ಬಿ.ಎಸ್.ಪಾಟೀಲ ಸಾಸನೂರ ಅಂತ್ಯಕ್ರಿಯೆ

7
ಕಂಬನಿ ಮಿಡಿದ ಶಾಸಕರು, ಶ್ರೀಗಳು, ಅಭಿಮಾನಿಗಳು

ಬಿ.ಎಸ್.ಪಾಟೀಲ ಸಾಸನೂರ ಅಂತ್ಯಕ್ರಿಯೆ

Published:
Updated:

ತಾಳಿಕೋಟೆ: ಭಾನುವಾರ ನಿಧನರಾದ ಮಾಜಿ ಸಚಿವ, ಹಿರಿಯ ರಾಜಕಾರಣಿ ಬಿ.ಎಸ್.ಪಾಟೀಲ ಸಾಸನೂರ ಅವರ ಅಂತ್ಯಕ್ರಿಯೆ ಸಾವಿರಾರು ಅಭಿಮಾನಿಗಳ ಕಂಬನಿಯ ನಡುವೆ ತಾಲ್ಲೂಕಿನ ಹಿರೂರ ಗ್ರಾಮದ ಭೋಗೇಶ್ವರ ಕಾಲೇಜು ಆವರಣದಲ್ಲಿ ಸೋಮವಾರ ಸಂಜೆ ನಡೆಯಿತು.

ಬಿ.ಎಸ್.ಪಾಟೀಲ ಸಾಸನೂರ ಅವರ ಪಾರ್ಥಿವ ಶರೀರವನ್ನು ವಿಜಯಪುರದ ಆಸ್ಪತ್ರೆಯಿಂದ ಅವರ ಸ್ವಗ್ರಾಮವಾದ ಸಾಸನೂರ ಗ್ರಾಮಕ್ಕೆ ರಾತ್ರಿ ತರಲಾಗಿತ್ತು. ಅವರ ಮನೆಯಲ್ಲಿ ಗ್ರಾಮಸ್ಥರಿಗಾಗಿ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿತ್ತು.

ಬೆಳಿಗ್ಗೆ 11ಗಂಟೆಗೆ ತಾಲ್ಲೂಕಿನ ಹಿರೂರ ಗ್ರಾಮದ ಅವರದೇ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಸಾರ್ವಜನಿಕರಿಗಾಗಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅಗಲಿದ ನಾಯಕನ ದರ್ಶನಕ್ಕೆ ಅಭಿಮಾನಿಗಳು ಸಾಗರೋಪಾದಿಯಲ್ಲಿ ಹರಿದುಬಂದರು.ಗ್ರಾಮದಲ್ಲಿ ಕಾಲಿಡಲೂ ಸ್ಥಳವಿಲ್ಲದಂತಾಗಿತ್ತು.

ಸರ್ಕಾರದ ಪರವಾಗಿ ತೋಟಗಾರಿಕೆ ಸಚಿವ ಎಂ.ಸಿ.ಮನಗೂಳಿ, ಜಿಲ್ಲಾಧಿಕಾರಿ ಎಸ್.ಬಿ.ಶೆಟ್ಟೆಣ್ಣವರ ಬಂದು ಸಕಲ ಸರ್ಕಾರಿ ಗೌರವಗಳನ್ನು ಸಲ್ಲಿಸಿದರು. ನಂತರ ಪೊಲೀಸರು ಮೂರು ಸುತ್ತು ಗಾಳಿಯಲ್ಲಿ ಗುಂಡಿ ಹಾರಿಸಿದರು. ಶಾಲಾ ಆವರಣದಲ್ಲಿಯೇ ಅಂತ್ಯಕ್ರಿಯೆ ನಡೆಸಲಾಯಿತು.

ಪತ್ನಿ ಗುರುಬಾಯಿಗೌಡಶಾನಿ ಪಾಟೀಲ, ಪುತ್ರರಾದ ದೇವರ ಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ, ಸಾಹೇಬಗೌಡ, ಸುರೇಶಗೌಡ, ಪುತ್ರಿ ಗೀತಾ ಸೇರಿದಂತೆ ಬಂಧು ಬಳಗದವರು ಇದ್ದರು.

ಅಂತಿಮ ದರ್ಶನ ಪಡೆದ ನಾಯಕರುಗಳು: ಮಾಜಿ ಸಚಿವರು, ಶಾಸಕರು ಅಂತಿಮ ನಮನ ಸಲ್ಲಿಸಿ ಮೃತರ ಕುಟುಂಬಕ್ಕೆ ಸ್ವಾಂತನ ಹೇಳಿದರು.

ಶಾಸಕರಾದ ಎ.ಎಸ್.ಪಾಟೀಲ ನಡಹಳ್ಳಿ, ಎಂ.ಬಿ.ಪಾಟೀಲ, ಅಮರೇಗೌಡ ಬಯ್ಯಾಪುರ, ಗೋವಿಂದ ಕಾರಜೋಳ, ವೆಂಕಟರೆಡ್ಡಿ ಮುದ್ನಾಳ, ಹಾಲಪ್ಪ ಆಚಾರ್, ದೊಡ್ಡಪ್ಪಗೌಡ ಪಾಟೀಲ, ಬಸನಗೌಡ ಪಾಟೀಲ ಯತ್ನಾಳ, ವಿಧಾನ ಪರಿಷತ್ ಸದಸ್ಯ ಎಸ್.ಆರ್.ಪಾಟೀಲ, ಅರುಣ ಶಹಾಪೂರ, ಮಾಜಿ ಶಾಸಕರಾದ ಸಿ.ಎಸ್. ನಾಡಗೌಡ, ರಾಜು ಆಲಗೂರ, ಹಂಪನಗೌಡ ಬಾದರ್ಲಿ, ಅಶೋಕ ಶಾಬಾದಿ, ಶಿವಪುತ್ರಪ್ಪ ದೇಸಾಯಿ, ಜಿ.ಟಿ.ಪಾಟೀಲ, ಪಿ.ಎಚ್.ಪೂಜಾರ, ಆರ್‌.ಆರ್‌.ಕಲ್ಲೂರ, ಜೆ.ಟಿ.ಪಾಟೀಲ, ಭೂಸನೂರ ಅವರು ನಮನ ಸಲ್ಲಿಸಿದರು.

ಹಿರೂರಶ್ರೀಗಳು, ಜಾಲಹಳ್ಳಿ ಶ್ರೀಗಳು, ಇಟಗಿ ಶ್ರೀಗಳು, ಕೆಸರಟ್ಟಿ ಶ್ರೀಗಳು, ಇಂಗಳಗೇರಿ ಅಮ್ಮನವರು, ವಡವಡಗಿ ಶ್ರೀಗಳು, ಚಿಕ್ಕರೂಗಿ ಶ್ರೀಗಳು ಕಲಕೇರಿ ಶ್ರೀಗಳು, ಚಬನೂರ ಶ್ರೀಗಳು, ಕೊಕಟನೂರ ಶ್ರೀಗಳು, ಯರನಾಳ ಶ್ರೀಗಳು, ಕೆರೂಟಗಿ ಶ್ರೀಗಳು, ಸಂತೆಕೆಲ್ಲೂರ ಶ್ರೀಗಳು, ಗುಂಡಕನಾಳ ಶ್ರೀಗಳು, ಬಾಗೇವಾಡಿ ಶಿವಪ್ರಕಾಶ ಸ್ವಾಮೀಜಿ ಸೇರಿದಂತೆ ರಾಜಕೀಯ ಗಣ್ಯರು, ಹಿರಿಯ ಅಧಿಕಾರಿಗಳು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು.

ನೇತ್ರದಾನ

ಬಿ.ಎಸ್.ಪಾಟೀಲ ಸಾಸನೂರ ಅವರ ಎರಡೂ ಕಣ್ಣುಗಳನ್ನು ಕುಟುಂಬ ಸದಸ್ಯರು ಬಿಎಲ್‌ಡಿಇಎ ಸಂಸ್ಥೆಗೆ ದಾನಮಾಡುವ ಮೂಲಕ ಮಾದರಿಯಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry