ಸ್ವಚ್ಛಗೊಳ್ಳದ ಚರಂಡಿ; ಸಾಂಕ್ರಾಮಿಕ ರೋಗ ಭೀತಿ

7
ರಸ್ತೆ ಮೇಲೆ ಕೊಳಚೆ ನೀರು, ಹಲವು ಬಾರಿ ಮನವಿ ಸಲ್ಲಿಸಿದರೂ ಗಮನಹರಿಸದ ಅಧಿಕಾರಿಗಳು, ಜನಪ್ರತಿನಿಧಿಗಳು

ಸ್ವಚ್ಛಗೊಳ್ಳದ ಚರಂಡಿ; ಸಾಂಕ್ರಾಮಿಕ ರೋಗ ಭೀತಿ

Published:
Updated:
ಸ್ವಚ್ಛಗೊಳ್ಳದ ಚರಂಡಿ; ಸಾಂಕ್ರಾಮಿಕ ರೋಗ ಭೀತಿ

ವಿಜಯಪುರ: ಮುಂಗಾರು ಆರಂಭಗೊಂಡರೂ; ನಗರದ ವಿವಿಧೆಡೆ ಚರಂಡಿಯಲ್ಲಿ ಕಸ, ಹೂಳು ತೆಗೆಯದ ಪರಿಣಾಮ, ಕೊಳಚೆ ನೀರು ಸರಾಗವಾಗಿ ಹರಿಯುತ್ತಿಲ್ಲ. ಒಂದೆಡೆಯೇ ರಾಡಿ ನಿಲ್ಲುವುದರಿಂದ ಚರಂಡಿಗಳು ಸೊಳ್ಳೆಗಳ ಉತ್ಪಾದನಾ ಕಾರ್ಖಾನೆಗಳಾಗಿ ಮಾರ್ಪಟ್ಟಿವೆ. ಇದು ಸಾಂಕ್ರಾಮಿಕ ರೋಗಗಳ ಭೀತಿಯನ್ನು ಸೃಷ್ಟಿಸಿದೆ.

ಕೆಲವೆಡೆ ಚರಂಡಿ ಕಟ್ಟಿಕೊಂಡು ಕೊಳಚೆ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಇದು ಸುತ್ತಮುತ್ತಲಿನ ಪರಿಸರದಲ್ಲಿ ಅಸಹ್ಯಕರ ವಾತಾವರಣ ಸೃಷ್ಟಿಸಿದ್ದರೂ; ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ತಮಗೆ ಸಂಬಂಧವೇ ಇಲ್ಲ ಎನ್ನುವಂತಿದ್ದಾರೆ ಎಂಬ ದೂರು ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ.

ಮಳೆಗಾಲ ಆರಂಭಕ್ಕೂ ಮುನ್ನ, ನಂತರದ ದಿನಗಳಲ್ಲಿ ಸ್ಥಳೀಯ ಮಹಾನಗರ ಪಾಲಿಕೆ ಆಡಳಿತ ಚರಂಡಿಗಳನ್ನು ಸ್ವಚ್ಛಗೊಳಿಸಲು ಮುಂದಾಗದ ಪರಿಣಾಮ ಜನರು ಅನಾರೋಗ್ಯ ಸಮಸ್ಯೆಗೀಡಾಗಬೇಕಿದೆ.

‘ನಾಲ್ಕೈದು ವರ್ಷಗಳಿಂದ ಚರಂಡಿ ಸ್ವಚ್ಛಗೊಳಿಸದಿದ್ದುದಕ್ಕೆ, ರಸ್ತೆ ಮೇಲೆಯೇ ಕೊಳಚೆ ನೀರು ಹರಿಯುತ್ತಿದೆ. ಇಲ್ಲಿಯೇ ಸೊಳ್ಳೆಗಳು ಸಂತಾನೋತ್ಪತ್ತಿ ಮಾಡುತ್ತಿವೆ. ಇದು ಈ ಭಾಗದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತಿದೆ. ಈ ಚರಂಡಿಯ ಮುಂಭಾಗದಲ್ಲೇ ಹಣಮಂತ ದೇವರ ಗುಡಿಯಿದೆ. ನಿತ್ಯವೂ ಅಪಾರ ಸಂಖ್ಯೆಯ ಜನರು ಮಡಿಯಿಂದ ಹನುಮನ ದರ್ಶನಕ್ಕೆ ಬರ್ತಾರೆ. ಆದರೆ ಗುಡಿ ಪ್ರವೇಶಿಸುವ ಮುನ್ನ ಹೊಲಸು ನೀರಲ್ಲೇ ಹೋಗಬೇಕಿದೆ. ಇಲ್ದಿದ್ರೆ ದೇವರ ದರ್ಶನ ಮಾಡಿ, ನಮಸ್ಕಾರ ಮಾಡಲು ಸಾಧ್ಯವೇ ಇಲ್ಲ’ ಎನ್ನುತ್ತಾರೆ ವಡ್ಡರ ಓಣಿಯ ನಿವಾಸಿ ರಾಘವೇಂದ್ರ ಪೈಟ್‌.

‘ದೇಗುಲ ಮುಂಭಾಗದ ಚರಂಡಿಯನ್ನಾದರೂ ಸ್ವಚ್ಛಗೊಳಿಸಿ ಎಂದು ಈ ಭಾಗದ ಕಾರ್ಪೊರೇಟರ್‌, ಪಾಲಿಕೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ. ಆದಷ್ಟು ದೌಡ್ ಸಂಬಂಧಿಸಿದವರು ಇನ್ನಾದರೂ ಎಚ್ಚೆತ್ತುಕೊಂಡು ಚರಂಡಿ ಸ್ವಚ್ಛಗೊಳಿಸಿ, ತಗ್ಗು ಬಿದ್ದ ರಸ್ತೆ ಸುಧಾರಿಸಿದರೆ ಓಣಿಯ ಜನರು ನೆಮ್ಮದಿಯಿಂದ ಜೀವನ ನಡೆಸಲು ಅನುಕೂಲವಾಗುತ್ತದೆ’ ಎಂದು ರಾಘವೇಂದ್ರ ಆಡಳಿತಾರೂಢರಿಗೆ ಮನವಿ ಮಾಡಿದರು.

‘ಎಪಿಎಂಸಿಗೆ ನಿತ್ಯವೂ ಅಪಾರ ಸಂಖ್ಯೆಯ ಜನರು ಭೇಟಿ ಕೊಡ್ತಾರಾ. ಅಂಗಡಿ ಮುಂದಿರುವ ಚರಂಡಿಯನ್ನು ಯಾವಾಗಲಾದರೂ ಒಮ್ಮೆ ಕಾಟಾಚಾರಕ್ಕೆ ಸ್ವಚ್ಛಗೊಳಿಸುತ್ತಾರೆ. ಹೊರ ಹಾಕಿದ ಕಸವನ್ನು ವಿಲೇವಾರಿ ಮಾಡದೆ ಪಕ್ಕದಲ್ಲೇ ಬಿಡ್ತಾರೆ. ಗಾಳಿಗೆ, ಮಳೆಗೆ ಮತ್ತೆ ಕಸವೆಲ್ಲ ಚರಂಡಿಯೊಳಗೆ ತುಂಬಿಕೊಳ್ಳುತ್ತದೆ. ಇದರಿಂದ ಸ್ವಚ್ಛ ಮಾಡಿದ್ದು ಉಪಯೋಗವಾಗಲ್ಲ. ಹಿಂಗಾಗಿ ನೀರು ಸರಾಗವಾಗಿ ಹರಿಯದೆ ನಿಲ್ಲುತ್ತದೆ. ಸುತ್ತಲಿನ ಪರಿಸರಕ್ಕೆ ದುರ್ವಾಸನೆ ಹಬ್ಬಿಸುತ್ತದೆ’ ಎಂದು ವ್ಯಾಪಾರಿ ಅಮೀರ ಹೊನ್ನುಟಗಿ ದೂರಿದರು.

ಸಾರ್ವಜನಿಕರ ವ್ಯಾಪಕ ದೂರಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಪಡೆಯಲು ಮಹಾನಗರ ಪಾಲಿಕೆ ಮೇಯರ್‌, ಆಯುಕ್ತರನ್ನು ಸಂಪರ್ಕಿಸಲು ಯತ್ನಿಸಿದರೂ, ಇಬ್ಬರೂ ಮೊಬೈಲ್‌ ಕರೆ ಸ್ವೀಕರಿಸಲಿಲ್ಲ.

**

ಚರಂಡಿ ಸ್ವಚ್ಛ ಮಾಡದಿದ್ದುದಕ್ಕೆ ಹೊಲಸು ನೀರು ಹಣಮಂತ ದೇವರ ಗುಡಿ ಮುಂದ್‌ ನಿಲ್ತಾವ. ಆ ಹೊಲಸು ನೀರನ್ನೇ ತುಳಿದುಕೊಂಡು ದೇಗುಲದೊಳಗೆ ಹೋಗಬೇಕಿದೆ

ರಾಘವೇಂದ್ರ ಪೈಟ್‌, ವಡ್ಡರ ಓಣಿ ನಿವಾಸಿ

ಬಾಬುಗೌಡ ರೋಡಗಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry