ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಾದಾಮಿ: ಕಾಯಕಲ್ಪಕ್ಕೆ ಕಾದಿರುವ ಅಲೆಮಾರಿ ಜನಾಂಗ

ದುಡಿಮೆಯಿಂದ ಬದುಕು ಕಟ್ಟಿಕೊಂಡ ಕುಂಚಿಕೊರವರು
Published 19 ಜೂನ್ 2024, 4:33 IST
Last Updated 19 ಜೂನ್ 2024, 4:33 IST
ಅಕ್ಷರ ಗಾತ್ರ

ಬಾದಾಮಿ: ಸಮೀಪದ ಶಿವಪುರ ಗ್ರಾಮ ನಿಸರ್ಗ ಸೌಂದರ್ಯವಿರುವ ಬೆಟ್ಟದ ಸಮೀಪವಿದೆ. 60 ಕುಟುಂಬಗಳಲ್ಲಿ ವಾಸಿಸುವ ಅಂದಾಜು 300 ಜನರು ಅಲೆಮಾರಿ ಕುಂಚಿಕೊರವರ ಜನಾಂಗ ಅಲ್ಲಿ ವಾಸವಾಗಿದ್ದಾರೆ. ಈ ಜನಾಂಗವು ತಾಲ್ಲೂಕಿನಲ್ಲಿ ಅಂದಾಜು 200ಕ್ಕೂ ಅಧಿಕ ಕುಟುಂಬಗಳು ನೆಲೆಸಿವೆ. ಈ ಸಮುದಾಯಕ್ಕೆ ಮೌಖಿಕ ಭಾಷೆ ಇದೆ. ಆದರೆ ಗ್ರಂಥಸ್ಥ ಭಾಷೆ ಇಲ್ಲ.

ಈ ಗ್ರಾಮದಲ್ಲಿ ಸಂಚರಿಸಿದರೆ ಹದಗೆಟ್ಟ ರಸ್ತೆ, ಕಸದ ರಾಶಿ, ಮಹಿಳಾ ಶೌಚಾಲಯ ಕೊರತೆ, ವಿದ್ಯುತ್ ದೀಪವಿಲ್ಲದಿರುವುದು, ಜನತಾ ಮನೆಗಳ ಬೇಡಿಕೆ, ಬಾರದ ಮಾಸಾಶನ, ಕಾಲುವೆಗೆ ಬಾರದ ನೀರು ಮತ್ತು ಸರ್ಕಾರದ ಸೌಲಭ್ಯಗಳಿಂದ ವಂಚಿತವಾಗಿರುವುದು ಗೊತ್ತಾಗುತ್ತದೆ.

‘ಸುಮಾರು ಎಂಟು ದಶಕಗಳ ಹಿಂದೆಯೆ ಬಾದಾಮಿ ಪಟ್ಟಣದ ರಸ್ತೆ ಪಕ್ಕದಲ್ಲಿ ಗುಡಿಸಲಿನಲ್ಲಿ ವಾಸವಾಗಿದ್ದೆವು. ನೇಕಾರರ ನೇಯ್ಗೆಗೆ ಮತ್ತು ಕುರುಬರ ಕಂಬಳಿ ನೇಯ್ಗೆಯ ಮಗ್ಗಕ್ಕೆ ಹುಲ್ಲಿನ ಕುಂಚಿಯನ್ನು (ಬ್ರೆಸ್) ಮಾಡಿಕೊಡುತ್ತಿದ್ದೆವು. ಅದಕ್ಕೆ ನಮಗೆ ಕುಂಚಿ ಕೊರವರು ಎಂದು ಕರೆಯುವರು’ ಎಂದು ವೃದ್ಧ ರಾಮಣ್ಣ ಪೂಜಾರ ಹೇಳಿದರು.

‘ಹುಲ್ಲಿನ ಕುಂಚಿಯನ್ನು ಮಾಡುವುದರ ಜೊತೆಗೆ ಹಂದಿಗಳನ್ನು ಸಾಕುವುದು. ಕೃಷಿಕರಿಗೆ ಹುಲ್ಲಿನ ಕಸಪೊರಿಕೆ. ಸಿಂಬಿ, ನೆಲುವು ಮತ್ತು ರೈತರ ಜಾನುವಾರುಗಳಿಗೆ ಕಣ್ಣಿ, ಚಿಕ್ಕ ಮಾಡಿ ಮನೆ ಮನೆಗೆ ಮಾರಾಟ ಮಾಡುತ್ತಿದ್ದೆವು. ಈಗ ಹಂದಿ ಸಾಕಾಣಿಕೆ, ವ್ಯವಸಾಯ, ಹೈನುಗಾರಿಕೆ ಮತ್ತು ಕೂದಲು ಸಂಗ್ರಹಕ್ಕೆ ಹಳ್ಳಿಗಳಿಗೆ ಹೋಗುವರು’ ಎಂದು ಹೇಳಿದರು.

ಅಲೆಮಾರಿ ಜನಾಂಗ ಮೂಲತಃ ಇವರು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದಾರೆ. ಎಂಟು ದಶಕಗಳ ಹಿಂದೆ ಶಿವಪುರ ಗ್ರಾಮದ ಕಾಡಿನಲ್ಲಿ ಯಾರೂ ಹೋಗುವಂತಿರಲಿಲ್ಲ. ಬಾದಾಮಿ ಪಟ್ಟಣದಲ್ಲಿ ಗುಡಿಸಲಿನಲ್ಲಿ ವಾಸವಾಗಿದ್ದ ಅಲೆಮಾರಿ ಕುಂಚಿಕೊರವ ಜನಾಂಗ ಸಮಾಜ ಸೇವಕ ಬಿ.ಎಂ. ಹೊರಕೇರಿ ಅವರ ಕಣ್ಣಿಗೆ ಬಿದ್ದರು. ಕುಂಚಿ ಕೊರವರ ಸಮುದಾಯದ ಬಗ್ಗೆ ಅಧ್ಯಯನ ಕೈಗೊಂಡು ಇವರಿಗೆ ಹೊಸ ಬದುಕನ್ನು ಕಟ್ಟಿಕೊಟ್ಟರು.

‘ನಮ್ಮ ಹಿರಿಯರಿಗೆ ಬಿ.ಎಂ. ಹೊರಕೇರಿ ಸಾಹೇಬ್ರು 1967ರಲ್ಲಿ 30 ಕುಟುಂಬಕ್ಕೆ ವಾಸಿಸಲು ಮನೆ ಕಟ್ಟಿಸಿಕೊಟ್ಟರು. ಒಕ್ಕಲತನ ಮಾಡಲು 60 ಎಕರೆ ಜಮೀನು ಕೊಡಸಿದರು. ಜಮೀನು ಯಾವು ನಮ್ಮ ಹೆಸರಿಗೆ ಆಗಿಲ್ಲ, ಬೇಸಾಯ ಮಾಡಕೋಂತ ಹೊಂಟೀವಿ. ಇವರನ್ನು ಬಿಟ್ಟು ಮತ್ತ ಯಾರೂ ನಮಗ ಏನೂ ಸಹಾಯ ಮಾಡಿಲ್ಲ. ಹೊರಕೇರಿ ಸಾಹೇಬ್ರನ್ನ ನೆನಿಸಗೋಂತ ಊಟಾ ಮಾಡತೀವಿ‘ ಎಂದು ಬಸವರಾಜ ಬೊಂಬಾಯಿ ಹೇಳಿದರು.

‘30 ಕುಟುಂಬ ಇದ್ದದ್ದು ಈಗ 60ಕ್ಕೂ ಹೆಚ್ಚು ಕುಟುಂಬಗಳಾಗಿವೆ. ಒಂದೇ ಮನೆಯಲ್ಲಿ 30 ಜನ ವಾಸವಾಗಿದ್ದಾರೆ. ಸಾಕಷ್ಟು ಜಾಗೆ ಇದೆ ಸರ್ಕಾರ ನಮಗೆ ಜನತಾ ಮನೆಗಳನ್ನು ನಿರ್ಮಿಸಿಕೊಡಬೇಕು ’ ಎಂದು ಗ್ರಾಮಸ್ಥರು ಆಗ್ರಹಿಸಿದರು.

55 ವರ್ಷಗಳಿಂದ ಜಮೀನಿನಲ್ಲಿ ಬೇಸಾಯ ಮಾಡುತ್ತಿದ್ದಾರೆ. ಆದರೆ ಜಮೀನು ಇವರ ಹೆಸರಿನಲ್ಲಿ ಇಲ್ಲ. ಯುವಕರಿಗೆ ಮತ್ತು ಮಹಿಳೆಯರ ಸ್ವಯಂ ಉದ್ಯೋಗಕ್ಕೆ ಸರ್ಕಾರದಿಂದ ಮತ್ತು ಬ್ಯಾಂಕಿನಿಂದ ಆರ್ಥಿಕ ನೆರವು ಸಿಕ್ಕಿಲ್ಲ’ ಎಂದು ಶಂಕರ ಹೇಳಿದರು.

ಮಹಿಳೆಯರು ತಮ್ಮ ಮೊದಲಿನ ಕುಲ ಕಸಬು ಹುಲ್ಲಿನಿಂದ ಸಿಂಬೆ, ನೆಲವು, ಕಣ್ಣಿ, ಹುಲ್ಲಿನ ಮತ್ತು ತೆಂಗಿನ ಗರಿಯಿಂದ ಕಸಪೊರಿಕೆ ಮಾಡಿ ಹಳ್ಳಿ ಹಳ್ಳಿಗೆ ಹೋಗಿ ಮಾರಾಟ ಮಾಡಿ ಕುಟುಂಬದ ಆರ್ಥಿಕ ನಿರ್ವಹಣೆ ಮಾಡುವರು. ಕೆಲವು ಮಹಿಳೆಯರು ಹಳ್ಳಿಗಳಿಗೆ ಸಂಚರಿಸಿ ಪಾತ್ರೆಗಳನ್ನು ಕೊಟ್ಟು ಕೂದಲನ್ನು ತುಂಬುವರು. ಪುರುಷರು ಹಂದಿಯನ್ನು ಸಾಕಿದ್ದಾರೆ.

‘ನಮಗ ಸರ್ಕಾರದಿಂದ ಏನೂ ಸವಲತ್ತು ಸಿಕ್ಕಿಲ್ಲ. ನಾವು ನಿತ್ಯವೂ ದುಡಿದು ತಂದಾಗಲೇ ಬದುಕಲು ಸಾಧ್ಯವಾಗುತ್ತದೆ’ ಎಂದು ಗಂಗಮ್ಮ ಹೇಳಿದರು.

‘ಹಂದಿಸಾಕಾಣಿಕೆಗೆ ಮತ್ತು ಮಹಿಳೆಯರು ಉದ್ಯೋಗಕ್ಕಾಗಿ ಆರ್ಥಿಕ ನೆರವನ್ನು ಯಾರನ್ನು ಕೇಳಬೇಕು ಎಂಬುದು ನಮಗೆ ಗೊತ್ತಿಲ್ಲ. ವರ್ಷದಿಂದ ವೃದ್ಧರಿಗೆ ಮಾಸಾಶನ ಬಂದಿಲ್ಲ’ ಎಂದು ಗ್ರಾಮಸ್ಥರು ನಿರಾಸೆ ವ್ಯಕ್ತಪಡಿಸಿದರು.

‘ಗ್ರಾಮದ ಪ್ರಾಥಮಿಕ ಕಿರಿಯ ಶಾಲೆಯಲ್ಲಿ 31 ಮಕ್ಕಳು ಮತ್ತು ಪ್ರೌಢ, ಪಿಯು ಮತ್ತು ಪದವಿಯಲ್ಲಿ 30ಕ್ಕೂ ಅಧಿಕ ಮಕ್ಕಳು ಓದುತ್ತಿದ್ದಾರೆ. ಮೂವರು ಶಿಕ್ಷಕ ಹುದ್ದೆಯಲ್ಲಿ ಇದ್ದಾರೆ ’ ಎಂದು ಎಪಿಎಂಸಿ ನಿವೃತ್ತ ನೌಕರ ರಾಮಣ್ಣ ಹೇಳಿದರು.

ಶಿವಪುರ ಗ್ರಾಮದ ಕುಂಚಿ ಕೊರವರ ಮಹಿಳೆಯರು ಕಸಪೊರಿಕೆಯನ್ನು ಮಾಡುತ್ತಿರುವರು.
ಶಿವಪುರ ಗ್ರಾಮದ ಕುಂಚಿ ಕೊರವರ ಮಹಿಳೆಯರು ಕಸಪೊರಿಕೆಯನ್ನು ಮಾಡುತ್ತಿರುವರು.

ಕರಕುಶಲ ಕಲೆಗೆ ಸಾಲ ಸೌಲಭ್ಯಕ್ಕೆ ಆಗ್ರಹ ಮನೆಗಳ ನಿರ್ಮಿಸಿಕೊಡಲು ಒತ್ತಾಯ ಹಂದಿ ಸಾಕಾಣಿಕೆಗೆ ಸಾಲ ಸೌಲಭ್ಯ ಬೇಡಿಕೆ

ರಸ್ತೆ ದುರಸ್ತಿಗೆ ಕ್ರಿಯಾ ಯೋಜನೆ ಮಾಡಲಾಗುವುದು. ಹೊಸ ವಿದ್ಯುತ್‌ ದೀಪ ಕಂಬವನ್ನು ಗ್ರಾಮ ಪಂಚಾಯ್ತಿಗೆ ಹಸ್ತಾಂತರಿಸಿಲ್ಲ. ಗ್ರಾಮದಲ್ಲಿ ಸ್ವಚ್ಛತೆ ಮಾಡಿಸುತ್ತೇವೆ

-ರಾಜು ಮುಗಳಕೋಡ ಪಿಡಿಒ

ವಿವಿಧ ಸೌಲಭ್ಯ ಪಡೆಯುವ ಫಲಾನುಭವಿಗಳು ತಾಲ್ಲೂಕಿನಲ್ಲಿ ಶೇ 20ರಷ್ಟು ಆಧಾರ ಲಿಂಕ್ ಮಾಡಿಲ್ಲ. ಲಿಂಕ್ ಮಾಡಿಕೊಂಡರೆ ಸರ್ಕಾರದ ಸೌಲಭ್ಯ ದೊರೆಯುವುದು

-ಜೆ.ಬಿ. ಮಜ್ಜಗಿ ತಹಶೀಲ್ದಾರ್

ಗ್ರಾಮ ಪಂಚಾಯ್ತಿ ಪಿಡಿಒಗೆ ವಿಚಾರಿಸಿ ಗ್ರಾಮಕ್ಕೆ ಭೇಟಿ ನೀಡಿ ಜನತಾ ಮನೆ ಮತ್ತು ಗ್ರಾಮದ ಸಮಸ್ಯೆಗಳನ್ನು ಪರಿಶೀಲಿಸುತ್ತೇವೆ

-ಮಲ್ಲಿಕಾರ್ಜುನ ಬಡಿಗೇರ ತಾಲ್ಲೂಕು ಪಂಚಾಯ್ತಿ ಇಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT