ಮಂಗಳವಾರ, ಜುಲೈ 5, 2022
26 °C

ಅನುಭವ ಮಂಟಪ 1: ಒಬಿಸಿ ರಾಜಕೀಯ ಮೀಸಲು ಕಗ್ಗಂಟಿಗೆ ಪರಿಹಾರವೇನು?

ವಿ.ಎಸ್‌. ಸುಬ್ರಹ್ಮಣ್ಯ Updated:

ಅಕ್ಷರ ಗಾತ್ರ : | |

(ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ (ಒಬಿಸಿ) ರಾಜಕೀಯ ಮೀಸಲಾತಿ ನೀಡುವ ಮುನ್ನ ಮೂರು ಹಂತದ ಪರಿಶೀಲನೆ ನಡೆಸಿ, ರಾಜಕೀಯ ಹಿಂದುಳಿದಿರುವಿಕೆಯನ್ನು ಗುರುತಿಸುವುದು ಕಡ್ಡಾಯ ಎಂದು ಸುಪ್ರೀಂಕೋರ್ಟ್‌ ನಿರ್ದೇಶನ ನೀಡಿದೆ. ಇದರಿಂದ ಹಿಂದುಳಿದ ವರ್ಗಗಳ ರಾಜಕೀಯ ಮೀಸಲಾತಿಯ ಅಳಿವು– ಉಳಿವಿನ ಪ್ರಶ್ನೆ ಎದುರಾಗಿದೆ. ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳ ಪ್ರಾತಿನಿಧ್ಯದ ಭವಿಷ್ಯ ನಿರ್ಧರಿಸಲಿರುವ ಈ ಕಗ್ಗಂಟಿನ ಮೂಲ, ಪರಿಹಾರಕ್ಕೆ ಇರುವ ಮಾರ್ಗ, ಪರಿಣಾಮಗಳು ಕುರಿತ ಚರ್ಚೆ ‘ಪ್ರಜಾವಾಣಿ’ಯ ‘ಅನುಭವ ಮಂಟಪ’ದಲ್ಲಿ ಇಂದಿನಿಂದ ಆರಂಭ.)

ಅನುಭವ ಮಂಟಪ: ಒಬಿಸಿ ರಾಜಕೀಯ ಮೀಸಲು ಕಗ್ಗಂಟಿಗೆ ಪರಿಹಾರವೇನು?

ಭಾರತದ ಜನಸಂಖ್ಯೆಯಲ್ಲಿ ಹಿಂದುಳಿದ ವರ್ಗಗಳ ಪಾಲು ದೊಡ್ಡದು. ಆದರೆ, ರಾಜಕೀಯ ಕ್ಷೇತ್ರದಲ್ಲಿ ಹಿಂದುಳಿದ ವರ್ಗಗಳಿಗೆ ಈವರೆಗೂ ದಕ್ಕಿದ ಪಾಲು ಮಾತ್ರ ಕಡಿಮೆಯೇ. ಎಲ್ಲ ಹಂತದ ಚುನಾಯಿತ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳ ಜನಸಂಖ್ಯೆಗೆ ಸಮನಾದ ಪಾಲನ್ನು  ನೀಡಬೇಕೆಂಬ ಕೂಗು ದಶಕಗಳ ಕಾಲದಿಂದಲೂ ಅನುರಣಿಸುತ್ತಲೇ ಇದೆ. ವಿಧಾನಮಂಡಲ ಮತ್ತು ಸಂಸತ್ತಿನಲ್ಲಿ ಹಿಂದುಳಿದ ವರ್ಗಗಳಿಗೆ ಈವರೆಗೂ ಮೀಸಲಾತಿ ದೊರಕಿಲ್ಲ. ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯ ಭಾಗವಾಗಿ ಅಸ್ತಿತ್ವಕ್ಕೆ ಬಂದ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕೆಲವು ದಶಕಗಳಿಂದ ಈಚೆಗೆ ಹಿಂದುಳಿದ ವರ್ಗಗಳಿಗೆ ಶೇಕಡ 27ರಷ್ಟು ರಾಜಕೀಯ ಮೀಸಲಾತಿಯ ಅವಕಾಶ ಲಭಿಸಿದೆ. ಇದರಿಂದಾಗಿ ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ತಮ್ಮ ಸಂಖ್ಯೆಗೆ ಸಮನಾಗಿ ಅಲ್ಲದಿದ್ದರೂ, ಒಂದಷ್ಟು ಪ್ರಮಾಣದ ಮೀಸಲಾತಿ ಹಿಂದುಳಿದ ವರ್ಗಗಳಿಗೆ ದೊರಕಿದೆ. ರಾಜಕೀಯದ ವಿವಿಧ ಸ್ತರಗಳಲ್ಲಿ ಹಂತಹಂತವಾಗಿ ಮೇಲುಮೇಲುಕ್ಕೆ ಏರಲು ಈ ಮೀಸಲಾತಿ ಮೆಟ್ಟಿಲಾಗಿತ್ತು. ಆದರೆ, ಸ್ಥಳೀಯ ಸಂಸ್ಥೆಗಳಿಗೆ ಸೀಮಿತವಾಗಿ ಹಿಂದುಳಿದ ವರ್ಗಗಳಿಗೆ ದಕ್ಕಿದ್ದ ಈ ಮೀಸಲಾತಿಯೂ ಈಗ ಅಡಕತ್ತರಿಯಲ್ಲಿ ಸಿಲುಕಿದೆ.

‘ಆಯಾ ಸಮುದಾಯಗಳ ರಾಜಕೀಯ ಹಿಂದುಳಿದಿರುವಿಕೆಯನ್ನು ಮೂರು ಹಂತದ ಪರಿಶೀಲನೆ ಮೂಲಕ ಖಾತರಿಪಡಿಸುವವರೆಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವಂತಿಲ್ಲ’ ಎಂಬ ಸುಪ್ರೀಂಕೋರ್ಟ್‌ ನಿರ್ದೇಶನವು ದೇಶದಾದ್ಯಂತ ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳ ರಾಜಕೀಯ ಪ್ರಾತಿನಿಧ್ಯದ ಅಳಿವು– ಉಳಿವಿನ ಪ್ರಶ್ನೆಯನ್ನು ಸೃಷ್ಟಿಸಿದೆ. 2.83 ಲಕ್ಷಕ್ಕೂ ಹೆಚ್ಚು ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿ ಮತ್ತು ರಾಜಕೀಯ ಪ್ರಾತಿನಿಧ್ಯದ ರಕ್ಷಣೆಯ ಸವಾಲು ಎಲ್ಲ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತ ವ್ಯವಸ್ಥೆಯ ಮುಂದೆ ಇದೆ. ಈ ಬೆಳವಣಿಗೆಯು ರಾಜಕೀಯ ಪಕ್ಷಗಳನ್ನೂ ಚಿಂತೆಗೆ ದೂಡಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ರಾಜಕೀಯ ಮೀಸಲಾತಿ ನೀಡುವ ಅಂಶ ಸಂವಿಧಾನದಲ್ಲಿ ಆರಂಭದಲ್ಲೇ ಅಡಕವಾಗಿತ್ತು. ಸ್ಥಳೀಯ ಸಂಸ್ಥೆಗಳಿಂದ ಸಂಸತ್ತಿನವರೆಗೆ ಎಲ್ಲ ಹಂತಗಳಲ್ಲೂ ಈ ಎರಡೂ ಸಮುದಾಯಗಳಿಗೆ ರಾಜಕೀಯ ಮೀಸಲಾತಿ ಇದೆ. ಆದರೆ, ಹಿಂದುಳಿದ ವರ್ಗಗಳಿಗೆ ಸ್ವಾತಂತ್ರ್ಯಾ ನಂತರದ ಹಲವು ದಶಕಗಳವರೆಗೂ ರಾಜಕೀಯ ಮೀಸಲಾತಿ ಸೌಲಭ್ಯ ಇರಲಿಲ್ಲ. ಸಂವಿಧಾನದ 73 ಮತ್ತು 74ನೇ ತಿದ್ದುಪಡಿಯೊಂದಿಗೆ ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳ ಜನರಿಗೆ ರಾಜಕೀಯ ಮೀಸಲಾತಿ ನೀಡಲಾಯಿತು. ಕ್ರಮೇಣ ಈ ಸೌಲಭ್ಯವು ನಗರ ಸ್ಥಳೀಯ ಸಂಸ್ಥೆಗಳಲ್ಲೂ ವಿಸ್ತರಣೆಯಾಯಿತು. ಕೆಲವೇ ದಶಕಗಳಲ್ಲಿ ಹಿಂದುಳಿದ ವರ್ಗಗಳ ಜನರು ರಾಜಕೀಯವಾಗಿ ಬಲಗೊಳ್ಳಲು ಮತ್ತು ಹೊಸ ತಲೆಮಾರಿನ ನಾಯಕತ್ವ ರೂಪುಗೊಳ್ಳಲು ಮೀಸಲಾತಿ ಕಾರಣವಾಯಿತು.

ದೀರ್ಘ ಕಾಲದ ವಿವಾದ: ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿ ನೀಡುವುದನ್ನು ಹಿಂದೆಯೂ ಹಲವರು ಪ್ರಶ್ನಿಸಿದ್ದರು. ಕರ್ನಾಟಕದ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳಲ್ಲಿ ಮೀಸಲಾತಿ ನೀಡಿರುವುದನ್ನು ಪ್ರಶ್ನಿಸಿ ಕೆ. ಕೃಷ್ಣಮೂರ್ತಿ ಎಂಬುವವರು ಸುಪ್ರೀಂಕೋರ್ಟ್‌ವರೆಗೂ ಕಾನೂನು ಹೋರಾಟ ನಡೆಸಿದ್ದರು. ಆಗ, ಮೀಸಲಾತಿಯನ್ನು ಪುರಸ್ಕರಿಸಿ 2010ರ ಮೇ 11ರಂದು ತೀರ್ಪು ನೀಡಿದ್ದ ಸುಪ್ರೀಂಕೋರ್ಟ್‌ ಸಂವಿಧಾನ ಪೀಠ, ‘ಹಿಂದುಳಿದ ವರ್ಗಗಳಲ್ಲಿರುವ ಜಾತಿಗಳ ಜನರ ರಾಜಕೀಯ ಹಿಂದುಳಿದಿರುವಿಕೆಯನ್ನು ಗುರುತಿಸಲು ನಿಖರ ಅಂಕಿಅಂಶಗಳ ಆಧಾರದಲ್ಲಿ ತನಿಖೆ ನಡೆಸಿ, ನಿರ್ಧಾರಕ್ಕೆ ಬರುವ ಹೊಣೆಗಾರಿಕೆ ಕಾರ್ಯಾಂಗದ ಮೇಲಿದೆ’ ಎಂದು ಹೇಳಿತ್ತು.

ಆ ಬಳಿಕ ಹಿಂದುಳಿದ ವರ್ಗಗಳ ಮೀಸಲಾತಿಯ ವಿಚಾರ ತಣ್ಣಗೆ ಇತ್ತು. ಮಹಾರಾಷ್ಟ್ರ ಚುನಾವಣಾ ಆಯೋಗವು ಅಲ್ಲಿನ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ 2018ರ ಜುಲೈ ಮತ್ತು 2020ರ ಫೆಬ್ರುವರಿಯಲ್ಲಿ ಹೊರಡಿಸಿದ್ದ ಅಧಿಸೂಚನೆಗಳಲ್ಲಿ ಕೆಲವು ಜಿಲ್ಲೆಗಳಲ್ಲಿ ಒಟ್ಟು ಮೀಸಲಾತಿಯ ಪ್ರಮಾಣ ಶೇಕಡ 50ರಷ್ಟನ್ನು ಮೀರಿತ್ತು.

ಅದನ್ನು ಪ್ರಶ್ನಿಸಿ ವಿಕಾಸ್‌ ಕೃಷ್ಣರಾವ್‌ ಗಾವಳಿ ಎಂಬುವವರು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ಪೂರ್ಣಗೊಳಿಸಿ 2021ರ ಮಾರ್ಚ್‌ 4ರಂದು ತೀರ್ಪು ನೀಡಿದ್ದ ಸುಪ್ರೀಂಕೋರ್ಟ್‌ನ ತ್ರಿಸದಸ್ಯ ಪೀಠ, ‘ಹಿಂದುಳಿದ ವರ್ಗಗಳಲ್ಲಿನ ಸಮುದಾಯಗಳ ರಾಜಕೀಯ ಹಿಂದುಳಿದಿರುವಿಕೆಯನ್ನು ನಿರ್ಧರಿಸಲು ಮೂರು ಹಂತದ ಪರಿಶೀಲನೆ ನಡೆಸಿದ ಬಳಿಕವೇ ಆ ಸಮುದಾಯಗಳಿಗೆ (ಒಬಿಸಿ) ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಮೀಸಲಾತಿ ಕಲ್ಪಿಸಬೇಕು’ ಎಂಬ ತೀರ್ಮಾನ ನೀಡಿತ್ತು.

ಮಹಾರಾಷ್ಟ್ರದಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಎದುರಾದಾಗ ಪುನಃ ಒಬಿಸಿ ಮೀಸಲಾತಿಯ ವಿಷಯ ಮುನ್ನೆಲೆಗೆ ಬಂದಿತು. ಮೂರು ಹಂತದ ಪರಿಶೀಲನೆಯ ಮೂಲಕ ರಾಜಕೀಯ ಹಿಂದುಳಿದಿರುವಿಕೆಯನ್ನು ಖಾತರಿಪಡಿಸದೇ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವುದನ್ನು ಪ್ರಶ್ನಿಸಿ ರಾಹುಲ್‌ ರಮೇಶ್‌ ವಾಘ್‌ ಎಂಬುವವರು ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್‌ 2021ರ ಅಕ್ಟೋಬರ್‌ 21ರಂದು ತಿರಸ್ಕರಿಸಿತ್ತು. ಅದನ್ನು ಪ್ರಶ್ನಿಸಿ ಅರ್ಜಿದಾರರು ಸುಪ್ರೀಂಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ ಸಲ್ಲಿಸಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್‌, ದಿನೇಶ್‌ ಮಾಹೇಶ್ವರಿ ಮತ್ತು ಸಿ.ಟಿ. ರವಿಕುಮಾರ್‌ ಅವರನ್ನೊಳಗೊಂಡ ಪೀಠ, ‘ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಿ, ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಯಾವುದೇ ರಾಜ್ಯ ಸರ್ಕಾರ ಅಥವಾ ಕೇಂದ್ರಾಡಳಿತ ಪ್ರದೇಶವು ಬಯಸಿದರೆ ಈ ವಿಚಾರದಲ್ಲಿ ಮೂರು ಹಂತದ ಪರಿಶೀಲನೆ ಪೂರ್ಣಗೊಳಿಸುವುದು ಕಡ್ಡಾಯ. ಒಂದು ವೇಳೆ ಮೂರು ಹಂತದ ಪರಿಶೀಲನೆಯ ಅಗತ್ಯಗಳನ್ನು ಪೂರೈಸಲು ರಾಜ್ಯ ಸರ್ಕಾರ ಅಥವಾ ಕೇಂದ್ರಾಡಳಿತ ಪ್ರದೇಶವು ವಿಫಲವಾದರೆ, ಹಿಂದುಳಿದ ವರ್ಗಗಳಿಗೆ ಮೀಸಲಾದ ಸ್ಥಾನಗಳನ್ನು ‘ಸಾಮಾನ್ಯ’ ಎಂದು ಘೋಷಿಸಿ ಚುನಾವಣೆ ನಡೆಸಬೇಕು. ಯಾವುದೇ ಕಾರಣಕ್ಕೂ ನಿಗದಿತ ಅವಧಿಯ ಬಳಿಕ ಚುನಾವಣೆ ಮುಂದೂಡುವಂತಿಲ್ಲ’ ಎಂದು 2022ರ ಜನವರಿ 19ರಂದು ನಿರ್ದೇಶನ ನೀಡಿದೆ.

‘ಸ್ಥಳೀಯ ಸಂಸ್ಥೆಗಳಲ್ಲಿ ಒಬಿಸಿ ಮೀಸಲಾತಿ ನಿಗದಿಪಡಿಸುವಾಗ ಹಿಂದುಳಿದಿರುವಿಕೆಯನ್ನು ನಿರ್ಧರಿಸಲು ಪ್ರತ್ಯೇಕ ಆಯೋಗವೊಂದನ್ನು ನೇಮಿಸಬೇಕು. ಈ ಆಯೋಗವು ವಿಸ್ತೃತವಾದ ಪರಿಶೀಲನೆ ನಡೆಸಿದ ಬಳಿಕ ನೀಡುವ ವರದಿ ಆಧರಿಸಿ, ಪ್ರತಿ ಸ್ಥಳೀಯ ಸಂಸ್ಥೆಯನ್ನು ಒಂದು ಘಟಕವಾಗಿ ಪರಿಗಣಿಸಿ ಮೀಸಲಾತಿ ನಿಗದಿಪಡಿಸಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ನೀಡುವ ಮೀಸಲಾತಿಯ ಒಟ್ಟು ಪ್ರಮಾಣವು ಶೇಕಡ 50
ರಷ್ಟನ್ನು ಮೀರುವಂತಿಲ್ಲ’ ಎಂದು ವಿಕಾಸ್‌ ಕೃಷ್ಣರಾವ್‌ ಗಾವಳಿ ಪ್ರಕರಣದಲ್ಲಿ ನೀಡಿರುವ ಮೂರು ಹಂತದ ಪರಿಶೀಲನಾ ವಿಧಾನವನ್ನು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕಡ್ಡಾಯವಾಗಿ ಪಾಲಿಸಬೇಕು ಎಂದು ಸುಪ್ರೀಂಕೋರ್ಟ್‌ ಹೇಳಿದೆ.

ರಾಜ್ಯದಲ್ಲೂ ಬಿಕ್ಕಟ್ಟು ಸೃಷ್ಟಿ: ರಾಜ್ಯದಲ್ಲಿ ಜಿಲ್ಲಾ ಪಂಚಾಯಿತಿಗಳು ಮತ್ತು ತಾಲ್ಲೂಕು ಪಂಚಾಯಿತಿಗಳ ಚುನಾಯಿತ ಸದಸ್ಯರ ಅವಧಿ ಪೂರ್ಣಗೊಂಡು ಹತ್ತು ತಿಂಗಳು ಕಳೆದಿದೆ. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಚುನಾಯಿತ ಸದಸ್ಯರ ಅವಧಿ ಪೂರ್ಣಗೊಂಡು ಒಂದೂವರೆ ವರ್ಷ ಆಗಿದೆ. ಸರ್ಕಾರದ ನಿರಾಸಕ್ತಿ, ವಾರ್ಡ್‌ವಾರು ಮೀಸಲಾತಿ ನಿಗದಿಯಲ್ಲಿನ ಲೋಪ, ವಾರ್ಡ್‌ಗಳ ಮರು ವಿಂಗಡಣೆಯಲ್ಲಿನ ದೋಷಗಳ ಕಾರಣದಿಂದ ಈ ಎಲ್ಲ ಚುನಾವಣೆಗಳೂ ವಿಳಂಬವಾಗಿದ್ದವು. ಈಗ ಅವುಗಳ ಜತೆಗೆ ಚುನಾವಣೆ ವಿಳಂಬವಾಗಲು ಒಬಿಸಿ ಮೀಸಲಾತಿಯ ಬಿಕ್ಕಟ್ಟು ಸೇರಿಕೊಂಡಿದೆ.

ಸುಪ್ರೀಂಕೋರ್ಟ್‌ ನಿರ್ದೇಶನ ನೀಡಿ ಒಂದೂವರೆ ತಿಂಗಳು ಕಳೆದರೂ ಈ ವಿಚಾರದಲ್ಲಿ ರಾಜ್ಯ ಸರ್ಕಾರದ ಸ್ಪಷ್ಟವಾದ ಹೆಜ್ಜೆಗಳನ್ನು ಇಟ್ಟಿಲ್ಲ. ಚುನಾವಣೆ ಮುಂದೂಡುವ ಮಾತುಗಳಷ್ಟೇ ಇಲ್ಲಿಯವರೆಗೆ ಹೇಳಿದ್ದ ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ, ಕರ್ನಾಟಕ ಸರ್ಕಾರ ನಡೆಸಿದ್ದ ಸಾಮಾಜಿಕ, ಶೈಕ್ಷಣಿಕ ಗಣತಿಯ ದತ್ತಾಂಶಗಳನ್ನು ಈ ಉದ್ದೇಶಕ್ಕೆ ಬಳಸಬಹುದೇ ಎಂಬ ಬಗ್ಗೆ ಕಾನೂನು ತಜ್ಞರ ಜತೆ ಚರ್ಚಿಸುವುದಾಗಿ ಮಾ.8ರಂದು ಹೇಳಿದ್ದಾರೆ. ಚುನಾವಣೆ ಮುಂದೂಡುವ ಪ್ರಯತ್ನವೂ ಸುಪ್ರೀಂಕೋರ್ಟ್‌ನಲ್ಲಿ ಹಿನ್ನಡೆ ಅನುಭವಿಸುವ ಸಾಧ್ಯತೆ ಇದೆ. ಈ ಕಾರಣಕ್ಕಾಗಿಯೇ ತಮಿಳುನಾಡು ಸರ್ಕಾರವು ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸದೇ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಪೂರ್ಣಗೊಳಿಸಿದೆ. ಅಲ್ಲಿ ಹಿಂದುಳಿದ ವರ್ಗಗಳ ಜನರೇ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಒಬಿಸಿ ಜನರಿಗೆ ರಾಜಕೀಯವಾಗಿ ಹೆಚ್ಚು ನಷ್ಟವಾಗಿಲ್ಲ ಎಂಬ ಅಭಿಪ್ರಾಯವಿದೆ.

ಸದ್ಯ ರಾಜ್ಯ ಸರ್ಕಾರದ ಮುಂದೆ ಇರುವುದು ಎರಡೇ ಆಯ್ಕೆ. ಸುಪ್ರೀಂಕೋರ್ಟ್‌ ನಿರ್ದೇಶನದಂತೆ ಪ್ರತ್ಯೇಕ ಆಯೋಗವೊಂದನ್ನು ನೇಮಿಸಿ ಮೂರು ಹಂತದ ಪರಿಶೀಲನೆ ನಡೆಸಿ, ಹಿಂದುಳಿದ ವರ್ಗಗಳ ರಾಜಕೀಯ ಮೀಸಲಾತಿಯನ್ನು ಖಾತರಿಪಡಿಸುವುದು ಮೊದಲ ಆಯ್ಕೆ. ಇದನ್ನು ಆಯ್ದುಕೊಂಡರೆ ಹೆಚ್ಚು ವಿಳಂಬ ಮಾಡದೇ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಹಿಂದುಳಿದ ವರ್ಗಗಳಿಗೆ ಮೀಸಲಾತಿ ಒದಗಿಸದೇ ಚುನಾವಣೆ ನಡೆಸುವುದು ಎರಡನೇ ಆಯ್ಕೆ. ಆದರೆ, ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗಷ್ಟೇ ಮೀಸಲಾತಿ ಕಲ್ಪಿಸಿ, ಉಳಿದ ಸ್ಥಾನಗಳನ್ನು ‘ಸಾಮಾನ್ಯ’ ಎಂದು ಘೋಷಿಸಿದರೆ ಹಿಂದುಳಿದ ವರ್ಗಗಳ ಜನರಿಗೆ ರಾಜಕೀಯವಾಗಿ ದೊಡ್ಡ ಪೆಟ್ಟು ಬೀಳುವುದು ನಿಶ್ಚಿತ.

––––

 
ತ್ವರಿತ ಪರಿಹಾರ ಸಾಧ್ಯವೆ?

ಹಿಂದುಳಿದ ವರ್ಗಗಳ ಮೀಸಲಾತಿಗೆ ಸಂಬಂಧಿಸಿದ ಬಿಕ್ಕಟ್ಟು ಪರಿಹಾರಕ್ಕೆ ದೀರ್ಘ ಸಮಯವೇನೂ ಬೇಕಿಲ್ಲ ಎಂಬ ವಾದ ಕಾನೂನು ತಜ್ಞರ ವಲಯದಲ್ಲಿದೆ. ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಈಗಾಗಲೇ ನಡೆಸಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯಲ್ಲಿನ (ಜಾತಿ ಗಣತಿ) ರಾಜಕೀಯ ಪ್ರಾತಿನಿಧ್ಯದ ಕುರಿತ ಅಂಕಿಅಂಶಗಳೂ ಇವೆ. ಈ ಮಾಹಿತಿಯನ್ನೇ ಬಳಸಿಕೊಂಡು ಮೂರು ಹಂತದ ಪರಿಶೀಲನೆ ಪೂರ್ಣಗೊಳಿಸಬಹುದು ಎಂದು ವಿರೋಧ ಪಕ್ಷಗಳ ನಾಯಕರೂ ಸೇರಿದಂತೆ ಹಲವರು ಪ್ರತಿಪಾದಿಸಿದ್ದಾರೆ.

ರಾಜ್ಯಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಯೂ ಸರ್ಕಾರದ ಬಳಿಯೇ ಇರುತ್ತದೆ. ಪ್ರತ್ಯೇಕ ಆಯೋಗವೊಂದನ್ನು ನೇಮಿಸಿ, ನಿರ್ದಿಷ್ಟ ಕಾಲಮಿತಿಯೊಳಗೆ ಪ್ರಕ್ರಿಯೆ ಪೂರ್ಣಗೊಳಿಸುವ ಅವಕಾಶ ಇದೆ. ಆದರೆ, ಸರ್ಕಾರ ಆ ದಿಸೆಯಲ್ಲಿ ಹೆಜ್ಜೆ ಇಟ್ಟೀತೆ ಎಂಬ ಪ್ರಶ್ನೆ ಬಹುತೇಕರದ್ದು.

ಆಡಳಿತ ವಿರೋಧಿ ಅಲೆಯ ಭಯ?

ರಾಜ್ಯದ ಬಿಜೆಪಿ ಸರ್ಕಾರಕ್ಕೆ ಆಡಳಿತ ವಿರೋಧಿ ಅಲೆಯ ಭಯವಿದೆ. ಕೆಲವು ತಿಂಗಳ ಹಿಂದಷ್ಟೇ ನಡೆದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದೆ. ವಿಧಾನಸಭಾ ಚುನಾವಣೆ ಇನ್ನು ಒಂದು ವರ್ಷವಷ್ಟೇ ಬಾಕಿ ಇದೆ. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಬಿಬಿಎಂಪಿ ಚುನಾವಣೆ ನಡೆಸಿದರೆ ಪಕ್ಷಕ್ಕೆ ಹಿನ್ನಡೆಯಾಗಬಹುದು. ಅದರಿಂದ ವಿಧಾನಸಭಾ ಚುನಾವಣೆಯ ಮೇಲೆ ಪ್ರತಿಕೂಲ ಪರಿಣಾಮಗಳು ಆಗಬಹುದು ಎನ್ನುವ ಭಯ ಬಿಜೆಪಿ ನಾಯಕರನ್ನು ಕಾಡುತ್ತಿದೆ. ಇದೇ ಕಾರಣಕ್ಕಾಗಿ ಈ ಅಂಶವನ್ನು ಮುಂದಿಟ್ಟು, ಚುನಾವಣೆ ಮುಂದೂಡುವ ತಂತ್ರವನ್ನೇ ಅವರು ಆಯ್ದುಕೊಳ್ಳುವ ಸಾಧ್ಯತೆ ಹೆಚ್ಚು ಎಂಬ ಮಾತು ರಾಜಕೀಯ ವಲಯದಲ್ಲಿ ದಟ್ಟವಾಗಿದೆ.

ಮುಂದಿನ ದಾರಿ ಏನು?

ಈ ವಿಷಯದಲ್ಲಿ ಸರ್ಕಾರದ ಮುಂದೆ ಹೆಚ್ಚಿನ ಮಾರ್ಗೋಪಾಯಗಳು ಇಲ್ಲ. ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಇರುವ ರಾಜಕೀಯ ಮೀಸಲಾತಿಯನ್ನು ರಕ್ಷಿಸುವುದು ಅಥವಾ ಈ ಸಮುದಾಯಗಳು ರಾಜಕೀಯ ಮೀಸಲಾತಿಯಿಂದ ವಂಚಿತವಾಗುವಂತೆ ಮಾಡುವುದು ಎರಡೂ ಸರ್ಕಾರದ ನಡೆಯನ್ನೇ ಆಧರಿಸಿವೆ.

ಮಧ್ಯಪ್ರದೇಶ ಸರ್ಕಾರವು, ಹಿಂದುಳಿದ ವರ್ಗಗಳ ಮೀಸಲಾತಿ ಬಿಕ್ಕಟ್ಟು ಇತ್ಯರ್ಥ ಆಗುವವರೆಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಮುಂದೂಡುವುದಕ್ಕೆ ಅವಕಾಶ ಕಲ್ಪಿಸುವ ಮಸೂದೆಗಳನ್ನು ಮಂಡಿಸಿ ಒಪ್ಪಿಗೆ ಪಡೆದಿದೆ. ಮಹಾರಾಷ್ಟ್ರ ಸರ್ಕಾರ, ತನ್ನ ಬಳಿ ಲಭ್ಯವಿದ್ದ ಮಾಹಿತಿಗಳ ಆಧಾರದಲ್ಲಿ ವರದಿಯೊಂದನ್ನು ಸಿದ್ಧಪಡಿಸಿತ್ತು. ಅದನ್ನು ಬಳಸಿಕೊಂಡು ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಖಾತರಿಪಡಿಸಲು ನಡೆಸಿದ್ದ ಪ್ರಯತ್ನವನ್ನು ಸುಪ್ರೀಂಕೋರ್ಟ್‌ ತಿರಸ್ಕರಿಸಿದೆ. ಆ ಬಳಿಕ ಮಧ್ಯಪ್ರದೇಶದ ಹಾದಿಯನ್ನೇ ಅನುಸರಿಸಿದ ಮಹಾರಾಷ್ಟ್ರ ಸರ್ಕಾರ, ಮೀಸಲಾತಿ ಬಿಕ್ಕಟ್ಟು ಪರಿಹಾರವಾಗುವವರೆಗೂ ಚುನಾವಣೆ ಮುಂದೂಡಲು ಅವಕಾಶ ಕಲ್ಪಿಸುವ ಮಸೂದೆಯನ್ನು ವಿಧಾನಮಂಡಲದಲ್ಲಿ ಮಂಡಿಸಿ, 2022ರ ಮಾ.7ರಂದು ಅಂಗೀಕಾರ ಪಡೆದಿದೆ.

ಹಿಂದುಳಿದ ವರ್ಗಗಳು ಹೊಂದಿರುವ ರಾಜಕೀಯ ಮೀಸಲಾತಿಯನ್ನು ರಕ್ಷಿಸಲು ಈಗ ರಾಜ್ಯ ಸರ್ಕಾರ ಯಾವ ಹೆಜ್ಜೆ ಇಡುತ್ತದೆ ಎಂಬ ಕುತೂಹಲ ಮೂಡಿದೆ. ಅದರ ಜತೆಯಲ್ಲೇ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಬಿಬಿಎಂಪಿ ಚುನಾವಣೆಗಳನ್ನು ನಡೆಸಬಹುದೆ? ಇಲ್ಲವೆ? ಎಂಬ ಪ್ರಶ್ನೆಗಳೂ ಬಲವಾಗಿವೆ. ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸದೇ ಚುನಾವಣೆ ನಡೆಸುವುದಕ್ಕೆ ಸರ್ಕಾರ ಮುಂದಾದರೆ, ರಾಜ್ಯದಲ್ಲಿ ಹಿಂದುಳಿದ ವರ್ಗಗಳ ರಾಜಕೀಯ ನಾಯಕತ್ವಕ್ಕೆ ಪ್ರಬಲ ಹೊಡೆತ ಬೀಳಲಿದೆ. ಅದು ಈ ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಯ ಮೇಲೂ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ.

ಚುನಾವಣೆಯನ್ನು ವಿಳಂಬ ಮಾಡುವುದು ಕೂಡ ಉತ್ತಮ ಆಯ್ಕೆಯಲ್ಲ. ಇದರಿಂದ ಅಧಿಕಾರ ವಿಕೇಂದ್ರೀಕರಣದ ಉದ್ದೇಶವೇ ಮಣ್ಣುಪಾಲಾಗುತ್ತದೆ. ಎಲ್ಲ ಅಧಿಕಾರವೂ ಶಾಸಕರ ಕೈಸೇರಿ ಸ್ಥಳೀಯ ಸಂಸ್ಥೆಗಳು ಬಲಹೀನವಾಗುತ್ತವೆ. ಹೊಸ ತಲೆಮಾರಿನ ನಾಯಕತ್ವ ಸೃಷ್ಟಿಗೆ ಅವಕಾಶವೇ ಇಲ್ಲದಂತಾಗುತ್ತದೆ. ಒಟ್ಟಿನಲ್ಲಿ ಸರ್ಕಾರದ ಪಾಲಿಗೆ ಈ ಬಿಕ್ಕಟ್ಟನ್ನು ಪರಿಹರಿಸುವುದು ತಂತಿಯ ಮೇಲಿನ ನಡಿಗೆ. ಹಿಂದುಳಿದ ವರ್ಗಗಳ ಜನರ ರಾಜಕೀಯ ಪ್ರಾತಿನಿಧ್ಯದ ಭವಿಷ್ಯದ ಮೇಲೂ ತೂಗುಗತ್ತಿ ನೇತಾಡುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು