ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ಖಾಸಗಿ ವಲಯದಲ್ಲಿ ಮೀಸಲಾತಿ– ಆಶಯ ಮತ್ತು ವಾಸ್ತವ

Last Updated 6 ಡಿಸೆಂಬರ್ 2022, 19:38 IST
ಅಕ್ಷರ ಗಾತ್ರ

ಸರ್ಕಾರಗಳೇ ಖಾಸಗಿ ಬಂಡವಾಳಶಾಹಿಯ ಹಿಡಿತದಲ್ಲಿವೆ. ಹೀಗಾಗಿ ಬಹುರಾಷ್ಟ್ರೀಯ ಕಂಪನಿಗಳನ್ನು ಒಳಗೊಂಡಂತೆ ಖಾಸಗಿ ವಲಯದ ಎಲ್ಲಾ ಕಡೆ ಮೀಸಲಾತಿ ತರಲು ಸಂವಿಧಾನದ ತಿದ್ದುಪಡಿ ಆಗಬೇಕಾಗುತ್ತದೆ. ಯಾವುದೇ ಪಕ್ಷದ ಸರ್ಕಾರವು ಇಂತಹ ತಿದ್ದುಪಡಿಗೆ ಸಿದ್ಧವಿದೆಯೇ? ಆರ್ಥಿಕ ಜಾಗತೀಕರಣದ ಬೀಜ ಬಿತ್ತಿ ಗಿಡವಾಗಿಸಿದ ಕಾಂಗ್ರೆಸ್ ಆಗಲಿ, ಮಹೋನ್ನತ ಮರವಾಗಿ ಬೆಳೆಸಿದ ಬಿಜೆಪಿಯಾಗಲಿ ಸಾಮಾಜಿಕ ಮೀಸಲಾತಿಗಾಗಿ ಸಂವಿಧಾನಕ್ಕೆ ತಿದ್ದುಪಡಿ ತರುವುದು ಅನುಮಾನ

-----------

ನಮ್ಮ ದೇಶದಲ್ಲೀಗ ಮುಕ್ತ ಆರ್ಥಿಕ ಪದ್ಧತಿಯ ಪ್ರಖರ ಜಾರಿಯ ಕಾಲ; ಆರ್ಥಿಕ ಪ್ರಭುತ್ವವು ಪ್ರಜಾಪ್ರಭುತ್ವದ ಮೇಲೆ ಸವಾರಿ ಮಾಡುತ್ತಿರುವ ಕಾಲ; ಅಮೆರಿಕದ ಪ್ರಸಿದ್ಧ ಚಿಂತಕರಲ್ಲೊಬ್ಬರಾದ ಹರ್ಬರ್ಟ್ ಅಪ್ತೇಕರ್ ಅವರು ಮುಕ್ತ ಆರ್ಥಿಕ ಪದ್ಧತಿಯ ಬಗ್ಗೆ ತಮ್ಮ ‘The Nature of Democracy: Freedom and Revolution’ ಎಂಬ ಕೃತಿಯಲ್ಲಿ ಮಾಡಿರುವ ವಿಶ್ಲೇಷಣೆಯು ಇಂಥ ಸನ್ನಿವೇಶದಲ್ಲಿ ಪ್ರಸ್ತುತವೆನಿಸುತ್ತದೆ. ಅವರು ಮುಕ್ತ ಆರ್ಥಿಕ ಪದ್ಧತಿಯ ದುಷ್ಪರಿಣಾಮಗಳನ್ನು ಕುರಿತು ಹೇಳಿರುವ ಪ್ರಮುಖಾಂಶಗಳನ್ನು ಮುಂದಿನಂತೆ ಪಟ್ಟಿ ಮಾಡಬಹುದು: ಅ) ಸರ್ಕಾರವು ಬಂಡವಾಳ ಶಾಹಿಯನ್ನು ನಿಯಂತ್ರಿಸಬಾರದು; ಆದರೆ ಬಂಡವಾಳ ಶಾಹಿಯು ಸರ್ಕಾರವನ್ನು ನಿಯಂತ್ರಿಸಬಹುದು ಆ) ಆರ್ಥಿಕ ಅಸಮಾನತೆಯು ಸಮಾಜದ ಸಹಜ-ಸ್ವಾಭಾವಿಕ ಅಂಶ ಇ) ಸ್ವಾತಂತ್ರ್ಯವೆನ್ನುವುದು ರಾಜಕೀಯಕ್ಕೆ ಮಾತ್ರ ಸಂಬಂಧಿಸಿದ್ದು; ಆರ್ಥಿಕ ವಿಚಾರಗಳಿಗಲ್ಲ.

ಮುಕ್ತ ಆರ್ಥಿಕ ಪದ್ಧತಿಯ ಉದ್ದೇಶ ಮತ್ತು ನೀತಿ ನಿರೂಪಣೆಯ ಈ ಅಂಶಗಳು, ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರು 1949ರ ನವೆಂಬರ್ 25ರಂದು ಸಂವಿಧಾನವನ್ನು ಸಮರ್ಪಿಸಿ ಮಾಡಿದ ಭಾಷಣದಲ್ಲಿ ಪ್ರಸ್ತಾಪಿಸಿದ ಮೂರು ಮಾದರಿಯ ಪ್ರಜಾಪ್ರಭುತ್ವಗಳಿಗೆ ವಿರುದ್ಧವಾಗಿದೆ. ಡಾ. ಅಂಬೇಡ್ಕರ್ ಆಭಿಪ್ರಾಯದಲ್ಲಿ ಸಾಮಾಜಿಕ ಪ್ರಜಾಪ್ರಭುತ್ವ, ರಾಜಕೀಯ ಪ್ರಜಾಪ್ರಭುತ್ವ, ಆರ್ಥಿಕ ಪ್ರಜಾಪ್ರಭುತ್ವ-ಈ ಮೂರೂ ಮಾದರಿಗಳು ಮುಖ್ಯ. ಅಂಬೇಡ್ಕರ್ ಅವರ ಪ್ರಕಾರ ರಾಜಕೀಯ ಪ್ರಜಾಪ್ರಭುತ್ವಕ್ಕೆ ಆರ್ಥಿಕ ಪ್ರಜಾಪ್ರಭುತ್ವದ ಆಧಾರ ಮುಖ್ಯವಾದುದು; ಸಾಮಾಜಿಕ ಪ್ರಜಾಪ್ರಭುತ್ವವು ನಾವು ಅನುಸರಿಸಲೇಬೇಕಾದ ಆದರ್ಶ ಮಾದರಿ. ಅವರು ವಿವರಿಸಿರುವಂತೆ, ಸಾಮಾಜಿಕ ಪ್ರಜಾಪ್ರಭುತ್ವವು ಸ್ವಾತಂತ್ರ್ಯ, ಸಮಾನತೆ ಮತ್ತು ಸೋದರತೆಗಳನ್ನು ಒಳಗೊಂಡಿರುತ್ತದೆ.

ಹರ್ಬರ್ಟ್ ಅಪ್ರೇಕರ್ ಅವರು ಮುಕ್ತ ಆರ್ಥಿಕ ಪದ್ಧತಿಗೆ ವಿರುದ್ಧವಾಗಿದ್ದರು. ಅಂಬೇಡ್ಕರ್ ಅವರು ಖಾಸಗೀಕರಣವು ಸ್ವಾರ್ಥಕೇಂದ್ರಿತ ಲಾಭಕ್ಕೆ ಮಹತ್ವ ನೀಡುತ್ತದೆಯೆಂದು ಪ್ರತಿಪಾದಿಸಿದ್ದರು. ಖಾಸಗಿ ವಲಯದ ಮೀಸಲಾತಿ ಪ್ರಶ್ನೆಯನ್ನು ಪರಿಶೀಲಿಸುವಾಗ ಇವರಿಬ್ಬರ ವಿಚಾರಧಾರೆ ಮುಖ್ಯವಾಗುತ್ತದೆ. ಮುಕ್ತ ಆರ್ಥಿಕ ಪದ್ಧತಿಯು ಪ್ರಜಾಸತ್ತಾತ್ಮಕ ಸರ್ಕಾರದ ಬೆನ್ನ ಹಿಂದಿನ ಚಾಟಿಯಾಗಿ ವರ್ತಿಸುವ ಶಕ್ತಿಯನ್ನು ಬಂಡವಾಳಶಾಹಿ ಆರ್ಥಿಕತೆಗೆ ನೀಡುತ್ತದೆ. ಅಭಿವೃದ್ಧಿಯು ಆರ್ಥಿಕ ವಿಷಯ ಮಾತ್ರವೆಂದು ಭಾವಿಸುವ ಬಂಡವಾಳಶಾಹಿಯು ಸಾಮಾಜಿಕ ಸತ್ಯಗಳನ್ನು ನಿರ್ಲಕ್ಷಿಸುತ್ತದೆ. ಸಾಮಾಜಿಕ ಶ್ರೇಣೀಕರಣವು ಅಂತರ್ಗತವಾಗಿ ಬೆಳೆದು ಬಂದ ನಮ್ಮ ಸಮಾಜದ ಬಹು ಆಯಾಮಗಳು ಅಂಥವರಿಗೆ ಅಮುಖ್ಯವಾಗುತ್ತವೆ. ಜಾತಿ, ವರ್ಣ ಮತ್ತು ವರ್ಗ ವಿಭಜನೆಯ ಸಮಾಜದ ಕಂದಕಗಳನ್ನು ಮುಚ್ಚುವುದು ಬಂಡವಾಳಶಾಹಿ ಆರ್ಥಿಕ ನೀತಿಯ ಆದ್ಯತೆಯಲ್ಲ. ಆದ್ದರಿಂದ ಮೀಸಲಾತಿಯೂ ಮುಖ್ಯವಲ್ಲ. ಇದು ನಮ್ಮ ಕಾಲದ ದುರಂತ.

ಖಾಸಗಿ ವಲಯಕ್ಕೆ ಸಂಬಂಧಿಸಿದ ಮೀಸಲಾತಿಯ ಹಕ್ಕೊತ್ತಾಯವು ಎರಡು ರೂಪಗಳಲ್ಲಿ ಕೇಳಿಬರುತ್ತಿದೆ. ಒಂದು-ಸ್ಥಳೀಯ ಮೀಸಲಾತಿ, ಎರಡು- ಸಾಮಾಜಿಕ ಮೀಸಲಾತಿ. ಸ್ಥಳೀಯ ಮೀಸಲಾತಿಯು ಆಯಾ ರಾಜ್ಯದ ಸ್ಥಳೀಯ ಅರ್ಹ ಅಭ್ಯರ್ಥಿಗಳಿಗೆ ಖಾಸಗಿ ವಲಯದಲ್ಲಿ ಇಂತಿಷ್ಟು ಉದ್ಯೋಗಗಳನ್ನು ಮೀಸಲಿಡಬೇಕೆಂದು ಬಯಸುತ್ತದೆ. ಇದಕ್ಕೆ ಸ್ಪಂದಿಸಿ ಕೆಲವು ರಾಜ್ಯಗಳು ಆಯಾ ಸರ್ಕಾರದ ವ್ಯಾಪ್ತಿಯಲ್ಲಿರುವ ಖಾಸಗಿ ಉದ್ದಿಮೆಗಳಲ್ಲಿ ಸ್ಥಳೀಯ ಮೀಸಲಾತಿ ನೀತಿಯನ್ನು ಜಾರಿ ಮಾಡಲು ಆದೇಶಗಳನ್ನು ಹೊರಡಿಸಿವೆ. ಕರ್ನಾಟಕದ ಸರೋಜಿನಿ ಮಹಿಷಿ ವರದಿ ಮತ್ತು ಜಾರಿ ಕುರಿತ ವಿಷಯದ ಪ್ರಸ್ತಾಪ ಇಲ್ಲಿ ಪ್ರಸ್ತುತವಾಗುತ್ತದೆ. ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯವರಾಗಿದ್ದಾಗ ರಚಿತವಾದ ಸರೋಜಿನಿ ಮಹಿಷಿ ಸಮಿತಿಯು 1984ರ ಜೂನ್ 13ರಂದು ಮಧ್ಯಂತರ ವರದಿಯನ್ನೂ 1986ರ ಡಿಸೆಂಬರ್ 30ರಂದು ಅಂತಿಮ ವರದಿಯನ್ನೂ ನೀಡಿತು. ಒಟ್ಟು 58 ಶಿಫಾರಸುಗಳಲ್ಲಿ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವ 12 ಶಿಫಾರಸುಗಳನ್ನು ಹೊರತುಪಡಿಸಿ ಉಳಿದ ಶಿಫಾರಸುಗಳನ್ನು ಒಪ್ಪಿ ಹೆಗಡೆಯವರ ಸರ್ಕಾರವು ಆದೇಶ ಹೊರಡಿಸಿತು.

ಮುಂದೆ ಬಂಗಾರಪ್ಪನವರು ಮುಖ್ಯಮಂತ್ರಿಯವರಾ ದಾಗ 1990ರ ನವೆಂಬರ್‌ನಲ್ಲಿ ಇಲಾಖಾವಾರು ವಿಂಗಡಣೆ ಮಾಡಿ ವರದಿ ಜಾರಿಗೆ ತೀವ್ರತೆ ತರಲಾಯಿತು. ಮುಕ್ತ ಆರ್ಥಿಕ ಪದ್ಧತಿಯಾಗಲಿ, ಬಹುರಾಷ್ಟ್ರೀಯ ಕಂಪನಿಗಳ ಆಗಮನವಾಗಲಿ ಸರೋಜಿನಿ ಮಹಿಷಿ ಸಮಿತಿಯ ಕಾಲದಲ್ಲಿ ಇರಲಿಲ್ಲ ಎಂಬುದನ್ನು ಗಮನಿಸಬೇಕು. ಇತರೆ ಕೆಲವು ರಾಜ್ಯಗಳೂ ತಂತಮ್ಮ ಸರ್ಕಾರಗಳ ವ್ಯಾಪ್ತಿಯಲ್ಲಿ ಸ್ಥಳೀಯ ಮೀಸಲಾತಿಯನ್ನು ನೀಡಿವೆ. ಮಹಾರಾಷ್ಟ್ರದಲ್ಲಿ ಶೇ 80, ಆಂಧ್ರಪ್ರದೇಶದಲ್ಲಿ ಶೇ 75, ಮಧ್ಯಪ್ರದೇಶದಲ್ಲಿ ಶೇ 70 ಮತ್ತು ಹರಿಯಾಣದಲ್ಲಿ ಮಾಹೆಯಾನ ಮೂವತ್ತು ಸಾವಿರ ಸಂಬಳದ ಎಲ್ಲ ಹುದ್ದೆಗಳು ಸ್ಥಳೀಯರಿಗೆ ಮೀಸಲು. ಆಂಧ್ರ ಮತ್ತು ಹರಿಯಾಣ ಸರ್ಕಾರದ ಕಾಯ್ದೆಗಳು ಕೋರ್ಟಿನ ಅಂಗಳಕ್ಕೆ ಬಂದವು. ಆಂಧ್ರ ಪ್ರದೇಶದ ಮೀಸಲಾತಿಗೆ ತಡೆ ನೀಡಲಾಗಿದೆ. ಹರಿಯಾಣದ ಕಾಯ್ದೆಯನ್ನು 2022ರ ಫೆಬ್ರವರಿ ಮೂರರಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‍ನಲ್ಲಿ ಪ್ರಶ್ನಿಸಲಾಯಿತು. ತಡೆಯಾಜ್ಞೆ ತರಲಾಯಿತು. ಆದರೆ 2022ರ ಫೆಬ್ರವರಿ ಹದಿನೇಳರಂದು ಸುಪ್ರೀಂ ಕೋರ್ಟು ಈ ತಡೆಯಾಜ್ಞೆಯನ್ನು ತೆರವುಗೊಳಿಸಿತು. ಆದರೂ ಅಂತಿಮ ವಿಚಾರಣೆಯನ್ನು ಹೈಕೋರ್ಟಿಗೆ ಬಿಟ್ಟಿತು.

ಖಾಸಗಿ ವಲಯದಲ್ಲಿ ಸ್ಥಳೀಯ ಮೀಸಲಾತಿಯ ಸ್ಥಿತಿಗತಿಯೇ ಹೀಗಿರುವಾಗ ಸಾಮಾಜಿಕ ಮೀಸಲಾತಿಗೆ ಅವಕಾಶ ಕಲ್ಪಿಸುವ ಕನಸು ನನಸಾಗಲು ಸಾಧ್ಯವೇ? ಈ ದಿಸೆಯಲ್ಲಿ ಪ್ರಯತ್ನವೊಂದು ನಡೆಯಿತು. 2006ರಲ್ಲಿ ಅಂದಿನ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರವು ಖಾಸಗಿ ವಲಯದಲ್ಲಿ ಸಾಮಾಜಿಕ ಮೀಸಲಾತಿ ಕಲ್ಪಿಸುವ ಕುರಿತ ಸಮಾಲೋಚನೆಗೆ ಒಂದು ಸಮನ್ವಯ ಸಮಿತಿಯನ್ನು ರಚಿಸಿತು. ಇದರಲ್ಲಿ ಖಾಸಗಿ ಉದ್ದಿಮೆಯ ಪ್ರತಿನಿಧಿಗಳೂ ಇದ್ದರು. ಒಟ್ಟು ಒಂಬತ್ತು ಸಭೆಗಳು ನಡೆದವು.

ಮೊದಲನೇ ಸಭೆಯಲ್ಲಿ, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಖಾಸಗಿ ಉದ್ದಿಮೆಗಳು ಸ್ವಯಂಪ್ರೇರಿತವಾಗಿ ಕೌಶಲ ತರಬೇತಿ ನೀಡುವ ಬಗ್ಗೆ ಚರ್ಚಿಸಲಾಯಿತು. ಒಂಬತ್ತನೇ ಸಭೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಶೇ 25ರಷ್ಟು ಅವಕಾಶ ನೀಡುವ ಬಗ್ಗೆ ಖಾಸಗಿ ಉದ್ದಿಮೆದಾರರಲ್ಲಿ ‘ಮನವಿ’ ಮಾಡಲಾಯಿತು. ಆದರೆ ಕಡೆಗೆ ತರಬೇತಿ, ಸಂಶೋಧನೆಗೆ ಸಹಾಯ, ಶಿಷ್ಯವೇತನ ಮುಂತಾದ ಪ್ರೋತ್ಸಾಹಕ ಕ್ರಮಗಳಿಗೆ ಸೀಮಿತವಾಯಿತು. ಸಾಮಾಜಿಕ ಮೀಸಲಾತಿಯ ಕ್ರಮವು ಕನಸಾಗಿಯೇ ಉಳಿಯಿತು.

ಖಾಸಗಿ ವಲಯದಲ್ಲಿ ಮೀಸಲಾತಿ ಕಲ್ಪಿಸಲು ಸಂವಿಧಾನದಲ್ಲಿ ಅವಕಾಶವಿದೆಯೆ ಎಂಬ ಪ್ರಶ್ನೆಯನ್ನು ಪರಿಶೀಲಿಸಬಹುದು. ಸಂವಿಧಾನದ 15(4) ಮತ್ತು 16(4)ರ ಪ್ರಕಾರ ಸರ್ಕಾರದ ಅಧೀನದಲ್ಲಿರುವ ಉದ್ಯೋಗಗಳಲ್ಲಿ ಸಾಮಾಜಿಕ ಮೀಸಲಾತಿ ನೀಡುವ ಅವಕಾಶವನ್ನು ಕಲ್ಪಿಸಲಾಗಿದೆ. ಆದರೆ ಬಹುರಾಷ್ಟ್ರೀಯ ಖಾಸಗಿ ಉದ್ದಿಮೆಗಳು ಪ್ರಜಾಸತ್ತಾತ್ಮಕ ಸರ್ಕಾರದ ಅಧೀನದಲ್ಲಿ ಇಲ್ಲ ಎನ್ನುವುದೇ ವಿಪರ್ಯಾಸ! ಹರ್ಬರ್ಟ್ ಅಪ್ತೇಕರ್ ಅವರು ಹೇಳಿದಂತೆ ಸರ್ಕಾರಗಳೇ ಖಾಸಗಿ ಬಂಡವಾಳಶಾಹಿಯ ಹಿಡಿತದಲ್ಲಿವೆ. ಹೀಗಾಗಿ ಬಹುರಾಷ್ಟ್ರೀಯ ಕಂಪನಿಗಳನ್ನು ಒಳಗೊಂಡಂತೆ ಖಾಸಗಿ ವಲಯದ ಎಲ್ಲಾ ಕಡೆ ಮೀಸಲಾತಿ ತರಲು ಸಂವಿಧಾನಕ್ಕೆ
ತಿದ್ದುಪಡಿ ಮಾಡಬೇಕಾಗುತ್ತದೆ. ಯಾವುದೇ ಪಕ್ಷದ ಸರ್ಕಾರವು ಇಂತಹ ತಿದ್ದುಪಡಿಗೆ ಸಿದ್ಧವಿದೆಯೇ? ಆರ್ಥಿಕ ಜಾಗತೀಕರಣದ ಬೀಜ ಬಿತ್ತಿ ಗಿಡವಾಗಿಸಿದ ಕಾಂಗ್ರೆಸ್ ಆಗಲಿ, ಮಹೋನ್ನತ ಮರವಾಗಿ ಬೆಳೆಸಿದ ಬಿಜೆಪಿಯಾಗಲಿ ಸಾಮಾಜಿಕ ಮೀಸಲಾತಿಗಾಗಿ ಸಂವಿಧಾನಕ್ಕೆ ತಿದ್ದುಪಡಿ ತರುವುದು ಅನುಮಾನ.

ಈಗಂತೂ ಸರ್ಕಾರಿ ಉದ್ದಿಮೆಗಳನ್ನೆಲ್ಲ ಖಾಸಗಿ ಬಂಡವಾಳಗಾರರ ಬಾಗಿಲಿಗೊಯ್ದು ಅರ್ಪಿಸುತ್ತಿದ್ದು, ಖಾಸಗಿ ವಲಯದಲ್ಲಿ ಸಾಮಾಜಿಕ ಮೀಸಲಾತಿಯನ್ನು ಊಹಿಸುವುದಕ್ಕೂ ಸಾಧ್ಯವಿಲ್ಲದ ಸನ್ನಿವೇಶವಿದೆ. ಹಾಗಾದರೆ ಸರ್ಕಾರದಿಂದ ಹೊರಗುಳಿದ ವಲಯಗಳಲ್ಲಿ ಮೀಸಲಾತಿ ಸಾಧ್ಯವೇ ಇಲ್ಲವೆ? 2005ರಲ್ಲಿ ಅಂದಿನ ಕೇಂದ್ರ ಸರ್ಕಾರವು ಸಂವಿಧಾನಕ್ಕೆ 93ನೇ ತಿದ್ದುಪಡಿ ತಂದು ಅನುದಾನಿತವಷ್ಟೇ ಅಲ್ಲ, ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಿಗೂ ಸಾಮಾಜಿಕ ಮೀಸಲಾತಿಯನ್ನು ವಿಸ್ತರಿಸಿತು. ಇದು ಸಂವಿಧಾನ ವಿರೋಧಿ ಎಂದು ಸುಪ್ರೀಂ ಕೋರ್ಟ್‍ನಲ್ಲಿ ದಾವೆ ಹೂಡಲಾಯಿತು (ಅಶೋಕ್ ಕುಮಾರ್ ಠಾಕೂರ್ ಮತ್ತು ಕೇಂದ್ರ ಸರ್ಕಾರದ ನಡುವಣ ಪ್ರಕರಣ). 93ನೇ ತಿದ್ದುಪಡಿಯು ಸಂವಿಧಾನದ ಮೂಲ ಆಶಯಗಳನ್ನು ಉಲ್ಲಂಘಿಸಿಲ್ಲ ಎಂದು ಸುಪ್ರೀಂ ಕೋರ್ಟು ತೀರ್ಪು ನೀಡಿತು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಮಾನದಂಡಗಳನ್ನು ಒಟ್ಟಿಗೆ ಪರಿಗಣಿಸಬೇಕೆಂದು ಸೂಚಿಸಿತು. ವಾಸ್ತವಿಕ ವಿಚಿತ್ರವೆಂದರೆ ಈಗ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ಜಾರಿಯಲ್ಲಿ ಇಲ್ಲ. ಅಷ್ಟೇ ಅಲ್ಲ. ಕೆಲವು ಅನುದಾನಿತ ಶಿಕ್ಷಣ ಸಂಸ್ಥೆಗಳು ಮೀಸಲಾತಿಯಿಂದ ದೂರವುಳಿಯಲು ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಹಿಂದೇಟು ಹಾಕುತ್ತಿವೆ.

ಸಾಮಾಜಿಕ ನ್ಯಾಯವೆನ್ನುವುದು ಕೇವಲ ಸರ್ಕಾರಿ ವಲಯದ ಪರಿಕಲ್ಪನೆಯಲ್ಲ. ಅದು ಇಡೀ ಸಮಾಜದ ಸಮಸ್ತ ವಲಯಗಳಿಗೂ ಸಂಬಂಧಿಸಿದ ನ್ಯಾಯ ಪರಿಕಲ್ಪನೆ. ಖಾಸಗಿ ವಲಯವು ಸಮಾಜದ ಭಾಗವಾಗಿದ್ದು ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಬೇಕಲ್ಲವೇ? ಉತ್ತರ, ಆರ್ಥಿಕ ಪ್ರಭುತ್ವದ ಅಂಗಳಲ್ಲಿದೆ. ಹಕ್ಕೊತ್ತಾಯ
ಪ್ರಜಾಪ್ರಭುತ್ವದ ಕೈಯ್ಯಲ್ಲಿದೆ.

ಲೇಖಕ: ಮಾಜಿ ಅಧ್ಯಕ್ಷ, ಕನ್ನಡ ಅಭಿವೃದ್ಧಿ ಪ್ರಾಧಿಕಾರ

---------

‘ಸಂವಿಧಾನದ ಆಶಯಗಳಿಗೆ ವಿರೋಧವಲ್ಲ’

ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ಅನ್ನೋದಕ್ಕಿಂತ ಸ್ಥಳೀಯರಿಗೆ ಮೀಸಲಾತಿ ಅನ್ನೋದು ಈ ವಿಚಾರವನ್ನು ಸರಿಯಾಗಿ ಮುಂದಿಡುವ ಕ್ರಮ ಅನಿಸುತ್ತದೆ. ಇದನ್ನು ಭಾಷೆಗೆ ಸೀಮಿತಗೊಳಿಸಲಾಗದು, ಕರ್ನಾಟಕದಲ್ಲೇ ಹುಟ್ಟಿ ಬೆಳೆದಿರುವ ಕರ್ನಾಟಕದವರೇ ಆಗಿರುವ ಅನೇಕ ಭಾಷೆ ಮಾತಾಡುವ ಜನರು ನಮ್ಮ ನಾಡಿನಲ್ಲಿದ್ದಾರೆ. ಒಂದುಮಟ್ಟಿಗೆ ಹೆಚ್ಚುತ್ತಿರುವ ವಲಸೆ, ಅದರಿಂದ‌ ಉಂಟಾಗಿರುವ ಪಲ್ಲಟಗಳೂ ಸ್ಥಳೀಯರಿಗೆ ಮೀಸಲಾತಿ ಸಿಗಬೇಕೆಂಬ ಕೂಗು ಏಳುವುದಕ್ಕೆ ಕಾರಣವಾಗಿದೆ. ಈ ವಿಚಾರದಲ್ಲಿ ಸಮತೋಲನದ ಒಂದು ನಿಲುವನ್ನು ಹೊಂದಬೇಕಾದದ್ದು ಅತ್ಯಗತ್ಯ. ಸಂವಿಧಾನದಲ್ಲಿ ಮೀಸಲಾತಿಯನ್ನು ಒಳಗೊಂಡದ್ದರ ಆಶಯ, ಆರ್ಥಿಕವಾಗಿ ಸಾಮಾಜಿಕವಾಗಿ ಸಾಂಸ್ಕೃತಿಕವಾಗಿ ಮತ್ತು ಚಾರಿತ್ರಿಕವಾಗಿ ಶೋಷಣೆಗೊಳಗಾಗಿರುವ‌ ಅಂಚಿಗೊತ್ತಲ್ಪಟ್ಟಿರುವ ಸಮುದಾಯಗಳ ಮೇಲ್ಚಲನೆಗೆ ಅವಕಾಶವಾಗುವಂತೆ ಪ್ರಾತಿನಿಧ್ಯ ಒದಗಿಸುವುದು.

ಈ ಹಿನ್ನೆಲೆಯಲ್ಲಿ ನೋಡಿದರೂ ಸ್ಥಳೀಯರಿಗೆ ಮೀಸಲಾತಿ ಎಂಬುದು ಸಂವಿಧಾನದ ಆಶಯಗಳಿಗೆ ವ್ಯತಿರಿಕ್ತವಲ್ಲ. ಏಕೆಂದರೆ ಉತ್ತಮ‌ ಹುದ್ದೆಗಳಿಗೆಲ್ಲ ಹೊರಗಿನಿಂದ ‘ಪ್ರತಿಭಾವಂತ’ರನ್ನು ಕರೆತರುತ್ತೇವೆಂಬ ಹಟದ ಕಾರಣಕ್ಕೂ ಈ ಮೀಸಲಾತಿಯ ಹಕ್ಕೊತ್ತಾಯ ಹಲವು ಸಂದರ್ಭಗಳಲ್ಲಿ ಜೋರಾಗಿ ಎದ್ದಿದೆಯೆಂಬುದನ್ನೂ ಮರೆಯುವಂತಿಲ್ಲ. ಒಟ್ಟಾರೆಯಾಗಿ ಮೀಸಲಾತಿಯೆಂಬುದೊಂದು ರಾಜಕೀಯ ಹಕ್ಕಿನ ಪ್ರಶ್ನೆ. ಅದನ್ನು ರಾಜಕೀಯ ಪಕ್ಷಗಳು ಬೇರೆ ಬೇರೆ ರೀತಿಗಳಲ್ಲಿ ನಿರ್ವಹಿಸುತ್ತವೆ. ವಾಸ್ತವದಲ್ಲಿ ಸಂವಿಧಾನ ನೀಡಿರುವ ಮೀಸಲಾತಿಯ ವ್ಯಾಖ್ಯಾನದಿಂದ ಹೊರತಾಗಿ ಜಾರಿಗೆ ಬಂದಿರುವುದು ‘ಇಡಬ್ಲ್ಯುಎಸ್‌ ಕೋಟಾ’ದ ಪದ್ಧತಿ. ಅದನ್ನು ವಿರೋಧಿಸಬೇಕಿದೆಯೇ ಹೊರತು ಸ್ಥಳೀಯರಿಗೆ ಮತ್ತು ಶೋಷಿತರಿಗೆ ಮೀಸಲಾತಿ ಬೇಕೆಂಬಇಂದಿನ ಹಕ್ಕೊತ್ತಾಯವನ್ನಲ್ಲ!

ಮಲ್ಲಿಗೆ ಸಿರಿಮನೆ,ಸಾಮಾಜಿಕ ಕಾರ್ಯಕರ್ತೆ

‘ಕನ್ನಡಪರ ನಿಲುವಿನ ಜನಪ್ರತಿನಿಧಿಗಳನ್ನೇ ಆರಿಸಿ’

ಕರ್ನಾಟಕದಲ್ಲಿ ಕನ್ನಡಕ್ಕೆ, ಕನ್ನಡಿಗರಿಗೆ ಆದ್ಯತೆ ಸಿಗಬೇಕು ಎಂಬುದು ನಿರ್ವಿವಾದ.ಕನ್ನಡ ಭಾಷೆ, ಕನ್ನಡಿಗರ ಅಸ್ಮಿತೆ ಮತ್ತು ಅಸ್ತಿತ್ವ ಉಳಿಯಬೇಕೆಂದರೆ ನಮ್ಮ ನೆಲದ ಸಂಪತ್ತು ಮತ್ತು ಸಂಪನ್ಮೂಲಗಳಲ್ಲಿ ನಮಗೆ ನ್ಯಾಯಯುತವಾದ ಪಾಲನ್ನು ಖಾತರಿಪಡಿಸುವಂತೆ ಇಲ್ಲಿನ ಉದ್ಯೋಗಗಳಲ್ಲಿ ಸ್ಥಳೀಯರಿಗೆ ಗಣನೀಯ ಪ್ರಮಾಣವನ್ನು ಮೀಸಲಿಡಲೇಬೇಕು.

ಆಯಾ ರಾಜ್ಯದ ಸ್ಥಳೀಯರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡುವ ಕುರಿತಂತೆ, ‘ಹಿಂದೂ, ಹಿಂದಿ, ಹಿಂದೂಸ್ತಾನ್’, ‘ಒಂದು ದೇಶ...’, ಕಾರ್ಯಸೂಚಿಗಳಲ್ಲಿ ಮುಳುಗಿರುವ ಬಿಜೆಪಿ ನೇತೃತ್ವದ ಒಕ್ಕೂಟ ಸರ್ಕಾರವನ್ನು ಎಚ್ಚರಿಸುವ ಕೆಲಸವನ್ನು ರಾಜ್ಯಗಳು ಮಾಡಬೇಕಿದೆ. ಈ ಸಂಬಂಧ ಸಂವಿಧಾನ ತಿದ್ದುಪಡಿ ಮಾಡುವಂತೆ ಎಲ್ಲ ರಾಜ್ಯಗಳು ಒಕ್ಕೂಟ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕು. ಕನ್ನಡಿಗರಿಗೆ ರಾಜ್ಯದಲ್ಲಿ ಕಡ್ಡಾಯವಾಗಿ ಉದ್ಯೋಗ ನೀಡುವಂತಹ ಕಾಯ್ದೆಗಳನ್ನು ತರುವ ಅಗತ್ಯವಿದೆ. ತಮ್ಮನ್ನು ಸಂಸತ್ತಿನಲ್ಲಿ ಪ್ರತಿನಿಧಿಸಲೆಂದು ಆರಿಸಿ ಕಳಿಸಿದ ಸಂಸದರು, ತಮ್ಮ ಕರ್ತವ್ಯ ಮರೆತು ಪಕ್ಷದ ಬಾಲಬಡುಕರಾದಾಗ, ಜನರು ಅವರನ್ನು ಗಟ್ಟಿದನಿಯಲ್ಲಿ ಪ್ರಶ್ನಿಸಬೇಕಿದೆ. ಹಾಗೆಯೇ ಈ ನಾಡಿನ ಮಾಧ್ಯಮಗಳು ಸಹ ಜನರ ದನಿಯಾಗಿ ಇದನ್ನು ನಿರಂತರವಾಗಿ ಮಾಡಬೇಕಿದೆ.

ತಮ್ಮ ಉದ್ಯೋಗಗಳನ್ನು ಕಾಪಾಡಿ ತಮಗೇ ಕೊಡಿಸುವ ಪಕ್ಷಗಳನ್ನೇ ಚುನಾವಣೆಯಲ್ಲಿ ಆಯ್ಕೆ ಮಾಡುವ ಪ್ರಬುದ್ಧತೆಯನ್ನು ಜನರು ಪ್ರದರ್ಶಿಸುವ ಸಮಯ ಬಂದಿದೆ. ಆಗ ಜನಪ್ರತಿನಿಧಿಗಳು ತಾವಾಗಿಯೇ ದಾರಿಗೆ ಬರುತ್ತಾರೆ.

ಸಂಜ್ಯೋತಿ ವಿ.ಕೆ.,ಚಿತ್ರ ನಿರ್ದೇಶಕಿ, ಬೆಂಗಳೂರು

‘ಸೌಲಭ್ಯ ಬೇಕು, ಕೆಲಸ ಕೊಡುವುದಿಲ್ಲ ಎಂದರೆ ಹೇಗೆ?’

ಸ್ಥಳೀಯರಿಗೆ ಉದ್ಯೋಗದಲ್ಲಿ ಮೀಸಲಾತಿಯನ್ನು ಶಾಸನದತ್ತವಾಗಿ ದೊರಕಿಸಿಕೊಡಬೇಕಾ ದುದು ರಾಜ್ಯ ಸರ್ಕಾರದ ಕರ್ತವ್ಯ. ಸಂವಿಧಾನಕ್ಕೆ ಅಗತ್ಯ ತಿದ್ದುಪಡಿ ತರುವ ಮೂಲಕ ಕನ್ನಡಿಗರಿಗೆ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ಉದ್ಯೋಗ ಸಿಗುವಂತೆ ನೋಡಿಕೊಳ್ಳಬೇಕಿದೆ. ಕೆಲವು ರಾಜ್ಯಗಳಲ್ಲಿ ಅಲ್ಲಿನ ಸ್ಥಳೀಯರಿಗೆ ಮೀಸಲಾತಿ ನೀಡುವ ಕಾನೂನು ಜಾರಿಗೆ ತರಲಾಗಿದೆ. ಈ ಮಾರ್ಗವನ್ನು ಕರ್ನಾಟಕವೂ ಅನುಸರಿಸಬೇಕು.

ಕೈಗಾರಿಕೆಗಳನ್ನು ತೆರೆಯಲು ಉದ್ಯಮಿಗಳು ರಾಜ್ಯಕ್ಕೆ ಬರುತ್ತಾರೆ. ಕೈಗಾರಿಕೆಗಾಗಿ ಜನರು ತಮ್ಮ ಭೂಮಿ ಬಿಟ್ಟುಕೊಡುತ್ತಾರೆ. ಉದ್ದಿಮೆಗೆ ಬೇಕಾದ ನೀರು ಮೊದಲಾದ ಸವಲತ್ತುಗಳನ್ನು ಸರ್ಕಾರ ಒದಗಿಸುತ್ತದೆ. ಜೊತೆಗೆ ಪರಿಸರವೂ ನಿಧಾನಕ್ಕೆ ಹಾನಿಗೆ ಒಳಗಾಗುತ್ತದೆ. ಭೂಮಿ, ನೀರು ಮತ್ತಿತರೆ ಸವಲತ್ತುಗಳನ್ನು ಕೊಟ್ಟು, ಪರಿಸರದ ಅಡ್ಡ ಪರಿಣಾಮಗಳನ್ನೂ ಎದುರಿಸುವ ಸ್ಥಳೀಯರಿಗೆ, ಆ ಕೈಗಾರಿಕೆಯಲ್ಲಿ ಕೆಲಸ ಮಾಡಲು ಅವಕಾಶ ನೀಡುವುದಿಲ್ಲ ಎಂದರೆ ಒಪ್ಪುವುದಾದರೂ ಹೇಗೆ?

ರಾಜಕೀಯ ಪಕ್ಷಗಳ ಇಚ್ಛಾಶಕ್ತಿ ಕೊರತೆ ಹಾಗೂ ಹೈಕಮಾಂಡ್ ಭಯ ಆವರಿಸಿರುವುದೇ ರಾಜಕೀಯ ಪಕ್ಷಗಳು ಈ ದಿಸೆಯಲ್ಲಿ ಕೆಲಸ ಮಾಡಲು ಹಿಂದೇಟು ಹಾಕುವುದಕ್ಕೆ ಕಾರಣ. ದೆಹಲಿಯವರು ಏನಂದುಕೊಳ್ಳುತ್ತಾರೋ ಎಂಬ ಭಯದಲ್ಲಿ ಕನ್ನಡಿಗರಿಗೆ ಮೀಸಲಾತಿ ಕೊಡಿಸುವ ಗೋಜಿಗೆ ಪಕ್ಷಗಳು ಮುಂದಾಗುತ್ತಿಲ್ಲ. ಉತ್ತರ ಪ್ರದೇಶದಲ್ಲಿ ಅಲ್ಲಿನ ಸ್ಥಳೀಯರಿಗೆ, ಬಿಹಾರದಲ್ಲಿ ಬಿಹಾರಿ ಭಾಷಿಕರಿಗೆ ಉದ್ಯೋಗ ಸಿಗಬೇಕು. ಹಾಗೆಯೇ ಕನ್ನಡದವರಿಗೆ ಕರ್ನಾಟಕದಲ್ಲಿ ಉದ್ಯೋಗ ಸಿಗಬೇಕು ಎಂಬುದರಲ್ಲಿ ಯಾವ ತಪ್ಪೂ ಇಲ್ಲ.

ಅರುಣ್ ಜಾವಗಲ್,ಕನ್ನಡಪರ ಹೋರಾಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT