ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಅಗಲ| ಟ್ರಂಪ್ ಸೋತರೆ...

Last Updated 5 ನವೆಂಬರ್ 2020, 19:31 IST
ಅಕ್ಷರ ಗಾತ್ರ

ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಇನ್ನಷ್ಟೇ ಪ್ರಕಟವಾಗಬೇಕಿದೆ. ಆದರೆ ಈ ಚುನಾವಣೆಯಲ್ಲಿ ಸೋತರೆ ‘ಸುಪ್ರೀಂ ಕೋರ್ಟ್‌ ಮೊರೆ ಹೋಗುತ್ತೇನೆ, ಕಾನೂನು ಹೋರಾಟದ ಮೂಲಕ ಚುನಾವಣೆ ಗೆಲ್ಲುತ್ತೇನೆ’ ಎಂದು ಅಮೆರಿಕದ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಚುನಾವಣೆಯ ಫಲಿತಾಂಶದ ವಿರುದ್ಧ ಅಭ್ಯರ್ಥಿಯೊಬ್ಬರು ಸುಪ್ರೀಂ ಕೋರ್ಟ್‌ಗೆ ಹೋಗುವುದು ಅಮೆರಿಕದ ಇತಿಹಾಸದಲ್ಲಿ ಇದೇ ಮೊದಲಲ್ಲ. ಆದರೆ, ಟ್ರಂಪ್‌ ಅವರು ಸುಪ್ರೀಂ ಕೋರ್ಟ್‌ಗೆ ದೂರು ನೀಡಿದರೆ, ಹಾಲಿ ಅಧ್ಯಕ್ಷರೊಬ್ಬರು ಮರುಆಯ್ಕೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ಗೆ ಹೋದ ಮೊದಲ ಪ್ರಕರಣ ಎಂದು ಇತಿಹಾಸದಲ್ಲಿ ದಾಖಲಾಗುತ್ತದೆ.

2000ದ ಅಧ್ಯಕ್ಷೀಯ ಚುನಾವಣೆಯಲ್ಲಿ ಜಾರ್ಜ್ ಡಬ್ಲ್ಯು ಬುಶ್ ಮತ್ತು ಅಲ್‌ ಗೋರ್ ನಡುವಣ ಸ್ಪರ್ಧೆಯಲ್ಲಿ, ಫ್ಲಾರಿಡಾ ರಾಜ್ಯದ ಫಲಿತಾಂಶದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ವ್ಯಾಜ್ಯ ನಡೆದಿತ್ತು. ಆದರೆ, ಇವರಲ್ಲಿ ಯಾರೂ ಆಗ ಅಧ್ಯಕ್ಷರಾಗಿರಲಿಲ್ಲ. ಈಗ ಪರಿಸ್ಥಿತಿ ಭಿನ್ನವಾಗಿದೆ. ಟ್ರಂಪ್ ಅಧ್ಯಕ್ಷರಾಗಿ ಒಂದು ಅವಧಿ ಬಹುತೇಕ ಪೂರ್ಣಗೊಂಡಿದೆ. ಟ್ರಂಪ್ ನೇಮಕ ಮಾಡಿರುವ ಮೂವರು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳು ಇನ್ನೂ ಸೇವೆಯಲ್ಲಿ ಇದ್ದಾರೆ. ಒಂದೊಮ್ಮೆ ಟ್ರಂಪ್ ಕೋರ್ಟ್‌ ಮೆಟ್ಟಿಲೇರಿದರೆ, ಅಂತಿಮ ತೀರ್ಪಿನ ಮೇಲೆ ಇದು ಪರಿಣಾಮ ಬೀರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಮರುಆಯ್ಕೆ ಚುನಾವಣೆಯಲ್ಲಿ ಸೋತ ಅಭ್ಯರ್ಥಿ ಈವರೆಗೆ, ಚುನಾವಣಾ ಫಲಿತಾಂಶವನ್ನು ತಿರಸ್ಕರಿಸಿದ್ದು ಇಲ್ಲ. ಒಂದೊಮ್ಮೆ ಟ್ರಂಪ್ ಸೋತು, ಫಲಿತಾಂಶ ವನ್ನು ತಿರಸ್ಕರಿಸಿದರೆ ಅದು ಅಮೆರಿಕದ ಇತಿಹಾಸದಲ್ಲಿ ಅಂತಹ ಮೊದಲ ಘಟನೆಯಾಗುತ್ತದೆ. ಆದರೆ, ನೂತನ ಅಧ್ಯಕ್ಷನ ಆಯ್ಕೆ ಮೇಲೆ ಇಂತಹ ಪರಿಸ್ಥಿತಿಯಿಂದ ಹೆಚ್ಚಿನ ಪರಿಣಾಮವೇನೂ ಆಗುವುದಿಲ್ಲ ಎಂದು ಕೊಲಂಬಿಯಾ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಪ್ರಾಧ್ಯಾಪಕರೊಬ್ಬರು ಹೇಳಿದ್ದಾರೆ.

ಈ ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತದೆ. ಟ್ರಂಪ್ ಅವರು ಸುಪ್ರೀಂ ಕೋರ್ಟ್‌ಗೆ ಹೋಗದೇ ಇದ್ದರೆ, ಈಗ ಆಯ್ಕೆಯಾಗಿರುವ ಎಲೆಕ್ಟರ್‌ಗಳು ಡಿಸೆಂಬರ್ 14ರಂದು ನೂತನ ಅಧ್ಯಕ್ಷನನ್ನು ಆಯ್ಕೆ ಮಾಡುತ್ತಾರೆ. ಆ ಮತದಾನವನ್ನು ಜನವರಿ 6ರಂದು ಅಮೆರಿಕದ ಕಾಂಗ್ರೆಸ್ ಪರಿಶೀಲಿಸಿ, ಅನುಮೋದನೆ ನೀಡುತ್ತದೆ. ಅಲ್ಲಿಗೆ ನೂತನ ಅಧ್ಯಕ್ಷನ ಆಯ್ಕೆ ಪೂರ್ಣಗೊಳ್ಳುತ್ತದೆ.

ಬೈಡನ್‌ ಅಧ್ಯಕ್ಷನಾಗಿ ಆಯ್ಕೆಯಾದದ್ದನ್ನು ಟ್ರಂಪ್ ವಿರೋಧಿಸಿ, ಅಧಿಕಾರ ಹಸ್ತಾಂತರಿಸದೇ ಇರಲು ಸಾಧ್ಯವಿಲ್ಲ.ಟ್ರಂಪ್ ಅವರು ಜನವರಿ 20ರ ಮಧ್ಯಾಹ್ನ ಶ್ವೇತಭವನವನ್ನು ತೊರೆಯಬೇಕಾಗುತ್ತದೆ. ಮಧ್ಯಾಹ್ನದ ನಂತರ ನೂತನ ಅಧ್ಯಕ್ಷ ಶ್ವೇತಭವನವನ್ನು ಪ್ರವೇಶಿಸಬೇಕು. ಆ ಮಧ್ಯಾಹ್ನದ ನಂತರ ಅಮೆರಿಕದ ಸೀಕ್ರೆಟ್ ಸರ್ವಿಸ್ ಸಿಬ್ಬಂದಿ, ಟ್ರಂಪ್ ಅವರನ್ನು ಶ್ವೇತಭವನದಿಂದ ಹೊರಗೆ ಕಳುಹಿಸುತ್ತಾರೆ. ಅಮೆರಿಕದ ಇತಿಹಾಸದಲ್ಲಿ ಇಂತಹ ಘಟನೆ ಈವರೆಗೆ ನಡೆದಿಲ್ಲ, ಈ ಬಾರಿಯೂ ನಡೆಯುವುದಿಲ್ಲ ಎಂಬ ನಿರೀಕ್ಷೆ ಇದೆ ಎಂದು ತಜ್ಞರು ಹೇಳಿದ್ದಾರೆ.

ಆಧಾರ: ನ್ಯೂಯಾರ್ಕರ್, ವಾಷಿಂಗ್ಟನ್ ಪೋಸ್ಟ್, ಬಿಬಿಸಿ

***

ಮರುಆಯ್ಕೆಯಲ್ಲಿ ಸೋತವರು

1ವಿಲಿಯಮ್ ಟಾಫ್ಟ್: ಅಮೆರಿಕದ 27ನೇ ಅಧ್ಯಕ್ಷರಾಗಿದ್ದ (1909-1913) ವಿಲಿಯಮ್ ಟಾಫ್ಟ್‌ ಅವರು 1912ರ ಚುನಾವಣೆಯಲ್ಲಿ ವುಡ್ರೋ ವಿಲ್ಸನ್ ಎದುರು ಸೋತರು. 1908ರ ಚುನಾವಣೆಯಲ್ಲಿ ಟಾಫ್ಟ್ ಅವರು ಥಿಯೋಡರ್ ರೂಸ್‌ವೆಲ್ಟ್‌ ಅವರ ಬೆಂಬಲ ಪಡೆದು ಚುನಾವಣೆ ಎದುರಿಸಿದ್ದರು. ಆದರೆ ತಮ್ಮ ಅಧಿಕಾರಾವಧಿಯಲ್ಲಿ ರೂಸ್‌ವೆಲ್ಟ್ ಜತೆಗೆ ಸಂಬಂಧ ಕೆಡಿಸಿಕೊಂಡರು. 1912ರ ಚುನಾವಣೆಯಲ್ಲಿ ರೂಸ್‌ವೆಲ್ಟ್ ಅವರು ಮೂರನೇ ಅಭ್ಯರ್ಥಿಯಾಗಿ ಚುನಾವಣೆಗೆ ಇಳಿದರು. ಹೀಗಾಗಿ ವಿಲ್ಸನ್ ಎದುರು ಟಾಫ್ಟ್ ಸೋತರು.

2 ಹರ್ಬರ್ಟ್ ಹೂವರ್: 1929-1933ರ ಅವಧಿಗೆ ಅಧ್ಯಕ್ಷರಾಗಿದ್ದ ಹರ್ಬರ್ಟ್ ಹೂವರ್ ಅವರ ಅಧಿಕಾರಾವಧಿಯಲ್ಲಿ ಅಮೆರಿಕದ ಷೇರು ಮಾರುಕಟ್ಟೆ ನೆಲಕಚ್ಚಿತ್ತು. ದೇಶದ ಆರ್ಥಿಕತೆ ಕುಂಠಿತವಾಗಿತ್ತು. ಇದು ಚುನಾವಣೆಯಲ್ಲಿ ಹೂವರ್ ಅವರಿಗೆ ವ್ಯತಿರಿಕ್ತವಾಗಿ ಪರಿಣಮಿಸಿತು. ಫ್ರಾಂಕ್ಲಿನ್ ರೂಸ್‌ವೆಲ್ಟ್ ಎದುರು ಅವರು ಸೋತರು. ಅಧಿಕಾರಕ್ಕೆ ಬಂದ ರೂಸ್‌ವೆಲ್ಟ್ ಅವರು, ಆನಂತರ ಇನ್ನೂ ಮೂರು ಬಾರಿ ಅಧ್ಯಕ್ಷರಾಗಿ ಆಯ್ಕೆಯಾದರು. ಆನಂತರ ವ್ಯಕ್ತಿಯೊಬ್ಬರು ಅಧ್ಯಕ್ಷರಾಗಿ ಆಯ್ಕೆಯಾಗಬಹುದಾದ ಅವಧಿಯ ಮೇಲೆ ಮಿತಿ ಹೇರಲಾಯಿತು.

3 ಗೆರಾಲ್ಡ್ ಫೋರ್ಡ್‌: ರಿಚರ್ಡ್ ನಿಕ್ಸನ್ ಅವರು ವಾಟರ್‌ಗೇಟ್ ಹಗರಣದ ಕಾರಣ ಅಧ್ಯಕ್ಷ ಪದವಿಗೆ ರಾಜೀನಾಮೆ ನೀಡಿದ್ದರು. ಆಗ ಗೆರಾಲ್ಡ್ ಫೋರ್ಡ್ ಅವರು ಅಧ್ಯಕ್ಷರಾಗಿ ಆಯ್ಕೆಯಾದರು. ಆದರೆ ನಿಕ್ಸನ್ ಅವರಿಗೆ ಕ್ಷಮಾದಾನ ನೀಡಿ, ಅವರ ಮೇಲಿನ ಎಲ್ಲಾ ಆರೋಪಗಳಿಂದ ಅವರನ್ನು ಫೋರ್ಡ್ ಅವರು ರಕ್ಷಿಸಿದ್ದರು. ಇದು ಪೋರ್ಡ್‌ ಅವರಿಗೆ ಪ್ರತಿಕೂಲವಾಗಿ ಪರಿಣಮಿಸಿತು. ಇದರ ಜತೆಗೆ ಆರ್ಥಿಕ ಹಿಂಜರಿತದ ಕಾರಣ 1976ರ ಚುನಾವಣೆಯಲ್ಲಿ ಅವರು ಸೋತರು.

4ಜಿಮ್ಮಿ ಕಾರ್ಟರ್: ಗೆರಾಲ್ಡ್ ಫೋರ್ಡ್ ಅವರನ್ನು ಸೋಲಿಸಿ, ಅಧ್ಯಕ್ಷರಾಗಿದ್ದ ಜಿಮ್ಮಿ ಕಾರ್ಟರ್ ಅವರು ಸಹ ಎರಡನೇ ಬಾರಿ ಅಧ್ಯಕ್ಷರಾಗಲಿಲ್ಲ. 1980ರಲ್ಲಿ ಇರಾನ್‌ನಲ್ಲಿ ಭಯೋತ್ಪಾದಕರ ಒತ್ತೆಯಲ್ಲಿದ್ದ ಅಮೆರಿಕದ ಪ್ರಜೆಗಳನ್ನು ಬಿಡಿಸಿಕೊಳ್ಳುವಲ್ಲಿ ಅವರು ವಿಫಲರಾದರು. ಅಲ್ಲದೆ, ಫೋರ್ಡ್‌ ಅವರ ಅವಧಿಯಲ್ಲಿ ಆರ್ಥಿಕ ಹಿಂಜರಿತ ನಿಯಂತ್ರಣಕ್ಕೆ ಬಂದಿರಲಿಲ್ಲ. ಇವೆಲ್ಲವುಗಳ ಪರಿಣಾಮ ಜಿಮ್ಮಿ ಕಾರ್ಟರ್ ಅವರು ಚುನಾವಣೆಯಲ್ಲಿ ಸೋಲಬೇಕಾಯಿತು.

5 ಜಾರ್ಜ್ ಬುಶ್ ಸೀನಿಯರ್: ಅಮೆರಿಕದ 41ನೇ ಅಧ್ಯಕ್ಷರಾಗಿದ್ದ ಜಾಜ್ ಎಚ್‌.ಡಬ್ಲ್ಯು.ಬುಶ್ (ಜಾರ್ಜ್ ಡಬ್ಲ್ಯು.ಬುಶ್ ಅವರ ತಂದೆ. ಹೀಗಾಗಿ ಇವರನ್ನು ಬುಶ್ ಸೀನಿಯರ್ ಎಂದು ಕರೆಯಲಾಗುತ್ತದೆ) 1992ರ ಚುನಾವಣೆಯಲ್ಲಿ ಮರುಆಯ್ಕೆಯಾಗುವಲ್ಲಿ ವಿಫಲರಾದರು. ಇವರ ಅಧಿಕಾರಾವಧಿಯಲ್ಲಿ ಕೊಲ್ಲಿ ಯುದ್ಧ ನಡೆಯಿತು. ಯುದ್ಧದಲ್ಲಿ ಅಮೆರಿಕ ಸಫಲವಾಯಿತು. ಆದರೆ ಅಮೆರಿಕದಲ್ಲಿ ಬುಶ್ ಅವರ ಜನಪ್ರಿಯತೆ ಕುಗ್ಗಿತು. ಅಲ್ಲದೆ ಆರ್ಥಿಕ ಬೆಳವಣಿಗೆ ಕುಂಠಿತವಾಯಿತು. ಇದು ಚುನಾವಣೆಯಲ್ಲಿ ಅವರ ಸೋಲಿಗೆ ಕಾರಣವಾಯಿತು.

ಮಹಿಳೆಯರಿಗೆ ಮತದಾನದ ಹಕ್ಕು: ನೂರರ ಸಂಭ್ರಮ

ಅಮೆರಿಕದ ಮಹಿಳೆಯರಿಗೆ ಮತದಾನದ ಹಕ್ಕು ಇರಲಿಲ್ಲ. ತಮಗೂ ಮತದಾನದ ಹಕ್ಕು ಬೇಕು ಎಂದು ಅಮೆರಿಕದ ಮಹಿಳೆಯರು ಆರಂಭಿಸಿದ ಹೋರಾಟಕ್ಕೆ 170 ವರ್ಷವಾಗಿದೆ. 2020ರ ಅಧ್ಯಕ್ಷೀಯ ಚುನಾವಣೆ ಅಮೆರಿಕದ ಮಹಿಳಾ ಮತದಾರರಿಗೆ ವಿಶಿಷ್ಟವಾದುದು. ಏಕೆಂದರೆ ಅಮೆರಿಕದ ಮಹಿಳೆಯರಿಗೆ ಮತದಾನದ ಹಕ್ಕು ದೊರೆತು ನೂರು ವರ್ಷ ಸಂದ ವರ್ಷವೇ ಈ ಚುನಾವಣೆ ನಡೆಯುತ್ತಿದೆ.

1848ರ ಜುಲೈನಲ್ಲಿ ಎಲಿಜಬತ್ ಕ್ಯಾಡಿ ಸ್ಟಾನ್ಟನ್ ಮತ್ತು ಲುಸ್ರೆಟಿಯಾ ಮೊಟ್‌ ಅವರು ನ್ಯೂಯಾರ್ಕ್‌ನಲ್ಲಿ ಸೆನೆಕಾ ಫಾಲ್ಸ್‌ ಸಮ್ಮೇಳನ ಆಯೋಜಿಸಿ ದ್ದರು. ಅಮೆರಿಕದ ಮಹಿಳೆಯರಿಗೆ ಮತದಾನದ ಹಕ್ಕು ನೀಡಬೇಕು ಎಂದು ಈ ಸಮ್ಮೇಳನದಲ್ಲಿ ಒತ್ತಾಯಿಸಲಾಗಿತ್ತು. ಈ ಸಮ್ಮೇಳನದ ನಂತರ ಈ ಹಕ್ಕಿಗಾಗಿ ಒತ್ತಾಯಿಸಿ ದೇಶದಾದ್ಯಂತ ಚಳವಳಿ ನಡೆದಿತ್ತು.

ಈ ಸಮ್ಮೇಳನ ನಡೆದು ಬರೋಬ್ಬರಿ 68 ವರ್ಷಗಳ ನಂತರ, 1920ರಲ್ಲಿ ಅಮೆರಿಕದ ಸಂವಿಧಾನಕ್ಕೆ 19ನೇ ತಿದ್ದುಪಡಿ ತರಲಾಯಿತು. ಈ ತಿದ್ದುಪಡಿಯ ಮೂಲಕ ಅಮೆರಿಕದ ಮಹಿಳೆಯರಿಗೆ ಮತದಾನದ ಹಕ್ಕು ನೀಡಲಾಯಿತು. 1920ರ ಆಗಸ್ಟ್ 18ರಂದು ಈ ತಿದ್ದುಪಡಿ ಜಾರಿಗೆ ಬಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT