ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ | ಗುಜರಾತ್ ವಿಧಾನಸಭಾ ಚುನಾವಣೆ: ಉಚಿತ ಕೊಡುಗೆಗಳ ಮೇಲಾಟ

Last Updated 10 ಅಕ್ಟೋಬರ್ 2022, 19:30 IST
ಅಕ್ಷರ ಗಾತ್ರ

ಗುಜರಾತ್‌ನಲ್ಲಿ ಚುನಾವಣಾ ಕಣ ರಂಗು ಪಡೆದುಕೊಂಡಿದೆ. ಒಂದೆಡೆ, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಗುಜರಾತ್ ಬಿಜೆಪಿ ದೊಡ್ಡ ಮಟ್ಟದ ಪ್ರಚಾರ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಅಕ್ಟೋಬರ್‌ ಮೊದಲ ವಾರದಲ್ಲೇ ಮೋದಿ ಅವರು ಗುಜರಾತ್‌ನಲ್ಲಿ ಹತ್ತಕ್ಕೂ ಹೆಚ್ಚು ಭಾರಿ ಯೋಜನೆಗಳನ್ನು ಉದ್ಘಾಟಿಸಿದ್ದಾರೆ.

ಮತ್ತೊಂದೆಡೆ ಎಎಪಿ ಭಾರಿ ಸಿದ್ಧತೆಯೊಂದಿಗೆ ಕಣಕ್ಕೆ ಇಳಿದಿದೆ. ಎಎಪಿ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಸ್ವತಃ ಪ್ರಚಾರಕ್ಕೆ ಧುಮಕಿದ್ದಾರೆ. ಮೇಲ್ನೋಟಕ್ಕೆ ಬಿಜೆಪಿ ಮತ್ತು ಎಎಪಿ ಮಧ್ಯೆ ಮಾತ್ರ ಸ್ಪರ್ಧೆ ಇದೆ ಎಂದು ಭಾಸವಾಗುತ್ತದೆ. ಆದರೆ, ಕಾಂಗ್ರೆಸ್‌ ಇವೆರಡೂ ಪಕ್ಷಗಳಿಗಿಂತ ವ್ಯವಸ್ಥಿತವಾಗಿ ಪ್ರಚಾರ ನಡೆಸುತ್ತಿದೆ. ಹೀಗಾಗಿ ಈ ಬಾರಿಯದ್ದು ತ್ರಿಕೋನ ಸ್ಪರ್ಧೆಯೇ ಆಗಲಿದೆ.

ಪ್ರಧಾನಿ ಮೋದಿ ಅವರು ತಮ್ಮ ತವರು ರಾಜ್ಯದಲ್ಲಿ ಪ್ರಚಾರ ಆರಂಭಿಸುವ ಮುನ್ನವೇ, ಅರವಿಂದ ಕೇಜ್ರಿವಾಲ್ ಅವರು ಅಹಮದಾಬಾದ್‌ನ ಬೀದಿಗಳಲ್ಲಿ ಎಎಪಿ ಪರವಾಗಿ ಪ್ರಚಾರ ಆರಂಭಿಸಿದ್ದರು. ಸೆಪ್ಟೆಂಬರ್‌ನಲ್ಲಿ ಕೇಜ್ರಿವಾಲ್‌ ಅವರು ಅಹಮದಾಬಾದ್‌ನ ಆಟೊ ಚಾಲಕರೊಬ್ಬರ ಮನೆಗೆ ಭೇಟಿ ನೀಡಿ, ಊಟ ಮಾಡಿ ಬಂದರು. ಕೇಜ್ರಿವಾಲ್‌ ಅವರು ಉಳಿದಿದ್ದ ಪಂಚತಾರಾ ಹೋಟೆಲ್‌ನಿಂದ ಆ ಆಟೊ ಚಾಲಕ, ಅವರನ್ನು ತಮ್ಮ ಮನೆಗೆ ಆಟೊದಲ್ಲೇ ಕರೆದೊಯ್ದಿದ್ದರು. ಇದು ದೊಡ್ಡ ಸುದ್ದಿಯಾಗಿತ್ತು. ಬಿಜೆಪಿ ಎಚ್ಚೆತ್ತುಕೊಂಡಿದ್ದು ಆಗಲೇ. ಕೇಜ್ರಿವಾಲ್‌ ಅವರು ಅಹಮದಾಬಾದ್‌ನಲ್ಲಿ ಆಟೊದಲ್ಲಿ ಸಂಚರಿಸಿದ್ದಕ್ಕೆ, ಬಿಜೆಪಿ ಕಾರ್ಯಕರ್ತರು ದೆಹಲಿಯಲ್ಲಿ ಪ್ರತಿಭಟಿಸಿದರು. ಕೇಜ್ರಿವಾಲ್‌ ಮತ್ತೆ ಮತ್ತೆ ಗುಜರಾತ್‌ಗೆ ಭೇಟಿ ನೀಡಿದರು. ಬಿಜೆಪಿ ತನ್ನ ಪ್ರಚಾರ ತಂತ್ರವನ್ನೇ ಬದಲಿಸಿತು.

ಹಾಗೆ ನೋಡಿದರೆ ಈ ಚುನಾವಣೆ ನಡೆಸಲು ಬಿಜೆಪಿ ಹಲವು ತಿಂಗಳ ಹಿಂದಿನಿಂದಲೇ ಕಾರ್ಯಪ್ರವೃತ್ತವಾಗಿತ್ತು. ಎಂದಿನಂತೆ, ಎದುರಾಳಿ ಪಕ್ಷಗಳ ನಾಯಕರನ್ನು ತನ್ನತ್ತ ಸೆಳೆಯಲು ಆರಂಭಿಸಿತ್ತು. ಪಾಟೀದಾರ್‌ ಮೀಸಲಾತಿ ಹೋರಾಟದ ಮುಂದಾಳುವಾಗಿದ್ದ ಹಾರ್ದಿಕ್‌ ಪಟೇಲ್‌ ಅವರನ್ನು ಬಿಜೆಪಿ ತನ್ನತ್ತ ಸೆಳೆದುಕೊಂಡಿತು.

ಆದರೆ, ಬಿಜೆಪಿಯ ಈ ತಂತ್ರಗಾರಿಕೆಗೆ ಬಹಿರಂಗವಾಗಿ ಸವಾಲೊಡ್ಡಿದ್ದು ಎಎಪಿ. ಎಎಪಿಯ ಭಾರಿ ಪ್ರಚಾರದ ನಂತರ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಪ್ರಚಾರ ಆರಂಭಿಸಿದರು. ಬಿಜೆಪಿ ದೊಡ್ಡ ಮಟ್ಟದ ಪ್ರಚಾರ ರ‍್ಯಾಲಿಗಳನ್ನು ಆಯೋಜಿಸಿತು. ಪ್ರಧಾನಿ ಮೋದಿ ಹತ್ತಾರು ಕಾರ್ಯಕ್ರಮಗಳನ್ನು ಉದ್ಘಾಟಿಸಿದರು. ವಂದೇ ಭಾರತ್ ರೈಲಿಗೂ ಚಾಲನೆ ನೀಡಿ, ಪ್ರಯಾಣಿಕರ ಜತೆಗೆ ಸಂವಾದ ನಡೆಸಿದರು. ಪ್ರಧಾನಿ ಮೋದಿ ಅವರು ಭಾಗವಹಿಸಿದ್ದ ರ‍್ಯಾಲಿಗಳಲ್ಲಿ ಹೆಚ್ಚಿನ ಕುರ್ಚಿಗಳು ಖಾಲಿ ಇದ್ದ ವಿಡಿಯೊಗಳನ್ನು ಎಎಪಿ ಟ್ವೀಟ್ ಮಾಡಿತು.

ಈ ಎರಡೂ ಪಕ್ಷಗಳು ಪರಸ್ಪರರ ವಿರುದ್ಧ ಮಾತ್ರ ಹೋರಾಡುತ್ತಿವೆ. ಬಿಜೆಪಿ ನಾಯಕರು ತಮ್ಮ ಭಾಷಣಗಳಲ್ಲಿ ಈಗ ಎಎಪಿ ವಿರುದ್ಧ ಮಾತ್ರ ಹರಿಹಾಯುತ್ತಿದ್ದಾರೆ. ಕಾಂಗ್ರೆಸ್‌ ವಿರುದ್ಧ ಅವರು ಮಾತನಾಡಿದ್ದು ಇಲ್ಲವೇ ಇಲ್ಲ ಎನ್ನಬಹುದು. ಸೋಮವಾರದ ತಮ್ಮ ಭಾಷಣದಲ್ಲಿ ಮಾತ್ರ ಮೋದಿ ಅವರು ನೆಹರೂ ಅವರನ್ನು ಟೀಕಿಸಿದ್ದಾರೆ. ಎಎಪಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ. ಕೇಜ್ರಿವಾಲ್ ಅವರು, ‘ಕಾಂಗ್ರೆಸ್ ಕತೆ ಮುಗಿದಿದೆ. ಅದನ್ನು ಲೆಕ್ಕಕ್ಕೆ ಇಟ್ಟುಕೊಳ್ಳಬೇಡಿ’ ಎಂದೇ ಘೋಷಿಸಿಬಿಟ್ಟಿದ್ದಾರೆ. ಆದರೆ, ವಾಸ್ತವ ಸ್ಥಿತಿ ಹಾಗಿಲ್ಲ. ಕಾಂಗ್ರೆಸ್‌ ಸಹ ವ್ಯವಸ್ಥಿತವಾಗಿ ಪ್ರಚಾರ ನಡೆಸುತ್ತಿದೆ.

ಕಾಂಗ್ರೆಸ್‌ ತಂತ್ರದ ಬಗ್ಗೆ ಮೋದಿ ಎಚ್ಚರಿಕೆ

ಗುಜರಾತ್‌ ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್‌ನ ಬಗ್ಗೆ ಬಿಜೆಪಿ ಈವರೆಗೆ ಗಮನ ನೀಡಿರಲೇ ಇಲ್ಲ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರವಷ್ಟೇ ತಮ್ಮ ಪಕ್ಷದ ಕಾರ್ಯಕರ್ತರಿಗೆ, ‘ಕಾಂಗ್ರೆಸ್‌ ಬಗ್ಗೆ ಎಚ್ಚರದಿಂದ ಇರಿ’ ಎಂದು ಕಿವಿಮಾತು ಹೇಳಿದ್ದಾರೆ.

ಪಕ್ಷದ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಜಿಗ್ನೇಶ್ ಮೆವಾನಿ ನೇತೃತ್ವದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಪ್ರಚಾರ ಕಾರ್ಯ ನಡೆಸಲಾಗುತ್ತಿದೆ. ಕಾಂಗ್ರೆಸ್‌ ಶಾಸಕರು ಇರುವ ಕ್ಷೇತ್ರಗಳಲ್ಲಿ ರ‍್ಯಾಲಿ ಮತ್ತು ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಬಿಜೆಪಿ ಶಾಸಕರ ಕ್ಷೇತ್ರಗಳಲ್ಲಿ ಮನೆ ಮನೆ ಭೇಟಿ ಕಾರ್ಯಕ್ರಮಕ್ಕೆ ಆದ್ಯತೆ ನೀಡಲಾಗಿದೆ. ಈ ಯಾವ ಕಾರ್ಯಕ್ರಮವೂ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ‘ಬಿಜೆಪಿ ಮತ್ತು ಎಎಪಿ ಪರಸ್ಪರ ಕಿತ್ತಾಡಿಕೊಳ್ಳಲಿ, ನಾವು ಜನರ ಬಳಿ ಮಾತನಾಡುತ್ತೇವೆ’ ಎಂದು ಗುಜರಾತ್ ಕಾಂಗ್ರೆಸ್‌ನ ನಾಯಕರೊಬ್ಬರು ಹೇಳಿದ್ದಾರೆ. ಈ ತಂತ್ರ ಕೆಲಸ ಮಾಡುತ್ತಿದೆ. ಈ ಕಾರಣದಿಂದಲೇ ಮೋದಿ ಅವರು ತಮ್ಮ ಪಕ್ಷದ ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿದ್ದು.

‘ಪ್ರತಿ ಚುನಾವಣೆಯಲ್ಲಿ ಕಾಂಗ್ರೆಸ್‌ ಬೀದಿಗೆ ಇಳಿದು, ನಮ್ಮ ವಿರುದ್ಧ ಟೀಕೆ ಮಾಡುತ್ತಿತ್ತು. ಈಗ ಕಾಂಗ್ರೆಸ್ ಮೌನಕ್ಕೆ ಜಾರಿದಂತೆ ಕಾಣುತ್ತಿದೆ. ಆದರೆ, ಕಾಂಗ್ರೆಸ್‌ ಗುಪ್ತಗಾಮಿನಿಯಾಗಿ ಪ್ರಚಾರ ನಡೆಸುತ್ತಿದೆ ಎಂದು ನನಗೆ ಅನಿಸುತ್ತಿದೆ. ಅದನ್ನು ಪರಿಶೀಲಿಸಬೇಕು. ಕಾಂಗ್ರೆಸ್‌ ಪತ್ರಿಕಾಗೋಷ್ಠಿಗಳನ್ನು ನಡೆಸುತ್ತಿಲ್ಲ, ಪ್ರಚಾರ ನಡೆಸುತ್ತಿಲ್ಲ ಎಂದು ಅದನ್ನು ಕಡೆಗಣಿಸುವುದು ಅಪಾಯ. ಈಗ ಅವರು ರಾಜ್ಯದ ಪ್ರತಿ ಹಳ್ಳಿ–ಹಳ್ಳಿಗೂ ಹೋಗಿ ಜನರೊಂದಿಗೆ ಮಾತನಾಡುತ್ತಿದ್ದಾರೆ. ಜನರನ್ನು ತಮ್ಮತ್ತ ಸೆಳೆಯುತ್ತಿದ್ದಾರೆ. ಈ ಬಗ್ಗೆ ನಾವು ಎಚ್ಚರದಿಂದ ಇರಬೇಕು’ ಎಂದು ಮೋದಿ ಹೇಳಿದ್ದಾರೆ. ಮೋದಿ ಅವರ ಎಚ್ಚರಿಕೆಯಲ್ಲಿ ಹುರುಳಿದೆ. ಗುಜರಾತ್‌ನಲ್ಲಿ ಬಿಜೆಪಿಯ ಗಟ್ಟಿ ನೆಲೆ ಇರುವುದು ನಗರ ಪ್ರದೇಶದಲ್ಲಿ. ಎಎಪಿ ಸಹ ನಗರ ಪ್ರದೇಶದ ಮತದಾರರನ್ನು ಗುರಿ ಮಾಡಿಕೊಂಡಿದೆ. ಆದರೆ, ಕಾಂಗ್ರೆಸ್‌ ಗ್ರಾಮೀಣ ಪ್ರದೇಶದಲ್ಲಿನ ತನ್ನ ನೆಲೆಯನ್ನು ಗಟ್ಟಿ ಮಾಡಿಕೊಳ್ಳುತ್ತಿದೆ ಎಂದು ವಿಶ್ಲೇಷಿಸಲಾಗಿದೆ.

ಕೇಜ್ರಿವಾಲ್ ಭರಪೂರ ವಾಗ್ದಾನ

ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಈ ಬಾರಿ ಗುಜರಾತ್‌ನಲ್ಲಿ ಶತಾಯಗತಾಯ ಅಧಿಕಾರ ಹಿಡಿಯುವ ಹಟ ತೊಟ್ಟಿದ್ದಾರೆ. ದೆಹಲಿಯಲ್ಲಿ ಜಾರಿಯಲ್ಲಿರುವ ಹಲವು ಯೋಜನೆಗಳನ್ನು ಗುಜರಾತ್‌ನಲ್ಲಿಯೂ ಜಾರಿಗೆ ತರುವುದಾಗಿ ಕೇಜ್ರಿವಾಲ್‌ ಘೋಷಿಸಿದ್ದಾರೆ. ವಿದ್ಯುತ್, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಭರಪೂರ ಕೊಡುಗೆಗಳನ್ನು ಪ್ರಕಟಿಸಿದ್ದಾರೆ. ನಿರುದ್ಯೋಗಿ ಯುವಕ, ಯುವತಿಯರಿಗೆ ತಿಂಗಳಿಗೆ ₹3,000 ಭತ್ಯೆ ನೀಡುವುದಾಗಿ ಅವರು ಪ್ರಕಟಿಸಿದ್ದಾರೆ. ರಾಜ್ಯದ ಎಲ್ಲ ಮಹಿಳೆಯರಿಗೆ ₹1,000 ಸಹಾಯಧನ ನೀಡುವ ಘೋಷಣೆ ಮಾಡಿದ್ದಾರೆ. ರಾಜ್ಯದ ಪ್ರತೀ ಮನೆಗೆ 300 ಯೂನಿಟ್ ಉಚಿತ ವಿದ್ಯುತ್, ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್, 2021ರ ಡಿಸೆಂಬರ್‌ವರೆಗಿನ ವಿದ್ಯುತ್ ಬಾಕಿ ಮನ್ನಾ ಮಾಡುವುದಾಗಿ ಕೇಜ್ರಿವಾಲ್ ಭರವಸೆ ಕೊಟ್ಟಿದ್ದಾರೆ.

ಎಎಪಿ ಭರವಸೆಗಳನ್ನು ಈಡೇರಿಸುತ್ತಿದೆ ಬಿಜೆಪಿ

ವೇತನ ಪರಿಷ್ಕರಣೆ ಸೇರಿದಂತೆ ಎಎಪಿ ನೀಡಿದ್ದ ಭರವಸೆಗಳನ್ನು ಹೈಜಾಕ್ ಮಾಡಿರುವ ಬಿಜೆಪಿ, ಅವುಗಳನ್ನು ಇದೇ ಅವಧಿಯಲ್ಲಿ ಕಾರ್ಯರೂಪಕ್ಕೆ ತರುತ್ತಿದೆ ಎಂದು ಆರೋಪಿಸಲಾಗಿದೆ. ಎಎಪಿ ಅಧಿಕಾರಕ್ಕೆ ಬಂದರೆ ಪೊಲೀಸರು, ಅಂಗನವಾಡಿ ಕಾರ್ಯಕರ್ತೆಯರು, ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಮಾಡುವುದಾಗಿ ಎಎಪಿ ಘೋಷಿಸಿತ್ತು. ತಕ್ಷಣವೇ ಕಾರ್ಯಪ್ರವೃತ್ತವಾದ ಬಿಜೆಪಿ, ಪೊಲೀಸರ ವೇತನ ಹೆಚ್ಚಿಸಲು ₹550 ಕೋಟಿ ಪ್ಯಾಕೇಜ್ ಘೋಷಿಸಿತು. ಅಂಗನವಾಡಿ ಸಿಬ್ಬಂದಿ ವೇತನವನ್ನು ₹10,000ಕ್ಕೆ ಹೆಚ್ಚಿಸಿತು. ಸರ್ಕಾರಿ ನೌಕರರ ವೇತನವೂ ಪರಿಷ್ಕರಣೆ ಆಗಲು ಕೇಜ್ರಿವಾಲ್‌ ಅವರು ನೀಡಿದ್ದ ಭರವಸೆಯೇ ಕಾರಣವಾಯಿತು.

ರಾಜ್ಯದ ಒಬಿಸಿ ಸಮುದಾಯದ ಮೇಲೆ ಕಣ್ಣಿಟ್ಟಿದ್ದ ಕೇಜ್ರಿವಾಲ್ ಅವರು, ಜಾನುವಾರು ನಿಯಂತ್ರಣ ಕಾಯ್ದೆ ವಾಪಸ್ ಪಡೆಯಲು ಮಾಲ್ದಾರಿ ಸಮುದಾಯ ನಡೆಸಿದ್ದ ಪ್ರತಿಭಟನೆಗೆ ಬೆಂಬಲ ಘೋಷಿಸಿದರು. ಕೇಜ್ರಿವಾಲ್ ಅವರ ತಂತ್ರಗಾರಿಕೆ ಅರಿತ ಬಿಜೆಪಿ, ತಕ್ಷಣವೇ ಕಾಯ್ದೆ ವಾಪಸ್ ಪಡೆದು, ಸರ್ಕಾರವು ಸಮುದಾಯದ ಪರವಾಗಿದೆ ಎಂದು ಬಿಂಬಿಸಿಕೊಂಡಿತು. ಆರು ವರ್ಷಗಳ ಹಿಂದೆ ನಿವೃತ್ತ ಸೈನಿಕರು ನೀಡಿದ್ದ 14 ಅಂಶಗಳ ಬೇಡಿಕೆಗಳನ್ನು ಈಡೇರಿಸುವುದಾಗಿ ಕೇಜ್ರಿವಾಲ್ ಭರವಸೆ ನೀಡಿದ್ದೇ ತಡ, ಹುತಾತ್ಮ ಸೈನಿಕರಿಗೆ ನೀಡುವ ಪರಿಹಾರ ಮೊತ್ತವನ್ನು ₹1 ಲಕ್ಷದಿಂದ ₹1 ಕೋಟಿಗೆ ಏರಿಸುವ ಹಾಗೂ ಸೈನಿಕ ಸ್ಮಾರಕ ನಿರ್ಮಿಸುವ ಘೋಷಣೆಯನ್ನು ಬಿಜೆಪಿ ಮಾಡಿತು.

ಕಾಂಗ್ರೆಸ್‌ನಿಂದಲೂ ಮಹಾಪೂರ

ಉಚಿತ ಕೊಡುಗೆ ಘೋಷಿಸುವಲ್ಲಿ ಕಾಂಗ್ರೆಸ್ ಪಕ್ಷವೂ ಹಿಂದೆ ಬಿದ್ದಿಲ್ಲ. ರಾಜ್ಯದ ಪ್ರತೀ ನಿವಾಸಿಗೆ ₹10 ಲಕ್ಷದವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆ ಹಾಗೂ ಉಚಿತ ಔಷಧ ನೀಡುವ ವಾಗ್ದಾನ ಮಾಡಿದೆ. ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ₹4 ಲಕ್ಷ ಆರ್ಥಿಕ ನೆರವು, ರೈತರ ₹3 ಲಕ್ಷದವರೆಗಿನ ಬೆಳೆಸಾಲ ಮನ್ನಾ, ಹಾಲು ಉತ್ಪಾದಕರಿಗೆ ಲೀಟರ್‌ಗೆ ₹5 ಸಹಾಯಧನ ನೀಡುವುದಾಗಿ ಪಕ್ಷ ಪ್ರಕಟಿಸಿದೆ. ಮನೆಗಳಿಗೆ 300 ಯೂನಿಟ್ ವಿದ್ಯುತ್, ಹಾಗೂ ನಿರುದ್ಯೋಗ ಭತ್ಯೆ ನೀಡುವ ಎಎಪಿ ಭರವಸೆಗಳನ್ನು ಕಾಂಗ್ರೆಸ್ ಸಹ ನೀಡಿದೆ.

ಯೋಜನೆಗಳ ಸರಮಾಲೆ

ಎಎಪಿ ಹಾಗೂ ಕಾಂಗ್ರೆಸ್‌ ಉಚಿತ ಕೊಡುಗೆಗಳ ಮೊರೆ ಹೋಗಿದ್ದರೆ, ಬಿಜೆಪಿ ಸರ್ಕಾರವು ಬೃಹತ್ ಯೋಜನೆಗಳ ಮೂಲಕ ಜನರ ಮನವೊಲಿಕೆಯಲ್ಲಿ ತೊಡಗಿದೆ. ಮೂರ್ನಾಲ್ಕು ತಿಂಗಳ ಅವಧಿಯಲ್ಲಿ ರಾಜ್ಯಕ್ಕೆ ಕೋಟ್ಯಂತರ ರೂಪಾಯಿ ಮೌಲ್ಯದ ಹತ್ತಾರು ಯೋಜನೆಗಳನ್ನು ಬಿಜೆಪಿ ಘೋಷಿಸಿದೆ.ಸದ್ಯ ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು ₹14,600 ಕೋಟಿ ಮೊತ್ತದ ವಿವಿಧ ಯೋಜನೆಗಳಿಗೆ ಸೋಮವಾರ ಚಾಲನೆ ನೀಡಿದರು. ಸೂರತ್‌, ಭಾವನಗರ, ಅಹಮದಾಬಾದ್ ನಗರಗಳಲ್ಲಿ ಸುಮಾರು ₹21 ಸಾವಿರ ಕೋಟಿ ಮೊತ್ತದ ಯೋಜನೆಗಳಿಗೆ ಸೆಪ್ಟೆಂಬರ್‌ನಲ್ಲಿ ಚಾಲನೆ ನೀಡಿದ್ದರು. ಇದೇ ಏಪ್ರಿಲ್‌ನಲ್ಲಿ ₹22 ಸಾವಿರ ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಶಿಲಾನ್ಯಾಸ ಮಾಡಿದ್ದರು. ಜೂನ್‌ ತಿಂಗಳಲ್ಲಿ ವಡೋದರದಲ್ಲಿ ನಡೆದ ಗೌರವ ಅಭಿಯಾನದಲ್ಲಿ ಭಾಗಿಯಾಗಿದ್ದ ಪ್ರಧಾನಿ, ₹21 ಸಾವಿರ ಕೋಟಿ ಮೊತ್ತದ ಕಾಮಗಾರಿಗಳಿಗೆ ಚಾಲನೆ ನೀಡಿದ್ದರು.

‘ಆರ್ಥಿಕ ಬಿಕ್ಕಟ್ಟಿನಲ್ಲಿ ಸರ್ಕಾರ’

ಉಚಿತ ಕೊಡುಗೆ ಘೋಷಿಸುವ ಮುನ್ನ, ಸರ್ಕಾರದ ಆರ್ಥಿಕ ಸ್ಥಿತಿ ಹೇಗಿದೆ ಎಂದು ಪರಿಶೀಲಿಸುವ ಗೋಜಿಗೆ ಯಾವ ಪಕ್ಷವೂ ಹೋದಂತಿಲ್ಲ. ಇದೇ ಮಾರ್ಚ್‌ನಲ್ಲಿ ಸಿಎಜಿ ಬಿಡುಗಡೆ ಮಾಡಿದ ವರದಿಯಲ್ಲಿ, ಸರ್ಕಾರವು ಸಾಲದ ಸುಳಿಯಲ್ಲಿದ್ದು, ಪರಿಸ್ಥಿತಿ ಬಿಗಡಾಯಿಸುತ್ತಿರುವುದರತ್ತ ಬೊಟ್ಟು ಮಾಡಿತ್ತು. ಮುಂದಿನ 7 ವರ್ಷಗಳಲ್ಲಿ ಸರ್ಕಾರವು ₹1.67 ಲಕ್ಷ ಕೋಟಿ ಮರುಪಾವತಿ ಮಾಡಬೇಕಿದೆ ಎಂದು ತಿಳಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಉಚಿತ ಕೊಡುಗೆಗಳಿಗೆ ಬೇಕಾಗುವ ಹಣವನ್ನು ಎಲ್ಲಿಂದ ತರಲಾಗುತ್ತದೆ ಎಂಬುದು ಸಾರ್ವಜನಿಕರ ಪ್ರಶ್ನೆ.

ಆಧಾರ: ಪಿಟಿಐ, ಎಎಪಿ, ಬಿಜೆಪಿ, ಕಾಂಗ್ರೆಸ್‌ನ ಅಧಿಕೃತ ಟ್ವೀಟ್‌ಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT