ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ: ಹಠ ಬಿಡದ ಮೇನಾದೇವಿ

ಅಕ್ಷರ ಗಾತ್ರ

ಮೇನಾದೇವಿ ತನ್ನ ಕೆಟ್ಟ ಹಠವನ್ನು ಸಡಿಲಿಸಲಿಲ್ಲ. ಅವಳ ರೋಷ ಮತ್ತೆ ಪಾರ್ವತಿಯತ್ತ ತಿರುಗಿತು. ‘ಈ ದುಷ್ಟೆಯಿಂದ ನನಗೂ ಗಿರಿರಾಜನಿಗೂ ನಮ್ಮ ಕುಲಕ್ಕೂ ಅಪಮಾನವಾಗಿದೆ. ಇವಳಿಗೀಗ ಘೋರವಿಷವನ್ನು ಕುಡಿಸುವೆ. ಇಲ್ಲವೇ ಬಾವಿಯಲ್ಲಿ ತಳ್ಳಿ ಮುಳುಗಿಸುವೆ. ಅಥವಾ ಶಸ್ತ್ರಗಳಿಂದ ಚೂರುಚೂರಾಗಿ ಕತ್ತರಿಸುವೆ. ಅದಾಗದಿದ್ದರೆ ನಾನೇ ಪ್ರಾಣವನ್ನು ಬಿಡುವೆ. ಇದರ ಹೊರತು ಭಯಂಕರ ರೂಪಿಯಾದ ಶಂಕರನಿಗೆ ನನ್ನ ಮಗಳನ್ನು ಕೊಡುವುದಿಲ್ಲ. ಶಿವನಿಗೆ ತಂದೆತಾಯಿಗಳಿಲ್ಲ. ಬಂಧುಗಳಿಲ್ಲ. ರೂಪವು ಮೊದಲೇ ಇಲ್ಲ. ಇವನ ವಯಸ್ಸೆಷ್ಟೋ, ತಿಳಿಯದು. ಧನ ಇಲ್ಲ, ವಿದ್ಯೆಯೂ ಇಲ್ಲ. ಪಾವಿತ್ರ್ಯವೂ ಇಲ್ಲ. ಹೀಗಿರುವ ಶಿವನಿಗೆ ನನ್ನ ಪ್ರಿಯಪುತ್ರಿಯನ್ನು ಹೇಗೆ ಮದುವೆ ಮಾಡಿಕೊಡಲಿ?’ ಎಂದು ಮೇನಾದೇವಿ ದುಃಖದಿಂದ ರೋದಿಸಿದಳು.

ಆಗ ಬಂದ ಬ್ರಹ್ಮ ಅವಳ ಅಜ್ಞಾನವನ್ನು ತೊಲಗಿಸುವುದಕ್ಕಾಗಿ ಶಿವತತ್ವವನ್ನು ಉಪದೇಶಿಸಿದ. ‘ಮೇನಾದೇವಿ, ಶಂಕರ ಜಗತ್ತನ್ನು ಸೃಷ್ಟಿಸುವವನು, ಪಾಲಿಸುವವನು ಮತ್ತು ಸಂಹರಿಸುವವನು. ಇವನ ಸ್ವರೂಪವನ್ನು ನೀನು ತಿಳಿದಿಲ್ಲ. ತಪ್ಪು ತಿಳಿವಳಿಕೆಯಿಂದ ಸುಮ್ಮನೆ ದುಃಖ ಪಡುತ್ತಿರುವೆ. ಶಂಕರನಿಗೆ ಅನೇಕ ರೂಪಗಳು, ನಾಮಗಳು ಇವೆ. ಶಿವನಿಗೆ ಯಾವ ವಿಕಾರಗಳೂ ಇಲ್ಲ. ಶಿವನಿಗೆ ಪಾರ್ವತಿಯನ್ನು ಕೊಡು’ ಎಂದ.

ಮೇನಾದೇವಿ, ‘ಬ್ರಹ್ಮನೇ, ನೀನು ಸಹ ಗಿರಿಜೆಯ ಸುಂದರರೂಪವನ್ನು ವ್ಯರ್ಥಮಾಡಬೇಕೆಂದು ಎಣಿಸಿರುವೆಯಾ? ಅದರ ಬದಲು ಇವಳನ್ನು ನೀನೇ ಕೊಲ್ಲಬಾರದೆ? ನನ್ನ ಪುತ್ರಿಯನ್ನು ಶಿವನಿಗೆ ನಾನು ಕೊಡಲಾರೆ’ ಎಂದಳು. ಆಗ ಸನಕ ಮೊದಲಾದ ಸಿದ್ಧರು ಮೇನಾದೇವಿಯ ಮನವೊಲಿಸಲು ಯತ್ನಿಸಿದರು. ಆಗಲೂ ಆಕೆ ಹಠ ಬಿಡಲಿಲ್ಲ. ವಿಷ್ಣು, ‘ಮೇನಾದೇವಿ, ನಿನ್ನ ಕುಲವು ಉತ್ತಮವಾದ ಬ್ರಹ್ಮನ ಕುಲ. ಧರ್ಮಿಷ್ಠಳಾದ ನೀನೇ ಧರ್ಮವನ್ನು ಬಿಡಲು ಉದ್ಯುಕ್ತಳಾಗಿರುವೆಯಲ್ಲಾ? ಶಿವನ ಸ್ವರೂಪವನ್ನು ನೀನು ತಿಳಿದಿಲ್ಲ. ಅವನು ವಸ್ತುತಃ ನಿರ್ಗುಣ. ಲೀಲೆಯಿಂದ ಸಗುಣನೂ ಆಗುವನು. ಅವನು ವಿಕಾರವಾದ ರೂಪವುಳ್ಳವನೂ ಆಗುವನು, ಸುಂದರರೂಪವುಳ್ಳವನೂ ಆಗುವನು. ಶಿವನು ನಿರ್ಮಿಸಿದ ಪ್ರಕೃತಿಪುರುಷರಿಂದ ನಾನೂ ಬ್ರಹ್ಮ ಜನಿಸಿರುವೆವು. ಪರಮೇಶ್ವರನು ಲೋಕಹಿತಕ್ಕಾಗಿ ರುದ್ರರೂಪದಿಂದ ಅವತರಿಸಿದ್ದಾನೆ. ಶಂಕರನಿಂದಲೇ ನಾನು, ಬ್ರಹ್ಮ, ವೇದಗಳು, ದೇವತೆಗಳು ಮತ್ತು ಜಗತ್ತೆಲ್ಲವೂ ಆಗಿವೆ. ಇಂತಹ ಪರಮೇಶ್ವರನ ರೂಪವನ್ನು ವರ್ಣಿಸಲು ಯಾರಿಗೂ ಸಾಧ್ಯವಿಲ್ಲ. ಬ್ರಹ್ಮ ಮೊದಲುಗೊಂಡು ಸಣ್ಣ ಕ್ರಿಮಿಯವರೆಗೆ ಇರುವ ಈ ಜಗತ್ತೆಲ್ಲವೂ ಶಿವನ ರೂಪ. ಇಂಥ ಪರಶಿವನೇ ಸುಂದರವಾದ ಶಿವರೂಪ ಧರಿಸಿ ನಿನ್ನ ಮನೆ ಬಾಗಿಲಿಗೇ ಬಂದಿದ್ದಾನೆ. ದುಃಖವನ್ನು ಬಿಟ್ಟು, ಶಿವನನ್ನು ಭಜಿಸು. ಅದರಿಂದ ನಿನಗೆ ಸೌಖ್ಯವುಂಟಾಗುವುದು’ ಎಂದ.

ಹೀಗೆ ಹರಿ ನಾನಾ ವಿಧವಾಗಿ ಬೋಧಿಸಿದ್ದರಿಂದ ಮೇನಾದೇವಿ ಮನಸ್ಸು ಸ್ವಲ್ಪ ಮೃದುವಾಯಿತು. ಆದರೆ ಮೇನಾದೇವಿ ತನ್ನ ಕೆಟ್ಟ ಹಠವನ್ನು ಬಿಡದೆ, ‘ಹರಿ, ಶಿವನಿಗೆ ಸುಂದರ ಶರೀರವಿದ್ದರೆ ನನ್ನ ಮಗಳನ್ನು ಕೊಡುವೆ. ಅದಿಲ್ಲದೆ ನೀವು ಕೋಟಿ ಪ್ರಯತ್ನಗಳನ್ನು ಮಾಡಿದರೂ ನಾನು ಕೊಡಲಾರೆ. ಇದು ನನ್ನ ದೃಢವಾದ ಪ್ರತಿಜ್ಞೆ’ ಎಂದಳು.

ಇಲ್ಲಿಗೆ ಪಾರ್ವತೀಖಂಡದ ನಲವತ್ತನಾಲ್ಕನೆಯ ಅಧ್ಯಾಯ ಮುಗಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT