ಬುಧವಾರ, ಜನವರಿ 22, 2020
16 °C
ಸಂಭ್ರಮದ ‘ಬನದ ಹುಣ್ಣಿಮೆ’ ಜಾತ್ರೆ

ಬೆಳಗಾವಿ: ಯಲ್ಲಮ್ಮನ ಗುಡ್ಡದಲ್ಲಿ ಭಕ್ತಿಯ ಹೊಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಸವದತ್ತಿ ತಾಲ್ಲೂಕಿನ ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡದಲ್ಲಿ ಶುಕ್ರವಾರ ‘ಬನದ ಹುಣ್ಣಿಮೆ’ ಅಂಗವಾಗಿ ನಡೆದ ಜಾತ್ರೆಯಲ್ಲಿ ಭಕ್ತಿಯ ಹೊಳೆ ಹರಿಯಿತು. ಸಹಸ್ರಾರು ಭಕ್ತರು ನೆರೆ ಮತ್ತು ಅತಿವೃಷ್ಟಿಯ ನೋವಿನ ನಡುವೆಯೂ ಸಂಭ್ರಮದಿಂದ ಭಾಗಿಯಾದರು.

ರಾಜ್ಯದ ವಿವಿಧ ಜಿಲ್ಲೆಗಳು, ಮಹಾರಾಷ್ಟ್ರ, ಗೋವಾ, ತಮಿಳನಾಡು, ಆಂಧ್ರ ಮೊದಲಾದ ಕಡೆಗಳಿಂದ ಬಂದಿದ್ದ ಭಕ್ತರು, ಶ್ರದ್ಧಾ-ಭಕ್ತಿಯಿಂದ ರೇಣುಕಾದೇವಿಗೆ ವಿಶೇಷ ಪೂಜೆ ಸಲ್ಲಿಸಿ ಪುನೀತಭಾವ ತಳೆದರು. ಅವರು ಭಂಡಾರ ಹಾರಿಸುತ್ತಿದ್ದುದ್ದರಿಂದ ಕ್ಷೇತ್ರವೆಲ್ಲವೂ ಬಂಗಾರದ ಬಣ್ಣಮಯವಾಗಿತ್ತು. ಜಗ (ದೇವರ ಮೂರ್ತಿ) ಹೊತ್ತು ಕುಣಿಯುತ್ತಿದ್ದ ಜೋಗತಿಯರು ಗಮನಸೆಳೆದರು. ಉಧೋ... ಉಧೋ... ಯಲ್ಲಮ್ಮ ನಿನ್ಹಾಲ್ಕ ಉಧೋ... ಎಂಬ ಘೋಷಣೆಗಳು ಮೊಳಗಿದವು.

ಬೆಳಿಗ್ಗೆ ಮತ್ತು ಸಂಜೆ ದೇವಿಯ ಮೂರ್ತಿಯನ್ನು ಆಕರ್ಷಕವಾಗಿ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಪವಿತ್ರದಿನದಂದು ದೇವಿ ದರ್ಶನ ಪಡೆಯಲು ಭಕ್ತರಿಂದ ನೂಕುನುಗ್ಗಲು ಕಂಡುಬಂತು.

ನಸುಕಿನಿಂದಲೇ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಬಹಳಷ್ಟು ಮಂದಿ ಗುರುವಾರವೇ ಬಂದು ತಂಗಿದ್ದರು. ಕೆಲವರು ನದಿ ನೀರಲ್ಲಿ ಸ್ನಾನ ಮಾಡಿದರೆ, ಹಲವರು ನದಿ ದಡದಲ್ಲಿರುವ ಜೋಗುಳಬಾವಿ ಹಾಗೂ ಎಣ್ಣೆ ಹೊಂಡದಲ್ಲಿ ಪವಿತ್ರ ಸ್ನಾನ ಮಾಡಿ, ಗುಡ್ಡದಲ್ಲಿ ತಾವು ಹಾಕಿದ್ದ ತಾತ್ಕಾಲಿಕ ಟೆಂಟ್‌ನಲ್ಲಿ ನೈವೇದ್ಯ ತಯಾರಿಸಿ ಹಡ್ಡಲಗಿ (ಪರಡಿ) ತುಂಬಿದರು. ದೇವರಿಗೆ ಅರ್ಪಿಸಿ, ಕುಟುಂಬದವರಲ್ಲಾ ಜೊತೆಯಾಗಿ ಊಟ ಸವಿದು ಸಂಭ್ರಮಿಸಿದರು.

ಭಕ್ತರು ತಂದಿದ್ದ ಚಕ್ಕಡಿ ಗಾಡಿಗಳ ಸಾಲು ವಿಶೇಷ ಆಕರ್ಷಣೆಯಾಗಿತ್ತು. ಸಹಸ್ರಾರು ಮಂದಿ ಬಂದಿದ್ದರಿಂದ, ಯಲ್ಲಮ್ಮನಗುಡ್ಡ ಸಂಪರ್ಕಿಸುವ ಉಗರಗೋಳ, ಸವದತ್ತಿ ಮಾರ್ಗದಲ್ಲಿ ಟ್ರಾಫಿಕ್ ಜಾಮ್‌ ಸಮಸ್ಯೆ ಇತ್ತು. 2 ಕಿ.ಮೀ.ವರೆಗೂ ವಾಹನಗಳ ಸಾಲು ಇತ್ತು. ಇದರಿಂದಾಗಿ ಜನರು ಕಂಗಾಲಾದರು. ಸಂಚಾರ ಸುಗಮಗೊಳಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು