ಸೋಮವಾರ, ಆಗಸ್ಟ್ 2, 2021
23 °C

ವಾರ ಭವಿಷ್ಯ: 23-5-2021 ರಿಂದ 29-5-2021ರ ವರೆಗೆ

ಡಾ.ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ Updated:

ಅಕ್ಷರ ಗಾತ್ರ : | |

ಡಾ.ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ, ಜ್ಯೋತಿಷ್ಯ ಪದ್ಮಭೂಷಣ
ಸಂಪರ್ಕ: 8197304680

***

ಮೇಷ ರಾಶಿ (ಅಶ್ವಿನಿ ಭರಣಿ ಕೃತಿಕ 1)

ಸ್ವಯಂ ಉದ್ಯೋಗಿಗಳಿಗೆ ತುಂಬಾ ಆಶಾದಾಯಕವಾದ ಸಂದರ್ಭ ಇದಾಗಿದ್ದು ಅವರ ವ್ಯವಹಾರಗಳು ವಿಸ್ತರಿಸುತ್ತವೆ.  ವ್ಯವಹಾರದ ವಿಷಯವಾಗಿ ದೂರ ಪ್ರಯಾಣ ಮಾಡುವಿರಿ. ಧನಾದಾಯ ಉತ್ತಮವಾಗಿರುತ್ತದೆ. ಅಪೇಕ್ಷಿಸಿದ ಸಾಲಗಳು ದೊರೆತು ಕಾರ್ಯ ಮುನ್ನಡೆಯುತ್ತದೆ. ವಿಶಿಷ್ಟವಾಗಿ ಆಲೋಚನೆ ಮಾಡಿ ನಿಮ್ಮ ಮನಸ್ಸಿನ ದುಗುಡವನ್ನು ಕಡಿಮೆ ಮಾಡಿಕೊಳ್ಳುವಿರಿ. ದೊಡ್ಡ ಆಲೋಚನೆಗಳನ್ನು ಸಾಕಾರ ಮಾಡುವಾಗ ಯಾವುದೇ ರೀತಿಯ ನಿರ್ಲಕ್ಷ ಸಲ್ಲದು. ಪ್ರಕಾಶಕರಿಗೆ ಹೊಸ ರೀತಿಯ  ಆಯಾಮವೊಂದು ದೊರೆತು ಹೆಸರು ಬರುತ್ತದೆ.

ವೃಷಭರಾಶಿ (ಕೃತಿಕಾ2 3 4 ರೋಹಿಣಿ ಮೃಗಶಿರಾ1 2)

ಬೇರೆಯವರ ವಿಚಾರದಲ್ಲಿ ತಲೆ ಕೆಡಿಸಿಕೊಳ್ಳುವುದನ್ನು ಬಿಟ್ಟು ನಿಮ್ಮ ಕಾರ್ಯದಲ್ಲಿ ಮಗ್ನರಾಗಿ ಕೆಲಸ ಮುಗಿಸಿರಿ. ನಿಧಾನವಾಗಿ ಆರ್ಥಿಕತೆಯು ಸ್ಥಿರತೆಯತ್ತ ಸಾಗುತ್ತದೆ. ಏಕಕಾಲದಲ್ಲಿ ಅನೇಕ ಕಾರ್ಯಗಳನ್ನು ಆರಂಭಿಸಬೇಡಿರಿ, ಆಗ ನಿಮ್ಮ ಮುಖ್ಯ ಕಾರ್ಯ ನಿಂತು ಹೋಗಬಹುದು. ಬಟ್ಟೆ ವ್ಯಾಪಾರಿಗಳಿಗೆ ಉತ್ತಮ ವ್ಯವಹಾರವಿರುತ್ತದೆ. ನಿಮಗೆ ನಿಮ್ಮ ಕುಟುಂಬದ ಸಹಕಾರ ಸಾಕಷ್ಟು ದೊರೆಯುತ್ತದೆ. ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ ನಿಮಗೆ ಸಾಮಾಜಿಕ ಗೌರವ ದೊರೆಯುತ್ತದೆ. ನಿಮ್ಮ ವಿರೋಧಿಗಳು ಸಹ ನಿಮ್ಮ ಬಗ್ಗೆ ಗೌರವ ತೋರುವರು. ಉದ್ಯೋಗದ ಸ್ಥಳದಲ್ಲಿ ಪ್ರಗತಿಯನ್ನು ಕಾಣಬಹುದು.

ಮಿಥುನ ರಾಶಿ (ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)

ಆರ್ಥಿಕ ಕ್ರೋಡೀಕರಣದತ್ತ ಆಲೋಚಿಸಿ ಕಾರ್ಯ ಮಗ್ನರಾಗುವಿರಿ. ಕೆಲವು ಕಾರ್ಯಗಳಲ್ಲಿ ವೈಫಲ್ಯವನ್ನು ಕಂಡರೂ ಧೃತಿಗೆಡುವುದು ಬೇಡ, ಸತತ ಪ್ರಯತ್ನದಿಂದ ಕಾರ್ಯಸಿದ್ದಿ ಆಗುತ್ತದೆ. ಮಕ್ಕಳ ಬಗ್ಗೆ ಅತಿಯಾದ ಚಿಂತೆ ಬೇಡ. ಅವರಿಗೂ ಆಲೋಚಿಸಲು ಅವಕಾಶಕೊಡಿ. ಆರೋಗ್ಯದಲ್ಲಿ ಚೇತರಿಕೆ ಕಂಡು ಉಲ್ಲಾಸ ಮೂಡುತ್ತದೆ. ಹೊಸ ಯೋಜನೆಗಳನ್ನು ರೂಪಿಸುವ ಮುನ್ನ ಅದರ ಅವಲೋಕನ ಬಹಳ ಮುಖ್ಯ. ಆಹಾರ ವ್ಯತ್ಯಾಸದಿಂದ ಅನಾರೋಗ್ಯ ಆಗಬಹುದು. ಸರ್ಕಾರಿ ಕೆಲಸಗಳಲ್ಲಿ ಸ್ವಲ್ಪ ಹಿನ್ನಡೆ ಕಾಣಬಹುದು.

ಕಟಕ ರಾಶಿ (ಪುನರ್ವಸು 4 ಪುಷ್ಯ ಆಶ್ಲೇಷ)

ಅವಿವಾಹಿತರಿಗೆ ಸಂಬಂಧಗಳು ಒದಗುವ ಸಮಯ. ಬಂಧುಗಳ ಸಹಾಯದಿಂದ ಸ್ಥಿರಾಸ್ತಿಯನ್ನು ಖರೀದಿ ಮಾಡಬಹುದು. ವೈದ್ಯರುಗಳಿಗೆ ಕಾರ್ಯದೊತ್ತಡ ಹೆಚ್ಚಾಗುವ ಸಂದರ್ಭವಿದೆ. ಸ್ತ್ರೀಯರಿಗೆ ವೃತ್ತಿಯಲ್ಲಿ ಅನುಕೂಲಕರ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಬರುವ ಎಲ್ಲಾ ಅವಕಾಶಗಳನ್ನು ತ್ಯಜಿಸುವುದು ಒಳಿತಲ್ಲ, ಸನ್ನಿಹಿತವಾದ ಬದಲಾವಣೆಗಳಿಗೆ ಹೊಂದಿಕೊಂಡು ಬರುವ ಅವಕಾಶಗಳನ್ನು ಬಳಸಿರಿ. ಭೂಮಿಯ ವ್ಯವಹಾರಗಳಿಗೆ ಸಂಬಂಧಿಸಿದಂತೆ ಇದ್ದ ತೊಡಕುಗಳನ್ನು ಮಾತುಕತೆಯಿಂದ ಬಗೆಹರಿಸಿಕೊಳ್ಳಿರಿ. ಹೊಸ ಆದಾಯದ ದಾರಿಯನ್ನು ಕಂಡುಕೊಳ್ಳುವಿರಿ. ಆಭರಣ ವ್ಯಾಪಾರಸ್ತರ ವ್ಯವಹಾರ ಜಾಲವು ವಿಸ್ತಾರಗೊಳ್ಳುತ್ತದೆ. ಪಾಲುದಾರರ ನಡುವೆ ಕಾವೇರಿದ ಮಾತುಗಳಾದರೂ ನಂತರ ಹೊಂದಾಣಿಕೆ ಮೂಡುತ್ತದೆ.

ಸಿಂಹ ರಾಶಿ (ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1) 

ಜಂಜಾಟದ ಪರಿಸ್ಥಿತಿಯು ನಿವಾರಣೆಯಾಗಿ ಮನಸ್ಸಿಗೆ ಸ್ವಲ್ಪ ಶಾಂತಿ ಮೂಡುತ್ತದೆ. ನಿಮ್ಮ ಶ್ರದ್ಧೆಯು ವೃತ್ತಿಯಲ್ಲಿ ಅನುಕೂಲವನ್ನು ತರುತ್ತದೆ. ಸರ್ಕಾರಿ ನೌಕರರಿಗೆ ಹಿರಿಯ ಅಧಿಕಾರಿಗಳಿಂದ ಸ್ವಲ್ಪ ಕಿರಿಕಿರಿ ಉಂಟಾಗುತ್ತದೆ, ಆದರೂ ತಾಳ್ಮೆಯಿಂದ ಇರುವುದು ಉತ್ತಮ. ವಿದ್ಯಾರ್ಥಿಗಳಿಗೆ ಅವರ ಸಾಧನೆಯನ್ನು ಹೊರಜಗತ್ತಿಗೆ ತೋರುವ ಕಾಲ ಇದು. ಶ್ರದ್ಧೆಯಿಂದ ಅಧ್ಯಯನ ಮಾಡಿರಿ. ಪಾರಂಪರಿಕವಾಗಿ ನಡೆದು ಬಂದ ವ್ಯವಹಾರಗಳನ್ನು ಬಿಡಬೇಡಿ, ಅದರಲ್ಲಿ ನಿಮಗೆ ಸಾಕಷ್ಟು ಅಭಿವೃದ್ಧಿಯು ಇರುತ್ತದೆ. ಹಣದ ಒಳಹರಿವು ಉತ್ತಮವಾಗಿರುತ್ತದೆ. ಸಿನಿಮಾ ರಂಗದವರಿಗೆ ಉತ್ತಮ ಅವಕಾಶಗಳು ಅರಸಿ ಬರುತ್ತವೆ, ಇವುಗಳನ್ನು ಸರಿಯಾಗಿ ಬಳಸಿಕೊಳ್ಳಿರಿ. ಆರೋಗ್ಯದಲ್ಲಿ ಚೇತರಿಕೆಯನ್ನು ಕಾಣಬಹುದು.

ಕನ್ಯಾ ರಾಶಿ (ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)

ವೃತ್ತಿಯ ಅನುಭವ ಮತ್ತು ಸಾಮರ್ಥ್ಯದಿಂದಾಗಿ ನಿಮ್ಮನ್ನು ಉದ್ಯೋಗದಾತರು ಉಳಿಸಿಕೊಳ್ಳುವರು. ಖಾಸಗಿ ಉದ್ಯೋಗದಲ್ಲಿರುವವರಿಗೆ ಸ್ವಲ್ಪ ಯಶಸ್ಸು ದೊರೆಯುತ್ತದೆ. ಹಣಕಾಸಿನ ಸ್ಥಿತಿಯು ಸ್ವಲ್ಪಮಟ್ಟಿಗೆ ಉತ್ತಮಗೊಳ್ಳುತ್ತದೆ. ಮಿತ್ರರ ಸಹಾಯದಿಂದ ವ್ಯವಹಾರದಲ್ಲಿ ಸ್ಥಿರತೆಯನ್ನು ಕಾಣಬಹುದು. ಪಾಲುದಾರರ ಜೊತೆ ಸಾಕಷ್ಟು ಚರ್ಚೆ ನಡೆದು ನಿಮ್ಮ ಪಾಲುದಾರಿಕೆ ಉಳಿಯುತ್ತದೆ. ಕೈಗಾರಿಕೆಗಳನ್ನು ನಡೆಸುತ್ತಿರುವವರಿಗೆ ಸ್ವಲ್ಪಮಟ್ಟಿನ ಅಭಿವೃದ್ಧಿ ಇರುತ್ತದೆ. ಶುಭ ಸಮಾರಂಭಗಳಲ್ಲಿ ಭಾಗವಹಿಸುವ ಸಾಧ್ಯತೆಗಳಿವೆ. ಹಿರಿಯರನ್ನು ಗೌರವಿಸುವುದರಿಂದ ನಿಮಗೆ ಹೆಚ್ಚು ಅನುಕೂಲ. ಮಕ್ಕಳ ಸಂತೋಷಕ್ಕಾಗಿ ಹೆಚ್ಚು ಹಣ ಖರ್ಚು ಮಾಡಬೇಕಾಗಬಹುದು.

ತುಲಾ ರಾಶಿ (ಚಿತ್ತಾ 3 4 ಸ್ವಾತಿ ವಿಶಾಖ 1 2 3)

ಯಾವುದೇ ರೀತಿಯ ಹಗಲುಗನಸನ್ನು ಕಾಣಲು ಹೋಗಬೇಡಿ, ಆಲಸ್ಯದಿಂದ ದೂರ ಉಳಿಯಿರಿ. ಅನಿವಾರ್ಯದ ಬದಲಾವಣೆಗೆ ಒಳಗಾಗಿ ನಿಮ್ಮತನವನ್ನು ಕಳೆದುಕೊಳ್ಳಬೇಡಿ. ಹಿರಿಯರ ಮಾರ್ಗದರ್ಶನವನ್ನು ಉಪೇಕ್ಷಿಸಬೇಡಿರಿ, ಅವರ ಮಾತನ್ನು ಪಾಲಿಸುವುದರಿಂದ ನಿಮಗೆ ಹೆಚ್ಚು ಅನುಕೂಲವಾಗುತ್ತದೆ. ಉದ್ಯೋಗ ಸ್ಥಳದಲ್ಲಿ ಕೆಲ ಜವಾಬ್ದಾರಿಗಳನ್ನು ಕೊಡಲು ಹಿರಿಯ ಅಧಿಕಾರಿಗಳು ನಿಶ್ಚಯಮಾಡುವರು. ಇತರರ ವಿಷಯದಲ್ಲಿ ಹಗುರವಾಗಿ ಮಾತನಾಡುವುದು ಬೇಡ. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಪ್ರಗತಿ ಇರುತ್ತದೆ. ವಾರಾಂತ್ಯಕ್ಕೆ ಬಂಧುಗಳೊಡನೆ ಸಂತೋಷ ಕೂಟದಲ್ಲಿ ಭಾಗವಹಿಸುವಿರಿ. ಕೃಷಿಕರ ಆದಾಯವು ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ.

ವೃಶ್ಚಿಕ ರಾಶಿ (ವಿಶಾಖಾ 4  ಅನುರಾಧ  ಜೇಷ್ಠ)   

ಕರಕುಶಲ ಕಾರ್ಮಿಕರಿಗೆ ಮನ್ನಣೆ ದೊರೆತು ಅವರ ಬೇಡಿಕೆಗಳು ಈಡೇರುತ್ತವೆ. ಸರ್ಕಾರದಿಂದ ಅವರಿಗೆ ಹೆಚ್ಚಿನ ಸವಲತ್ತುಗಳು ಒದಗಿಬರುತ್ತವೆ. ಉದ್ಯೋಗ ಸ್ಥಳದಲ್ಲಿ ಇದ್ದ ವಾದ-ವಿವಾದಗಳು ಮರೆಯಾಗಿ ಮನಸ್ಸಿಗೆ ನೆಮ್ಮದಿ ಮೂಡುತ್ತದೆ. ಕೆಲಸದ ಮೇಲೆ ಸಾಕಷ್ಟು ಓಡಾಟವಿರುತ್ತದೆ, ಇದು ನಿಮಗೆ ವೃತ್ತಿಯಲ್ಲಿ ಅಭಿವೃದ್ಧಿಯನ್ನು ಕೊಡುತ್ತದೆ. ಆದಾಯದಷ್ಟೇ ಖರ್ಚು ಸಹ ಇರುತ್ತದೆ. ಆದ್ದರಿಂದ ವೆಚ್ಚಕ್ಕೆ ಕಡಿವಾಣ ಹಾಕಿರಿ. ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡು ಆನಂದವನ್ನು ಅನುಭವಿಸುವಿರಿ. ಕ್ರೀಡಾಪಟುಗಳು ತಮ್ಮ ಸಾಮರ್ಥ್ಯವನ್ನು ತೋರುವಾಗ ಎಚ್ಚರವಿರಲಿ, ಅಪಘಾತವಾಗುವ ಸಂದರ್ಭವಿದೆ. ಹೆಣ್ಣುಮಕ್ಕಳಿಗೆ ತವರಿನಿಂದ ಉಡುಗೊರೆ ದೊರೆಯುತ್ತದೆ.

ಧನಸ್ಸು ರಾಶಿ (ಮೂಲ ಪೂರ್ವಾಷಾಢ ಉತ್ತರಾಷಾಢ 1)

ಸ್ಪೂರ್ತಿ ತುಂಬಿದ ಜೀವನದೊಂದಿಗೆ ಉತ್ತಮ ನೆಲೆಯನ್ನು ಕಂಡುಕೊಳ್ಳುವಿರಿ. ಹಣದ ಒಳಹರಿವು ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ. ಹಣವನ್ನು ಹಿತಮಿತವಾಗಿ ಬಳಸಿ ಆರ್ಥಿಕ ಸ್ಥಿರತೆಯನ್ನು ಸಾಧಿಸುವಿರಿ. ಕ್ರಿಯಾಶೀಲ ಹೃದಯವುಳ್ಳ ನಿಮಗೆ ಶುಭ ಫಲಗಳು ದೊರೆಯುತ್ತವೆ. ಹಿರಿಯರಿಗೆ ಮೂಳೆ ನೋವು ಬಾಧಿಸಬಹುದು. ಎಂತಹ ಒತ್ತಡದಲ್ಲಿಯೂ ಸಹ ತಾಳ್ಮೆಯಿಂದ ಇರುವ ಸ್ವಭಾವ ಮೈಗೂಡುತ್ತದೆ.

ಮಕರ ರಾಶಿ (ಉತ್ತರಾಷಾಢ 2 3 4 ಶ್ರವಣ  ಧನಿಷ್ಠ 1.2)  

ಹಣಕಾಸು ಸಂಸ್ಥೆಗಳಿಂದ ನೀವು ಅಪೇಕ್ಷಿಸಿದ್ದ ಸಾಲ ದೊರೆಯುತ್ತದೆ. ನಿಮ್ಮ ಸಹೋದ್ಯೋಗಿಗಳ ಸಹಾಯ ದೊರೆತು ಉದ್ಯೋಗದಲ್ಲಿ ಮೇಲ್ದರ್ಜೆಗೆ ಏರುವ ಸಂದರ್ಭವಿದೆ. ವಾಹನ ಖರೀದಿಸಲು ಆಸೆ ಪಡುತ್ತಿದ್ದವರು ಈಗ ಖರೀದಿ ಮಾಡಬಹುದು. ನಿವೃತ್ತರಿಗೆ ಬದಲಿ ಉದ್ಯೋಗ ದೊರೆಯುತ್ತದೆ. ಅನಗತ್ಯ ಕೋಪವನ್ನು ಕಡಿಮೆ ಮಾಡಿಕೊಳ್ಳಿರಿ. ಬಂಗಾರದ ಒಡವೆಗಳನ್ನು  ತಯಾರಿಸುವವರಿಗೆ ಉತ್ತಮ ಬೇಡಿಕೆ ಬರುತ್ತದೆ ಮತ್ತು ಉತ್ತಮವಾದ ಮಾರುಕಟ್ಟೆ ಸಹ ಒದಗುತ್ತದೆ. ಮಕ್ಕಳಿಂದ ನಿಮಗೆ ಗೌರವ ಹೆಚ್ಚುತ್ತದೆ. ಕೃಷಿಭೂಮಿಯನ್ನು ವಿಸ್ತರಣೆ ಮಾಡಬಹುದು.

ಕುಂಭ ರಾಶಿ (ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)

ಪತ್ರಿಕೋದ್ಯಮದಲ್ಲಿ ಕೆಲಸ ಮಾಡುತ್ತಿರುವವರಿಗೆ ಉತ್ತಮ ಗೌರವವಿರುತ್ತದೆ, ಅವರ ಲೇಖನಗಳಿಗೆ ಹೆಚ್ಚು ಪ್ರಚಾರ ಸಹ ಸಿಗುತ್ತದೆ. ಬಂಧುಗಳ ನಡುವಿನ ಹಣದ ವ್ಯವಹಾರಗಳಲ್ಲಿ ಮಧ್ಯಸ್ಥಿಕೆಯನ್ನು ಮಾಡಲು ಹೋಗುವುದು ಬೇಡ, ಮಾಡಲು ಹೋದರೆ ನಿಮಗೆ ಧನ ನಷ್ಟವಾಗುವುದು. ಕೆಲವು ಯುವಕರಿಗೆ ಸೂಕ್ತ ಉದ್ಯೋಗದ ಬಗ್ಗೆ ಸಾಕಷ್ಟು ಚಿಂತೆ ಇರುತ್ತದೆ. ಸಂಗಾತಿಯೊಂದಿಗೆ ದೂರ ಪ್ರಯಾಣದ ಸಾಧ್ಯತೆ ಇದೆ. ಹಿರಿಯರಿಗೆ ಆಹಾರ ವ್ಯತ್ಯಾಸದಿಂದ ಅಜೀರ್ಣದ ಸಾಧ್ಯತೆ ಇದೆ. ಧಾರ್ಮಿಕ ಕಾರ್ಯಗಳನ್ನು ಮಾಡುತ್ತಿರುವವರಿಗೆ ಸೂಕ್ತ ಜನಬೆಂಬಲ ದೊರೆಯುತ್ತದೆ. ಅವಿವಾಹಿತರಿಗೆ ಸಂಬಂಧ ಕೂಡಿ ಬರುವ ಸಾಧ್ಯತೆಗಳಿವೆ. ಸ್ತ್ರೀಯರ ವಸ್ತ್ರ ವ್ಯಾಪಾರಿಗಳಿಗೆ ವ್ಯಾಪಾರ ಹೆಚ್ಚಾಗಿ ಆದಾಯ ಹೆಚ್ಚುತ್ತದೆ.

ಮೀನ ರಾಶಿ (ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)

ನಿಮ್ಮ ವ್ಯವಹಾರಗಳಲ್ಲಿ ಸ್ವಲ್ಪ ಹಿನ್ನಡೆ ಆಗುತ್ತದೆ. ಉದ್ಯೋಗ ಬದಲಾವಣೆಗೆ ಆತುರದ ನಿರ್ಧಾರ ಬೇಡ. ಬಹುದಿನಗಳಿಂದ  ನೀವು ಆಸೆ ಪಡುತ್ತಿದ್ದ ಒಡವೆಯನ್ನು ಈಗ ಕೊಳ್ಳಬಹುದು. ಪತ್ರಕರ್ತರು ಸಾಕಷ್ಟು ಎಚ್ಚರಿಕೆಯಿಂದ ವರದಿ ಮಾಡುವುದು ಸೂಕ್ತ. ಸಾಂಸಾರಿಕ ನೆಮ್ಮದಿ ಇದ್ದರೂ ಸಹ ಆರ್ಥಿಕ ಸಂಕಷ್ಟ ಎದುರಾಗಬಹುದು. ಕಬ್ಬಿಣದ ವ್ಯಾಪಾರಿಗಳಿಗೆ ವ್ಯವಹಾರ ವೃದ್ಧಿಸಿ ಸಾಕಷ್ಟು ಲಾಭವಿರುತ್ತದೆ. ಸಾಮಾಜಿಕ ಕೆಲಸ ಮಾಡುವವರು ಹಣಕಾಸಿನ ವ್ಯವಹಾರದ ಬಗ್ಗೆ ಪಾರದರ್ಶಕತೆಯನ್ನು ಇಟ್ಟು ಕೊಳ್ಳುವುದು ಉತ್ತಮ. ಸ್ಥಿರಾಸ್ತಿಯನ್ನು ಕೊಳ್ಳುವವರು ಸರಿಯಾಗಿ ದಾಖಲೆಗಳನ್ನು ಪರಿಶೀಲಿಸಿ  ನಂತರ ಖರೀದಿಸಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.