ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ: ಬಿಜೆಪಿ ಜನಪ್ರತಿನಿಧಿಗಳಲ್ಲೇ ಆಂತರಿಕ ತಿಕ್ಕಾಟ

Last Updated 3 ಜನವರಿ 2023, 6:25 IST
ಅಕ್ಷರ ಗಾತ್ರ

ಬಾಗಲಕೋಟೆ: 2018ರ ಚುನಾವಣೆಯಲ್ಲಿ ಬಿಜೆಪಿ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಐದು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಇತ್ತೀಚೆಗೆ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ತನ್ನ ಹಿಡಿತದಲ್ಲಿದ್ದ ಕ್ಷೇತ್ರದಲ್ಲಿ ಸೋಲು ಕಂಡಿದೆ. ಇದಕ್ಕೆ ಜಿಲ್ಲೆಯ ಬಿಜೆಪಿ ನಾಯಕರಲ್ಲಿನ ಭಿನ್ನಮತವೇ ಕಾರಣ ಎಂಬ ಮಾತುಗಳು ಬಿಜೆಪಿ ಪಡಸಾಲೆಯಲ್ಲಿ ಕೇಳಿ ಬರುತ್ತಿವೆ.

ಬಾಗಲಕೋಟೆಯ ನವನಗರದಲ್ಲಿರುವ ನಿರ್ಮಿಸಿರುವ ಬಿಜೆಪಿ ಕಚೇರಿ ಉದ್ಘಾಟನೆಗೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರೇ ಬರಬೇಕಾಗಿತ್ತು. ಕಾರ್ಯಕ್ರಮ ಆಯೋಜನೆ ಕುರಿತು ಜಿಲ್ಲಾ ನಾಯಕರ ನಡುವೆ ನಡೆದ ಜಿದ್ದಾಜಿದ್ದಿನಿಂದಾಗಿ ಅವರು ವರ್ಚುವಲ್‌ ಮೂಲಕ ಉದ್ಘಾಟಿಸುವಂತಾಗಿದ್ದು, ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಚರಂತಿಮಠರ ಉಚ್ಚಾಟನೆ, ಹುನಗುಂದದಲ್ಲಿ ಕನಕದಾಸರ ಮೂರ್ತಿ ಪ್ರತಿಷ್ಠಾಪನೆ ಬಿಜೆಪಿಯ ಸ್ಥಿತಿ ಹೇಳುತ್ತಿವೆ.

ಜಿಲ್ಲಾ ಉಸ್ತುವಾರಿ ಸಚಿವ‌ ಸಿ.ಸಿ. ಪಾಟೀಲ ಅವರು ನಡೆಸಿದ ಪ್ರಗತಿ ಪರಿಶೀಲನಾ ಹಾಗೂ ಅತಿವೃಷ್ಟಿ ಹಾನಿ ಕುರಿತ ಸಭೆಯಲ್ಲಿ ಜಿಲ್ಲೆಯ ಎಲ್ಲ ಬಿಜೆಪಿ ಪ್ರತಿನಿಧಿಗಳು ಪಾಲ್ಗೊಳ್ಳುವುದಿಲ್ಲ. ಒಬ್ಬ ಸಚಿವರು ಭಾಗವಹಿಸಿದ್ದರೆ, ಇನ್ನೊಬ್ಬರು ಗೈರಾಗಿರುತ್ತಾರೆ. ಸಚಿವ ಮುರುಗೇಶ ನಿರಾಣಿ ಆಯೋಜಿಸುವ ಕಾರ್ಯಕ್ರಮಗಳಿಂದ ಸಚಿವ ಗೋವಿಂದ ಕಾರಜೋಳ, ಶಾಸಕ ವೀರಣ್ಣ ಚರಂತಿಮಠ ದೂರ ಉಳಿದರೆ, ಇವರು ಆಯೋಜಿಸುವ ಕಾರ್ಯಕ್ರಮಗಳಿಂದ ಅವರು ದೂರ ಉಳಿಯುತ್ತಾರೆ.

ಅವಕಾಶ ಸಿಕ್ಕಾಗಲೆಲ್ಲ ಪರೋಕ್ಷವಾಗಿ ಒಬ್ಬರ ವಿರುದ್ಧ ಮತ್ತೊಬ್ಬರು ವಾಗ್ದಾಳಿ ನಡೆಸುತ್ತಾರೆ. ಇದಕ್ಕೆ ಆಗಾಗ ಪಕ್ಕದ ವಿಜಯಪುರ ಜಿಲ್ಲೆಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ಧ್ವನಿಗೂಡಿಸುತ್ತಾರೆ.

ರಾಷ್ಟ್ರಮಟ್ಟದಲ್ಲಿ ಬಿಜೆಪಿ ನಾಯಕರು ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದರೆ, ಜಿಲ್ಲೆಯ ನಾಯಕರ ಸ್ಥಿತಿ ಮಾತ್ರ ಮನೆಯೊಂದು ಹಲವು ಬಾಗಿಲು ಎನ್ನುವಂತಾಗಿದೆ.

ವೈದ್ಯಕೀಯ ಕಾಲೇಜು ಸ್ಥಾಪನೆ, ಏಮ್ಸ್ ಬಗ್ಗೆ ಪ್ರಸ್ತಾವ, ಹೊಸ ಕೈಗಾರಿಕೆಗಳ ಆರಂಭ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳು ನನೆಗುದಿಗೆ ಬಿದ್ದಿವೆ. ತಮ್ಮ, ತಮ್ಮ ಕ್ಷೇತ್ರಗಳನ್ನು ಭದ್ರಗೊಳಿಸುವ ಕೆಲಸದಲ್ಲಿ ಸಚಿವರು ಶ್ರಮವಹಿಸುತ್ತಿದ್ದಾರೆಯೇ ಹೊರತು, ಜಿಲ್ಲೆಯಾದ್ಯಂತ ಪಕ್ಷ ಸಂಘಟನೆಯ ಕೆಲಸ ಮಾಡುತ್ತಿಲ್ಲ ಎಂಬುದು ಪಕ್ಷಕ್ಕಾಗಿ ದುಡಿಯುತ್ತಿರುವ ಜಿಲ್ಲಾ ಕೆಲ ಪದಾಧಿಕಾರಿಗಳ ದೂರು.

ಸಚಿವ ಮುರುಗೇಶ ನಿರಾಣಿ ಅವರ ಬೀಳಗಿ ವಿಧಾನಸಭಾ ಕ್ಷೇತ್ರದಲ್ಲಿ ಅವರನ್ನು ಸೋಲಿಸಲು ಈ ಬಾರಿ ಬಿಜೆಪಿ ನಾಯಕರೇ ಯತ್ನಿಸಲಿದ್ದಾರೆ ಎಂಬ ಮಾತುಗಳಿದ್ದರೆ, ಇದೇ ಮಾತುಗಳು ಸಚಿವ ಗೋವಿಂದ ಕಾರಜೋಳ ಅವರ ಕ್ಷೇತ್ರ ಮುಧೋಳದಲ್ಲಿಯೂ ಕೇಳಿ ಬರುತ್ತವೆ. ಜಿಲ್ಲೆ ರಚನೆಯಾಗಿ 25 ವರ್ಷಗಳಾಗಿದ್ದರೂ, ಜಿಲ್ಲೆ ನಡೆದು ಬಂದ ಹಾದಿ, ಮುಂದಿನ ಅಭಿವೃದ್ಧಿ ನೋಟದ ಬಗ್ಗೆ ಚಿಂತನ ಮಂಥನ ನಡೆಯದಿರುವುದು ಎಲ್ಲವೂ ಸರಿಯಿಲ್ಲ ಎಂಬುದನ್ನು ತೋರಿಸುತ್ತದೆ. ಇದೇ ಪರಿಸ್ಥಿತಿ ಮುಂದುವರೆದರೆ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹಾನಿಯಾಗಲಿದೆ ಎಂಬುದು ಪದಾಧಿಕಾರಿಗಳ ಹಾಗೂ ಕಾರ್ಯಕರ್ತರ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT