ಶನಿವಾರ, ಸೆಪ್ಟೆಂಬರ್ 18, 2021
24 °C
ಡಿಜಿಸಿಎ ನಿಯಮಗಳನ್ನೂ ಉಲ್ಲಂಘಿಸಿದ್ದ ಸಂಸ್ಥೆ? l ಸಾರ್ವಜನಿಕರಿಗೆ ಜಾಲಿ ರೈಡ್ ಆಯೋಜನೆ

12 ವರ್ಷಗಳಿಂದ ಬಾಡಿಗೆ ಬಾಕಿ: ಅಗ್ನಿ ಏರೊಸ್ಪೋರ್ಟ್ಸ್‌ ಸಂಸ್ಥೆ ಆಸ್ತಿ ಜಪ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಹನ್ನೆರಡು ವರ್ಷಗಳಿಂದ ಸರಿಯಾಗಿ ಬಾಡಿಗೆ ನೀಡದ, ನೋಟಿಸ್‌ಗೂ ಉತ್ತರಿಸದ ಜಕ್ಕೂರಿನ ಸರ್ಕಾರಿ ವೈಮಾನಿಕ ತರಬೇತಿ ಶಾಲೆ ಆವರಣದಲ್ಲಿರುವ ಅಗ್ನಿ ಏರೊ ಸ್ಪೋರ್ಟ್ಸ್‌ ಸಂಸ್ಥೆಯ ಆಸ್ತಿಯನ್ನು ಮುಟ್ಟುಗೋಲು ಹಾಕಲಾಗಿದೆ’ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ನಾರಾಯಣ ಗೌಡ ತಿಳಿಸಿದರು.

‘ಈ ಸಂಸ್ಥೆಗೆ ಭೋಗ್ಯ ಮತ್ತು ಬಾಡಿಗೆ (ಲೀಸ್‌–ಕಂ–ರೆಂಟ್‌) ಆಧಾರದಲ್ಲಿ 80×120 ಚದರ ಅಡಿ ನಿವೇಶನವನ್ನು ನೀಡಲಾಗಿತ್ತು. ಆದರೆ, 2008ರಿಂದ ಈವರೆಗೆ ₹ 1.50 ಕೋಟಿ ಬಾಡಿಗೆ ಉಳಿಸಿಕೊಂಡಿರುವ ಸಂಸ್ಥೆ, ವೈಮಾನಿಕ ತರಬೇತಿ ಶಾಲೆಯ ಜಾಗವನ್ನೂ ಒತ್ತುವರಿ ಮಾಡಿಕೊಂಡಿದೆ. ಹೀಗಾಗಿ, ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳಲಾಗಿದೆ’ ಎಂದರು.

‘ಬಾಡಿಗೆ ನೀಡದ ಕಾರಣ ಸಂಸ್ಥೆಗೆ ಹಲವು ಬಾರಿ ನೋಟಿಸ್ ನೀಡ ಲಾಗಿತ್ತು. ಅಲ್ಲದೆ, ತಕ್ಷಣ ಬಾಡಿಗೆ ವಸೂಲಿ ಮಾಡಬೇಕು ಇಲ್ಲವೇ ಆಸ್ತಿ ಮುಟ್ಟುಗೋಲು ಹಾಕಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡ ಲಾಗಿತ್ತು. ಇತ್ತೀಚೆಗೆ ಸರ್ವೆ ನಡೆಸಿದ್ದ ಅಧಿಕಾರಿ ಗಳು, ಸಂಸ್ಥೆ 24,143 ಚದರ ಅಡಿ ಜಾಗವನ್ನು ಒತ್ತುವರಿ ಮಾಡಿರುವುದನ್ನು ಗುರುತಿಸಿದ್ದರು’ ಎಂದೂ ವಿವರಿಸಿದರು.

‘ಸರ್ಕಾರಿ ವೈಮಾನಿಕ ತರಬೇತಿ ಶಾಲೆಯ ಆವರಣದಲ್ಲಿ ಸಕ್ಷಮ ಪ್ರಾಧಿಕಾರಗಳ ಅನುಮತಿ ಪಡೆಯದೆ ಅಗ್ನಿ ಏರೊಸ್ಪೋರ್ಟ್ಸ್‌ ಸಂಸ್ಥೆಯವರು ಕಚೇರಿ ನಿರ್ಮಿಸಿಕೊಂಡಿದ್ದರು. ಡಿಜಿ ಸಿಎ ನಿಯಮ ಉಲ್ಲಂಘಿಸಿ ವಾಣಿಜ್ಯ ಮಾದರಿ ಯಲ್ಲಿ ಮೈಕ್ರೊಲೈಟ್ ವಿಮಾನಗಳಲ್ಲಿ ಸಾರ್ವಜನಿಕರಿಗೆ ಜಾಲಿ ರೈಡ್ ಆಯೋಜಿಸುತ್ತಿದ್ದರು. ಈ ಮೂಲಕ, ವಾರ್ಷಿಕ ನೂರಾರು ಕೋಟಿ ಆದಾಯ ಗಳಿಸುತ್ತಿದ್ದ ಸಂಸ್ಥೆ, ಸರ್ಕಾರಕ್ಕೆ ತೆರಿಗೆ ವಂಚಿಸುತ್ತಿರು ವುದು ಮೇಲ್ನೋಟಕ್ಕೆ ಕಂಡುಬಂದಿದೆ’ ಎಂದೂ ತಿಳಿಸಿದರು.

‘ಸಂಸ್ಥೆಯವರು ವೈಮಾನಿಕ ತರಬೇತಿ ಶಾಲೆ ಆವರಣದೊಳಗೆ ಅನಧಿಕೃತ ವ್ಯಕ್ತಿಗಳಿಗೆ ಪ್ರವೇಶ ನೀಡಿದ್ದಾರೆ. ತಮ್ಮ ವಿಮಾನಗಳಲ್ಲಿ ಅಕ್ರಮ ಹಾರಾಟಕ್ಕೆ ಅವಕಾಶ ನೀಡಿ ರಾಷ್ಟ್ರೀಯ ಭದ್ರತೆಗೆ ಧಕ್ಕೆಯಾಗುವ ರೀತಿಯಲ್ಲಿ ನಡೆದುಕೊಂಡಿ ದ್ದಾರೆ. ವೈಮಾನಿಕ ಉದ್ದೇಶಕ್ಕೆ ನೀಡಿದ್ದ ಸ್ಥಳ ಗಳನ್ನು ಅನಧಿಕೃತ ಚಟುವಟಿಕೆಗೆ ಬಳಸಿ, ಬಾಡಿಗೆ ಷರತ್ತು ಉಲ್ಲಂಘಿಸಿ ದ್ದಾರೆ. ಹೀಗಾಗಿ, ಬಾಡಿಗೆ ಹಣ ಪಾವತಿಸುವವರೆಗೆ ಸಂಸ್ಥೆಯ ಎಲ್ಲ ಸ್ವತ್ತುಗಳನ್ನು ಯಥಾಸ್ಥಿತಿಯಲ್ಲಿ ಮುಟ್ಟು ಗೋಲು ಹಾಕಿಕೊಂಡು, ಎಲ್ಲ ಚಟುವಟಿಕೆ ಸ್ಥಗಿತಗೊಳಿಸಲಾಗಿದೆ’ ಎಂದರು.

ಷರತ್ತು ಉಲ್ಲಂಘನೆ: ಸಂಸ್ಥೆಗಳ ಮೇಲೆ ಕ್ರಮ

‘ವೈಮಾನಿಕ ತರಬೇತಿ ಶಾಲೆಯ ಆವರಣದಲ್ಲಿರುವ ಎಲ್ಲ ಕಂಪನಿಗಳಿಗೂ ನೋಟಿಸ್ ನೀಡಲಾಗಿದೆ. ಉಳಿದ ಕಂಪನಿಗಳು ನೋಟಿಸ್‌ಗೆ ಉತ್ತರಿಸಿ, ಅಲ್ಪ ಪ್ರಮಾಣದಲ್ಲಿ ಬಾಡಿಗೆ ಪಾವತಿಸಿವೆ. ನಿಯಮ ಉಲ್ಲಂಘನೆ ಆಗಿದ್ದರೆ 15 ದಿನಗಳ ಒಳಗೆ ಸರಿಪಡಿಸಿಕೊಳ್ಳಬೇಕು’ ಎಂದೂ ಸಚಿವ ನಾರಾಯಣ ಗೌಡ ಎಚ್ಚರಿಕೆ ನೀಡಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು