ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ವಿಟರ್‌ ಖರೀದಿ: ‘ಅನಿರ್ಬಂಧಿತ ಅಭಿವ್ಯಕ್ತಿ’ಕಾರ್ಯಸಾಧುವೇ?

Last Updated 26 ಏಪ್ರಿಲ್ 2022, 19:31 IST
ಅಕ್ಷರ ಗಾತ್ರ

‘ಅನಿರ್ಬಂಧಿತ ಅಭಿವ್ಯಕ್ತಿ ತಾಣ’ವಾಗಿ ಟ್ವಿಟರ್‌ ಅನ್ನು ರೂಪಿಸುವ ಭರವಸೆಯನ್ನು ಇಲಾನ್‌ ಮಸ್ಕ್‌ ನೀಡಿದ್ದಾರೆ. ಟ್ವಿಟರ್‌ನ ಮಟ್ಟಿಗೆ ಇದು ಹೊಸ ಭರವಸೆ ಏನಲ್ಲ. ದಶಕದ ಹಿಂದೆ ಟ್ವಿಟರ್‌ ಆರಂಭವಾದಾಗ ‘ಮುಕ್ತ ಮಾತಿನ ಘಟಕ’ ಎಂದು ಅದರ ಕಾರ್ಯನಿರ್ವಾಹಕರು ಬಣ್ಣಿಸಿದ್ದರು. ಆದರೆ, ನಂತರದ ದಿನಗಳಲ್ಲಿ ಇದು ಕಾರ್ಯರೂಪಕ್ಕೆ ಬರಲಿಲ್ಲ.

ಕೆಲವು ದೇಶಗಳ ‘ದಮನಕಾರಿ ಸರ್ಕಾರಗಳು’ ಟ್ವಿಟರ್‌ ಬಳಕೆದಾರರ ಮೇಲೆ ಮುಗಿಬಿದ್ದ ಉದಾಹರಣೆಗಳು ಇವೆ. ವಿಶೇಷವಾಗಿ, ‘ಅರಬ್‌ ವಸಂತ’ಕ್ಕಾಗಿ (2010ನೇ ದಶಕದ ಆರಂಭದಲ್ಲಿ ಅರಬ್‌ ಪ್ರದೇಶದಲ್ಲಿ ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆಗಳು, ಬಂಡಾಯ ಮತ್ತು ಸಶಸ್ತ್ರ ಹೋರಾಟವನ್ನು ಅರಬ್‌ ವಸಂತ ಎಂದು ಕರೆಯಲಾಗಿದೆ) ಕೆಲಸ ಮಾಡಿದ್ದ ಟ್ವಿಟರ್‌ ಬಳಕೆದಾರ ಕಾರ್ಯಕರ್ತರನ್ನು ಗುರಿ ಮಾಡಿಕೊಳ್ಳಲಾಗಿತ್ತು. ಟ್ವಿಟರ್‌ ಮತ್ತು ಸಾಮಾಜಿಕ ಜಾಲತಾಣಗಳ ಇತರ ವೇದಿಕೆಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ ಮಹಿಳೆಯರಿಗೆ ಅತ್ಯಂತ ತುಚ್ಛವಾದ ರೀತಿಯಲ್ಲಿ ನಿರಂತರವಾಗಿ ಕಿರುಕುಳ ನೀಡಲಾಗಿತ್ತು ಎಂಬುದರ ಬಗ್ಗೆ ಅಮೆರಿಕದ ಪತ್ರಕರ್ತೆ ಅಮಂಡಾ ಹೆಸ್‌ ಅವರು 2014ರಲ್ಲಿ ವಿವರವಾದ ವರದಿ ಪ್ರಕಟಿಸಿದ್ದರು.

ನಂತರದ ವರ್ಷಗಳಲ್ಲಿ ಟ್ವಿಟರ್‌ ಹಲವು ಪಾಠಗಳನ್ನು ಕಲಿತುಕೊಂಡಿದೆ. ಸಾಮಾಜಿಕ ಜಾಲತಾಣ ವೇದಿಕೆಗಳನ್ನು ಅನಿಯಂತ್ರಿತವಾಗಿ ಬಿಟ್ಟರೆ ಆಗುವ ಅಪಾಯಗಳೇನು ಎಂಬುದನ್ನು ಟ್ವಿಟರ್‌ ಅರಿತುಕೊಂಡಿದೆ. ಹಿಂಸಾತ್ಮಕ ಬೆದರಿಕೆಗಳು, ಕುಮ್ಕಕ್ಕಿಗೆ ಕಾರಣವಾಗುವ ದ್ವೇಷ ಭಾಷಣಗಳು, ಚುನಾವಣೆಯ ಕಾರಣಕ್ಕೆ ಅಥವಾ ಸಾರ್ವಜನಿಕ ಆರೋಗ್ಯವನ್ನು ನಿರ್ಲಕ್ಷಿಸುವ ತಪ್ಪು ಮಾಹಿತಿಯ ಟ್ವೀಟ್‌ಗಳ ಜತೆಯಲ್ಲಿ ತಮ್ಮ ಜಾಹೀರಾತು ಪ್ರಕಟವಾಗುವುದನ್ನು ಹಲವು ಮಹತ್ವದ ಕಂಪನಿಗಳು ಬಯಸುವುದಿಲ್ಲ ಎಂಬುದು ಇದರಲ್ಲಿ ಬಹಳ ಮುಖ್ಯವಾದ ಪಾಠ.

‘ಮಸ್ಕ್‌ ನೀಡಿರುವ ಮುಕ್ತ ಮಾತಿನ ಭರವಸೆಯು ಕೆಟ್ಟದ್ದೇ. ಸ್ವಯಂಚಾಲಿತ ವ್ಯವಸ್ಥೆ ಮತ್ತು ಮಾನವ ಪರಿಶೀಲನೆ ಇಲ್ಲದೆ ಟ್ವಿಟರ್‌ನಂತಹ ವೇದಿಕೆಯನ್ನು ಬಿಟ್ಟುಬಿಟ್ಟರೆ ಅದು ಕೊಚ್ಚೆಗುಂಡಿಯ ರೀತಿ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ’ ಎಂಬುದು ನ್ಯೂಯಾರ್ಕ್‌
ವಿಶ್ವವಿದ್ಯಾಲಯದ ವ್ಯಾಪಾರ ಮತ್ತು ಮಾನವ ಹಕ್ಕುಗಳ ಕೇಂದ್ರದ ಉಪ‍ ನಿರ್ದೇಶಕ ಪಾಲ್‌ ಬ್ಯಾರೆಟ್‌ ಅವರ ಅಭಿಪ‍್ರಾಯ.

ಭಯೋತ್ಪಾದಕರು ತಯಾರಿಸಿದ ವಿಡಿಯೊಗಳನ್ನು ಯೂಟ್ಯೂಬ್‌ನಲ್ಲಿ 2015ರಲ್ಲಿ ಪ್ರಸಾರ ಮಾಡಿದ ಬಳಿಕ ಟೊಯೊಟಾ ಮತ್ತು ಎನ್‌ಐಝರ್‌ ಬಷ್‌ನಂತಹ ಕಂಪನಿಗಳು ತಮ್ಮ ಜಾಹೀರಾತುಗಳನ್ನು ಹಿಂದಕ್ಕೆ ಪಡೆದವು. ಇದರಿಂದ, ಗೂಗಲ್‌ ತಕ್ಷಣವೇ ಪಾಠ ಕಲಿಯಿತು ಎಂಬ ಅಂಶವನ್ನು ಬ್ಯಾರೆಟ್‌ ನೆನಪಿಸಿಕೊಂಡಿದ್ದಾರೆ.

ಟ್ವಿಟರ್‌ನ ಸ್ಥಾಪಕ ಮತ್ತು ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಾಕ್‌ ಡೋರ್ಸಿ ಅವರು,ಸಂಭಾಷಣೆಯು ಅನಾರೋಗ್ಯಕರ ಹಂತಕ್ಕೆ ತಲುಪಿದೆ ಎಂಬುದು ಮನವರಿಕೆ ಆದ ಬಳಿಕ ಸಂಭಾಷಣೆಯನ್ನು ಆರೋಗ್ಯಕರಗೊಳಿಸಲು ಕೆಲವು ವರ್ಷ ಕೆಲಸ ಮಾಡಿದ್ದರು.

‘ರಿಪೋರ್ಟ್‌ ಅಬ್ಯೂಸ್‌’ (ನಿಂದನೆ ವರದಿ) ವ್ಯವಸ್ಥೆಯನ್ನು ಜಾರಿಗೆ ತಂದ ಆರಂಭಿಕ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಟ್ವಿಟರ್‌ ಕೂಡ ಒಂದು. ಅತ್ಯಾಚಾರ ಎಸಗಿ ಹತ್ಯೆ ಮಾಡಲಾಗುವುದು ಎಂದು ಬ್ರಿಟನ್‌ನ ಸಂಸದೆ ಸ್ಟೆಲ್ಲಾ ಕ್ರೀಸಿ ಅವರಿಗೆ ಹತ್ತಾರು ಬೆದರಿಕೆ ಸಂದೇಶ ಬಂದ ಬಳಿಕ, ರಿಪೋರ್ಟ್‌ ಅಬ್ಯೂಸ್‌ ವ್ಯವಸ್ಥೆಯನ್ನು ಟ್ವಿಟರ್‌ ಚಾಲೂಗೊಳಿಸಿತ್ತು. ಸ್ತ್ರೀವಾದಿ ಪ್ರಚಾರಕಿ ಕ್ಯಾರೊಲಿನ್‌ ಕ್ರೈಡೊ ಪೆರೆಝ್‌ ಅವರ ಪರವಾಗಿ ಟ್ವೀಟ್‌ ಮಾಡಿದ್ದಕ್ಕೆ ಸ್ಟೆಲ್ಲಾ ಅವರಿಗೆ ಬೆದರಿಕೆ ಒಡ್ಡಲಾಗಿತ್ತು. ಸ್ಟೆಲ್ಲಾ ಅವರಿಗೆ ಕಿರುಕುಳ ನೀಡಿದ ವ್ಯಕ್ತಿಗೆ 18 ವಾರಗಳ ಜೈಲು ಶಿಕ್ಷೆಯೂ ಆಯಿತು.

ತನ್ನ ನೀತಿಯನ್ನು ಉಲ್ಲಂಘಿಸುವ ಹಿಂಸಾತ್ಮಕ ಬೆದರಿಕೆ, ಕಿರುಕುಳ ಮತ್ತು ಸುಳ್ಳು ಸುದ್ದಿ ಪ್ರಸಾರವನ್ನು ಪತ್ತೆ ಮಾಡಲು ಟ್ವಿಟರ್‌, ಹೊಸ ನಿಯಮಗಳನ್ನು ರೂಪಿಸಿತ್ತು, ಸಿಬ್ಬಂದಿಯ ಮೇಲೆ ಹೂಡಿಕೆ ಮಾಡಿತ್ತು ಮತ್ತು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿತ್ತು. 2016ರಲ್ಲಿ ಅಮೆರಿಕದಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಹಸ್ತಕ್ಷೇಪ ನಡೆಸಲು ರಷ್ಯಾವು ಸಾಮಾಜಿಕ ಜಾಲತಾಣ ವೇದಿಕೆಗಳನ್ನು ಬಳಸಿಕೊಂಡಿತ್ತು ಎಂಬುದು ಮನವರಿಕೆಯಾದ ಬಳಿಕ ರಾಜಕೀಯ ಸುಳ್ಳು ಸುದ್ದಿಯನ್ನು ತಡೆಯುವ ದಿಸೆಯಲ್ಲಿಯೂ ಪ್ರಯತ್ನ ಆರಂಭವಾಗಿದೆ.

‘ಅನಿರ್ಬಂಧಿತ ಅಭಿವ್ಯಕ್ತಿಯ ಪ್ರತಿಪಾದಕ’ ಎಂದು ತಮ್ಮನ್ನು ಬಣ್ಣಿಸಿಕೊಳ್ಳುವ ಮಸ್ಕ್ ಅವರು, ಈ ಎಲ್ಲ ನಿಯಂತ್ರಣ ಕ್ರಮಗಳನ್ನು ಕೈಬಿಡಲು ಬಯಸಿದಂತೆ ಕಾಣಿಸುತ್ತಿದೆ. ಹಾಗಾದರೆ, ಈಗ ಇರುವ ಬಳಕೆದಾರರು ಮತ್ತು ಜಾಹೀರಾತುದಾರರು ಟ್ವಿಟರ್‌ನಲ್ಲಿ ಮುಂದುವರಿಯಲ್ಲಿದ್ದಾರೆಯೇ ಎಂಬುದು ಸದ್ಯಕ್ಕೆ ಇರುವ ಬಹುದೊಡ್ಡ ಪ್ರಶ್ನೆ.

ಇತರ ಆನ್‌ಲೈನ್‌ ವೇದಿಕೆಗಳಿಗೆ ಹೋಲಿಸಿದರೆ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಕಿರುಕುಳಕ್ಕೆ ಒಳಗಾಗುವ ಅಪಾಯ ಹೆಚ್ಚು ಎಂಬುದು ಅಮೆರಿಕನ್ನರ ಭಾವನೆ. ಭಾರಿ ಪ್ರಮಾಣದಲ್ಲಿ ನಿಂದನೆಗೆ ಒಳಗಾಗುತ್ತಿದ್ದೇವೆ ಎಂದು ಮಹಿಳೆಯರು, ಬಿಳಿಯರಲ್ಲದ ಜನರು, ಲೈಂಗಿಕ ಅಲ್ಪಸಂಖ್ಯಾತರು ಹೇಳಿದ್ದಾರೆ. ಇಂತಹ ನಿಂದನೆ ತಡೆಯಲು,ಸಾಮಾಜಿಕ ಜಾಲತಾಣ ಕಂಪನಿಗಳು ಹೆಚ್ಚಿನದೇನನ್ನೂ ಮಾಡುತ್ತಿಲ್ಲ ಎಂದು ಜನರು ಹೇಳಿದ್ದಾರೆ ಎಂದು ಪ್ಯೂ ರಿಸರ್ಚ್‌ ಸೆಂಟರ್‌ ಅಮೆರಿಕದಲ್ಲಿ ಕಳೆದ ವರ್ಷ ನಡೆಸಿದ ಸಮೀಕ್ಷೆಯು ಹೇಳಿದೆ.

ಇಲಾನ್‌ ಮಸ್ಕ್‌ ಅವರು ಖರೀದಿಸಿದ ಬಳಿಕ ಟ್ವಿಟರ್‌ ಹೊಣೆಗಾರಿಕೆಯಿಂದಲೇ ಇರಬೇಕು ಎಂದು ಬ್ರಿಟನ್‌ ಹೇಳಿದೆ.ಐರೋಪ್ಯ ಒಕ್ಕೂಟವೂ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದೆ.

ಲಾಭ ಕಾಣುವುದೇ ಟ್ವಿಟರ್‌?

ಸಾಮಾಜಿಕ ಜಾಲತಾಣಗಳ ಜಗತ್ತಿನಲ್ಲಿ ಟ್ವಿಟರ್ ಮುಂಚೂಣಿಯಲ್ಲಿ ಇದೆ. ಆದರೆ ಟ್ವಿಟರ್‌ ಮಾಡುತ್ತಿರುವ ಸದ್ದಿನಷ್ಟು, ಅದರ ಆದಾಯ ಇಲ್ಲ. ಟ್ವಿಟರ್‌ ತನ್ನ ವೇದಿಕೆಯಲ್ಲಿ ಪ್ರಕಟವಾಗುವ ಜಾಹೀರಾತುಗಳಿಂದ ಆದಾಯ ಗಳಿಸುತ್ತದೆ. ಆದರೆ ಈ ಆದಾಯವು ಲಾಭದ ಮೈಲುಗಲ್ಲು ಮುಟ್ಟಿದ್ದು ಎರಡು ಬಾರಿ ಮಾತ್ರ. ಇಂತಹ ಟ್ವಿಟರ್‌ ಅನ್ನು ಅದರ ಮಾರುಕಟ್ಟೆ ಮೌಲ್ಯಕ್ಕಿಂತ ಹೆಚ್ಚು ಹಣ ನೀಡಿ ಇಲಾನ್ ಮಸ್ಕ್‌ ಖರೀದಿಸಿದ್ದು ಕುತೂಹಲಕ್ಕೆ ಕಾರಣವಾಗಿದೆ.

ಇಲಾನ್ ಮಸ್ಕ್‌ ಒಬ್ಬ ಯಶಸ್ವಿ ಉದ್ಯಮಿ. ಸತತ ನಷ್ಟದಲ್ಲಿದ್ದ ತಮ್ಮ ಟೆಸ್ಲಾ ಕಂಪನಿಯನ್ನು ಭಾರಿ ಪ್ರಮಾಣದ ಲಾಭಕ್ಕೆ ತಂದು, ಅದೇ ಹಾದಿಯಲ್ಲಿ ಮುಂದುವರಿಸಿದ ಹೆಗ್ಗಳಿಕೆ ಅವರದ್ದು. ಮಸ್ಕ್ ಅವರ ಸ್ಪೇಸ್‌ಎಕ್ಸ್ ಕಂಪನಿ ಸಹ ಲಾಭದಲ್ಲಿಯೇ ಇದೆ. ಉಪಗ್ರಹದ ಮೂಲಕ ಇಂಟರ್ನೆಟ್‌ ಒದಗಿಸುವ ಸ್ಟಾರ್‌ಲಿಂಕ್ ಸಹ ಲಾಭದ ನಿರೀಕ್ಷೆಯಲ್ಲಿದೆ. ಹೀಗೆ ತಮ್ಮದೇ ಹಲವು ಕಂಪನಿಗಳನ್ನು ಲಾಭದತ್ತ ಒಯ್ದ ಮಸ್ಕ್ ಅವರು, ಟ್ವಿಟರ್‌ ಅನ್ನು ಸಹ ಲಾಭದತ್ತ ಕರೆದೊಯ್ಯುತ್ತಾರೆ ಎಂದು ನಿರೀಕ್ಷಿಸಲಾಗಿದೆ.

ಈ ನಿರೀಕ್ಷೆಗೆ ಅಪಸ್ವರಗಳೂ ಕೇಳಿಬಂದಿವೆ. ಟ್ವಿಟರ್‌ ಅನ್ನು 44 ಬಿಲಿಯನ್‌ ಡಾಲರ್‌ (₹3.37 ಲಕ್ಷ ಕೋಟಿ) ಮೊತ್ತಕ್ಕೆ ಮಸ್ಕ್ ಖರೀದಿಸಿದ್ದಾರೆ. ಈ ಮೊತ್ತದಲ್ಲಿ 25.5 ಬಿಲಿಯನ್ ಡಾಲರ್‌ನಷ್ಟು (₹1.95 ಲಕ್ಷ ಕೋಟಿ) ಮೊತ್ತವನ್ನು ಸಾಲದ ರೂಪದಲ್ಲಿ ಕ್ರೋಡೀಕರಿಸಲಾಗುತ್ತಿದೆ. ಟ್ವಿಟರ್‌ ಅನ್ನು ಲಾಭದ ಹಾದಿಗೆ ತರುವಲ್ಲಿ ತಮ್ಮ ಕಾರ್ಯತಂತ್ರಗಳೇನು ಎಂಬುದನ್ನು ಮಸ್ಕ್ ಎಲ್ಲಿಯೂ ಹೇಳಿಲ್ಲ. ಅದಕ್ಕಿಂತ ಮುಖ್ಯವಾಗಿ ಅವರು ಅಂತಹ ಉದ್ದೇಶವನ್ನು ಎಲ್ಲಿಯೂ ವ್ಯಕ್ತಪಡಿಸಿಲ್ಲ. ಹೀಗಿದ್ದಾಗ ಈಗಾಗಲೇ ಹಲವು ಭಾರಿ ನಷ್ಟ ಅನುಭವಿಸಿರುವ ಕಂಪನಿಯ ಮೇಲೆ 25.5 ಬಿಲಿಯನ್ ಡಾಲರ್‌ನಷ್ಟು ಸಾಲವನ್ನು ಹೊರಿಸುವುದು, ಭಾರಿ ಹೊರೆಯೇ ಸರಿ. ಆದಾಯ ಹೆಚ್ಚಿಸುವ ಹಾದಿಯಲ್ಲಿ ನಡೆಯದೇ ಇದ್ದರೆ, ಟ್ವಿಟರ್‌ ಲಾಭವನ್ನು ಕಾಣುವುದು ಸಾಧ್ಯವೇ ಇಲ್ಲ ಎಂದು ಮಾರುಕಟ್ಟೆ ತಜ್ಞರು ಎಚ್ಚರಿಕೆ ನೀಡಿದ್ದಾರೆ.

‘ಟ್ವಿಟರ್‌ನ ಬೆಲೆ ಎಷ್ಟು?’

‘ನಾನು ಟ್ವಿಟರ್‌ ಅನ್ನು ಪ್ರೀತಿಸುತ್ತೇನೆ’ ಎಂದು ಇಲಾನ್‌ ಮಸ್ಕ್‌ 2017ರಲ್ಲಿ ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಟ್ವೀಟಿಗರೊಬ್ಬರು, ‘ಹಾಗಿದ್ದರೆ ನೀವು ಟ್ವಿಟರ್‌ ಅನ್ನು ಖರೀದಿಸಿಬಿಡಿ’ ಎಂದು ಸಲಹೆ ನೀಡಿದ್ದರು. ಈ ಸಲಹೆಗೆ ಪ್ರತಿಕ್ರಿಯೆ ನೀಡಿದ್ದ ಮಸ್ಕ್‌, ‘ಟ್ವಿಟರ್‌ನ ಬೆಲೆ ಎಷ್ಟು’ ಎಂದು ಪ್ರಶ್ನಿಸಿದ್ದರು. ಆ ಪ್ರಶ್ನೆಗೆ ಉತ್ತರಿಸುವ ಗೋಜಿಗೆ ಯಾರೂ ಹೋಗಿರಲಿಲ್ಲ.

ಆದರೆ, ಅಂದಾಜು ಐದು ವರ್ಷಗಳ ನಂತರ ಮಸ್ಕ್ ಅವರು ಟ್ವಿಟರ್‌ ಅನ್ನು ಖರೀದಿಸಿದ್ದಾರೆ. ಅದು ಏಕಾಏಕಿ ಆದ ಬೆಳವಣಿಗೆ ಅಲ್ಲ. ಟ್ವಿಟರ್‌ನ ಷೇರುಗಳಲ್ಲಿ ಶೇ 9.2ರಷ್ಟು ಷೇರುಗಳನ್ನು ಮಸ್ಕ್‌ ಅವರು ಈಚೆಗೆ ಖರೀದಿಸಿದ್ದರು. ‘ಟ್ವಿಟರ್‌ನಲ್ಲಿ ಏನೇನು ಬದಲಾವಣೆ ಬಯಸುತ್ತೀರಿ’ ಎಂದು ಮಸ್ಕ್ ಅವರು ಏಪ್ರಿಲ್‌ ಮೊದಲ ವಾರದಲ್ಲಿ ಟ್ವೀಟ್ ಮಾಡಿದ್ದರು. ಅವರು ಟ್ವಿಟರ್‌ನಲ್ಲಿ ಎರಡನೇ ಅತಿದೊಡ್ಡ ಪಾಲುದಾರ ಎಂದು ಗೊತ್ತಾಗಿದ್ದು ಆಗಲೇ. ಟ್ವಿಟರ್‌ ಆಡಳಿತ ಮಂಡಳಿಯ ಸದಸ್ಯನಾಗಲು ಮಸ್ಕ್ ಅವರಿಗೆ ಅಧಿಕೃತವಾಗಿ ಆಹ್ವಾನ ನೀಡಲಾಯಿತು. ಅದನ್ನು ಮಸ್ಕ್ ನಿರಾಕರಿಸಿದ್ದರು. ಬಹುಶಃ ಟ್ವಿಟರ್ ಅನ್ನು ಸಂಪೂರ್ಣವಾಗಿ ಖರೀದಿಸುವ ಯೋಚನೆ ಮಸ್ಕ್‌ ಅವರಲ್ಲಿ ಆಗಲೇ ಇದ್ದಿರಬೇಕು. ತಿಂಗಳು ಕಳೆಯುವ ಒಳಗೆ ಟ್ವಿಟರ್ ಅನ್ನು ಮಸ್ಕ್ ಖರೀದಿಸಿದ್ದಾರೆ.

ಪರ–ವಿರೋಧ ಚರ್ಚೆ

ಇಲಾನ್ ಮಸ್ಕ್ ಅವರು ಟ್ವಿಟರ್‌ ಅನ್ನು ಖರೀದಿಸುತ್ತಿದ್ದಂತೆಯೇ ಪರ–ವಿರೋಧದ ಚರ್ಚೆ ಆರಂಭವಾಗಿದೆ. ಕೆಲವು ಬಳಕೆದಾರರು ಟ್ವಿಟರ್‌ ವೇದಿಕೆಯನ್ನು ತೊರೆಯುವ ಮಾತನ್ನಾಡಿದ್ದಾರೆ. ‘ಲೀವಿಂಗ್ ಟ್ವಿಟರ್’, ‘ಕ್ವಿಟ್ ಟ್ವಿಟರ್’, ‘ಡಿಲೀಟ್ ಟ್ವಿಟರ್‌’ ಎಂಬ ಹ್ಯಾಷ್‌ಟ್ಯಾಗ್‌ಗಳು ಟ್ರೆಂಡ್‌ ಆಗಿವೆ. ಮಸ್ಕ್ ತೆಗೆದುಕೊಂಡಿರುವ ನಿರ್ಧಾರವನ್ನು ಕೆಲವರು ಬೆಂಬಲಿಸಿದ್ದಾರೆ

ನಮ್ಮ ಪ್ರಜಾಪ್ರಭುತ್ವಕ್ಕೆ ಈ ನಡೆ ಅಪಾಯಕಾರಿ. ಮಸ್ಕ್ ಅವರಂತಹ ಕೋಟ್ಯಧಿಪತಿಗಳು ಭಿನ್ನ ನಿಯಮಗಳನ್ನು ಜಾರಿಗೆ ತರುತ್ತಾರೆ. ತಮ್ಮ ಲಾಭಕ್ಕಾಗಿ ಅಧಿಕಾರವನ್ನು ಹಿಡಿಯುತ್ತಾರೆ. ತಂತ್ರಜ್ಞಾನ ಕ್ಷೇತ್ರದ ಬೃಹತ್‌ ಕಂಪನಿಗಳ ವ್ಯಕ್ತಿಗಳನ್ನು ಹೊಣೆಗಾರರನ್ನಾಗಿ ಮಾಡಲು ಭಾರಿ ಮೊತ್ತದ ತೆರಿಗೆ ಹೇರಬೇಕು ಮತ್ತು ಕಠಿಣ ನಿಯಮಗಳನ್ನು ಜಾರಿಗೆ ತರಬೇಕು

ಎಲಿಜಬೆತ್ ವಾರನ್, ಅಮೆರಿಕ ಸಂಸದೆ

ಮಸ್ಕ್ ಅವರು ಟ್ವಿಟರ್ ಖರೀದಿಸಿದರೆ ಟ್ವಿಟರ್ ತೊರೆಯುವುದಾಗಿ ಭಾರತದಲ್ಲಿ ಕೆಲವು ಜನರು ಹೇಳುತ್ತಿದ್ದಾರೆ. ಇದೇ ವ್ಯಕ್ತಿಗಳು ನರೇಂದ್ರ ಮೋದಿ ಅವರು ಪ್ರಧಾನಿಯಾದರೆ, ಭಾರತವನ್ನು ತೊರೆಯುವುದಾಗಿ ಹೇಳಿದ್ದರು. ಮೋದಿ ಅವರು ಎರಡು ಬಾರಿ ಪ್ರಧಾನಿಯಾದರು. ಆದರೆ ಆ ಜನರು ದೇಶ ತೊರೆಯಲಿಲ್ಲ

ಶೆಫಾಲಿ ವೈದ್ಯ

ಒಂದೊಮ್ಮೆ ನೀವು ಟ್ವಿಟರ್‌ನಿಂದ ಹೊರನಡೆಯಲು ನಿರ್ಧರಿಸಿದರೂ, ಇಲಾನ್ ಮಸ್ಕ್ ಅವರು ಜಗತ್ತಿನ ಶ್ರೀಮಂತ ವ್ಯಕ್ತಿಯಾಗಿಯೇ ಉಳಿಯುತ್ತಾರೆ

ದಿ ಬಯಾಸ್ಡ್

ಇಲಾನ್ ಮಸ್ಕ್ ಅವರಿಗೆ ನಾಗರಿಕ ಸಮಾಜದ ಬಗ್ಗೆ ಯಾವುದೇ ಕಾಳಜಿ ಇಲ್ಲ. ಸಾಮಾಜಿಕ ಮಾಧ್ಯಮದ ಎಲ್ಲ ಕೊಳಚೆ ಅನಿಯಂತ್ರಿತವಾಗಿ ಹರಿಯಲು ಅವರು ಅವಕಾಶ ಮಾಡಿಕೊಡಲಿದ್ದಾರೆ

ಜೆನ್ನಿಫರ್ ವ್ಯಾಲಿಯರ್ ಹಂಫ್ರೆ

2014ರಿಂದಲೂ ಎಡಪಂಥೀಯರು ಟ್ವಿಟರ್‌ ತೊರೆಯುವುದಾಗಿ ಹೇಳುತ್ತಿದ್ದಾರೆ. ಆದರೆ ಅವರು ಹಾಗೆ ಮಾಡಿಲ್ಲ

ಟೀಲವ್2021

‘ಲೀವಿಂಗ್ ಟ್ವಿಟರ್’ ಎಂಬುದು ಈಗ ಟ್ರೆಂಡ್‌ ಆಗಿದೆ. ಆದರೆ ನಿಮ್ಮ ನಿರ್ಗಮನವನ್ನು ಘೋಷಿಸಲು ಇದು ವಿಮಾನ ನಿಲ್ದಾಣವಲ್ಲ

ಪ್ಯೂರೆಸ್ಟ್‌ಜಿಂಕ್

ಆಧಾರ: ಎಪಿ, ರಾಯಿಟರ್ಸ್‌, ನ್ಯೂಯಾರ್ಕ್‌ ಟೈಮ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT