ಭಾನುವಾರ, ಏಪ್ರಿಲ್ 2, 2023
33 °C

ವೇದವ್ಯಾಸರ ಶಿವಪುರಾಣಸಾರ: ಶಿವ-ಪಾರ್ವತಿ ಕಲ್ಯಾಣ ಪೂರ್ಣ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ Updated:

ಅಕ್ಷರ ಗಾತ್ರ : | |

ಗಿರಿಜಾಶಿವರಿಗೆ ಕನಕಪುಷ್ಪದ ಅಭಿಷೇಕವು ನಡೆಯಿತು. ಪುರೋಹಿತರು ಶಿವದಂಪತಿಗೆ ಧ್ರುವ ಮಂಡಲದ ದರ್ಶನವನ್ನು ಮಾಡಿಸಿದರು. ನಂತರ ಪಾರ್ವತೀಪರಮೇಶ್ವರ ದಂಪತಿ ಪರಸ್ಪರ ಹೃದಯಗಳನ್ನು ಸ್ಪರ್ಶಿಸುವ ಹೃದಯಾಲಂಭನವೆಂಬ ಕರ್ಮವನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಮುನಿಗಳು ಸ್ವಸ್ತಿಮಂತ್ರಗಳನ್ನು ಪಠಿಸುವಾಗ ಪುರೋಹಿತರ ಆಣತಿಯಂತೆ ಶಿವನು ಗಿರಿಜೆಯ ಹಣೆಯಲ್ಲಿ ಕುಂಕುಮವನ್ನಿಟ್ಟ. ಬ್ರಹ್ಮನ ಅಪ್ಪಣೆಯಂತೆ, ನೂತನ ದಂಪತಿ ಹರ್ಷದಿಂದ ಹರಿಭೂಮದೂಟ ಮಾಡಿದರು. ವಿವಾಹಕಾರ್ಯದ ನೇತೃತ್ವವಹಿಸಿದ್ದ ಬ್ರಹ್ಮನಿಗೆ ಬ್ರಹ್ಮತ್ವದ ದಕ್ಷಿಣೆಗಾಗಿ ಪೂರ್ಣಪಾತ್ರವನ್ನು ಬಹುಮಾನವಾಗಿ ಕೊಟ್ಟ. ಗರ್ಗಮುನಿಗೆ ಗೋದಾನವನ್ನು ವಿಧಿವತ್ತಾಗಿ ಕೊಟ್ಟ. ಇದರ ಜೊತೆಗೆ ಮಂಗಳಕರವಾದಂತಹ ಅನೇಕ ಮಹಾದಾನಗಳನ್ನು ಸಹ ಅವನಿಗೆ ನೀಡಿದ. ವಿವಾಹಕಾರ್ಯದಲ್ಲಿ ಭಾಗಿಯಾದ ಪ್ರತಿಯೊಬ್ಬ ಪುರೋಹಿತರಿಗೂ ತಲಾ ನೂರು ಚಿನ್ನದ ನಾಣ್ಯಗಳನ್ನು ದಾನಮಾಡಿದ.

ಶಿವ-ಪಾರ್ವತಿಯ ವಿವಾಹವನ್ನು ಕಣ್ತುಂಬಿಕೊಂಡ ದೇವತೆಗಳು ಮತ್ತಿತರರೆಲ್ಲ ತುಂಬಾ ಹರ್ಷದಿಂದ ಜಯಘೋಷಮಾಡಿದರು. ಗಾಯಕರು ಮಂಗಳವನ್ನು ಹಾಡಿದರೆ, ಸಂಗೀತಗಾರರು ಆನಂದಕರವಾದಂತಹ ಅನೇಕ ವಾದ್ಯಗಳನ್ನು ನುಡಿಸಿದರು. ವಿವಾಹ ಕಾರ್ಯ ಯಶಸ್ವಿಯಾಗಿ ನಡೆದ ನಂತರ ಬ್ರಹ್ಮ, ವಿಷ್ಣು, ದೇವತೆಗಳು, ಮುನಿಗಳು ಹಿಮವಂತನ ಅನುಮತಿಯನ್ನು ಪಡೆದು ಸಂತೋಷದಿಂದ ತಮ್ಮ ಮನೆಗಳಿಗೆ ತೆರಳಿದರು.

ನಂತರ ಹಿಮವಂತನ ಪಟ್ಟಣದ ಸುಮಂಗಲೆಯರು ಸಂತೋಷದಿಂದ ಗಿರಿಜಾಶಿವರನ್ನು ಅಂತರ್ಗೃಹಕ್ಕೆ ಕರೆತಂದರು. ಅಲ್ಲಿ ಗಿರಿಜಾಶಂಕರರಿಗೆ ಸ್ತ್ರೀಯರು ಲೋಕಾಚಾರದಂತೆ ಅನೇಕ ಶಾಸ್ತ್ರ ಮಾಡಿದರು. ಜನಗಳಿಗೆ ಕ್ಷೇಮವನ್ನುಂಟುಮಾಡುವಂತಹ ಆ ದೇವದಂಪತಿಗಳು ಪುರದ ಸುಮಂಗಲೆಯರು ಹೇಳಿದಂತೆಯೇ ಲೋಕಾಚಾರದ ಶಾಸ್ತ್ರಗಳನ್ನು ಶ್ರದ್ಧೆಯಿಂದ ಮಾಡಿದರು. 

ಶಿವಪಾರ್ವತಿಯನ್ನು ವಾಸಗೃಹಕ್ಕೆ ಕಳುಹಿಸುವಾಗ ಪುರದ ಸ್ತ್ರೀಯರು ವಿವಾಹಸಂದರ್ಭದಲ್ಲಿ ಶಿವನ ಶಲ್ಯಕ್ಕೆ ಪಾರ್ವತಿಯ ಸೀರೆ ಸೆರಗು ಕಟ್ಟಿದ್ದ ಗಂಟನ್ನು ಬಿಚ್ಚಿದರು. ಅಲ್ಲಿಗೆ ವಿವಾಹದ ಅಂತಿಮ ಕಾರ್ಯಗಳೆಲ್ಲಾ ಪರಿಸಮಾಪ್ತಿಯಾದಂತಾಯಿತು. ನೂತನ ದಂಪತಿಗೆ ಶುಭವಾಗಲಿ ಎಂದು ಹರಸಿದ ಸುಮಂಗಲೆಯರು ಮಂದಹಾಸವನ್ನು ಬೀರುತ್ತಾ ಸಂಭ್ರಮ ದಿಂದ ಹೊರನಡೆದರು. ಈ ಸಂದರ್ಭದಲ್ಲಿ ಆರತಿಶಾಸ್ತ್ರ ಮಾಡಿದ ಸುಮಂಗಲೆಯ ರಿಗೆಲ್ಲಾ ಶಿವನು ಸಂಪ್ರದಾಯದಂತೆ ಚಿನ್ನದ ವರಹಗಳ ಕಾಣಿಕೆ ನೀಡಿದ.

ಹೀಗೆ ಸುಮಂಗಲೆಯರಿಂದ ಆಶೀರ್ವಾದ ಪಡೆದು ವಾಸಗೃಹ ಪ್ರವೇಶಿಸಿದ ಗಿರಿಜಾಶಂಕರ ದಂಪತಿ ಸಾಮಾನ್ಯರಂತೆ ಸಂತೋಷಪಡುತ್ತಾ ವಿರಮಿಸಿದರು. ಸುಂದರನಾದ ಪರಮೇಶ್ವರನನ್ನು ನೋಡುತ್ತಾ ಸಂತೋಷದಿಂದ ಮೈಮರೆತ ಪಾರ್ವತಿ ತನ್ನ ಅದೃಷ್ಟ ನೆನೆದು ಪುಳಕಗೊಂಡಳು. ಆಗ ಶಿವನು ಸುಂದರವಾದ ರೂಪದಿಂದ ಮಹಾಕಾಂತಿಯುಳ್ಳವನಾಗಿ ಶೋಭಿಸುತ್ತಿದ್ದ. ನವಯೌವನ ಸಂಪನ್ನನಾಗಿ ಮನ್ಮಥನಂತೆ ಆಕರ್ಷಕವಾಗಿ ಕಾಣಿಸುತ್ತಿದ್ದ.

ಇಂಥ ಸುಂದರ ದಂಪತಿಯನ್ನು ಹರಸಲು ಸರಸ್ವತೀ, ಲಕ್ಷ್ಮೀ, ಸಾವಿತ್ರೀ, ಜಾಹ್ನವಿ, ಅದಿತಿ, ಶಚೀದೇವಿ, ಲೋಪಾಮುದ್ರಾ, ಅರುಂಧತಿ, ಅಹಲ್ಯಾ, ತುಳಸಿ, ಸ್ವಾಹಾದೇವಿ, ರೋಹಿಣಿ, ವಸುಂಧರಾ, ಶತರೂಪಾದೇವಿ, ಸಂಜ್ಞಾ, ರತೀದೇವಿ ಎಂಬ ಹದಿನಾರು ದೇವತಾಸ್ತ್ರೀಯರು ಅಲ್ಲಿಗೆ ಬಂದರು. ಇವರು ಗಳಲ್ಲದೆ, ದೇವಕನ್ಯೆಯರು, ನಾಗಕನ್ಯೆಯರು, ಮುನಿಕನ್ಯೆಯರು ಸಹ ಅಲ್ಲಿಗೆ ಬಂದರು. ಆ ಸುಂದರಿಯರು ಶಿವನಿಗೆ ರತ್ನಸಿಂಹಾಸನವನ್ನು ಅರ್ಪಿಸಿದರು. ಸಿಂಹಾಸನದ ಮೇಲೆ ಹರ್ಷದಿಂದ ಪಾರ್ವತಿಯೊಂದಿಗೆ ಕುಳಿತ ಶಿವನಿಗೆ ದೇವಸ್ತ್ರೀಯರೆಲ್ಲ ಮಧುರವಾದ ಮಾತಿನಿಂದ ಹೊಗಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು