ಬಿತ್ತನೆ ಗುರಿ ತಲುಪಲು ಸಿದ್ಧತೆ

7
ಕೃಷಿ ಇಲಾಖೆಯಿಂದ ರಸಗೊಬ್ಬರ, ಬಿತ್ತನೆ ಬೀಜ ದಾಸ್ತಾನು

ಬಿತ್ತನೆ ಗುರಿ ತಲುಪಲು ಸಿದ್ಧತೆ

Published:
Updated:

ಇಂಡಿ: ಕಳೆದ ವಾರದಲ್ಲಿ ತಾಲ್ಲೂಕಿನಲ್ಲಿ ಸರಾಸರಿ 47 ಮಿ.ಮೀ ಮಳೆಯಾಗಿದ್ದು, ಮುಂಗಾರಿ ಹಂಗಾಮಿನ ಕೃಷಿ ಚಟುವಟಿಕೆ ಚುರುಕುಗೊಂಡಿದೆ.

ಬೇಸಿಗೆಯಲ್ಲಿ ಬೀಳಬೇಕಿದ್ದ ಮಳೆ ಬಿದ್ದಿಲ್ಲ. ಮುಂಗಾರಿ ಹಂಗಾಮಿನ ಕೃಷಿ ಭೂಮಿ ಸರಿಯಾಗಿ ಉಳುಮೆಯಾಗಿಲ್ಲ. ಈಗ ಬಿದ್ದ ಮಳೆಯಿಂದ ರೈತರು ಖುಷಿಗೊಂಡು ಮುಂಗಾರು ಬಿತ್ತನೆಗೆ ಜಮೀನು ಹದಗೊಳಿಸುವಲ್ಲಿ ನಿರತರಾಗಿದ್ದಾರೆ.

‘ಮುಂಗಾರಿ ಹಂಗಾಮಿನಲ್ಲಿ ಒಟ್ಟು 1,00,980 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಆದರೆ ಮಳೆಯ ಅಭಾವದಿಂದ ಮುಂಗಾರಿ ಹಂಗಾಮಿನ ಬಿತ್ತನೆಯ ಕಾರ್ಯ ಇನ್ನೂವರೆಗೆ ಪ್ರಾರಂಭವಾಗಿಲ್ಲ’ ಎಂದು ಕೃಷಿ ಸಹಾಯಕ

ನಿರ್ದೇಶಕ ಮಹಾದೇವಪ್ಪ ಏವೂರ ತಿಳಿಸಿದ್ದಾರೆ.

‘ಮಳೆ ಬೀಳುವ ನಿರೀಕ್ಷೆಯಿದೆ. ಮುಂಗಾರಿ ಹಂಗಾಮಿಗೆ ಅಗತ್ಯವಿದ್ದ ಎಲ್ಲ ತರಹದ ಬೀಜ, ರಸಗೊಬ್ಬರ ದಾಸ್ತಾನು ಮಾಡಿಕೊಳ್ಳಲಾಗಿದೆ’ ಎಂದು ಅವರು ಹೇಳಿದ್ದಾರೆ.

ಬಿತ್ತನೆ ಗುರಿ: ಮುಂಗಾರಿ ಹಂಗಾಮಿನಲ್ಲಿ ಮುಸುಕಿನ ಜೋಳ ನೀರಾವರಿಯಲ್ಲಿ 8,000 ಹೆಕ್ಟೇರ್ ಮತ್ತು ಖುಸ್ಕಿಯಲ್ಲಿ 400 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಲಾಗಿದೆ. ಸಜ್ಜೆ 500 ಹೆಕ್ಟೇರ್ ನೀರಾವರಿಯಲ್ಲಿ 11,000 ಹೆಕ್ಟೇರ್ ಖುಷ್ಕಿಯಲ್ಲಿ, ನವಣಿ ಕೇವಲ 50 ಹೆಕ್ಟೇರ್ ಖುಷ್ಕಿಯಲ್ಲಿ ಮಾತ್ರ, ತೊಗರಿ ನೀರಾವರಿಯಲ್ಲಿ 1,2000 ಹೆಕ್ಟೇರ್ ಮತ್ತು ಖುಷ್ಕಿಯಲ್ಲಿ 45,000 ಹೆಕ್ಟೇರ್ ಬಿತ್ತನೆಯ ಗುರಿ ಹೊಂದಲಾಗಿದೆ.

ಹೆಸರು, ಉದ್ದು ಮತ್ತು ಅಲಸಂದಿ, ಎಳ್ಳು, ಗುರೆಳ್ಳು, ಸೋಯಾ ಅವರೆ, ಔಡಲ ಮುಂತಾದವು ಬಿತ್ತನೆಯ ಗುರಿಯಲ್ಲಿ ಸೇರಿವೆ. ಹತ್ತಿ ನೀರಾವರಿಯಲ್ಲಿ 2,340 ಹೆಕ್ಟೇರ್, ಕಬ್ಬು ನೀರಾವರಿಯಲ್ಲಿ ( ನಾಟಿ) 800 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಲಾಗಿದೆ.

ಬೀಜಗಳ ದಾಸ್ತಾನು: ಸಜ್ಜೆ 32 ಕ್ವಿಂಟಲ್, ಹೆಸರು 21.50 ಕ್ವಿಂಟಲ್, ತೊಗರಿ 171 ಕ್ವಿಂಟಲ್, ಉದ್ದು 38 ಕ್ವಿಂಟಲ್, ಸೂರ್ಯಕಾಂತಿ 30 ಕ್ವಿಂಟಲ್, ಮೆಕ್ಕೆ ಜೋಳ 153 ಕ್ವಿಂಟಲ್ ದಾಸ್ತಾನು ಮಾಡಲಾಗಿದೆ. ಈ ಎಲ್ಲ ಬೀಜಗಳು ತಾಲ್ಲೂಕಿನ ಇಂಡಿ, ಬಳ್ಳೊಳ್ಳಿ ಮತ್ತು ಚಡಚಣ ರೈತ ಸಂಪರ್ಕ ಕೇಂದ್ರಗಳ ಪ್ರಮುಖ ಗ್ರಾಮಗಳಾದ ಇಂಡಿ, ತಾಂಬಾ, ನಾದ, ಬಳ್ಳೊಳ್ಳಿ, ಹೊರ್ತಿ, ಅಥರ್ಗಾ, ಲಚ್ಯಾಣ ಮತ್ತು ಚಡಚಣಗಳಲ್ಲಿ ದಾಸ್ತಾನು ಮಾಡಲಾಗಿದೆ.

‘ಆಯಾ ಭಾಗದ ರೈತರು ತಮಗೆ ಸಮೀಪದ ಗ್ರಾಮಗಳಿಗೆ ತೆರಳಿ ಬೀಜ ಖರೀದಿಸಬಹುದು’ ಎಂದು ಮಹಾದೇವಪ್ಪ ಏವೂರ ತಿಳಿಸಿದ್ದಾರೆ. ‘ರಸಗೊಬ್ಬರವೂ ತಾಲ್ಲೂಕಿನ ವಿವಿಧ ಮಾರಾಟ ಮಳಿಗೆಗಳಲ್ಲಿ ದಾಸ್ತಾನು ಮಾಡಲಾಗಿದೆ. ಮಳೆ ಬಿದ್ದ ತಕ್ಷಣ ರೈತರು ತಮಗೆ ಅಗತ್ಯವಿದ್ದ ಬೀಜ ಮತ್ತು ಗೊಬ್ಬರಗಳನ್ನು ತಮಗೆ ಸಮೀಪದ ಮಳಿಗೆಗಳಿಂದ ಖರೀದಿ ಮಾಡಬಹುದು’ ಎಂದು ತಿಳಿಸಿದ್ದಾರೆ.

‘ಬಿತ್ತನೆಗೆ ಯಾವದೇ ಅಡಚಣೆ ಇಲ್ಲದಂತೆ ನೋಡಿಕೊಳ್ಳಲಾಗಿದೆ. ಮಳೆ ಬಿದ್ದ ನಂತರ ರೈತರು ಯಾವ ಬೆಳೆ ಬಿತ್ತನೆ ಮಾಡಲು ಹೆಚ್ಚು ಒಲವು ತೋರುತ್ತಾರೆ ಎನ್ನುವದು ಸ್ಪಷ್ಟವಾಗಲಿದೆ’ ಎನ್ನುತ್ತಾರೆ ಅವರು.

ಈ ವರ್ಷ ಮುಂಗಾರಿ ಹಂಗಾ ಮಿಗೆ ಅಗತ್ಯ ಮಳೆ ಬೀಳುವ ಲಕ್ಷಣ ಗಳಿವೆ. ಜೂನ್ ಮೊದಲ ವಾರದಲ್ಲಿ ಸರಾಸರಿ 47 ಮಿ.ಮೀ ಮಳೆ ಬಿದ್ದಿದೆ. ರೈತರಿಗೆ ಮುಂಗಾರು ಬಿತ್ತನೆಗೆ ತೊಂದರೆ ಯಾಗದಂತೆ ಬೀಜ, ರಸಗೊಬ್ಬರ ಮತ್ತು ಮಾರಾಟ ಮಳಿಗೆಗಳನ್ನು ಸಿದ್ಧಗೊಳಿಸಲಾಗಿದೆ.

ಜೂನ್ ಮೊದಲ ವಾರವೇ ಮಳೆ ಪ್ರಾರಂಭ. ಹೀಗಾಗಿ ಮುಂಗಾರು ಬಿತ್ತನೆಯ ಗುರಿ ತಲುಪುವ ಭರವಸೆ ಇದೆ

ಮಹಾದೇವಪ್ಪ ಏವೂರ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ 

ಎ.ಸಿ.ಪಾಟೀಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry