ಪಂಪ್‌ಸೆಟ್‌ ಖರೀದಿಯಲ್ಲಿ ಅವ್ಯವಹಾರ: ಆರೋಪ

7
ಶಾಸಕ ಹರತಾಳು ಹಾಲಪ್ಪ ಆರೋಪ

ಪಂಪ್‌ಸೆಟ್‌ ಖರೀದಿಯಲ್ಲಿ ಅವ್ಯವಹಾರ: ಆರೋಪ

Published:
Updated:

ಸಾಗರ: ಶರಾವತಿ ಹಿನ್ನೀರಿನಿಂದ ಸಾಗರ ನಗರಕ್ಕೆ ಕುಡಿಯವ ನೀರು ಪೂರೈಸುವ ಘಟಕಕ್ಕಾಗಿ ಪಂಪ್‌ಸೆಟ್‌ ಖರೀದಿ ಮಾಡಿರುವ ವ್ಯವಹಾರದಲ್ಲಿ ದೊಡ್ಡಮಟ್ಟದ ಅವ್ಯವಹಾರ ನಡೆದಿದೆ ಎಂದು ಶಾಸಕ ಹರತಾಳು ಹಾಲಪ್ಪ ಆರೋಪಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಾಗರ ನಗರಕ್ಕೆ ನೀರು ಸರಬರಾಜು ಮಾಡಲು ಅಂಬುಗಳಲೆಯಲ್ಲಿ ನಿರ್ಮಿಸಿರುವ ಜಾಕ್‌ವೆಲ್‌ನಲ್ಲಿ 400 ಎಚ್.ಪಿ. ಸಾಮರ್ಥ್ಯದ ಮೂರು ಪಂಪ್‌ಸೆಟ್‌ಗಳನ್ನು ಅಳವಡಿಸಲಾಗಿದೆ. ಈ ಪಂಪ್‌ಸೆಟ್‌ಗಳನ್ನು 2015-16ನೇ ಸಾಲಿನಲ್ಲಿ ಖರೀದಿಸಲಾಗಿದ್ದು, ಪರೀಕ್ಷಾರ್ಥ ಅವಧಿಯಲ್ಲೇ ಅದರಲ್ಲಿ ದೋಷ ಕಾಣಿಸಿಕೊಂಡಿರುವುದನ್ನು ಪಂಪ್‌ಸೆಟ್‌ಗಳ ಗುಣಮಟ್ಟದ ತಾಂತ್ರಿಕ ಸಮಿತಿ ಪತ್ತೆ ಹಚ್ಚಿದೆ’ ಎಂದರು.

‘ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ನೀರು ಸರಬರಾಜು ಘಟಕದ ನಿರ್ವಹಣೆ ಮಾಡುತ್ತಿದೆ. ಅಸಮರ್ಪಕ ನಿರ್ವಹಣೆಯಿಂದ ಪದೇ ಪದೇ ಪಂಪ್‌ಸೆಟ್‌ ರಿಪೇರಿಗೆ ಬರುತ್ತಿದೆ’ ಎಂದು ಹೇಳಿದರು.

‘ನೀರು ಸರಬರಾಜು ಘಟಕಕ್ಕೆ ಅಗತ್ಯವಿರುವ ಮೂರುಪಂಪ್‌ಸೆಟ್‌ಗಳನ್ನು ಬೆಲ್ಜಿಯಂ ಕಂಪೆನಿಯಿಂದ ಖರೀದಿಸಲಾಗಿದೆ. ಅದರ ಬಿಡಿ ಭಾಗಗಳು ತಯಾರಾಗಿ ಅಳವಡಿಸುವುದು ಗಾಜಿಯಾಬಾದ್ ನಲ್ಲಿ. ಹೀಗಾಗಿ ಹಾಳಾದ ತಕ್ಷಣ ದುರಸ್ತಿಗೊಳಿಸಲು ಸಾಧ್ಯವಾಗುತ್ತಿಲ್ಲ. ಈ ಪ್ರದೇಶಕ್ಕೆ ಹೊಂದಿಕೆಯಾಗುವುದಿಲ್ಲ ಎಂಬ ವಿಷಯ ಗೊತ್ತಿದ್ದೂ ಅಂತಹ ಪಂಪ್ ಗಳನ್ನು ಖರೀದಿಸುವಲ್ಲಿ ಲೋಪ ಎಸಗಿಲಾಗಿದೆ’ ಎಂದು ದೂರಿದರು.

‘ತಾಂತ್ರಿಕ ಅಗತ್ಯಗಳನ್ನು ಪೂರೈಸದ ಕಾರಣ ನೀರಿನ ಜೊತೆಯಲ್ಲಿ ಮರಳು ಮಿಶ್ರಿತ ನೀರು ಜಾಕ್‌ವೆಲ್ ಗೆ ಬರುತ್ತಿರುವುದು ಧಕ್ಕೆ ತರುತ್ತಿದೆ. ಈಗ ಅಳವಡಿಸಿರುವ ಮಾದರಿಯ ಪಂಪ್‌ಸೆಟ್‌ ಇಲ್ಲಿನ ಘಟಕಕ್ಕೆ ಸೂಕ್ತವಲ್ಲ ಎಂಬ ಅಂಶವನ್ನು ಕಡೆಗಣಿಸಲಾಗಿದೆ. ನೀರು ಸರಬರಾಜು ಘಟಕದ ಪಂಪ್ ಹಾಳಾಗಿರುವುದರಿಂದ ಸಾಗರ ನಗರಕ್ಕೆ ಕುಡಿಯುವ ನೀರು ಪೂರೈಕೆ ಯಾವುದೇ ಸಂದರ್ಭದಲ್ಲಿ ನಿಲ್ಲುವ ಅಪಾಯವಿದೆ’ ಎಂದರು.

‘ಕಾಗೋಡು ತಿಮ್ಮಪ್ಪ ಪಂಪ್‌ಸೆಟ್‌ ಖರೀದಿಯಲ್ಲಿ ಆಗಿರುವ ಲೋಪವನ್ನು ಮುಚ್ಚಿಹಾಕಲು ಈಗ ಪ್ರಯತ್ನ ಮಾಡುತ್ತಿದ್ದಾರೆ. ಅವ್ಯವಹಾರವನ್ನು ಸದನದಲ್ಲಿ ಪ್ರಸ್ತಾಪಿಸುತ್ತೇನೆ’ ಎಂದರು.

‘ನೀರು ಸರಬರಾಜು ಘಟಕದ ಪಂಪ್ ಖರೀದಿಯಲ್ಲಿ ನಡೆದಿರುವ ಅವ್ಯವಹಾರದಲ್ಲಿ ಯಾರ ಕೈವಾಡವಿದೆ ಎನ್ನುವುದನ್ನು ಪತ್ತೆ ಹಚ್ಚಲಾಗುವುದು’ ಎಂದು ತಿಳಿಸಿದರು.

ಆರ್. ಶ್ರೀನಿವಾಸ್, ಸಂತೋಷ್ ಆರ್. ಶೇಟ್, ನಾಗರತ್ನಾ, ಅರವಿಂದ ಇದ್ದರು.

‘ಕಾಗೋಡಿಗೆ ಅಧಿಕಾರ ದಾಹ’

‘ಚುನಾವಣೆಯಲ್ಲಿ ಪರಾಜಿತರಾದ ನಂತರವೂ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ಅಧಿಕಾರಿಗಳ ಕುರ್ಚಿಯಲ್ಲಿ ಕುಳಿತು ಸಭೆ ನಡೆಸುತ್ತಿದ್ದಾರೆ. ಇದು ಅವರಿಗೆ ಇರುವ ಅಧಿಕಾರದ ದಾಹ ಯಾವ ಮಟ್ಟದ್ದು ಎನ್ನುವುದನ್ನು ತೋರಿಸುತ್ತದೆ’ ಎಂದು ಶಾಸಕ ಹರತಾಳು ಹಾಲಪ್ಪ ಟೀಕಿಸಿದ್ದಾರೆ.

‘ಮಾಜಿ ಶಾಸಕರಾದ ನಂತರವೂ ಅವರು ಇಂತಹ ಗುತ್ತಿಗೆದಾರರಿಗೆ ಕಾಮಗಾರಿ ನೀಡಬೇಕು ಎಂದು ಅಧಿಕಾರಿಗಳಿಗೆ ಪತ್ರ ಬರೆಯುತ್ತಿದ್ದಾರೆ. ವಯಸ್ಸಿನ ಸಮಸ್ಯೆಯಿಂದ ಈ ರೀತಿ ಆಗುತ್ತಿರಬಹುದು’ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry