂ ಒಳಗೆ ಬಿಡುವುದಿಲ್ಲ ಅಂತ ಶಿವಗಣಗಳನ್ನು ನಿಂದಿಸಿ ಕದವನ್ನು ಮುಚ್ಚಿದ. ನಿರಾಸೆಯಿಂದ ಶಿವನ ಗಣಗಳೆಲ್ಲಾ ಶಿವನ ಬಳಿ ಬಂದು ನಡೆದ ವೃತ್ತಾಂತವನ್ನೆಲ್ಲಾ ತಿಳಿಸಿದರು.

ಗಣಗಳ ಮಾತು ಕೇಳಿ ಶಿವ ಕೋಪಗೊಂಡ, ‘ಆ ಹೊಸ ಹುಡುಗನನ್ನು ಹೆದರಿಸಿ ದೂರ ಕಳುಹಿಸದೆ ಹೇಡಿಗಳಂತೆ ಬಂದು ನನ್ನೆದುರು ನಿಂತಿದ್ದೀರ’ ಅಂತ ಗದರಿದ. ಆಗ ಶಿವನ ಗಣಗಳೆಲ್ಲ ಪುನಃ ಗಣಪತಿ ಬಳಿ ಬಂದು ಬಾಗಿಲು ತೆರೆದು ಶಿವನು ಒಳ ಹೋಗಲು ಅವಕಾಶ ಕೊಡಬೇಕೆಂದು ಎಚ್ಚರಿಸಿದವು. ಈ ಮಾತನ್ನು ಕೇಳಿ ಗಣಪತಿಯು ಅತ್ಯಂತ ಸಿಟ್ಟಿನಿಂದ ತನ್ನ ಕೈಯಲ್ಲಿರುವ ಕೋಲಿನಿಂದ ಗಣಗಳನ್ನು ಹೊಡೆಯಲು ಪ್ರಾರಂಭಿಸಿದ. ಗಣೇಶನ ಹೊಡೆತ ತಾಳಲಾರದೆ ಅಲ್ಲಿಂದ ಮತ್ತೆ ಶಿವನ ಬಳಿ ಹಿಂದಿರುಗಿ ಗಣಪತಿ ಹೊಡೆದುದನ್ನು ನಿವೇದಿಸಿದರು.

ಶಿವನು ಗಣಗಳ ಮಾತುಗಳನ್ನು ಕೇಳಿ ಅತ್ಯಂತ ಕೋಪ ಗೊಂಡು ‘ಎಲೈ ನೀಚರೇ, ನೀವೆಲ್ಲರೂ ನಪುಂಸಕರು, ವೀರ ರಲ್ಲ. ಒಬ್ಬ ಸಣ್ಣ ಬಾಲಕನನ್ನು ಹೆದರಿಸಲು ಆಗಲಿಲ್ಲವೇ ನಿಮಗೆ. ಅವನನ್ನು ಹೊಡೆದು, ಈಗಲೇ ಓಡಿಸಲೇಬೇಕು’ ಎಂದು ಆಜ್ಞಾಪಿಸಿದ. ಆಗ ಪ್ರಮಥಗಣಗಳೆಲ್ಲ ಮತ್ತೆ ಗಣಪತಿಯ ಬಳಿ ಹೋಗಿ ‘ಬಾಲಕನೇ, ಸುಮ್ಮನೆ ದೂರ ಹೋಗು. ಇಲ್ಲದಿದ್ದರೆ ಮೃತ್ಯುವನ್ನು ಎದುರು ನೋಡುವೆ’ ಎಂದು ಎಚ್ಚರಿಸಿದರು.

ಗಣಗಳು ಆಡಿದ ಮಾತನ್ನು ಕೇಳಿ ಗಣಪತಿಯು ಈಗೇನು ಮಾಡಲಿ? ಅಂತ ಯೋಚಿಸುತ್ತಿರುವಾಗ ಪಾರ್ವತಿಯು ‘ಬಾಗಿಲಿನಲ್ಲಿ ಜಗಳವಾಗುತ್ತಿರುವುದೇಕೆ, ನೋಡು’ ಎಂದು ತನ್ನ ಸಖಿಯನ್ನು ಕಳಿಸಿದಳು. ಸಖಿಯು ಬಾಗಿಲಿಗೆ ಬಂದು ಅಲ್ಲಿ ನಡೆಯುತ್ತಿರುವ ಘಟ ನೆಯ ಮಾಹಿತಿಯನ್ನು ಪಾರ್ವತಿಗೆ ತಿಳಿಸಿದಳು. ‘ಗಣೇಶ ಬಾಲಕನಾದರೂ ಕೆಚ್ಚೆದೆಯಿಂದ ಶಿವಗಣಗಳನ್ನೆಲ್ಲಾ ತಡೆದು ನಿಲ್ಲಿಸಿದ್ದಾನ’ ಎಂದು ಕೊಂಡಾಡಿದಳು.

ಸಖಿಯ ಮಾತನ್ನು ಕೇಳಿದ ಪಾರ್ವತಿ ಮನಸ್ಸಿನಲ್ಲಿ ಯೋಚಿಸಿದಳು. ಬಾಲಕನನ್ನು ಕಾವಲಿಗೆ ಇರಿಸಿದ ಸ್ವಲ್ಪಹೊತ್ತಿನಲ್ಲೇ ಇಂಥ ಅವಾಂತರ ಸೃಷ್ಟಿಸುತ್ತಿದ್ದಾರೆಂದು ಕೋಪ ಗೊಂಡಳು. ಶಿವನ ಅನುಜ್ಞೆಯಂತೆ ನಡೆಯುವ ಪತಿವ್ರತೆಯಾದ ಪಾರ್ವ ತಿಗೆ ಶಿವನ ಉದ್ಧಟತನ ಇಷ್ಟವಾಗಲಿಲ್ಲ. ಸಖಿಯನ್ನು ಕರೆದು ‘ನನ್ನ ಮಗ ಒಳ್ಳೆಯ ಕೆಲಸವನ್ನೇ ಮಾಡಿದ್ದಾನೆ. ಶಿವನ ಗಣಗಳು ಒಳಗೆ ಬರದಂತೆ ಮತ್ತಷ್ಟು ಬಿಗಿ ಕಾವಲು ಕಾಯುವಂತೆ’ ತಿಳಿಸಿದಳು. ಸಖಿ ಗಣೇಶನಿಗೆ ಪಾರ್ವತಿ ಹೇಳಿದ ಮಾತನ್ನು ಹೇಳಿದಳು. ಇದರಿಂದ ಉತ್ತೇಜಿತನಾದ ಗಣಪತಿಯು ಸೊಂಟವನ್ನು ಕಟ್ಟಿ, ತೊಡೆಗಳನ್ನು ತಟ್ಟುತ್ತಾ ಬಲು ಪರಾಕ್ರಮದಿಂದ ನಿರ್ಭಯವಾಗಿ ಗಣಗಳಿಗೆ ಹೇಳಿದ. ‘ನಾನು ಪಾರ್ವತಿಪುತ್ರ. ನೀವೂ ಶಿವನ ಗಣಗಳು. ನೀವು ಶಿವನ ಮಾತು ಪಾಲಿಸುತ್ತೀರಿ, ನಾನು ಪಾರ್ವತಿಯ ಆಜ್ಞೆಯಂತೆ ನಡೆಯುವವನು. ಅಮ್ಮನ ಅಪ್ಪಣೆ ಇಲ್ಲದೆ ನಿಮ್ಮನ್ನು ಒಳಕ್ಕೆ ಬಿಡುವುದಿಲ್ಲ’ ಎಂದು ಎಚ್ಚರಿಸಿದ.

ಗಣಪತಿಯಾಡಿದ ಪೌರುಷದ ಮಾತುಗಳನ್ನು ಕೇಳಿ ಶಿವಗಣಗಳು ಅವನೊಂದಿಗೆ ಹೋರಾಡಲು ಹಿಂಜರಿದವು. ನಾಚಿಕೆಯಿಂದ ತಲೆತಗ್ಗಿಸಿಕೊಂಡು ಶಿವನ ಬಳಿ ಬಂದು ಬಾಲಕನ ಮಾತುಗಳನ್ನು ತಿಳಿಸಿದವು. ಕುಪಿತನಾದ ಶಿವ ‘ಆ ಬಾಲಕನನ್ನು ಪಾರ್ವತಿಯು ಸೃಷ್ಟಿಮಾಡಿದ್ದಾಳೆ. ಅವನು ಹೀಗೆ ವರ್ತಿಸುವಂತೆ ಹೇಳಿಕೊಟ್ಟಿದ್ದಾಳೆ. ಅದರ ಫಲವನ್ನು ಜಾಗ್ರತೆಯಾಗಿ ಅನುಭವಿಸುವಳು. ಆದುದರಿಂದ ವೀರರಾದ ನೀವೆಲ್ಲರೂ ಆ ಬಾಲಕನ ವಿರುದ್ಧ ಯುದ್ಧಕ್ಕೆ ಸಿದ್ಧರಾಗಿ’ ಎಂದನು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು