ಶುಕ್ರವಾರ, ಏಪ್ರಿಲ್ 3, 2020
19 °C

ನಾನು ಯಾರು?

ನವೀನ ಗಂಗೋತ್ರಿ Updated:

ಅಕ್ಷರ ಗಾತ್ರ : | |

Prajavani

ಆಗೀಗ ನಮ್ಮ ಮಾತಿನಲ್ಲಿ ಅಧ್ಯಾತ್ಮ ಎನ್ನುವ ಪದವನ್ನು ಬಳಸುತ್ತಿರುತ್ತೇವೆ. ಭಕ್ತಿ, ವೈರಾಗ್ಯ, ತಪಸ್ಸು, ಅಲೌಕಿಕವಾದ ಸಂಗತಿಗಳು, ಪವಾಡ, ಗ್ರಂಥಪಾರಾಯಣ, ಉಪವಾಸ – ಇತ್ಯಾದಿ ಸಂಗತಿಗಳನ್ನೇ ತಪ್ಪಾಗಿ ಅಧ್ಯಾತ್ಮದ ಹೆಸರಿನಿಂದ ಗುರುತಿಸುವುದೂ ಅಪರೂಪವೇನಲ್ಲ. ಆದರೆ ವಾಸ್ತವದಲ್ಲಿ ’ಆತ್ಮಾ’ ಅನ್ನುವ ಸಂಸ್ಕೃತ ಪದಕ್ಕೆ ಕನ್ನಡದಲ್ಲಿ ’ತಾನು’ ಎಂದರ್ಥ. ಹಾಗಾಗಿ ಕ್ಲೃಪ್ತವಾಗಿ ಹೇಳಬೇಕೆಂದರೆ ಅಧ್ಯಾತ್ಮವೆನ್ನುವುದು (ಅಧಿ ಆತ್ಮಾ) ಈ ’ತಾನು’ವಿಗೆ ಸಂಬಂಧಿಸಿದ ಸಂಗತಿ.

ನಮ್ಮ ಅರಿವನ್ನು, ಅಂದರೆ ಪ್ರಜ್ಞೆಯನ್ನು ಎರಡು ಮುಖ್ಯ ಪ್ರಕಾರವಾಗಿ ವಿಂಗಡಿಸಬಹುದು: ಒಂದು ’ತಾನು’ ಎಂಬ ತನ್ನಿರವಿನ ಅರಿವು; ಎರಡನೆಯದು ತನ್ನ ಸುತ್ತಲಿನ ಸೃಷ್ಟಿಯ ಮತ್ತದರ ಇರವಿನ ಅರಿವು.

ಇವುಗಳಲ್ಲಿ ಮೊದಲನೆಯ ಅರಿವು ಇದೆಯಲ್ಲ ಅದು ಅಂತಃಸ್ರೋತವಾಗಿ ಸದಾ ಎಚ್ಚರವಿದ್ದು ತನ್ನ ಸುತ್ತಲಿನ ಲೋಕದ ಅರಿವಿಗೆ ಒತ್ತಾಸೆಯಾಗಿ ನಿಲ್ಲುವಂಥದು. ತನ್ನ ಕುರಿತಾದ ಈ ಪ್ರಜ್ಞೆ ನಮ್ಮಲ್ಲಿ ಅದೆಷ್ಟು ಗಾಢವೆಂದರೆ ’ನಾನು ಇದ್ದೇನೋ ಇಲ್ಲವೋ’ ಅನ್ನುವ ಸಂಶಯವೇ ನಮ್ಮಲ್ಲೆಂದಿಗೂ ಹುಟ್ಟಲು ಆಸ್ಪದ ಕೊಡದಷ್ಟು ಗಾಢ. ನಾನು ಇದ್ದೇನೆ ಅನ್ನುವ ಮೂಲಭೂತ ಎಚ್ಚರದ ಆಧಾರದ ಮೇಲೆಯೇ ಲೌಕಿಕವಾದ ನಮ್ಮೆಲ್ಲ ಅನುಭವಗಳು ನೆಲೆಗೊಂಡಿರುತ್ತವೆ.

ಜನ್ಮಾರಭ್ಯ ನಮಗೆ ನಮ್ಮಿಂದ ಹೊರತಾದ್ದನ್ನು ಆಲೋಚಿಸುವ, ಆಸ್ವಾದಿಸುವ ಮತ್ತು ಅನುಭವಕ್ಕೆ ಬಿಟ್ಟುಕೊಳ್ಳುವ ಅಭ್ಯಾಸವಾಗಿದೆ. ಆ ಭರದಲ್ಲಿ ನಮ್ಮಲ್ಲಿ ಸದಾ ನೆಲೆಯಾಗಿ ನಿಂತ ’ತಾನು’ ಅನ್ನುವ ಅರಿವನ್ನು ಅಲಕ್ಷಿಸುತ್ತೇವೆ. ನಿಜವೆಂದರೆ ಈ ’ಆತ್ಮಾ’ ಅನ್ನುವ ಅಖಂಡ ಪ್ರಜ್ಞೆಯೇನಿದೆಯಲ್ಲ ಅದು ನಮ್ಮ ಹೊರಗಿನ ಅರಿವಿನಿಂದಾಗಿ ಖಂಡ ಖಂಡವಾಗಿಬಿಡುತ್ತದೆ. ’ನಾನು ಇದ್ದೇನೆ’ ಅನ್ನುವ ಅಬಾಧಿತ ಸತ್ಯವನ್ನು ’ಎಲ್ಲಿ ಇದ್ದೇನೆ, ಯಾವ ಕಾಲದಲ್ಲಿ ಇದ್ದೇನೆ’ ಅನ್ನುವ ದೇಶ ಕಾಲದ ಮಿತಿಗಳು ಸಂಕುಚಿತಗೊಳಿಸುತ್ತವೆ. ಲೌಕಿಕ ಬದುಕಿನ ಈ ಅಭ್ಯಾಸವನ್ನು ಮಸುಕುಗೊಳಿಸಿ ’ತಾನು’ವಿನ ಕುರಿತಾದ ಅಬಾಧಿತ ಎಚ್ಚರವನ್ನು ಅನುಭವಿಸುವುದೇ ಅಧ್ಯಾತ್ಮದ ಉದ್ದೇಶ. ಸಿದ್ಧಾರ್ಥ ಗೌತಮನು ಬುದ್ಧ (ಎಚ್ಚರಗೊಂಡವ) ಅನ್ನಿಸಿಕೊಂಡಿದ್ದು ಈ ’ತಾನು’ವಿನ ಅರಿವಿನ ಕಾರಣಕ್ಕೇ.

ಭಗವಾನ್ ರಮಣ ಮಹರ್ಷಿಗಳ ಜೊತೆಗಿನ ಅಧ್ಯಾತ್ಮ ಸಂವಾದದ ಸಂಗ್ರಹ ಗ್ರಂಥಕ್ಕೆ ’ನಾನ್ ಯಾರ್’ (ತಮಿಳು) ಎಂಬ ಹೆಸರೇ ನಿಂತಿದೆಯೆಂದರೆ ಈ ನಾನ್ಯಾರೆಂಬ ಆಲೋಚನೆಯ ಮಹತ್ತು ಎಂಥದು ನೋಡಿ! ಜಗತ್ತು ಸಾವಿರಾರು ಬಗೆಯ ಕ್ರಿಯೆಗಳಿಂದ ತುಂಬಿದೆ ಅನ್ನುವ ಅರಿವು ಹೊಮ್ಮುವುದಕ್ಕೆ ಮೂಲ ಅರಿವೇ ’ತಾನು’ ಎಂಬ ಇರವಿನ ಅರಿವು. ತಾನು ಇದ್ದಾಗ ಮಾತ್ರ ಇವೆಲ್ಲ ಇದೆ; ತಾನು ಇಲ್ಲದಿರುವ ಕ್ಷಣಮಾತ್ರದ ಚಿಂತನೆಯೂ ನಮ್ಮಿಂದ ಸಾಧ್ಯವಿಲ್ಲ. ಅಂದರೆ ನಿಜದಲ್ಲಿ ಇರುವುದು ಈ ಲೋಕವೋ ಇಲ್ಲಾ ತಾನು ಎಂಬ ಅರಿವೋ? ಇದುವೇ ಅಧ್ಯಾತ್ಮವು ಹೊತ್ತಿಸುವ ಆಲೋಚನೆಯ ಮೊದಲ ಕಿಡಿ. ಒಮ್ಮೆ ಇದು ಸಾಧ್ಯವಾದರೆ ’ತಾನು’ ಎಂಬ ಭಾವ ಎಲ್ಲಿಂದ ಹೊಮ್ಮುತ್ತಿದೆಯೆಂಬುದರ ಶೋಧ ಶುರುವಾಗುತ್ತದಲ್ಲ, ಅದು ಅಧ್ಯಾತ್ಮ ಸಾಧನೆಯೆನ್ನಿಸಿಕೊಳ್ಳುತ್ತದೆ. ಈ ಅರ್ಥದಲ್ಲಿ ಅಧ್ಯಾತ್ಮವೆನ್ನುವುದು ಚಿಂತನೆ ಮತ್ತು ಆಲೋಚನೆಗಳ ಮಾರ್ಗವಾಗಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)