ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ: ಸತಿ ದಾಂಪತ್ಯಕ್ಕೆ ಶಾಸ್ತ್ರ ತೊಡಕು

ಭಾಗ 240
ಅಕ್ಷರ ಗಾತ್ರ

ಎದುರಿನಲ್ಲಿಯೇ ನಿಂತಿರುವ ತನ್ನ ಸ್ವಾಮಿಯನ್ನು ನೋಡಿ ಗಿರಿಜೆಯ ಮುಖ ಪ್ರೀತಿಯಿಂದ ಅರಳಿತು. ಮನಸ್ಸಿನಲ್ಲಾಗುತ್ತಿದ್ದ ಸಂತೋಷ ತಡೆಯಲಾಗದೆ ಶಿವನಿಗೆ ಹೇಳಿದಳು, ‘ಓ ಮಹಾದೇವ, ನೀನು ನನ್ನ ಸ್ವಾಮಿ ಎಂಬುದನ್ನು ಮರೆತುಬಿಟ್ಟಿರುವೆಯಾ? ನನಗಾಗಿಯೇ ನೀನು ದಕ್ಷಬ್ರಹ್ಮನ ಯಾಗವನ್ನು ಹಿಂದೆ ಕೋಪದಿಂದ ನಾಶಮಾಡಿದೆಯಲ್ಲವೆ? ನನ್ನ ಮೇಲೆ ಅಷ್ಟೊಂದು ಪ್ರೀತಿ ಇಟ್ಟುಕೊಂಡಿರುವ ನೀನು ಏಕೆ ಇಷ್ಟೊಂದು ಪರೀಕ್ಷೆ ಮಾಡಿದೆ? ತಾರಕಾಸುರನ ಉಪಟಳದಿಂದ ನೊಂದಿರುವ ದೇವತೆಗಳ ನೋವನ್ನು ನಿವಾರಿಸಿ, ಮತ್ತೆ ಜಗತ್ತಿನಲ್ಲಿ ಶಾಂತಿ-ನೆಮ್ಮದಿ ತರುವ ಕಾರ್ಯಸಿದ್ಧಿಗಾಗಿ ಅವತರಿಸಿದ್ದೇನೆ. ಇದೆಲ್ಲ ನಿನಗೆ ಗೊತ್ತಿದ್ದೂ ಏಕೆ ನನ್ನ ವಿವಾಹವಾಗಲು ವಿಳಂಬಿಸಿದೆ? ಇನ್ನೂ ನನ್ನ ಪರೀಕ್ಷಿಸಬೇಕೆಂದಿದ್ದರೆ ನಿನಗೆ ತೋಚಿದ ಪರೀಕ್ಷೆ ಮಾಡು. ನೀನು ನನ್ನಲ್ಲಿ ಪ್ರಸನ್ನನಾಗಿ ಅನುಗ್ರಹವನ್ನು ಮಾಡಬೇಕೆಂದಿದ್ದರೆ, ನೀನು ನನ್ನ ವಿವಾಹವಾಗು. ನೀನು ನನ್ನ ಪತಿಯಾಗಬೇಕೆಂದು ಹಗಲು-ಇರುಳು ಎನ್ನದೆ, ಮಳೆ-ಬಿಸಿಲು ಅಂತ ಅಳುಕದೆ, ಕಾಡು-ಮೇಡು ಎಂದು ನೋಡದೆ ಕಠಿಣ ತಪಸ್ಸು ಮಾಡಿದ್ದೇನೆ. ನನ್ನ ತಪೋವಿಧಿಯಲ್ಲಿ ಯಾವುದಾದರೂ ಲೋಪವಿದ್ದರೆ ತಿಳಿಸು, ಮತ್ತೆ ಮೂರು ಸಾವಿರ ವರ್ಷ ತಪೋನಿರತಳಾಗುತ್ತೇನೆ. ಏಕೆಂದರೆ, ನಿನ್ನ ಪಡೆಯುವುದಕ್ಕಿಂತ ಮತ್ತೊಂದು ಆಸೆ ನನ್ನ ಜೀವನದಲ್ಲಿಲ್ಲ. ಲೀಲಾಮಯನಾದ ಓ ಸ್ವಾಮಿಯೇ, ನನ್ನ ಮದುವೆಯಾಗಲು ನಿನಗೆ ಇಚ್ಛೆ ಇದ್ದರೆ, ಈಗಲೇ ನನ್ನ ತಂದೆ ಹಿಮವಂತನ ಮನೆಗೆ ಹೋಗು. ಅಲ್ಲಿ ನನ್ನ ಪಾಣಿಗ್ರಹಣಕ್ಕಾಗಿ ತಂದೆಯ ಅನುಮತಿಯನ್ನು ಪಡೆದುಕೋ. ನಿನ್ನ ಬೇಡಿಕೆಯನ್ನು ನನ್ನ ತಂದೆ ಖಂಡಿತ ಈಡೇರಿಸುತ್ತಾರೆಂಬ ನಂಬಿಕೆ ನನಗಿದೆ. ನಮ್ಮ ವಿವಾಹದಿಂದ ನನ್ನ ತಂದೆಯ ಗೃಹಸ್ಥಾಶ್ರಮವನ್ನು ಸಾರ್ಥಕಗೊಳಿಸಬೇಕು. ಏಕೆಂದರೆ, ಸೂಕ್ತ ವರನೊಂದಿಗೆ ನನ್ನ ವಿವಾಹ ಮಾಡಿ, ತಂದೆಯಾಗಿ ತಮ್ಮ ಕರ್ತವ್ಯ ಪೂರ್ಣಗೊಳಿಸಲು ಕಾಯುತ್ತಿದ್ದಾರೆ. ನಮ್ಮ ಮದುವೆ ವಿಷಯ ತಿಳಿದರೆ ನನ್ನ ತಂದೆಗೆ ಸಂತೋಷವಾಗುತ್ತದೆ. ಅವರು ಕೂಡಲೇ, ಋಷಿಗಳು ಮತ್ತು ಬಂಧುಗಳೊಂದಿಗೆ ಚರ್ಚಿಸಿ, ನಮ್ಮ ವಿವಾಹ ಮಹೋತ್ಸವಕ್ಕೆ ಸಿದ್ಧತೆ ಮಾಡುತ್ತಾರೆ.

‘ತಾಯಿ ಮೇನಾದೇವಿ ನನ್ನ ಮದುವೆಯ ಚಿಂತೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಸೋದರ ಮೈನಾಕ, ಬಂಧುಗಳಾದ ಸಹ್ಯಾದ್ರಿ, ಮಂದರಗಿರಿ, ಮೇರುಗಿರಿ, ಕ್ರೌಂಚ ಮುಂತಾದವರು ನನ್ನ ವಿವಾಹಕ್ಕಾಗಿ ಕಾತರಿಸುತ್ತಿದ್ದಾರೆ. ಅವರಿಗೆ ನಾನು ಇಷ್ಟಪಟ್ಟ ಶಿವನೊಂದಿಗೆ ಮದುವೆಯಾಗುವ ವಿಷಯ ತಿಳಿದರೆ, ಸಂತೋಷದಿಂದ ಸಂಭ್ರಮಿಸುತ್ತಾರೆ. ಮಹಾದೇವ, ನಿನ್ನ ಮದುವೆಯಾಗಲು ನನ್ನದೊಂದು ಕೋರಿಕೆ ಇದೆ. ನಮ್ಮ ವಿವಾಹ ವಿಧಿವತ್ತಾಗಿ ನಡೆಯಬೇಕು. ಹಿಂದಿನ ಜನ್ಮದಲ್ಲಿ ನಮ್ಮ ವಿವಾಹ ವಿಧಿವತ್ತಾಗಿ ನಡೆಯಲಿಲ್ಲ. ಇದರಿಂದ ನಮ್ಮ ದಾಂಪತ್ಯ ಅರ್ಧಕ್ಕೆ ಅಂತ್ಯವಾಯಿತು. ನನ್ನ ತಂದೆ ದಕ್ಷಬ್ರಹ್ಮ ವಿವಾಹ ಮಾಡುವಾಗ ಗ್ರಹಗಳನ್ನು ಪೂಜಿಸಲೇ ಇಲ್ಲ. ಇದರಿಂದ ಉಂಟಾದ ಮಹತ್ತಾದ ಗ್ರಹದೋಷದಿಂದ ನಮ್ಮ ದಾಂಪತ್ಯಜೀವನಕ್ಕೆ ತೊಡಕಾಯಿತು. ಆದುದರಿಂದ ಓ ಮಹಾದೇವ, ವಿಧಿವತ್ತಾಗಿಯೇ ನನ್ನನ್ನು ನೀನು ಮದುವೆಯಾಗಬೇಕು. ಅದರಿಂದ ದೇವಕಾರ್ಯಸಿದ್ಧಿಯೂ ಆಗುವುದು. ಇದಕ್ಕಾಗಿ ವಿವಾಹಕಾರ್ಯದಲ್ಲಿ ಯಾವ ಯಾವ ನಿಯಮಗಳಿರುವುವೋ ಅವುಗಳನ್ನೆಲ್ಲ ಮಾಡಬೇಕು’ ಎಂದಳು.⇒l

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT