ಮಾನವೀಯತೆ ಮೆರೆದ ಶಿವಮೊಗ್ಗ ಪೊಲೀಸರು

7
ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಸಾರ್ವಜನಿಕರು

ಮಾನವೀಯತೆ ಮೆರೆದ ಶಿವಮೊಗ್ಗ ಪೊಲೀಸರು

Published:
Updated:

ಶಿವಮೊಗ್ಗ: ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಮಹಿಳೆಯೊಬ್ಬರಿಗೆ ಮಂಗಳವಾರ ಶಿವಮೊಗ್ಗ ಪೊಲೀಸರು ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಕಿಡ್ನಿ ಸಮಸ್ಯೆಯಿಂದ ನರಳುತ್ತಿದ್ದ ಮಹಿಳೆಯೊಬ್ಬರು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದಿಂದ ಮಣಿಪಾಲದ ಆಸ್ಪತ್ರೆಗೆ ದಾಖಲಾಗಬೇಕಿತ್ತು. ಆದರೆ ಟ್ರಾಫಿಕ್‌ ಸಮಸ್ಯೆ ನಡುವೆ ನಿಗದಿತ ಸಮಯಕ್ಕೆ ಮಣಿಪಾಲಕ್ಕೆ ತೆರಳುವುದು ಕಷ್ಟವಾಗಿತ್ತು. ಈ ವಿಷಯ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಭಿನವ್‌ ಖರೆ ಗಮನಕ್ಕೆ ಬಂದಿದ್ದು, ತಕ್ಷಣವೇ ಅವರು ಪೊಲೀಸ್‌ ಅಧಿಕಾರಿಗಳನ್ನು ಸಂಪರ್ಕಿಸಿ ಆಸ್ಪತ್ರೆಗೆ ಹೋಗುವ ಮಾರ್ಗದಲ್ಲಿ ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಲು ಸೂಚಿಸಿದರು. ಕೂಡಲೇ ಕಾರ್ಯೋನ್ಮುಖರಾದ ಪೊಲೀಸರು ರೋಗಿ ಸಂಚರಿಸುವ ಮಾರ್ಗದಲ್ಲಿ ಜೀರೊ ಟ್ರಾಫಿಕ್‌ ವ್ಯವಸ್ಥೆ ಮಾಡಿ ಸಹಕರಿಸಿದ್ದಾರೆ.

ಏನಿದು ಪ್ರಕರಣ:

ಸಾಗರ ತಾಲ್ಲೂಕಿನ ಕಾರ್ಗಲ್‌ ಬಳಿಯ ಮಕ್ಕಿಮನೆ ನಿವಾಸಿ ಸುಜಾತಾ(37) ಕಳೆದೆರಡು ದಿನಗಳಿಂದ ತೀವ್ರ ಅಸ್ಪಸ್ಥರಾಗಿದ್ದರು. ಅವರನ್ನು ಪತಿ ಪದ್ಮರಾಜ್‌ ಅವರು ಶಿವಮೊಗ್ಗ ನಂಜಪ್ಪ ಆಸ್ಪತ್ರೆಗೆ ಕರೆ ತಂದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದರು. ತಪಾಸಣೆ ಬಳಿಕ ಸುಜಾತಾ ಅವರ ಕಿಡ್ನಿಯಲ್ಲಿ ಸಮಸ್ಯೆ ಯಾಗಿದೆ ಎಂದು ವೈದ್ಯರು ತಿಳಿಸಿದರು.

ಸುಜಾತಾ ಅವರನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಆಸ್ಪತ್ರೆಗೆ ಕರೆದೊಯ್ಯಬೇಕಾಗಿತ್ತು. ಆದರೆ ನಿಗದಿತ ಸಮಯಕ್ಕೆ ಆಸ್ಪತ್ರೆಗೆ ತೆರಳಲು ಟ್ರಾಫಿಕ್‌ ಸಮಸ್ಯೆ ಅಡ್ಡಿಯುಂಟು ಮಾಡುವ ಭೀತಿ ಇತ್ತು. ಈ ವಿಚಾರವನ್ನು ಪತಿ ಪದ್ಮರಾಜ್‌ ಜಿಲ್ಲಾ ರಕ್ಷಣಾಧಿಕಾರಿ ಅಭಿನವ್‌ ಖರೆ ಗಮನಕ್ಕೆ ತಂದಿದ್ದಾರೆ. ತಕ್ಷಣವೇ ಅವರು ಜೀರೊ ಟ್ರಾಫಿಕ್‌ ವ್ಯವಸ್ಥೆ ಕಲ್ಪಿಸಿದ್ದಾರೆ. ಇವರ ಕಾರ್ಯಕ್ಕೆ ಪೊಲೀಸ್‌ ಸಿಬ್ಬಂದಿ ಕೈ ಜೋಡಿಸಿದ್ದಾರೆ.

ಸುಜಾತಾ ಅವರಿದ್ದ ಆಂಬುಲೆನ್ಸ್‌ಗೆ ಜೀರೊ ಟ್ರಾಫಿಕ್‌ ವ್ಯವಸ್ಥೆ ಮಾಡಿದ್ದಾರೆ. ಶಿವಮೊಗ್ಗ ನಂಜಪ್ಪ ಆಸ್ಪತ್ರೆಯಿಂದ ಎನ್‌.ಟಿ.ರಸ್ತೆ ಮೂಲಕ ತೀರ್ಥಹಳ್ಳಿಗೆ ಸಾಗುವ ಮಾರ್ಗದುದ್ದಕ್ಕೂ ಈ ಜೀರೊ ಟ್ರಾಫಿಕ್‌ ವ್ಯವಸ್ಥೆ ಮಾಡಲಾಗಿತ್ತು. ಆಗುಂಬೆಯಿಂದ ಮಣಿಪಾಲ್‌ವರೆಗೆ ಟ್ರಾಫಿಕ್ ಹೊಣೆಯನ್ನು ಮಂಗಳೂರು ಪೊಲೀಸರು ನಿರ್ವಹಿಸಿದರು.

ಸಾರ್ವಜನಿಕರಿಂದ ಮೆಚ್ಚುಗೆ: ಶಿವಮೊಗ್ಗ ಪೊಲೀಸರ ಈ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ಸೂಚಿಸಿದ್ದಾರೆ. ಸುಜಾತಾ ಬೇಗನೇ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ. ಅಲ್ಲದೇ ಜೀರೊ ಟ್ರಾಫಿಕ್‌ ವ್ಯವಸ್ಥೆ ಕಲ್ಪಿಸುವಲ್ಲಿ ಸಹಕರಿಸಿದ ತಮ್ಮ ಇಲಾಖೆಯ ಎಲ್ಲಾ ಸಿಬ್ಬಂದಿಯನ್ನೂ ರಕ್ಷಣಾಧಿಕಾರಿ ಅಭಿನವ್‌ ಖರೆ ಅಭಿನಂದಿಸಿದ್ದಾರೆ.

ಒಂದು ವಾಹನ ತೆರಳುವ ಮಾರ್ಗದುದ್ದಕ್ಕೂ ಇತರೆ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸುವುದನ್ನು ಜೀರೊ ಟ್ರಾಫಿಕ್‌ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಗಣ್ಯ ವ್ಯಕ್ತಿಗಳು ಸಂಚರಿಸುವಾಗ ಈ ರೀತಿಯ ಜೀರೊ ಟ್ರಾಫಿಕ್‌ ವ್ಯವಸ್ಥೆ ಮಾಡಲಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry