ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಮನಸ್ಸಿಗೆ ಬೇಕು ಶಾಂತಿಯ ಬೆಳಕು

Last Updated 4 ಸೆಪ್ಟೆಂಬರ್ 2020, 17:51 IST
ಅಕ್ಷರ ಗಾತ್ರ

ವಿಶ್ವದಲ್ಲಿರುವ ಎಲ್ಲ ಧರ್ಮಗಳು ಮಾನವಕಲ್ಯಾಣಕ್ಕಾಗಿ ಹುಟ್ಟಿದ್ದರೂ, ಧರ್ಮಗಳ ಮಧ್ಯೆ ಭೇದಭಾವದ ಸಂಕುಚಿತ ಬುದ್ಧಿ ಬೆಳೆಸಿಕೊಂಡಿದ್ದಾನೆ ಮಾನವ. ಧರ್ಮದ ಮೂಲತತ್ವವನ್ನೇ ಮರೆತು, ಸ್ವಪ್ರತಿಷ್ಠೆಗಾಗಿ ಅನಾದಿ ಕಾಲದಿಂದ ಧರ್ಮದ ಹೆಸರಿನಲ್ಲಿ ಕಾದಾಡುತ್ತಿದ್ದಾನೆ. ಧರ್ಮದ ಮೂಲತತ್ವವಾದ ಸರ್ವಜನರ ಹಿತವನ್ನು ಕಡೆಗಣಿಸಿದ್ದಾನೆ. ಮನುಕುಲದ ಅಜ್ಞಾನ ತೊಳೆದು, ಮಾನವರ ಬದುಕಿಗೆ ಬೆಳಕಾಗಬೇಕಾದ ಧರ್ಮಗಳು ಅಜ್ಞಾನದ ಕಿಡಿಗಳಾಗಿ ಸುಡುತ್ತಿರುವುದು ದುರಂತ. ಸಾವಿರಾರು ವರ್ಷಗಳಿಂದ ಮತೀಯ ಸಂಘರ್ಷಗಳಿಂದ ಮತಿಗೆಟ್ಟ ಮಾನವ ಕೋಟ್ಯಂತರ ಜೀವ-ಜೀವನ ಹಾಳುಮಾಡಿದ್ದಾನೆ. ಇಷ್ಟಾದರೂ, ಮನುಷ್ಯನಿಗೆ ಬುದ್ಧಿ ಬಾರದೆ ‘ಮತ-ವಿಕಲ್ಪ’ದಿಂದ ಭೂಮಿಯ ನಾಶಕ್ಕೆ ನಿಂತಿದ್ದಾನೆ.

ಇಂಥ ಮತಿಹೀನ ಮಾನವರಿಂದ ಈ ಭೂಮಿಯನ್ನು ರಕ್ಷಿಸುವುದು, ಭವಿಷ್ಯದ ನಾಯಕರಾಗುವ ಇಂದಿನ ಯುವಜನರ ಕೈಯಲ್ಲಿದೆ. ಯುವಜನತೆ ತಮ್ಮ ಅಮೂಲ್ಯ ಸಮಯ ಮತ್ತು ಶಕ್ತಿಯನ್ನು ದ್ವೇಷ ಹುಟ್ಟುವ ಕಡೆ ವ್ಯಯಿಸದೆ, ದೇಶ ಕಟ್ಟುವ ಕಡೆ ಉಪಯೋಗಿಸಿದರೆ ಸಾಕು, ಉತ್ತಮ ಸಮಾಜ ನಿರ್ಮಾಣವಾಗುತ್ತದೆ. ಯಾವುದೇ ಸಾಧನೆಗೆ ಜ್ಞಾನದ ಬೆಳಕು ಬೇಕು. ಮನದಲ್ಲಿ ಜ್ಞಾನದ ದೀವಿಗೆ ಬೆಳಗಲು ಪೂರಕ ವಾತಾವರಣ ಸಹ ಬೇಕು. ದ್ವೇಷದ ಬಿರುಗಾಳಿ, ಅಸೂಯೆಯ ರಕ್ಕಸ ಅಲೆ ಮನದೊಳಗೆ ಸುಳಿಯದಂತೆ, ಶಾಂತಿ ವಾತಾವರಣ ಮೂಡಿಸಿಕೊಂಡರೆ ಸಾಕು; ಇಂದಿನ ಯುವಜನರು ನಾಳಿನ ಸಮರ್ಥ ಮೇಟಿಯಾಗುತ್ತಾರೆ.

ನಮ್ಮ ಪೂರ್ವಿಕರು ಗೊತ್ತು-ಗುರಿ ಇಲ್ಲದೆ ಯಾವ ಸಂಪ್ರದಾಯವನ್ನೂ ಜಾರಿಗೆ ತಂದಿಲ್ಲ. ಹದಿವಯಸ್ಸಿನ ಉನ್ಮಾದಿತ ಮನಸ್ಸಿಗೆ ಗುರು-ಹಿರಿಯರೆಡೆಗಿನ ಗೌರವ ಮತ್ತು ಸಂಸ್ಕೃತಿ ಎಡೆಗಿನ ನಂಬಿಕೆ ಇದ್ದರೆ ಒಂದಿಷ್ಟು ಕಡಿವಾಣವಿಡಬಹುದೆಂದು ಜಾರಿಗೆ ತಂದಿದ್ದಾರೆ. ಇದರ ಹಿನ್ನೆಲೆ ಅರಿಯದ ಮೊಂಡಾಟದ ಹದಿಮನಸ್ಸು ಆಧುನಿಕತೆಯ ಹೆಸರಿನಲ್ಲಿ ಲಂಗುಲಗಾಮಿಲ್ಲದ ಹುಚ್ಚು ಕುದುರೆಯಂತೆ ಓಡಿ ಸಮಾಜವನ್ನು ಕುಲಗೆಡಿಸುತ್ತಿದೆ. ಇಂಥ ಯುವತಲ್ಲಣ ಇಂದು-ನಿನ್ನೆಯದಲ್ಲ. ಭುವಿಯಲ್ಲಿ ಘಟಿಸಿರುವ ಎಲ್ಲಾ ಅನಾಹುತಗಳಿಗೂ ಹದಿವಯಸ್ಸಿನ ವಿಕಾರ ಮನಸ್ಸೇ ಕಾರಣ. ಈ ದೇಶದ ಘಾತುಕ ಶಕ್ತಿಯನ್ನು ಅಳಿಸಿ, ಪಾತಕ ಮನಸ್ಸನ್ನು ನಿಗ್ರಹಿಸಲು, ಯುವಜನರೆಲ್ಲ ಧರ್ಮ ಸಂಸ್ಕೃತಿಯ ನೀತಿಯನ್ನು ಅನುಸರಿಸುವುದು ಉತ್ತಮ. ನಾಸ್ತಿಕತೆಯ ಹೆಸರಿನಲ್ಲಿ ಆಸ್ತಿಕತೆಯನ್ನು ಧಿಕ್ಕರಿಸುವುದಾಗಲಿ, ಪರಧರ್ಮವನ್ನು ದೂಷಿಸುವುದಾಗಲಿ ಮಾಡಬಾರದು.

ಯುವಜನರ ವಿಪ್ಲವ ಮನಸ್ಸಿನಿಂದಲೇ ನಾಗರಿಕತೆ ಬೆಳೆದಿದೆ. ಸದಾ ಹೊಸದನ್ನು ಬಯಸುವ ಯುವಜನರು ಒಳ್ಳೆಯದನ್ನೇ ಯೋಚಿಸಬೇಕು. ಕೆಟ್ಟದ್ದಕ್ಕೆ ಎಳೆಸದೆ, ಕ್ಷುಲ್ಲಕ ಆಸೆಗಳಿಗೆ ಬಲಿ ಬೀಳದೆ, ಮನಸ್ಸನ್ನು ನಿಗ್ರಹಿಸಬೇಕು. ಮನೆ-ಮನಗಳಲ್ಲಿ ಸಾತ್ವಿಕ ಕ್ರಾಂತಿ ಮೊಳಗಿಸಲು ಸದ್ವರ್ತನೆ ಆರಂಭಿಸಬೇಕು. ದೇವರಿಗೆ ನಮಸ್ಕರಿಸಿದಂತೆ ಮನೆಯ ಹಿರಿಯರಿಗೆ ನಮಸ್ಕರಿಸಿ ಗೌರವಿಸುವುದನ್ನು ರೂಢಿಸಿಕೊಳ್ಳಬೇಕು. ಹಿರಿಯರಿಂದ ಕಿರಿಯರಿಗೆ ಸಿಗುವ ಆಶೀರ್ವಾದದ ಧನಾತ್ಮಕ ಶಕ್ತಿ ಉತ್ತಮ ಬದುಕಿಗೆ ಪ್ರೇರಣೆಯಾಗುತ್ತದೆ. ಮನಸ್ಸು ಶಾಂತವಾಗಿದ್ದರೆ ಬುದ್ಧಿ ಚುರುಕಾಗಿರುತ್ತದೆ. ಸ್ನೇಹಿತರು-ಸಹೋದ್ಯೋಗಿಗಳು-ಸಹಪಾಠಿಗಳೊಂದಿಗೆ ಉತ್ತಮ ಬಾಂಧವ್ಯ ಮೂಡುತ್ತದೆ.

ಯುವಜನರು ಯಾವುದೇ ಕಾರಣಕ್ಕೂ ಪರಧರ್ಮ, ಜಾತಿ, ಭಾಷೆ ಬಗ್ಗೆ ಟೀಕೆ ಮಾಡಬಾರದು. ತಮಾಷೆಗೂ ಕೂಡ ಅನ್ಯಥಾ ಮಾತನಾಡಬಾರದು. ಪರಧರ್ಮದಲ್ಲಿರುವ ಒಳ್ಳೆಯ ಅಂಶಗಳನ್ನು ತಿಳಿದುಕೊಳ್ಳಬೇಕು. ಸಮಾಜದಲ್ಲಿ ಸೌಹಾರ್ದಯುತ ವಾತಾವರಣವಿದ್ದರೆ, ಎಲ್ಲರ ಮನಸ್ಸು ಹಗುರಾಗಿ, ಆರೋಗ್ಯಕರವಾಗಿರುತ್ತದೆ. ಇಂಥ ಸ್ವಸ್ಥ ಮನಸ್ಸುಗಳಿದ್ದರೆ ಸಮಾಜ ತಾನಾಗೇ ಸುಧಾರಿಸುತ್ತೆ. ಸದ್ಭಾವ ಮೂಡಿದ ಜಗತ್ತಿನಲ್ಲಿ ಸಚ್ಚಿದಾನಂದಮಯ ವಾತಾವರಣವಿರುತ್ತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT