ಸೋಮವಾರ, ಮೇ 25, 2020
27 °C
ಚಾಮರಾಜನಗರ: ನಗರಸಭೆಯ 9ನೇ ವಾರ್ಡ್‌ ಸದಸ್ಯ ಮಹೇಶ್‌ ಅವರ ಮಾತು

ವಾರ್ಡ್‌ ಸಮಗ್ರ ಅಭಿವೃದ್ಧಿಯೇ ಗುರಿ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ನಗರಸಭೆಗೆ 9ನೇ ವಾರ್ಡ್‌ನಿಂದ ಆಯ್ಕೆಯಾಗಿರುವ ಎಸ್‌ಡಿಪಿಐನ ಮಹೇಶ್ ಎಂ. ಅವರು ತಮ್ಮ ವಾರ್ಡ್‌ನಲ್ಲಿರುವ ಸಮಸ್ಯೆ, ಅಭಿವೃದ್ಧಿಗಾಗಿ ಹಾಕಿಕೊಂಡಿರುವ ಯೋಜನೆಗಳ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ್ದಾರೆ.

* ನಿಮ್ಮ ಗೆಲುವಿಗೆ ಕಾರಣವೇನು?
ಉ: ನನ್ನ ಪಕ್ಷ ಎಸ್‌ಡಿಪಿಐ ಹಾಗೂ ಅದರ ಕಾರ್ಯಕರ್ತರೇ ನನ್ನ ಗೆಲುವಿಗೆ ಕಾರಣ. 2013ರ ಚುನಾವಣೆಯಲ್ಲಿ ಎಲ್ಲೋ ಇದ್ದವನನ್ನು ಕರೆದು ಪಕ್ಷ ಟಿಕೆಟ್‌ ಕೊಟ್ಟಿತ್ತು. ಆಗ 3ನೇ ವಾರ್ಡ್‌ನಿಂದ ಸದಸ್ಯನಾಗಿ ಆಯ್ಕೆಯಾದೆ. ಈ ಬಾರಿ 9ನೇ ವಾರ್ಡ್‌ನಿಂದ ಟಿಕೆಟ್‌ ನೀಡಿತು. ಅಲ್ಲೂ ಗೆದ್ದೆ. ಎಲ್ಲ ಸಮುದಾಯದವರು ನನಗೆ ಮತ ಹಾಕಿದ್ದಾರೆ. ಇದರ ಹಿಂದೆ, ಎಸ್‌ಡಿಪಿಐ ಕಾರ್ಯಕರ್ತರ ಶ್ರಮವೂ ಇದೆ. ಪಕ್ಷ ಹಾಗೂ ಕಾರ್ಯಕರ್ತರಿಗೆ ನಾನು ಚಿರಋಣಿ. 

* ವಾರ್ಡ್‌ನಲ್ಲಿರುವ ಯಾವೆಲ್ಲ ಸಮಸ್ಯೆಗಳು ಗಮನಕ್ಕೆ ಬಂದಿವೆ?
ಉ:
ನನ್ನ ವಾರ್ಡ್‌ನಲ್ಲಿ ಪೌರಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರ 92 ಕುಟುಂಬಗಳಿವೆ. ಸುಮಾರು ವರ್ಷಗಳಿಂದ ಇಲ್ಲಿ ವಾಸವಾಗಿದ್ದಾರೆ. ಅವರಿಗೆ ಹಕ್ಕು ಪತ್ರಗಳಿಲ್ಲ. ನಗರವನ್ನು ಸ್ವಚ್ಛಗೊಳಿಸುವ ಇವರಿಗೆ ಶೌಚಾಲಯದ ಸೌಲಭ್ಯವೂ ಇಲ್ಲ. ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ. ಒಳಚರಂಡಿ ಕೆಲವು ಕಡೆಗಳಲ್ಲಿ ಇಲ್ಲ. ರಸ್ತೆಗಳು ಅಭಿವೃದ್ಧಿಯಾಗಿಲ್ಲ. ಕೆಲವು ಬೀದಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ಇದೆ. ಬೀದಿ ದೀಪದ ಸಮಸ್ಯೆಯೂ ಇದೆ.

* ಏನೇನು ಯೋಜನೆಗಳನ್ನು ಹಾಕಿಕೊಂಡಿದ್ದೀರಿ? 
ಉ:
ನಗರಸಭೆ ನೀಡುವ ಅನುದಾನವನ್ನು ವಾರ್ಡ್‌ ಅಭಿವೃದ್ಧಿಗೆ ಸಮರ್ಪಕವಾಗಿ ಬಳಕೆ ಮಾಡಲು ಯೋಜನೆ ರೂಪಿಸಿದ್ದೇನೆ. ವಾರ್ಡ್‌ನಲ್ಲಿರುವ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವುದು ಸದಸ್ಯನಾಗಿ ನನ್ನ ಕರ್ತವ್ಯ. ಪೌರ ಕಾರ್ಮಿಕರ ಕುಟುಂಬಗಳಿಗೆ ಶೌಚಾಲಯಗಳನ್ನು ನಿರ್ಮಿಸಿಕೊಡಬೇಕಿದೆ. ಸಾರ್ವಜನಿಕ ಶೌಚಾಲಯದ ಅಗತ್ಯವೂ ಇದೆ. ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕಾಗಿದೆ. 

ಜಿಲ್ಲಾ ಕೇಂದ್ರ ಗ್ರಂಥಾಲಯ ನನ್ನ ವಾರ್ಡ್‌ನಲ್ಲಿದೆ. ಅದನ್ನು ಹೈಟೆಕ್‌ ಗ್ರಂಥಾಲಯವನ್ನಾಗಿ ಪರಿವರ್ತಿಸಬೇಕು ಎಂಬ ಹೆಬ್ಬಯಕೆ ಇದೆ. ಇದು ನಗರಸಭೆಯ ವ್ಯಾಪ್ತಿಗೆ ಬರುವುದಿಲ್ಲ. ಆದರೂ, ಶಾಸಕರು ಹಾಗೂ ಸಂಬಂಧಿಸಿದ ಸಚಿವರ ಗಮನಕ್ಕೆ ತಂದು ಅಭಿವೃದ್ಧಿ ಪಡಿಸಲು ಶ್ರಮಿಸುತ್ತೇನೆ. ವಾರ್ಡ್‌ನಲ್ಲಿರುವ ಕುವೆಂಪು ಬಡಾವಣೆಯಲ್ಲಿ ಸರ್ಕಾರದ ಜಾಗದಲ್ಲಿ ಜನರು ಹಲವು ವರ್ಷಗಳಿಂದ ವಾಸಮಾಡಿಕೊಂಡಿದ್ದಾರೆ. ಅವರಿಗೆ ಹಕ್ಕುಪತ್ರಗಳನ್ನು ಕೊಡಿಸಬೇಕಾಗಿದೆ. ವಾರ್ಡ್‌ನಲ್ಲಿರುವ ಪ್ರತಿಯೊಂದು ಮನೆಗೆ ಒಂದೊಂದು ಗಿಡ ವಿತರಿಸುವ ಯೋಜನೆ ಹಾಕಿಕೊಂಡಿದ್ದೇನೆ. ರಸ್ತೆಗಳ ಬದಿಯಲ್ಲಿ ಗಿಡ ನೆಡುವ ಯೋಚನೆಯೂ ಇದೆ. ವಾರ್ಡ್‌ನಲ್ಲಿ 1,000 ಗಿಡಗಳನ್ನಾದರೂ ನೆಟ್ಟು ಬೆಳಸಬೇಕು ಎಂಬ ಆಸೆ ನನ್ನದು.

ಜನ ಸಂಪರ್ಕ ಸಭೆ: ಪಕ್ಷದ ವತಿಯಿಂದ ಮೂರು ಅಥವಾ ಆರು ತಿಂಗಳಿಗೊಮ್ಮೆ ಜನಸಂಪರ್ಕ ಸಭೆ ನಡೆಸುವ ಯೋಚನೆ ಇದೆ. ಇದರಿಂದ ಜನರ ಸಮಸ್ಯೆಗಳನ್ನು ಅರಿಯಲು ಸಾಧ್ಯವಾಗುತ್ತದೆ.

* ಸದಸ್ಯರಾಗಿ ಆಯ್ಕೆಯಾದ ಮೂರು ತಿಂಗಳಲ್ಲಿ ವಾರ್ಡ್‌ನಲ್ಲಿ ಏನೆಲ್ಲ ಕೆಲಸ ಆಗಿದೆ?
ಉ:
ನಗರೋತ್ಥಾನ 3ನೇ ಹಂತದ ಯೋಜನೆಯಲ್ಲಿ ವಾರ್ಡ್‌ನ 3 ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಒಂದು ಕೊಳವೆಬಾವಿ ಕೊರೆಸಿ ಪಂಪ್‌ ಅಳವಡಿಸಲಾಗಿದೆ. ಎರಡು ವರ್ಷಗಳಿಂದ ಕೆಟ್ಟಿದ್ದ  ಹೈಮಾಸ್ಟ್‌ ದೀಪವನ್ನು ದುರಸ್ತಿಗೊಳಿಸಲಾಗಿದೆ. ಪ್ರತಿ ದಿನವೂ ವಾರ್ಡ್‌ಗೆ ಭೇಟಿ ನೀಡುತ್ತಿದ್ದೇನೆ. ಮನೆ ಮನೆಗೂ ಭೇಟಿ ನೀಡಿ ನನ್ನ ಮೊಬೈಲ್‌ ಸಂಖ್ಯೆ ಕೊಟ್ಟಿದ್ದೇನೆ. ಅವರ ದೂರವಾಣಿ ಸಂಖ್ಯೆಯನ್ನೂ ಸಂಗ್ರಹಿಸಿದ್ದೇನೆ.

ಎರಡನೇ ಬಾರಿ ಸದಸ್ಯ
ಮಹೇಶ್‌ ಅವರು ನಗರಸಭೆಗೆ ಆಯ್ಕೆಯಾಗುತ್ತಿರುವುದು ಇದು ಎರಡನೇ ಬಾರಿ. ಈ ಸಲದ ಚುನಾವಣೆಯಲ್ಲಿ 9ನೇ ವಾರ್ಡ್‌ ಸಾಕಷ್ಟು ಕುತೂಹಲ ಕೆರಳಿಸಿತ್ತು. ಕಾಂಗ್ರೆಸ್‌ನ ಹಿರಿಯ ಮುಖಂಡ, 9 ಬಾರಿ ನಗರಸಭೆ ಸದಸ್ಯರಾಗಿದ್ದ ನಂಜುಂಡಸ್ವಾಮಿ ಅವರು ಇಲ್ಲಿ ಸ್ಪರ್ಧಿಸಿದ್ದರು. ಹಾಗಾಗಿ, ಕಾಂಗ್ರೆಸ್‌ ಮತ್ತು ಎಸ್‌ಡಿಪಿಐ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ರಾಜಕೀಯದಲ್ಲಿ ಹೆಚ್ಚು ಅನುಭವ ಹೊಂದಿಲ್ಲದ ಮಹೇಶ್‌ ಅವರು ನಂಜುಂಡಸ್ವಾಮಿ ವಿರುದ್ಧ ಗೆಲುವಿನ ನಗೆ ಬೀರಿದ್ದರು.

9ನೇ ವಾರ್ಡ್‌ ಅನ್ನು ನಗರದಲ್ಲೇ ಮಾದರಿ ವಾರ್ಡ್‌ ಆಗಿ ಅಭಿವೃದ್ಧಿ ಪಡಿಸುವ ಕನಸನ್ನು ಮಹೇಶ್‌ ಹೊಂದಿದ್ದಾರೆ. ಅವರ ಸಂಪರ್ಕ ಸಂಖ್ಯೆ: 9036955370 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು