ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದೊಂಬರಾಟ’ ಮೂಲಕ ಅಭ್ಯರ್ಥಿ ಆಯ್ಕೆ!

Last Updated 18 ಜೂನ್ 2018, 13:21 IST
ಅಕ್ಷರ ಗಾತ್ರ

ಶಿವಮೊಗ್ಗ: ಚುನಾವಣೆಯಲ್ಲಿ ಟಿಕೆಟ್‌ ಪಡೆಯಲು ರಾಜಕೀಯ ಮುಖಂಡರು ನಾನಾ ರೀತಿಯ ‘ದೊಂಬರಾಟ’ ನಡೆಸುತ್ತಿರುವಾಗ ಲೋಕ ಸತ್ತಾ ಪಕ್ಷ (ಎಲ್‌.ಎಸ್‌.ಪಿ.) ಶಿವಮೊಗ್ಗದಲ್ಲಿ ದೊಂಬರಾಟದ ಮೂಲಕ ಅಭ್ಯರ್ಥಿ ಆಯ್ಕೆ ಮಾಡಲು ಹೊರಟಿದೆ.

ಕ್ಷೇತ್ರದಾದ್ಯಂತ ದೊಂಬರಾಟ ನಡೆಸಿ, ಅಭ್ಯರ್ಥಿಯ ಆಯ್ಕೆ ಜತೆ ನಾಮಪತ್ರ ಸಲ್ಲಿಸಲು ಬೇಕಾದ ಠೇವಣಿ ಹಣ ₨ 25 ಸಾವಿರವನ್ನೂ ಸಂಗ್ರಹಿಸಲು ಪಕ್ಷ ಸಜ್ಜಾಗಿದೆ. ಜನಪರ ಹೋರಾಟಗಾರ ಟಿ.ಆರ್‌.­ಕೃಷ್ಣಪ್ಪ ನೇತೃತ್ವದಲ್ಲಿ ಮಾರ್ಚ್‌ 20ರಿಂದ ಕ್ಷೇತ್ರದಾದ್ಯಂತ ಕೈಯಲ್ಲಿ ಕೋಲು ಹಿಡಿದು, ಡೋಲಿನ ಸದ್ದಿಗೆ ಹಗ್ಗದ ಮೇಲೆ ಕಸರತ್ತು ನಡೆಸುವ ದೃಶ್ಯಗಳು ಕಾಣಸಿಗಲಿವೆ.

ಅಭ್ಯರ್ಥಿ ಅರ್ಹತೆಗಳು: ಲೋಕ ಸತ್ತಾ ಪಕ್ಷಕ್ಕೆ ಈ ಕ್ಷೇತ್ರದಿಂದ ಸ್ಪರ್ಧಿಸುವ ವ್ಯಕ್ತಿ ವಿದ್ಯಾವಂತ, ಪ್ರಾಮಾಣಿಕನಾಗಿರಬೇಕು. ಸಾಮಾಜಿಕ ಹೋರಾಟ­ಗಳಲ್ಲಿ ತೊಡಗಿ­ಕೊಂಡ­ವರಾಗಿರಬೇಕು. ಇದಿಷ್ಟು ಮೊದಲ ಹಂತದ ಅರ್ಹತೆಗಳು. ಈ ಅರ್ಹತೆ ಇರುವ ಯಾವುದೇ ಜಾತಿ–ಜನಾಂಗದ ಯುವಕ–ಯುವತಿಯರು ದೊಂಬರಾ­ಟಕ್ಕೆ ಬರ­ಬೇಕು. ಅರ್ಹತೆ ಗಳನ್ನು ಪರಿಶೀಲಿಸಿದ ನಂತ­ರ­ವಷ್ಟೇ ಪಕ್ಷ­ದಿಂದ ಟಿಕೆಟ್‌ ನೀಡಲಾಗುತ್ತದೆ ಎನ್ನು­ತ್ತಾರೆ ಪಕ್ಷದ ಜಿಲ್ಲಾ ಸಂಚಾಲಕರೂ ಆದ ಕೃಷ್ಣಪ್ಪ.

‘ಒಂದು ವೇಳೆ ಅರ್ಹ ಅಭ್ಯರ್ಥಿ ಸಿಗದಿದ್ದರೆ ತನ್ನನ್ನೇ ಚುನಾವಣಾ ಕಣಕ್ಕೆ ಇಳಿಸಬೇಕೆಂಬ ಆಲೋಚನೆ ಪಕ್ಷಕ್ಕೆ ಇದೆ. ಆದರೆ, ಅದು ಮಾರ್ಚ್‌ 24ರ ನಂತರ ಸ್ಪಷ್ಟವಾಗಲಿದೆ’ ಎನ್ನುತ್ತಾರೆ ಅವರು. ಕೃಷ್ಣಪ್ಪರ ದೊಂಬರಾಟಕ್ಕೆ ಸಾಥ್‌ ನೀಡಲು ಹೊಸನಗರದ ರಿಪ್ಪನ್‌­ಪೇಟೆಯಲ್ಲಿ ನೆಲೆ ಕಂಡಿರುವ ಛತ್ತೀಸಗಡ ರಾಜ್ಯದ ಅಲೆಮಾರಿ ಕುಟುಂಬ ಸಂಪೂರ್ಣ ಸಿದ್ಧಗೊಂಡಿದೆ. ಬಿಲಾಸ್‌­ಪುರದ ಲಲಿತ್‌ ಕುಮಾರ್ ಹಾಗೂ ಅವರ ಸಹೋದರ ರಾಮ್‌ ಕುಮಾರ್ ಮತ್ತು ಬಾಲಕಿ ಸತ್ಪಾಲ್ ಜತೆಗಿದ್ದಾಳೆ.

ಈ ಕುಟುಂಬಕ್ಕೆ ಇದೇ ಕೃಷ್ಣಪ್ಪ ಹೊಸ­ನಗರ ತಾಲ್ಲೂಕಿನ ಕೆರೆಹಳ್ಳ ಹೋಬಳಿಯ ಬಿಳಕಿ ಗ್ರಾಮದ ಸರ್ವೆ ನಂ.11ರಲ್ಲಿರುವ ತಮ್ಮದೇ ಒಂದು ಎಕರೆ ಅಡಿಕೆ ತೋಟವನ್ನು ದಾನವಾಗಿ ನೀಡಿದ್ದಾರೆ. ಅಲ್ಲದೇ, ಈ ಅಲೆಮಾರಿಗಳಿಗೂ ಎಪಿಕ್‌ ಕಾರ್ಡ್‌ ಕೊಡಿಸಿದ್ದಾರೆ. ಪ್ರಪ್ರಥಮ ಬಾರಿಗೆ ಈ ಚುನಾವಣೆಯಲ್ಲಿ ಅವರೂ ಮತದಾನ ಮಾಡಲಿದ್ದಾರೆ.

ಕೃಷ್ಣಪ್ಪ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಾಗರ ಕ್ಷೇತ್ರದಿಂದ ಇದೇ ಲೋಕ ಸತ್ತಾ ಪಕ್ಷದಿಂದ ಸ್ಪರ್ಧಿಸಿದ್ದರು. ಆವಾಗಲೂ ಕೂಡ ಯೋಗಾಸನದ ಮೂಲಕ ಅವರು ಮತಯಾಚನೆ ಮಾಡಿದ್ದಲ್ಲದೆ, ಸ್ಪರ್ಧೆಗೆ ಬೇಕಾದ ಠೇವಣಿ ಹಣವನ್ನೂ ಸಂಗ್ರಹಿಸಿದ್ದರು.

‘ಚುನಾವಣೆಯಲ್ಲಿ ಸೋಲು–ಗೆಲುವು ಮುಖ್ಯ­ವಲ್ಲ; ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದು ಮುಖ್ಯ. ನನ್ನಂತಹ ಸಾಮಾನ್ಯನೂ ಚುನಾವಣೆ­ಯಲ್ಲಿ ಸ್ಪರ್ಧಿಸಲು ಸಾಧ್ಯವಿದೆ ಎಂದು ಜನರಿಗೆ ತೋರಿಸಿಕೊಡಲಷ್ಟೇ ಈ ಸ್ಪರ್ಧೆ. ಜಾತಿ, ಭ್ರಷ್ಟಾ­ಚಾರ­ಗಳನ್ನು ಮೀರಿ ಜನ ಹೇಗೆ ಸ್ಪಂದಿಸುತ್ತಾರೆ ಎಂಬುದಕ್ಕೆ ಈ ಸ್ಪರ್ಧೆ’ ಎನ್ನುತ್ತಾರೆ ಕೃಷ್ಣಪ್ಪ.

ಲೋಕಸತ್ತಾ ಪಕ್ಷ ರಾಜ್ಯದಲ್ಲಿ ಶಿವಮೊಗ್ಗ ಕ್ಷೇತ್ರ ಒಂದೇ ಅಲ್ಲ, ದಾವಣಗೆರೆ, ಧಾರವಾಡ, ಬೆಳಗಾವಿ, ರಾಯಚೂರು ಮತ್ತು ಮೈಸೂರಿನಲ್ಲೂ ಸ್ಪರ್ಧೆ ನಡೆಸಲಿದೆ. ಕೆಲವು ಕಡೆ ಅಭ್ಯರ್ಥಿಗಳ ಆಯ್ಕೆ ಬಾಕಿ ಉಳಿದಿದ್ದು, ಸದ್ಯದಲ್ಲೇ ಹೆಸರುಗಳನ್ನು ಅಂತಿಮ­ಗೊಳಿಸಲಾಗುತ್ತದೆ. ಕೆಲವು ಕಡೆ ವಿನೂತನ­ವಾಗಿ ಆಯ್ಕೆ ಪ್ರಕ್ರಿಯೆ ನಡೆದಿದೆ’ ಎಂದು ಪಕ್ಷದ ರಾಜ್ಯ ಸಂಚಾಲಕ ದೀಪಕ್ ಅವರು ಹೇಳಿದ್ದಾರೆ.

‘ಪ್ರಸಕ್ತ ಚುನಾವಣೆಯಲ್ಲಿ ನಮ್ಮದೇ ಸಿದ್ಧಾಂತ ಹೊಂದಿರುವ ಆಮ್‌ ಆದ್ಮಿ ಪಕ್ಷದ ಜತೆ ಮೈತ್ರಿಗೆ ಮಾತುಕತೆ ನಡೆಸಿದೆವು. ಆದರೆ, ಅವರು ಒಪ್ಪಲಿಲ್ಲ; ಹೀಗಾಗಿ ಏಕಾಂಗಿ ಸ್ಪರ್ಧೆ ಅನಿವಾರ್ಯವಾಗಿದೆ’ ಎಂದು ಸ್ಪಷ್ಟಪಡಿಸುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT