ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ: ಪ್ರತ್ಯಕ್ಷಳಾದ ಚಂಡಿಕಾದೇವಿ

ಭಾಗ –140
ಅಕ್ಷರ ಗಾತ್ರ

ನಾರದಮುನಿಯು ಬ್ರಹ್ಮನಲ್ಲಿ ‘ವಿಷ್ಣು ಅಂತರ್ಧಾನನಾದ ಮೇಲೆ ಮುಂದೇನಾಯಿತು’ ಎಂದು ಕೇಳುತ್ತಾನೆ. ಅದಕ್ಕೆ ಬ್ರಹ್ಮ ‘ಎಲೈ ನಾರದ! ಸಾವಧಾನವಾಗಿ ಕೇಳು. ವಿಷ್ಣುವು ಅಂತರ್ಧಾನನಾಗಲು ಮುಂದೆ ನಾನೇನು ಮಾಡಿದೆನೆಂಬುದನ್ನು ಹೇಳುವೆನು’ ಎಂದು ಶಿವಕಥೆಯನ್ನ ಮುಂದುವರೆಸುತ್ತಾನೆ.

ಜಗತ್ತಿಗೆ ಕಾರಣಳು, ಭಕ್ತರ ಕಷ್ಟವನ್ನು ನೀಗಿಸುವವಳು, ಶಂಕರನ ಪ್ರಿಯೆಯೂ ಆದಂತಹ ದೇವಿಯನ್ನು ಬ್ರಹ್ಮ ಭಕ್ತಿಯಿಂದ ಧ್ಯಾನಿಸಿ ಹೀಗೆ ಸ್ತುತಿಸಿದ. ‘ಓ ದೇವಿಯೆ! ಎಲ್ಲೆಡೆಯಲ್ಲಿಯು ವ್ಯಾಪಿಸಿರುವವಳು, ಜ್ಞಾನಸ್ವರೂಪಳು, ಎಲ್ಲಕ್ಕೂ ಆಧಾರಳು, ದುಃಖಸಂಬಂಧವಿಲ್ಲದವಳೂ ಆದ ತ್ರಿಮೂರ್ತಿಗಳಿಗೆ ಮಾತೆಯೇ. ಸ್ಥೂಲ ಸೂಕ್ಷ್ಮಸ್ವರೂಪವೂ ಆದಂತಹ ನೀನು ಜ್ಞಾನಸ್ವರೂಪಳು ಮಾತ್ರವಲ್ಲ, ಆನಂದಸ್ವರೂಪಳು ಹೌದು, ಪರಮಾತ್ಮಸ್ವರೂಪಳು ಹೌದು. ನಾನು ಕೋರಿದ ಕಾರ್ಯ ನೆರವೇರುವಂತೆ ಅನುಗ್ರಹಿಸು. ನಿನಗೆ ನಮಸ್ಕಾರ’ ಎಂದ.

ಬ್ರಹ್ಮನ ಸ್ತುತಿಗೆ ಯೋಗನಿದ್ರಾರೂಪಳಾದ ಚಂಡಿಕಾದೇವಿಯು ಪ್ರತ್ಯಕ್ಷವಾಗಿ ಆವಿರ್ಭವಿಸಿದಳು. ಆ ದೇವಿಯನ್ನು ನೋಡಿ ಬ್ರಹ್ಮ ಭಾವಪರವಶನಾದ. ದಟ್ಟವಾದ ಅಂಜನದಂತೆ ನೀಲವಾದ ಶರೀರಕಾಂತಿಯಿಂದ, ಪುಷ್ಟವಾದ ನಾಲ್ಕು ಸುಂದರಬಾಹುಗಳಿಂದ ಕಂಗೊಳಿಸುತ್ತಿದ್ದ ಚಂಡಿಕಾದೇವಿ ಸಿಂಹವನ್ನೇರಿ ಕುಳಿತಿದ್ದಳು. ಅವಳು ಕೈಯಲ್ಲಿ ವರದಮುದ್ರೆಯನ್ನು ಪ್ರದರ್ಶಿಸುತ್ತಲಿದ್ದಳು. ಮುತ್ತುಗಳಿಂದ ಕೇಶಪಾಲನವನ್ನಲಂಕರಿಸಿದ್ದಳು. ಅವಳ ಮುಖವಂತೂ, ಶರತ್ಕಾಲದ ಪೂರ್ಣಚಂದ್ರನಂತೆ ಶೋಭಿಸುತ್ತಿತ್ತು. ಹಣೆಯಲ್ಲಿ ಚಂದ್ರಕಲೆಯು ಹೊಳೆಯುತ್ತಿತ್ತು. ಅವಳ ಕೈಕಾಲುಗಳ ಉಗುರುಗಳು ಕಮಲದಂತೆ ಕೆಂಪಾಗಿದ್ದುವು. ಒಟ್ಟಾರೆ, ಶಿವನಂತೆ ಮೂರು ನಯನಗಳಿಂದ ಸರ್ವಾಂಗ ಸುಂದರಿಯಾಗಿ ಕಾಣಿಸುತ್ತಿದ್ದಳು.

ಇಂತಹ ಶಿವಶಕ್ತಿ ದೇವಿಯನ್ನು ಪ್ರತ್ಯಕ್ಷವಾಗಿ ನೋಡಿದ ಬ್ರಹ್ಮ, ‘ಓ ದೇವಿಯೇ! ಜಗತ್ತಿನ ಪ್ರವೃತ್ತಿ ನಿವೃತ್ತಿಗಳು ನಿನ್ನಿಂದಲೇ ಆಗುವುವು. ಪಾಲನ ಮತ್ತು ಸೃಷ್ಟಿಗಳ ಸ್ವರೂಪಗಳು ನೀನೇ ಆಗಿರುವೆ. ಜಗತ್ತಿನ ಚರಾಚರ ಪ್ರಾಣಿಗಳಲ್ಲಿ ಕಂಡುಬರುವ ಕಾರ್ಯಶಕ್ತಿ ನೀನೇ ಆಗಿರುವೆ. ನಿನಗೆ ಆದಿಯೂ ಇಲ್ಲ, ಅಂತ್ಯವೂ ಇಲ್ಲ. ನೀನು ಎಲ್ಲರನ್ನೂ ಮೋಹಗೊಳಿಸುವ ಸರ್ವಶಕ್ತೆ.

‘ಓ ದೇವಿ! ನೀನು ಲಕ್ಷ್ಮೀರೂಪದಿಂದ ವಿಷ್ಣುವನ್ನು ಮೋಹಗೊಳಿಸುವೆ. ಭೂದೇವಿಯ ರೂಪದಿಂದ ಜಗತ್ತೆಲ್ಲವನ್ನೂ ಧರಿಸುವೆ. ನೀನೇ ಜಗತ್ತನ್ನು ಸೃಷ್ಟಿಸುವೆ, ನೀನೆ ಅದನ್ನು ರಕ್ಷಿಸುವೆ, ನೀನೇ ಜಗತ್ತನ್ನು ಪ್ರಳಯದ ಮೂಲಕ ಸಂಹರಿಸುವೆ. ನೀನು ಸತ್ತ್ವರಜಸ್ತಮೋಗುಣಗಳ ಸಂಪರ್ಕವಿಲ್ಲದ ಪರಬ್ರಹ್ಮಸ್ವರೂಪಳು. ಮಹಾಮಹಿಮಳು, ಚರ್ಮಚಕ್ಷಸ್ಸುಗಳಿಂದ ತಿಳಿಯಲು ಅಶಕ್ಯಳು. ಇಂತಹ ನಿನ್ನನ್ನು ಯೋಗಿಗಳು ಇಂದ್ರಿಯದಿಂದ ಪರಿಶುದ್ಧವಾದ ಮನಸ್ಸಿನಲ್ಲಿ ಧ್ಯಾನಿಸುವರು.

‘ಓ ದೇವಿ! ನೀನು ಜ್ಞಾನಜ್ಯೋತಿ, ಪ್ರಕಾಶಸ್ವರೂಪಳು, ಪರಿಶುದ್ಧಳು, ಸಂಸಾರ ಸಂಬಂಧವಿಲ್ಲದವಳು; ಜಗತ್ತಿನಲ್ಲಿ ಅನೇಕ ಬಗೆಯ ವಿದ್ಯಾಸ್ವರೂಪಗಳನ್ನು ಪ್ರಕಟಿಸಿರುವೆ. ನೀನು ವಿಕಾರವಿಲ್ಲದವನು, ಇಂದ್ರಿಯಗಳಿಗೆ ಅಗೋಚರನು, ನಾಶವಿಲ್ಲದವನೂ ಆದಂತಹ ಪರಮಾತ್ಮನ ಸ್ವರೂಪಳು. ನೀನು ಪ್ರಳಯಕಾಲದಲ್ಲಿ ಜಗತ್ತೆಲ್ಲವನ್ನೂ ನಿನ್ನಲ್ಲಿ ಸೇರಿಸಿಕೊಳ್ಳುವೆ.

‘ಓ ಶಿವೆ! ನೀನು ಸಗುಣರೂಪಳಾಗಿದ್ದು ನಿತ್ಯವೂ ಜನಗಳಲ್ಲಿ ನಿನ್ನ ಮಾಯೆಯಿಂದ ಅಜ್ಞಾನವನ್ನು ಹರಡುವೆ, ವಿಕಾರವನ್ನು ಬೆಳೆಸುವೆ. ಸತ್ವ-ರಜಸ್ಸು-ತಮೋಗುಣಗಳು ನಿನ್ನಿಂದಲೇ ಜನಿಸುವುವು. ನೀನು ಆ ಗುಣಗಳಿಗಿಂತ ಭಿನ್ನಳಾಗಿರುವೆ. ಸೃಷ್ಟಿಗೆ ಮೊದಲು ನಿನ್ನಲ್ಲಿ ಈ ಗುಣಗಳು ವಿಕಾರವಿಲ್ಲದೆ ಸಮವಾಗಿರುವುವು. ಆ ಗುಣಗಳ ಸಾಮ್ಯಾವಸ್ಥೆಯ ಸ್ವರೂಪವೇ ನೀನಾಗಿರುವೆ. ಇಂತಹ ಗುಣಗಳ ಮೂಲಕ ಜಗತ್ತೆಲ್ಲವನ್ನೂ ಸೃಷ್ಟಿಸುವೆ, ರಕ್ಷಿಸುವೆ, ಕೊನೆಗೆ ಸಂಹರಿಸುವೆ. ಸಕಲ ಜಗತ್ತಿಗೂ ಕಾರಣಳಾದ ಓ ಶಿವಶಕ್ತಿಜ್ಞಾನಸ್ವರೂಪಳು, ವಿಷಯಸ್ವರೂಪಳು, ಸದಾ ಜಗತ್ತಿಗೆ ಕಲ್ಯಾಣವನ್ನು ಮಾಡುವ ನಿನಗೆ ನಮಸ್ಕಾರ.

‘ಓ ದೇವಿ, ಪರಮೇಶ್ವರಿ! ನನ್ನಲ್ಲಿ ಅನುಗ್ರಹವನ್ನಿರಿಸಿ ನಾನು ಹೇಳುವುದನ್ನು ದಯವಿಟ್ಟು ಕೇಳು. ನೀನು ಎಲ್ಲವನ್ನೂ ಬಲ್ಲ ಸರ್ವಜ್ಞಳು. ಆದರೂ ನಿನ್ನ ಅಪ್ಪಣೆಯಂತೆ ನನ್ನ ಮನಸ್ಸಿನಲ್ಲಿದ್ದುದನ್ನು ಹೇಳುವೆನು. ಅದನ್ನು ಈಡೇರಿಸಿಕೊಡು’ ಎಂದು ಬ್ರಹ್ಮ ವಿಧವಿಧವಾಗಿ ಸ್ತುತಿಸಿದ.

ಬ್ರಹ್ಮನ ಸ್ತುತಿ ಕೇಳಿದ ಪರಮೇಶ್ವರಿ, ಪ್ರಸನ್ನಳಾಗಿ ‘ಎಲೈ ಬ್ರಹ್ಮದೇವ, ನಾನು ಪ್ರತ್ಯಕ್ಷಳಾದಮೇಲೆ ನಿನ್ನ ಕಾರ್ಯವು ನಿಶ್ಚಯವಾಗಿ ನೆರವೇರುವುದು. ಆದುದರಿಂದ ನಾನು ಮಾಡಬೇಕಾದ ನಿನ್ನ ಇಷ್ಟಕಾರ್ಯ ಯಾವುದು ಎಂಬುದನ್ನು ಹೇಳು’ ಎನ್ನುತ್ತಾಳೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT