ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯರಿಗೆ ಲಸಿಕೆ ಎಷ್ಟು ಉಪಯುಕ್ತ?

Last Updated 26 ಜೂನ್ 2020, 19:30 IST
ಅಕ್ಷರ ಗಾತ್ರ

ಲಸಿಕೆಯ ವಿಷಯ ಬಂದಾಗ ಬಹುತೇಕ ಪೋಷಕರು ತಮ್ಮ ಮಕ್ಕಳಿಗೆ ಅವಶ್ಯಕವಿರುವ ಲಸಿಕೆಯನ್ನು ಕಾಲಕಾಲಕ್ಕೆ ತಪ್ಪದೇ ಕೊಡಿಸುವ ರೂಢಿಯನ್ನು ಇಟ್ಟುಕೊಂಡಿರುವುದೇನೊ ನಿಜ. ಆದರೆ ತಮ್ಮ ಆರೋಗ್ಯದ ವಿಷಯದಲ್ಲಿ ಎಡುವುವುದು ಯಾಕೆ? ವಯಸ್ಸಾದ ತಮ್ಮ ತಂದೆ– ತಾಯಿಗೆ ಕೂಡ ಯಾವುದೇ ಲಸಿಕೆಯನ್ನು ನೀಡುವ ಗೋಜಿಗೆ ಹೋಗುವುದಿಲ್ಲ.

ವಯಸ್ಕರಿಗೆ ಕೂಡ ಈ ಲಸಿಕೆ ಹಾಕಬೇಕಾದ ಅಗತ್ಯವಿದೆ. ಇದಕ್ಕೆ ಕಾರಣಗಳು ಹಲವು. ವಯಸ್ಸಿನ ಕಾರಣದಿಂದ ರೋಗ ನಿರೋಧಕ ಶಕ್ತಿ ಕುಂದುತ್ತದೆ. ಮಧುಮೇಹದಂತಹ ಕಾಯಿಲೆ ವ್ಯಾಧಿ ಕ್ಷಮತೆಯನ್ನು ಇನ್ನಷ್ಟು ಕಡಿಮೆ ಮಾಡುತ್ತದೆ. ಕೆಲವು ರೋಗಕಾರಕ ಸೂಕ್ಷ್ಮ ಜೀವಿಗಳ ಸೋಂಕಿನ ಪರಿಣಾಮ ಇಂಥವರ ಮೇಲೆ ಹೆಚ್ಚು. ಕೆಲವು ಸೋಂಕುಗಳಿಗೆ ಚಿಕ್ಕ ವಯಸ್ಸಿನಲ್ಲಿ ತೆಗೆದುಕೊಂಡ ಲಸಿಕೆ ಪರಿಣಾಮ ಬೀರುವುದಿಲ್ಲ. ಹೀಗಾಗಿ ಇಂತಹ ಸೋಂಕಿಗೆ, ಕಾಯಿಲೆಗೆ ರಕ್ಷಣೆ ನೀಡಲು ಹಲವು ಲಸಿಕೆಗಳು ವೈದ್ಯಕೀಯ ಕ್ಷೇತ್ರದಲ್ಲಿ ಇದೀಗ ಲಭ್ಯ.

ಸಾಮಾನ್ಯ ಲಸಿಕೆಗಳು

ಹಿರಿಯರಿಗೆ ನೀಡುವಂತಹ ಸಾಮಾನ್ಯ ಲಸಿಕೆಗಳೆಂದರೆ ಫ್ಲೂ, ಡಿಫ್ತೀರಿಯ, ಧನುರ್ವಾಯು (ಟೆಟಾನಸ್‌), ಮಂಗನ ಬಾವು, ರ‍್ಯುಬೆಲ್ಲಾ, ಮೀಸಲ್ಸ್‌, ಹೆಪಟೈಟಿಸ್‌ ಎ ಮತ್ತು ಬಿ, ಹ್ಯೂಮನ್‌ ಪ್ಯಾಪಿಲೋಮ ವೈರಸ್‌, ಹರ್ಪಿಸ್‌, ಟೈಫಾಯ್ಡ್‌, ನ್ಯೂಮೊಕೊಕಲ್‌ ನ್ಯುಮೋನಿಯ ಇತ್ಯಾದಿ. ಇಂತಹ ಯಾವ ಲಸಿಕೆ ಅಗತ್ಯ ಎಂಬುದನ್ನು ವೈದ್ಯರ ಬಳಿ ಚರ್ಚಿಸಬೇಕಾಗುತ್ತದೆ. ಇದನ್ನು ಸಾಮಾನ್ಯವಾಗಿ ವೃದ್ಧರ ವಯಸ್ಸು, ವೈದ್ಯಕೀಯ ಸಮಸ್ಯೆ, ಯಾವ ಲಸಿಕೆ ಉಪಯುಕ್ತ ಎಂಬುದರ ಮೇಲೆ ನಿರ್ಧರಿಸಲಾಗುತ್ತದೆ. ಕೋವಿಡ್‌–19 ಹಿನ್ನೆಲೆಯಲ್ಲಂತೂ ಇಂತಹ ಲಸಿಕೆಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕಾಗುತ್ತದೆ. ಇತರ ಕಾಯಿಲೆಗಳಿದ್ದರೆ ಕೊರೊನಾ ಸೋಂಕಿನಿಂದ ಸಾವು ಸಂಭವಿಸುವ ಸಾಧ್ಯತೆ ಹೆಚ್ಚಿರುವುದು ಇದಕ್ಕೆ ಕಾರಣ.

ಕೋವಿಡ್‌–19 ಪರಿಣಾಮ ಗೊತ್ತೇ ಇದೆ. ಉಸಿರಾಟ ಮಾರ್ಗದಲ್ಲಿ ಅಲ್ಪ ಸೋಂಕಿನಿಂದ ಹಿಡಿದು ಸಾವಿಗೆ ಕಾರಣವಾಗುವ ತೀವ್ರತರದ ಉಸಿರಾಟ ಸಮಸ್ಯೆ ಇದರಿಂದ ಉದ್ಭವಿಸುತ್ತದೆ ಎಂಬುದು ಸಾಬೀತಾಗಿದೆ. ಕೋವಿಡ್‌–19ರಂತೆ ನ್ಯುಮೊಕೋಕಲ್‌ ನ್ಯುಮೋನಿಯ ಹಾಗೂ ಇನ್‌ಫ್ಲೂಯೆಂಜಾ (ಫ್ಲೂ) ಗಂಭೀರವಾದ ಉಸಿರಾಟ ಸಮಸ್ಯೆ ಹಾಗೂ ಜೀವಕ್ಕೇ ಎರವಾಗುವಂತಹ ತೊಂದರೆಗಳನ್ನು ತರಬಲ್ಲವು. ಲಸಿಕೆ ಇದ್ದರೂ ಕೂಡ ಫ್ಲೂ ಜಗತ್ತಿನಾದ್ಯಂತ ಹಲವರ ಸಾವಿಗೆ ಕಾರಣವಾಗುತ್ತಿದೆ. ಸದ್ಯಕ್ಕೆ ಕೋವಿಡ್‌–19ಕ್ಕೆ ಯಾವುದೇ ಪರಿಣಾಮಕಾರಿ ಲಸಿಕೆ ಇನ್ನೂ ತಯಾರಾಗಿಲ್ಲ. ಆದರೆ ಇತರ ಕಾಯಿಲೆಗಳಾದ ನ್ಯುಮೋನಿಯಾ, ಎಚ್‌1ಎನ್‌1 ಮೊದಲಾದವುಗಳನ್ನು ತಡೆಯಲು, ವ್ಯಾಧಿ ಕ್ಷಮತೆ ಜಾಸ್ತಿ ಮಾಡಿಕೊಳ್ಳಲು ಹಾಗೂ ಉಸಿರಾಟದ ಸಮಸ್ಯೆ ಕಡಿಮೆ ಮಾಡಲು ಲಸಿಕೆಯ ಮೊರೆ ಹೋಗಬೇಕಾದ ಅಗತ್ಯವಿದೆ.

ಯಾರು ತೆಗೆದುಕೊಳ್ಳಬಹುದು?

ನ್ಯುಮೊಕೊಕಲ್‌ ಲಸಿಕೆಯನ್ನು 65 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಶಿಫಾರಸ್ಸು ಮಾಡಬಹುದು. ರೋಗ ನಿರೋಧಕ ಶಕ್ತಿ ಕುರಿತಂತೆ ಸಮಸ್ಯೆ ಇರುವವರಿಗೆ, ಕಾರ್ಡಿಯೊ ಉಸಿರಾಟ ತೊಂದರೆ ಇರುವವರಿಗೆ 65 ವರ್ಷ ವಯಸ್ಸಿಗಿಂತ ಕಿರಿಯರಿದ್ದರೂ ನೀಡಬಹುದು. ಜೀವಮಾನದಲ್ಲಿ ಒಂದು ಸಲ ಅಥವಾ ಐದು ವರ್ಷಗಳಿಗೆ ಒಮ್ಮೆ ಈ ಲಸಿಕೆ ತೆಗೆದುಕೊಳ್ಳಬಹುದು. ಇನ್‌ಫ್ಲೂಯೆಂಜಾ ಲಸಿಕೆಯನ್ನು ವೃದ್ಧರಿಗೆ ಹಾಗೂ ಕಾರ್ಡಿಯೊ ಉಸಿರಾಟದ ಸಮಸ್ಯೆ ಇರುವವರಿಗೆ ವರ್ಷಕ್ಕೊಮ್ಮೆ ನೀಡಬಹುದು.

ಆರೋಗ್ಯ ಸಮಸ್ಯೆಯನ್ನು ತಡೆಗಟ್ಟಲು ಗರಿಷ್ಠ ಪ್ರಯತ್ನ ಮಾಡುವಾಗ ಲಸಿಕೆಯನ್ನು ಕೂಡ ಗಮನಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ಅದರಲ್ಲೂ ಕೋವಿಡ್‌–19ರಂತಹ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಇದು ಅತ್ಯಂತ ಅಗತ್ಯ.

65 ವರ್ಷಕ್ಕಿಂತ ಮೇಲ್ಪಟ್ಟವರು, ಕಾರ್ಡಿಯೊ ಉಸಿರಾಟದ ಸಮಸ್ಯೆ ಇದ್ದವರು, ವ್ಯಾಧಿ ಕ್ಷಮತೆ ಕಡಿಮೆ ಇದ್ದವರು ವೈದ್ಯರ ಬಳಿ ಮಾತನಾಡಿ ಲಸಿಕೆ ತೆಗೆದುಕೊಳ್ಳುವುದು ಸೂಕ್ತ.

(ಲೇಖಕ: ಸೀನಿಯರ್‌ ಕನ್ಸಲ್ಟೆಂಟ್‌, ಪಲ್ಮೊನೋಲಜಿ ವಿಭಾಗ, ಅಪೊಲೊ ಆಸ್ಪತ್ರೆ, ಬೆಂಗಳೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT