ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಅಗಲ | ಗೋವಾ ಚುನಾವಣಾ ಕಣ: ಸಾಲು ಸಾಲು ಪಕ್ಷಗಳ ಸವಾಲು

Last Updated 11 ಜನವರಿ 2022, 19:30 IST
ಅಕ್ಷರ ಗಾತ್ರ

ಗೋವಾದಲ್ಲಿ 2017ರ ವಿಧಾನಸಭಾ ಚುನಾವಣೆ ಹಾಗೂ 2022ರ ಚುನಾವಣೆ ನಡುವೆ ಸಾಕಷ್ಟು ರಾಜಕೀಯ ಪಲ್ಲಟಗಳು ಸಂಭವಿಸಿವೆ. 40 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಚಿಕ್ಕ ರಾಜ್ಯವಾದರೂ, ಇಲ್ಲಿಯ ರಾಜಕಾರಣ ಮಾತ್ರ ದೇಶದಲ್ಲಿ ಸದ್ದು ಮಾಡಿದೆ. ರಾಜ್ಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪ್ರಮುಖ ಪಕ್ಷಗಳು. ಇವುಗಳ ಜೊತೆಗೆ ಗೋವಾ ಫಾರ್ವರ್ಡ್ ಪಕ್ಷ (ಜಿಎಫ್‌ಪಿ), ಮಹಾರಾಷ್ಟ್ರವಾದಿ ಗೋಮಂತಕ ಪಕ್ಷ (ಎಂಜಿಪಿ), ಎನ್‌ಸಿಪಿ, ಯುನೈಟೆಡ್‌ ಗೋವನ್ಸ್‌ ಡೆಮಾಕ್ರಟಿಕ್‌ ಪಾರ್ಟಿಗಳು ಕಣದಲ್ಲಿವೆ. ಈ ಬಾರಿ ಆಮ್ ಆದ್ಮಿ ಪಕ್ಷ (ಎಎಪಿ) ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ‍ಪಕ್ಷಗಳು ಛಾಪು ಒತ್ತಲು ತುದಿಗಾಲಲ್ಲಿ ನಿಂತಿರುವುದು ಕುತೂಹಲ ಮೂಡಿಸಿದೆ. ಹೀಗಾಗಿ ಗೋವಾ ಚುನಾವಣಾ ಕಣವು ಹಲವು ಪಕ್ಷಗಳಿಂದ ಮೇಳೈಸಿದೆ.

2017ರಲ್ಲಿ 13 ಕ್ಷೇತ್ರಗಳಲ್ಲಿ ಗೆದ್ದಿದ್ದ ಬಿಜೆಪಿಯು ಸರ್ಕಾರ ರಚಿಸಿದ್ದು ಅಚ್ಚರಿಯ ವಿದ್ಯಮಾನ.ಅಂದು, ಕೇಂದ್ರದಲ್ಲಿ ರಕ್ಷಣಾ ಸಚಿವರಾಗಿದ್ದ ಮನೋಹರ್ ಪರಿಕ್ಕರ್ ಅವರು ರಾಜ್ಯದ ಚುಕ್ಕಾಣಿ ಹಿಡಿಯುವುದಾದರೆ, ಬಿಜೆಪಿಗೆ ಬೆಂಬಲ ನೀಡಲು ಸಿದ್ಧ ಎಂದು ಎಂಜಿಪಿ ಹಾಗೂ ಜಿಎಫ್‌ಪಿ ಷರತ್ತು ಹಾಕಿದ್ದವು. ಕೆಲವು ಪಕ್ಷೇತರರ ಬೆಂಬಲದೊಂದಿಗೆ ಪರಿಕ್ಕರ್ ಗದ್ದುಗೆ ಏರಿದರು. 2019ರಲ್ಲಿ ಅವರ ನಿಧನದಿಂದ ತೆರವಾದ ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಮೋದ್ ಸಾವಂತ್ ಬಂದರು. ಪಕ್ಷದ ನೆಲೆ ಗಟ್ಟಿ ಮಾಡಿಕೊಳ್ಳಲು ಮುಂದಾದ ಬಿಜೆಪಿ, ಕಾಂಗ್ರೆಸ್‌ನಿಂದ 10 ಶಾಸಕರನ್ನು ಪಕ್ಷಕ್ಕೆ ಸೆಳೆದುಕೊಂಡಿತು. ಎಂಜಿಪಿ, ಜಿಎಫ್‌ಪಿ ಶಾಸಕರು ಬಿಜೆಪಿ ಪಾಳಯ ಸೇರಿದ್ದರಿಂದ ಪಕ್ಷದ ಶಾಸಕರ ಬಲವು 27ಕ್ಕೆ ಏರಿತು.ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ಬಿಜೆಪಿ ಮುಂದಾಗಿದ್ದು, ಸ್ಥಳೀಯ ಪಕ್ಷಗಳನ್ನು ಕೈಬಿಟ್ಟಿದೆ. ಹೀಗಾಗಿ ಬಿಜೆಪಿಗೆ ಪಾಠ ಕಲಿಸಲು ಈ ಪಕ್ಷಗಳು ನಿರ್ಧರಿಸಿವೆ.

ಪರಿಕ್ಕರ್ ಸರ್ಕಾರವನ್ನು ಬೆಂಬಲಿಸಿದ್ದ ಎಂಜಿಪಿ ಜತೆ ಈ ಬಾರಿ ಟಿಎಂಸಿ ಮೈತ್ರಿ ಮಾಡಿಕೊಂಡಿದೆ. ‘ಹೊರಗಿನವರು’ ಎಂಬ ಹಣೆಪಟ್ಟಿ ಕಳಚಲು ಯತ್ನಿಸುವುದು ಟಿಎಂಸಿಯ ಉದ್ದೇಶ. ಫುಟ್ಬಾಲ್, ಮೀನು ಸೇರಿದಂತೆ, ಪಶ್ಚಿಮ ಬಂಗಾಳ ಹಾಗೂ ಗೋವಾ ನಡುವೆ ಹಲವು ವಿಚಾರ, ಸಂಸ್ಕೃತಿಗಳಲ್ಲಿ ಸಾಮ್ಯಗಳಿವೆ ಎಂದು ಪಕ್ಷ ಪ್ರತಿಪಾದಿಸುತ್ತಿದೆ. ಚುನಾವಣಾ ಕಾರ್ಯತಂತ್ರ ನಿಪುಣ ಪ್ರಶಾಂತ್ ಕಿಶೋರ್ ಅವರ ಐಪ್ಯಾಕ್ ತಂಡವು ಗೋವಾದಲ್ಲಿ ಬೀಡುಬಿಟ್ಟಿದ್ದು, ಪ್ರಚಾರ, ಸಂಘಟನೆಯಲ್ಲಿ ಪಕ್ಷಕ್ಕೆ ನೆರವು ನೀಡುತ್ತಿದೆ. ಖ್ಯಾತ ಟೆನಿಸ್ ಪಟು ಲಿಯಾಂಡರ್ ಪೇಸ್ ಹಾಗೂ ಕಾಂಗ್ರೆಸ್‌ ಹಿರಿಯ ಮುಖಂಡ ಲುಯಿಝಿನೊಫೆಲಿರೋ ಅವರು ಟಿಎಂಸಿ ಬಲ ವೃದ್ಧಿಸಿದ್ದಾರೆ. ಪ್ರಭಾವಿ ಸಂಸದರಾದ ಡೆರೆಕ್ ಒಬ್ರಿಯಾನ್ ಮತ್ತು ಮಹುವಾ ಮೊಯಿತ್ರಾ ಅವರು ಚುನಾವಣೆಯ ಉಸ್ತುವಾರಿ ವಹಿಸಿದ್ದಾರೆ. ಎನ್‌ಸಿಪಿಯ ಏಕೈಕ ಶಾಸಕ ಚರ್ಚಿಲ್ ಅಲೆಮಾವೊ ಅವರೂ ಟಿಎಂಸಿ ಪಾಳಯ ಸೇರಿದ್ದಾರೆ.

ಈ ಹಿಂದಿನ ಚುನಾವಣೆಯಲ್ಲಿ ಕಣಕ್ಕೆ ಧುಮುಕಿದ್ದ ಎಎಪಿ ಈ ಬಾರಿ ಇನ್ನಷ್ಟು ಛಾಪು ಮೂಡಿಸಲು ಸಜ್ಜಾಗಿದೆ. ಕಳೆದ ವರ್ಷ ಗೋವಾದ ಒಂದು ಜಿಲ್ಲಾ ಪಂಚಾಯಿತಿಯನ್ನು ಆಮ್ ಆದ್ಮಿ ತೆಕ್ಕೆಗೆ ತೆಗೆದುಕೊಂಡಿತ್ತು. ಕೋವಿಡ್ ಸಮಯದಲ್ಲಿ ಪಕ್ಷದ ಕಾರ್ಯಕರ್ತರು ಆಹಾರ ಧಾನ್ಯ, ಔಷಧ ಪೂರೈಸಿ ಹೆಸರು ಗಳಿಸಿದ್ದರು. ಯಶಸ್ವಿ ಕಾರ್ಯಕ್ರಮಗಳ ದೆಹಲಿ ಮಾದರಿಯನ್ನು ಗೋವಾದಲ್ಲಿ ಅಳವಡಿಸುವುದಾಗಿ ಅರವಿಂದ ಕೇಜ್ರಿವಾಲ್ ಭರವಸೆ ನೀಡಿದ್ದಾರೆ. ಉಚಿತ ವಿದ್ಯುತ್, ನಿರುದ್ಯೋಗ ಭತ್ಯೆ, ಉಚಿತ ತೀರ್ಥಯಾತ್ರೆ ಘೋಷಣೆ ಮಾಡಿದ್ದಾರೆ.

ಮತಗಳು ವಿಭಜನೆಯಾಗುವುದನ್ನು ತಡೆಯಲು ಬಿಜೆಪಿಯೇತರ ಪಕ್ಷಗಳನ್ನು ಒಗ್ಗೂಡಿಸಿ ಮಹಾಮೈತ್ರಿಕೂಟ ಕಟ್ಟುವ ಕಾಂಗ್ರೆಸ್ ಯತ್ನವು ಅಷ್ಟಾಗಿ ಫಲ ನೀಡಿಲ್ಲ. ಜಿಎಫ್‌ಪಿ ಮಾತ್ರ ಕಾಂಗ್ರೆಸ್ ಜೊತೆ ಈ ಬಾರಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದೆ.ಸದ್ಯದ ಪ್ರಕಾರ, ಬಿಜೆಪಿ ಸರ್ಕಾರ ಭದ್ರವಾಗಿರುವುದೇನೋ ನಿಜ. ಆದರೆ, ಆಡಳಿತ ವಿರೋಧಿ ಅಲೆಯ ಭೀತಿಯಲ್ಲಿ ಕಮಲ ಪಾಳಯ ಇದೆ. ಕೇಂದ್ರದಲ್ಲೂ ಬಿಜೆಪಿ ಸರ್ಕಾರ ಇರುವುದರಿಂದ ರಾಜ್ಯದಲ್ಲಿ ತಮ್ಮದೇ ಸರ್ಕಾರವಿದ್ದರೆ ಅಭಿವೃದ್ಧಿ ಚುರುಕಾಗುತ್ತದೆ ಎಂದು ಬಿಜೆಪಿ ಪ್ರತಿಪಾದಿಸುತ್ತಿದೆ. ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಜಯಭೇರಿ ಬಾರಿಸಿರುವುದು ಪಕ್ಷದ ಹುರುಪು ಹೆಚ್ಚಿಸಿದೆ.

ಕಾಂಗ್ರೆಸ್: ಪಕ್ಷಾಂತರದ ಸಂತ್ರಸ್ತ

2017ರ ಗೋವಾ ವಿಧಾನಸಭೆ ಅವಧಿಯು ಕಾಂಗ್ರೆಸ್ ಪಾಲಿಗೆ ಕರಾಳ. ಪಕ್ಷಾಂತರವು ತುತ್ತತುದಿ ಮುಟ್ಟಿದ್ದು ಈ ಅವಧಿಯಲ್ಲಿ. ಚುನಾವಣೆಯಲ್ಲಿ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ, ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದ 10 ಶಾಸಕರು ಒಂದೇ ಬಾರಿಗೆ ಬಿಜೆಪಿಗೆ ವಲಸೆ ಹೋದರು. ಅತಿದೊಡ್ಡ ಪಕ್ಷವಾಗಿದ್ದ ಕಾಂಗ್ರೆಸ್ 17 ಶಾಸಕರನ್ನು ಹೊಂದಿದ್ದರೂ, ಬಹುಮತಕ್ಕೆ ಬೇಕಿದ್ದ 21 ಶಾಸಕರನ್ನು ಸೇರಿಸಲು ವಿಫಲವಾಗಿದ್ದೇ ಬಿಜೆಪಿ ಹಾದಿಯನ್ನು ಸುಗಮವಾಗಿಸಿತು. ಸಣ್ಣ ಪಕ್ಷಗಳು ಹಾಗೂ ಪಕ್ಷೇತರರ ಜೊತೆ ತಕ್ಷಣಕ್ಕೆ ಮಾತುಕತೆಗೆ ಮುಂದಾಗದ ಕಾರಣ, ಸನಿಹಕ್ಕೆ ಬಂದಿದ್ದ ಅಧಿಕಾರವನ್ನು ಕೈಚೆಲ್ಲಿತ್ತು.ವಿಶ್ವಜಿತ್ ರಾಣೆ ಅವರು ಫಲಿತಾಂಶ ಬಂದ ತಕ್ಷಣವೇ ರಾಜೀನಾಮೆ ನೀಡಿ ಬಿಜೆಪಿಗೆ ಹೋದರು. ಅವರು ಮತ್ತೆ ಬಿಜೆಪಿಯಿಂದ ಆರಿಸಿಬಂದರು.

ಬಿಜೆಪಿ 13 ಸ್ಥಾನಗಳನ್ನು ಗಳಿಸಿದ್ದರೂ, ಸ್ಥಳೀಯ ಪಕ್ಷಗಳು ಹಾಗೂ ಪಕ್ಷೇತರರ ಜೊತೆಗೂಡಿ ಸರ್ಕಾರ ರಚಿಸಿತು. ಕಾಂಗ್ರೆಸ್‌ನ 10 ಶಾಸಕರು ಮನೋಹರ್ ಪರಿಕ್ಕರ್ ನೇತೃತ್ವದ ಬಿಜೆಪಿಯನ್ನು ಬೆಂಬಲಿಸಿದರು.ಈ ನಾಲ್ಕು ವರ್ಷಗಳಲ್ಲಿ ಮಾಜಿ ಮುಖ್ಯಮಂತ್ರಿ ರವಿ ನಾಯಕ್ ಸೇರಿದಂತೆ ಕಾಂಗ್ರೆಸ್‌ನ ಬಹುತೇಕ ಶಾಸಕರು ಬಿಜೆಪಿ ಸೇರಿದ್ದಾರೆ. ಫೆಲಿರೋ ಮತ್ತು ಅಲೆಕ್ಸಿಯೊ ರೆಜಿನಾಲ್ಡೊ ಲೌರೆಂಕೊ ಅವರು ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಸೇರಿದ್ದು, ಕಾಂಗ್ರೆಸ್ ಬುಡವನ್ನು ಅಲುಗಾಡಿಸಿದ್ದಾರೆ. 17 ಶಾಸಕರು ಆರಿಸಿಬಂದಿದ್ದ ಪಕ್ಷದಲ್ಲಿ ಈಗ ಇರುವ ಶಾಸಕರ ಸಂಖ್ಯೆ 2 ಮಾತ್ರ.

ಗೋವಾದಲ್ಲಿ ಪಕ್ಷಾಂತರದ ಪರ್ವ 1967ರಲ್ಲೇ ಶುರುವಾಗಿತ್ತು. 1999ರಲ್ಲಿ ಲುಯಿಝಿನೊ ಫೆಲಿರೋ ನೇತೃತ್ವದಲ್ಲಿ ಕಾಂಗ್ರೆಸ್‌ಗೆ 21 ಸ್ಥಾನಗಳ ಸ್ಪಷ್ಟ ಬಹುಮತ ಸಿಕ್ಕಿತ್ತು. ಆದರೆ ಐದು ತಿಂಗಳಲ್ಲೇ ಈ ಸರ್ಕಾರ ಉರುಳಿಬಿದ್ದಿತು. ಫ್ರಾನ್ಸಿಸ್ ಸಾರ್ಡಿನಾ ಅವರು 10 ಶಾಸಕರ ಜೊತೆ ಹೊರಬಂದು, ಪ್ರತ್ಯೇಕ ಪಕ್ಷವನ್ನು ಕಟ್ಟಿ ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿದ್ದರು.

ಪ್ರತಿಪಕ್ಷದ ನಾಯಕರಾಗಿದ್ದ ರವಿ ನಾಯಕ್ ಅವರು ಒಂಬತ್ತು ಶಾಸಕರ ಜೊತೆ ಕಾಂಗ್ರೆಸ್‌ನಿಂದ ಹೊರಬಂದು ಬಿಜೆಪಿಯನ್ನು ಬೆಂಬಲಿಸಿದ್ದರು. ನಾಯಕ್ ಅವರಿಗೆ ಮನೋಹರ್ ಪರಿಕ್ಕರ್ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಹುದ್ದೆ ನೀಡಲಾಗಿತ್ತು. ಸಾರ್ಡಿನಾ ಅವರು 2017ರಲ್ಲಿ ವಾಪಸ್ ಕಾಂಗ್ರೆಸ್ ತೆಕ್ಕೆಗೆ ಬಂದು, ಶಾಸಕರಾಗಿ ಆಯ್ಕೆಯಾಗಿದ್ದರು. ಆದರೆ ಮತ್ತೆ ರಾಜೀನಾಮೆ ನೀಡಿ ಬಿಜೆಪಿ
ಜೊತೆ ಕೈ ಜೋಡಿಸಿದ್ದಾರೆ.

ನಾವಿಕನಿಲ್ಲದ ದೋಣಿ ಬಿಜೆಪಿ

ಗೋವಾ ಬಿಜೆಪಿ ಘಟಕಕ್ಕೇ ಈಗ ಪ್ರಬಲ ನಾಯಕತ್ವವೇ ಇಲ್ಲದಂತೆ ಆಗಿದೆ. ಗೋವಾದಲ್ಲಿ ಬಿಜೆಪಿಯನ್ನು ಈ ಹಿಂದೆ ಎರಡು ಬಾರಿಯೂ ಅಧಿಕಾರಕ್ಕೆ ತಂದ ಶ್ರೇಯ ಮನೋಹರ್ ಪರಿಕ್ಕರ್‌ ಅವರಿಗೆ ಸಲ್ಲುತ್ತದೆ. 2012ರ ವಿಧಾನಸಭಾ ಚುನಾವಣೆಗೂ ಮುನ್ನ ಗೋವಾದ ಮನೆಮನೆಗೂ ಭೇಟಿ ನೀಡಿದ್ದ ಪರಿಕ್ಕರ್‌ ಅವರು, ಚುನಾವಣೆಯಲ್ಲಿ ಸರಳ ಬಹುಮತ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಈ ಕಾರಣದಿಂದ ಬಿಜೆಪಿ ಸರ್ಕಾರ ರಚಿಸಲು ಸಾಧ್ಯವಾಗಿತ್ತು. ಬಿಜೆಪಿಯ ಇಂದಿನ ಸ್ಥಿತಿಯನ್ನು ಪರಿಕ್ಕರ್ ಅವರ ಅವಧಿಯ ಬಿಜೆಪಿ ಜತೆಗೆ ಹೋಲಿಸಿಯೇ ನೋಡಬೇಕಾಗುತ್ತದೆ.

ಗೋವಾದ ಕೆಲವು ಪ್ರದೇಶಗಳಲ್ಲಿ ಕ್ಯಾಥೊಲಿಕ್ ಕ್ರಿಶ್ಚಿಯನ್ನರ ಪ್ರಾಬಲ್ಯವಿದೆ. ಇದನ್ನು ಸರಿಯಾಗಿ ಅರಿತಿದ್ದ ಪರಿಕ್ಕರ್ ಅವರು, ಅಂತಹ ಕ್ಷೇತ್ರಗಳಲ್ಲಿ ಕ್ಯಾಥೊಲಿಕ್ ಅಭ್ಯರ್ಥಿಗಳನ್ನೇ ಕಣಕ್ಕೆ ಇಳಿಸಿದ್ದರು. ಕ್ಯಾಥೊಲಿಕ್ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದರು ಎಂದು ಸರಳವಾಗಿ ಹೇಳಿದರೆ, ಅವರ ತಂತ್ರಗಾರಿಕೆ ಅರ್ಥವಾಗುವುದಿಲ್ಲ. ಬದಲಿಗೆ ಆ ಪಂಥದ ನಾಯಕರು ಮತ್ತು ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದರು. ಆ ಪಂಥದ ಜನರ ಪ್ರತಿ ಮನೆಗೂ ಭೇಟಿ ನೀಡಿ, ಮತ ನೀಡುವಂತೆ ಮನವಿ ಮಾಡಿಕೊಂಡಿದ್ದರು. ವಿಶ್ವಾಸದ ಮಾತುಗಳನ್ನಾಡಿದ್ದರು. ಎಲ್ಲಿಯೂ ಬಿಜೆಪಿಯ ಹಿಂದುತ್ವದ ಮಾತುಗಳು ಚುನಾವಣಾ ಕಣದಲ್ಲಿ ಕೇಳದಂತೆ ನೋಡಿಕೊಂಡಿದ್ದರು. ಧಾರ್ಮಿಕ ಧ್ರುವೀಕರಣದ ತಂತ್ರಗಳನ್ನು ದೂರವಿಟ್ಟಿದ್ದರು. ಹೀಗಾಗಿ ಬಿಜೆಪಿಯಿಂದ ಕಣಕ್ಕೆ ಇಳಿದಿದ್ದ ಕ್ಯಾಥೊಲಿಕ್ ಪಂಗಡದ ಏಳೂ ಅಭ್ಯರ್ಥಿಗಳು ವಿಧಾನಸಭೆಗೆ ಆರಿಸಿ ಬಂದರು.

ಉಳಿದೆಡೆ ಸ್ಪರ್ಧಿಸಿದ್ದ ಬಿಜೆಪಿಯ ಹಿಂದೂ ಅಭ್ಯರ್ಥಿಗಳಿಗೆ ಕ್ಯಾಥೊಲಿಕ್ ಪಂಥದ ಜನರೂ ಮತ ಹಾಕುವಂತೆ, ಅವರಲ್ಲಿ ವಿಶ್ವಾಸ ಮೂಡಿಸಿದ್ದರು. ಈ ಕಾರಣದಿಂದ 2012ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು 21 ಕ್ಷೇತ್ರಗಳಲ್ಲಿ ಆರಿಸಿ ಬಂದರು. ಹೀಗಿದ್ದೂ, ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದ ಎಂಜಿಪಿ ಜತೆ ಸೇರಿಕೊಂಡೇ ಸರ್ಕಾರ ರಚಿಸಿದರು. ಸಂಪುಟದಲ್ಲಿ ಎಂಜಿಪಿಗೂ ಸ್ಥಾನ ನೀಡಿದರು.ಬಿಜೆಪಿಯನ್ನಲ್ಲ, ಪರಿಕ್ಕರ್ ಅವರ ಸಲುವಾಗಿ ಬಿಜೆಪಿಗೆ ಮತ ನೀಡುತ್ತಿದ್ದೇವೆ ಎಂದು ಮತದಾರರು ಆಗ ಹೇಳಿದ್ದರು.

ಆದರೆ ಪರಿಕ್ಕರ್ ಅವರು ರಾಷ್ಟ್ರ ರಾಜಕಾರಣಕ್ಕೆ ತೆರಳಿದ ನಂತರ ಬಿಜೆಪಿಯ ಅವನತಿ ಆರಂಭವಾಯಿತು. ಸೂಕ್ತ ನಾಯಕನ ಮುಂದಾಳತ್ವ ಇಲ್ಲದ ಕಾರಣ, ಬಿಜೆಪಿ ಚುನಾವಣೆಗೂ ಮುನ್ನ ನೀಡಿದ್ದ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗಲಿಲ್ಲ. 2017ರ ಚುನಾವಣೆ ವೇಳೆಗೆ ಪಕ್ಷಕ್ಕೆ ಆಗಿದ್ದ ಹಾನಿಯನ್ನು ಸರಿಪಡಿಸಲು, ಪರಿಕ್ಕರ್ ಅವರಿಗೇ ಮುಂದಾಳತ್ವ ನೀಡಲಾಯಿತು. ಆದರೆ, ಪಕ್ಷವು ನಿರೀಕ್ಷಿತ ಮಟ್ಟದಲ್ಲಿ ಗೆಲುವು ಸಾಧಿಸಲಿಲ್ಲ. 13 ಸ್ಥಾನಗಳಿಗಷ್ಟೇ ಪಕ್ಷವು ತೃಪ್ತಿಪಟ್ಟುಕೊಳ್ಳಬೇಕಾಯಿತು. ಹೀಗಿದ್ದೂ, ಬಿಜೆಪಿ ತನ್ನ ಎಂದಿನ ‘ಆಪರೇಷನ್ ಕಮಲ’ದ ಮೂಲಕ ಗೋವಾದಲ್ಲಿ ಮತ್ತೆ ಸರ್ಕಾರ ರಚಿಸಿತು. ‘ಐದು ವರ್ಷದುದ್ದಕ್ಕೂ ವಿಪಕ್ಷಗಳ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದರಲ್ಲೇ ಬಿಜೆಪಿ ನಾಯಕರು ಹೆಚ್ಚು ಸಮಯ ಕಳೆದರು. ಪರಿಕ್ಕರ್ ನಿಧನದಿಂದ ತೆರವಾದ ಸ್ಥಾನವನ್ನು ತುಂಬಬಲ್ಲ ಒಬ್ಬ ಸಮರ್ಥ ನಾಯಕನನ್ನು ಬೆಳೆಸುವಲ್ಲಿ ಅಥವಾ ರೂಪಿಸುವಲ್ಲಿ ಬಿಜೆಪಿ ಆಸಕ್ತಿ ತೋರಲಿಲ್ಲ’ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಪಕ್ಷಾಂತರಿಗಳಿಂದಲೇ ತುಂಬಿಹೋದ ಪಕ್ಷದಲ್ಲಿ ಈಗ ಒಳಜಗಳಗಳಿವೆ. ಮೂಲ ಬಿಜೆಪಿಗರು ಮತ್ತು ವಲಸೆ ಬಿಜೆಪಿಗರ ನಡುವೆ ವೈಮನಸ್ಸಿದೆ. ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರ ನಾಯಕತ್ವದಲ್ಲಿ ನಂಬಿಕೆ ಇಲ್ಲ ಎಂಬುದನ್ನು ಹಲವರು ಬಹಿರಂಗವಾಗಿಯೇ ಹೇಳಿದ್ದಾರೆ. ಧಾರ್ಮಿಕ ಧ್ರುವೀಕರಣಕ್ಕೆ ಕೆಲವು ಬಿಜೆಪಿ ನಾಯಕರು ಮುಂದಾಗಿದ್ದು ಪ್ರತಿಕೂಲ ಪರಿಣಾಮ ಬೀರಿದೆ. ಗೋವಾದ ಸಂಸ್ಕೃತಿಗೆ ವ್ಯತಿರಿಕ್ತವಾದ ಇಂತಹ ಬೆಳವಣಿಗೆಗಳ ಬಗ್ಗೆ ಅಸಹನೆ ಹೊರಹಾಕಿ, ಹಲವು ನಾಯಕರು ಪಕ್ಷದಿಂದ ಹೊರಬಿದ್ದಿದ್ದಾರೆ. ಜನರಲ್ಲೂ ಆಡಳಿತ ವಿರೋಧಿ ಅಲೆ ಕಾಣುತ್ತಿದೆ ಎಂಬುದು ಪರಿಣಿತರ ಅಭಿಪ್ರಾಯ.

ಗೋವಾಗೆ ಒಗ್ಗದ ತಂತ್ರಗಾರಿಕೆಗಳು, ಧಾರ್ಮಿಕ ಧ್ರುವೀಕರಣ ಮತ್ತು ಸೂಕ್ತ ನಾಯಕನಿಲ್ಲದೆ ಬಿಜೆಪಿ ಚುನಾವಣಾ ಕಣಕ್ಕೆ ಧುಮುಕಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಹೇಳಿಕೊಂಡೇ ಮತ ಕೇಳಬೇಕು. ಬೇರೆ ಆಯ್ಕೆಯೇ ಗೋವಾ ಬಿಜೆಪಿ ಎದುರು ಇಲ್ಲದಂತಾಗಿದೆ ಎಂದು ವಿರೋಧ ಪಕ್ಷಗಳು ಲೇವಡಿ ಮಾಡುತ್ತಿವೆ.

ಬರಹ: ಜಯಸಿಂಹ ಆರ್., ಅಮೃತ ಕಿರಣ್ ಬಿ.ಎಂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT