ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣದ ಕುಮಾರಖಂಡಸಾರ: ಆನೆಯ ತಲೆ ಜೋಡಿಸಿದ ಶಿವ

ಅಕ್ಷರ ಗಾತ್ರ

ಗಣಪತಿಯು ಈಶ್ವರನಿಂದ ಹತನಾದಮೇಲೆ ದೇವತೆಗಳು ಗಣಗಳೂ ಹರ್ಷಚಿತ್ತರಾಗಿದ್ದರೆ, ತಲೆ ಕತ್ತರಿಸಿದ ಈಶ್ವರ ಹೆಚ್ಚು ದುಃಖಿತನಾಗಿದ್ದ. ಸ್ಥಳಕ್ಕೆ ಧಾವಿಸಿದ ಗಿರಿಜೆ ಮಗನ ಶಿರಚ್ಛೇದ ಕಂಡು ದುಃಖ ಮತ್ತು ಕೋಪ ದಿಂದ ಕುದಿದುಹೋದಳು. ಪಾರ್ವತಿ ಅತ್ಯಂತ ಕೋಪದಿಂದ ಸಾವಿರಾರು ಶಕ್ತಿದೇವತೆಗಳನ್ನು ಸೃಷ್ಟಿಸಿ, ದೇವತೆಗಳನ್ನು, ಗಣಗಳನ್ನು ನಾಶಮಾಡುವಂತೆ ಆದೇಶಿಸಿದಳು. ದೇವಿಯ ಮಾತಿನಂತೆ ಸಮಸ್ತ ಶಕ್ತಿದೇವಿಯರು ಕೋಪಾವಿಷ್ಟ ರಾಗಿ ಸಮಸ್ತರನ್ನೂ ನಾಶಮಾಡತೊಡಗಿದರು. ಗಣಗಳ ಅಧಿಪತಿ ವಿಷ್ಣು, ಬ್ರಹ್ಮ, ಶಂಕರ, ಇಂದ್ರ, ಕುಬೇರ, ಸ್ಕಂದ, ಸೂರ್ಯ ಮೊದಲಾದ ಸಮಸ್ತ ದೇವತೆಗಳನ್ನೂ ಸಹ ಲಕ್ಷಿಸದೇ ಶಕ್ತಿದೇವಿಯರು ಧ್ವಂಸಮಾಡುತ್ತಾ ಬಂದರು.

ಪಾರ್ವತಿ ಸೃಷ್ಟಿಸಿದ ಕರಾಲೀ, ಕುಬ್ಜಕಾ, ಖಂಜಾ, ಲಂಬಶೀರ್ಷಾ ಮುಂತಾದ ಶಕ್ತಿದೇವಿಯರ ಕ್ರೂರಸಂಹಾರವನ್ನು ವಿಷ್ಣುಬ್ರಹ್ಮಾದಿಗಳು ನೋಡಿ ಕಳವಳಗೊಂಡರು. ಕೊನೆಗೆ ದೇವತೆಗಳೆಲ್ಲರೂ ಪಾರ್ವತಿಗೆ ಶರಣಾಗಿ ತಮ್ಮನ್ನು ಕಾಪಾಡುವಂತೆ ಆರ್ತನಾದ ಮಾಡತೊಡಗಿದರು. ಆಗ ಶಂಕರನೂ ಸಹ ಸಾಮಾನ್ಯ ಮನುಷ್ಯನಂತೆ ದುಃಖಿಸತೊಡಗಿದ.

ದೇವಿಯ ಉಗ್ರ ಕೋಪ ಕಂಡು ದೇವತೆಗಳೆಲ್ಲರೂ ಭಯದಿಂದ ದೂರ ದಲ್ಲಿ ನಿಂತಿರುವಾಗ ನಾರದ ಮಧ್ಯಪ್ರವೇಶಿಸಿದ. ನಾರದನ ಸಲಹೆಯಂತೆ ದೇವತೆಗಳೆಲ್ಲಾ ಸೇರಿ ಪಾರ್ವತಿಯು ಪ್ರಸನ್ನಳಾಗುವವರೆಗೂ ಮುನಿಗಳೊಡನೆ ವಿಧವಿಧವಾಗಿ ಸ್ತುತಿಸಲು ತೀರ್ಮಾನಿಸಿದರು. ‘ಓ ಲೋಕಮಾತೆಯೇ, ನಿನಗೆ ನಮಸ್ಕಾರ. ಸರ್ವಮಂಗಳೆಯೇ, ನಿನಗೆ ವಂದನೆ. ನೀನು ಆದಿಶಕ್ತಿ. ಸರ್ವಲೋಕಗಳನ್ನೂ ಸೃಷ್ಟಿಸುವವಳು. ಅವುಗಳನ್ನು ಪಾಲಿಸುವವಳು. ಕೊನೆಗೆ ನಾಶಮಾಡುವವಳೂ ನೀನೆ. ನಿನ್ನ ಕೋಪಕ್ಕೆ ಮೂರು ಲೋಕಗಳೂ ನಾಶವಾಗುತ್ತಿವೆ. ಆದುದರಿಂದ ನಮ್ಮ ಮೇಲೆ ಅನುಗ್ರಹಮಾಡಿ ಪ್ರಸನ್ನಳಾಗು. ಲೋಕವನ್ನುದ್ಧಾರಮಾಡ’ ಎಂದು ಸ್ತೋತ್ರ ಮಾಡಿದರು.

ದೇವಋಷಿಗಳೆಲ್ಲರೂ ಪ್ರಾರ್ಥಿಸಿದರೂ, ಪಾರ್ವತಿ ಕೋಪ ಶಮನವಾಗಲಿ ಲ್ಲ. ಇದರಿಂದ ದೇವರ್ಷಿಗಳು ಪುನಃ ದೇವಿಯನ್ನು ಸ್ಮರಿಸುತ್ತಾ ‘ಎಲೈ ದೇವಿ, ಈಗ ನೀನು ಸಂಹರಿಸಬೇಕೆಂದಿರುವವರ ಗುಂಪಿನಲ್ಲಿ ನಿನ್ನ ಪತಿಯಾದ ಶಂಕರನೂ ಇರುವನು. ಹರಿ, ಬ್ರಹ್ಮ, ಇಂದ್ರಾದಿಗಳೂ ಸಹ ನಿಮ್ಮ ಮಕ್ಕಳ ಲ್ಲವೇ? ನಿನ್ನವರನ್ನೇ ಕೋಪದಿಂದ ನಾಶಮಾಡುದುಚಿತವೇ?’ ಎಂದು ಋಷಿಗಳೆಲ್ಲರೂ ದೈನ್ಯದಿಂದ ಪ್ರಾರ್ಥಿಸಿದರು.

ಇದರಿಂದ ದೇವಿಯು ಸ್ವಲ್ಪಮಟ್ಟಿಗೆ ಪ್ರಸನ್ನಳಾಗಿ ‘ಬ್ರಹ್ಮರ್ಷಿಗಳೇ, ನನ್ನ ಈ ಸಂಹಾರಕೃತ್ಯವು ನಿಲ್ಲಬೇಕಾದರೇ ಮೊದಲು ನನ್ನ ಮಗನು ಬದುಕಬೇಕು. ಅವನೇ ಮುಂದೇ ನಿಮ್ಮೆಲ್ಲರಿಗೂ ನಾಯಕನಾಗಬೇಕು. ಅಲ್ಲಿಯವರೆಗೂ ನೀವು ನನ್ನಿಂದ ಶಾಂತಿಯನ್ನು ಪಡೆಯಲಾರಿರಿ. ನಿಮಗೆ ಸುಖವು ದೊರೆಯ ಲಾರದು’ ಎಂದಳು. ಆಗ ದೇವತೆಗಳು ಶಂಕರನಲ್ಲಿಗೆ ಹೋಗಿ ದೇವಿಯ ಮನೋಭಿಪ್ರಾಯವನ್ನು ತಿಳಿಸಿದರು. ಆಗ ಶಂಕರನು ಹೇಗಾದರೂ ಪಾರ್ವ
ತಿಯ ಕೋಪದಿಂದ ಲೋಕಗಳನ್ನು ರಕ್ಷಿಸಬೇಕೆಂದು ‘ದೇವತೆಗಳೆ, ಈಗಲೇ ಉತ್ತರ ದಿಕ್ಕಿಗೆ ಹೋಗಿ, ಮೊದಲು ನೀವು ಯಾವ ಪ್ರಾಣಿಯನ್ನು ಕಾಣು ವಿರೋ ಅದರ ತಲೆಯನ್ನು ಕತ್ತರಿಸಿ ತಂದು, ಈ ಬಾಲಕನ ಮೃತದೇಹಕ್ಕೆ ಸೇರಿಸಿರಿ’ ಎಂದು ಅಪ್ಪಣೆ ಮಾಡಿದ. ಅದರಂತೆ ದೇವತೆಗಳೂ ಉತ್ತರ ದಿಕ್ಕಿಗೆ ಹೋಗಿ, ಆನೆಯೊಂದರ ತಲೆಯನ್ನು ಕಡಿದು ಪಾರ್ವತೀಪುತ್ರನ ಕಳೇವರವಕ್ಕೆ ಜೋಡಿಸಿ ವಿಧಿವತ್ತಾಗಿ ಅರ್ಚನೆ ಮಾಡಿದರು.

ಆಗ ಅಲ್ಲಿ ನೆರೆದಿದ್ದ ಬ್ರಹ್ಮ-ವಿಷ್ಣು ದೇವತೆಗಳೂ ಗಣಗಳೂ ಶಂಕರನಿಗೆ ನಮಸ್ಕರಿಸಿ ಹೀಗೆ ಕೇಳಿಕೊಂಡರು: ‘ಎಲೈ ಪರಶಿವನೇ, ನಿನ್ನ ತೇಜಸ್ಸಿನಿಂದಲೇ ನಾವೆಲ್ಲರೂ ಜನಿಸಿದ್ದೇವೆ. ಈಗಲೂ ನಮ್ಮ ಮಂತ್ರಪ್ರಭಾವದಿಂದ ಅದೇ ತೇಜಸ್ಸು ಈ ಜಲದಲ್ಲಿ ಬಂದು ನಿಲ್ಲಲಿ’ ಎಂದು ಪ್ರಾರ್ಥಿಸಿದರು. ಆ ಅಭಿಮಂತ್ರಿತವಾದ ನೀರನ್ನು ಬಾಲಕನ ಮೃತದೇಹದ ಮೇಲೆ ಶಿವಸಹಿತರಾಗಿ ಸರ್ವರೂ ಪ್ರೋಕ್ಷಿಸಿದರು. ಜಲಪ್ರೋಕ್ಷಣೆಯಾದೊಡನೆಯೇ ಬಾಲಕನು ಎದ್ದು ಕುಳಿತನು. ಗಜಮುಖನಾಗಿಯೂ ಸುಂದರಗಾತ್ರನಾಗಿಯೂ ಅತಿ ತೇಜಸ್ವಿಯೂ ಆಗಿ ಕಂಗೊಳಿಸುತ್ತಿದ್ದ ಬಾಲಕನನ್ನು ಕಂಡು ಪಾರ್ವತಿ ಸಂತುಷ್ಟಳಾದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT