ಶುಕ್ರವಾರ, ಜುಲೈ 1, 2022
22 °C
ಭಾಗ 62

ವೇದವ್ಯಾಸರ ಶಿವಪುರಾಣಸಾರ: ನೈವೇದ್ಯ–ಬಿಲ್ವಪತ್ರೆಗಳ ಮಹಾತ್ಮೆ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ Updated:

ಅಕ್ಷರ ಗಾತ್ರ : | |

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ

ಶಿವನ ನೈವೇದ್ಯವನ್ನು ಸೇವಿಸಬಾರದೆಂದು ಕೆಲವರು ಹೇಳುತ್ತಾರೆ. ಆದ್ದರಿಂದ ನೈವೇದ್ಯಸೇವನೆ ಮತ್ತು ಬಿಲ್ವಪತ್ರೆ ಮಹಾತ್ಮೆಯನ್ನು ತಿಳಿಸುವಂತೆ ಸೂತಮುನಿಯನ್ನು  ಮುನಿಗಳು ಕೇಳುತ್ತಾರೆ. ಆಗ ಸೂತಮುನಿ ‘ಶಿವನಲ್ಲಿ ದೃಢವಾದ ಭಕ್ತಿಯುಳ್ಳವರೂ ಶುಚಿಯೂ ಶುದ್ಧರೂ ಸದಾಚಾರಿಯೂ ಆಗಿರುವ ಶಿವಭಕ್ತರು ಮಾತ್ರ ಶಿವನೈವೇದ್ಯವನ್ನು ಸೇವಿಸಬೇಕು. ಶಿವನ ನೈವೇದ್ಯ ಸೇವಿಸಬಾರದು ಎಂಬ ತಪ್ಪು ಭಾವನೆಯನ್ನು ಬಿಡಬೇಕು. ಏಕೆಂದರೆ, ಶಿವನೈವೇದ್ಯವನ್ನು ನೋಡಿದ ಮಾತ್ರದಿಂದಲೇ ಪಾಪಗಳು ದೂರವಾಗುತ್ತವೆ. ಅಂಥದರಲ್ಲಿ ಶಿವನೈವೇದ್ಯವನ್ನು ಸೇವಿಸಿದರೆ ಕೋಟಿ ಪುಣ್ಯಗಳು ಲಭಿಸುತ್ತವೆ’ ಎಂದು ಶಿವನ ನೈವೇದ್ಯದ ಮಹತ್ವವನ್ನ ವಿವರಿಸುತ್ತಾನೆ.

ಸಾವಿರ ಯಾಗಗಳಿಂದ ಮಾತ್ರವಲ್ಲದೆ, ಅರ್ಬುದಾಯಾಗಗಳಿಂದಲೂ ಸಿಗದ ಪ್ರಯೋಜನಗಳು ಶಿವನೈವೇದ್ಯವನ್ನು ಭಕ್ಷಿಸಿದರೆ ಸಿಗುತ್ತವೆ. ಶಿವನ ನೈವೇದ್ಯ ಸೇವಿಸಿದವರು ಶಿವಸಾಯುಜ್ಯವನ್ನೇ ಹೊಂದಬಹುದು. ಯಾವ ಮನೆಯಲ್ಲಿ ಶಿವನೈವೇದ್ಯ ಇರುವುದೋ ಆ ಮನೆಯು ತುಂಬಾ ಪವಿತ್ರವಾಗಿರುತ್ತದೆ. ಶಿವನೈವೇದ್ಯವನ್ನು ಪ್ರೀತಿಯಿಂದ ಶಿರಸ್ಸಿನಲ್ಲಿಟ್ಟು, ಭಕ್ತಿಯಿಂದ ಶಿವನನ್ನು ಸ್ಮರಿಸುತ್ತಾ ಸೇವಿಸಬೇಕು. ಶಿವನೈವೇದ್ಯವನ್ನು ಆಮೇಲೆ ಸೇವಿಸುವೆನೆಂದು ವಿಳಂಬಮಾಡಿದರೆ ಪಾಪ ಬರುತ್ತದೆ. ಆದ ಕಾರಣ ಶಿವನೈವೇದ್ಯ ಸಿಕ್ಕ ತಕ್ಷಣವೇ ತಡಮಾಡದೆ ಕಣ್ಣಿಗೊತ್ತಿಕೊಂಡು ಸೇವಿಸುತ್ತಿರಬೇಕು. ಶಿವನೈವೇದ್ಯವನ್ನು ಸ್ವೀಕರಿಸಬೇಕೆಂಬ ಇಚ್ಛೆ ಪಡದಿದ್ದರೆ ಮಹಾಪಾಪವಾಗುತ್ತೆ. ನಿಶ್ಚಯವಾಗಿ ಅಂಥವರು ನರಕವನ್ನು ಸೇರುತ್ತಾರೆ.

ಶಿವದೀಕ್ಷೆಯಲ್ಲಿ ನಿರತರಾದ ಭಕ್ತರು ಶಿವನೈವೇದ್ಯವನ್ನು ಎಲ್ಲಾ ಶಿವಲಿಂಗಗಳ ಮಹಾಪ್ರಸಾದವೆಂದು ತಿಳಿದು ತಿನ್ನಬೇಕು. ಬೇರೆ ದೇವತೆಗಳ ವ್ರತದೀಕ್ಷೆಯಲ್ಲಿರುವಂತಹ ಶಿವಭಕ್ತರು ಸಾಲಿಗ್ರಾಮದಲ್ಲಿ ಉದ್ಭವಿಸಿದ ಲಿಂಗ, ಪಾದರಸಲಿಂಗ, ಶಿಲಾಲಿಂಗ, ಬೆಳ್ಳಿಯ ಲಿಂಗ, ಸುವರ್ಣಲಿಂಗ, ದೇವತೆಗಳು ಮತ್ತು ಸಿದ್ಧರು ಪ್ರತಿಷ್ಠಾಪಿಸಿದ ಲಿಂಗ, ಕಾಶ್ಮೀರಲಿಂಗ, ಸ್ಫಟಿಕಲಿಂಗ, ರತ್ನಲಿಂಗ, ಜ್ಯೋತಿರ್ಲಿಂಗಗಳಲ್ಲಿನ ಪೂಜಾ ಶಿವನೈವೇದ್ಯವನ್ನು ಭಕ್ಷಿಸಿದರೆ ಚಾಂದ್ರಾಯಣವ್ರತವನ್ನು ಮಾಡಿದ ಪುಣ್ಯ ಲಭಿಸುತ್ತದೆ.
ಚಂಡನ (ಶಿವನ ಗಣ) ಅಧಿಕಾರವಿರುವಂತಹ ನೈವೇದ್ಯವನ್ನು ಮಾನವರು ಭಕ್ಷಿಸಬಾರದು. ಬಾಣಲಿಂಗ, ಲೋಹಲಿಂಗ, ತಾನಾಗಿಯೇ ಉದ್ಭವಿಸಿದಲಿಂಗ ಮತ್ತು ಎಲ್ಲಾ ಶಿವವಿಗ್ರಹಗಳಲ್ಲಿ ಚಂಡೀಶ್ವರನಿಗೆ ಅಧಿಕಾರವಿಲ್ಲ. ಲಿಂಗವನ್ನು ವಿಧಿವತ್ತಾಗಿ ಸ್ನಾನಮಾಡಿಸಿ, ಆ ಸ್ನಾನಜಲವನ್ನು ಪಾನಪಾಡಿದರೆ ಕೂಡಲೆ ಕಾಯಿಕ, ವಾಚಿಕ, ಮಾನಸಿಕವಾದ ಮೂರು ಪಾಪಗಳೂ ನಷ್ಟವಾಗುವುದು.

ಪತ್ರ, ಪುಷ್ಪ, ಫಲ, ಜಲ ಮುಂತಾದ ಶಿವನೈವೇದ್ಯವು ಅಗ್ರಾಹ್ಯವಾದುದಾದರೂ, ಶಿವಸಾಲಿಗ್ರಾಮ ಶಿಲೆಯ ಸಂಬಂಧದಿಂದ ಪವಿತ್ರವಾಗಿರುತ್ತದೆ. ಲಿಂಗದ ಮೇಲಿರುವ ದ್ರವ್ಯವು ಗ್ರಾಹ್ಯವಾದುದಲ್ಲ. ಲಿಂಗಸ್ಪರ್ಶವನ್ನು ಹೊಂದಿದ ನಂತರ ದ್ರವ್ಯವು ಪವಿತ್ರವಾಗುತ್ತೆ. ಅದೇ ಗ್ರಾಹ್ಯ ಅಂತ ಶಿವನೈವೇದ್ಯದ ವಿವರ ಹೇಳಿದ ಸೂತಮುನಿ, ನಂತರ ಬಿಲ್ವಪತ್ರದ ಮಹಿಮೆಯನ್ನ ತಿಳಿಸುತ್ತಾನೆ.

ಬಿಲ್ವವೃಕ್ಷವು ಮಹಾದೇವಸ್ವರೂಪ. ದೇವತೆಗಳೂ ಅದನ್ನು ಸ್ತುತಿಸುತ್ತಾರೆ. ಲೋಕದಲ್ಲಿ ಪ್ರಸಿದ್ಧವಾದ ಎಷ್ಟೆಷ್ಟು ಪುಣ್ಯತೀರ್ಥಗಳಿವೆಯೋ ಅವೆಲ್ಲವೂ ಈ ಬಿಲ್ವವೃಕ್ಷದ ಮೂಲದಲ್ಲೇ ಇರುವುದು. ಆದ್ದರಿಂದ ಬಿಲ್ವವೃಕ್ಷದ ಮೂಲದಲ್ಲಿರುವ ಜಲವನ್ನು ತನ್ನ ಶಿರಸ್ಸಿಗೆ ಹಾಕಿಕೊಂಡು ಸ್ನಾನ ಮಾಡಿದರೆ ಎಲ್ಲ ತೀರ್ಥಗಳಲ್ಲಿಯೂ ಸ್ನಾನಮಾಡಿದ ಪುಣ್ಯ ಪಡೆಯಬಹುದು. ಬಿಲ್ವವೃಕ್ಷದ ಮೂಲದಲ್ಲಿ ಲಿಂಗರೂಪಿಯಾದ ಶಿವನನ್ನು ಯಾರು ಪೂಜಿಸುವರೋ, ಆ ಪುಣ್ಯಾತ್ಮರು ಶಿವನನ್ನು ಸೇರುವರು. ಬಿಲ್ವವೃಕ್ಷದ ಕಟ್ಟೆ, ಅಂದರೆ ಪಾತಿಗಳು ನೀರಿನಿಂದ ತುಂಬಿರುವುದನ್ನು ನೋಡಿದರೆ, ಮಹಾದೇವನು ಸಂತೋಷನಾಗುತ್ತಾನೆ.

ಸಾಧನ ಮತ್ತು ಉಪಸಾಧನಗಳೊಡನೆ ಹೇಳಿರುವ ಶಿವಲಿಂಗ ಪೂಜೆಯು ವಿರಕ್ತರಿಗೆ ಮತ್ತು ವಿರಕ್ತರಲ್ಲದವರಿಗೆ ಬೇರೆಬೇರೆಯಾಗಿರುತ್ತದೆ. ವಿರಕ್ತರಲ್ಲದ ಗೃಹಸ್ಥರಿಗೆ ಪೀಠಪೂಜೆಯು ಸಕಲಾಭಿಷ್ಟವನ್ನುಂಟುಮಾಡುತ್ತದೆ. ಅವರು ಪಾತ್ರೆಯಿಂದಲೇ ಪೂಜೆ ಎಲ್ಲವನ್ನೂ ಮಾಡಬೇಕು. ಅಭಿಷೇಕವಾದ ನಂತರ ಶಾಲ್ಯನ್ನದಿಂದ ನೈವೇದ್ಯವನ್ನು ಮಾಡಬೇಕು. ಪೂಜೆಯಾದ ಮೇಲೆ ಲಿಂಗವನ್ನು ಮನೆಯಲ್ಲಿ ಶುದ್ಧವಾದ ಬೇರೆ ಸಂಪುಟದಲ್ಲಿರಿಸಬೇಕು. ವಿರಕ್ತರಾದ ಸನ್ಯಾಸಿಗಳಿಗೆ ಕರಪೂಜೆ ಅತ್ಯುತ್ತಮ. ಕೈಯಲ್ಲಿ ಲಿಂಗವನ್ನಿಟ್ಟುಕೊಂಡು ಪೂಜಿಸಿ, ತಾವು ಭಕ್ಷಿಸುವ ಆಹಾರವನ್ನೇ ನಿವೇದಿಸಬೇಕು. ಇಂಥವರಿಗೆ ಸೂಕ್ಷ್ಮಲಿಂಗವೇ ಪ್ರಶಸ್ತವಾದುದಾಗಿರುತ್ತದೆ.

ವಿಭೂತಿಯಿಂದ ಲಿಂಗವನ್ನರ್ಚಿಸಬೇಕು. ವಿಭೂತಿಯನ್ನು ನಿವೇದಿಸಬೇಕು. ಪೂಜೆಯನ್ನು ಮಾಡಿ ಅನಂತರ ಲಿಂಗವನ್ನು ಶಿರಸ್ಸಿನಲ್ಲಿ ಧರಿಸಬೇಕು ಎಂದು ಸೂತಮುನಿ ಹೇಳುವುದರೊಂದಿಗೆ ವಿದ್ಯೇಶ್ವರಸಂಹಿತೆಯ ಇಪ್ಪತ್ತೆರಡನೆ ಅಧ್ಯಾಯ ಮುಗಿಯುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು