ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ‍ಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಫಕೀರಬೂದಿಹಾಳ: ಗ್ರಾ ಪಂ ಸಿಬ್ಬಂದಿ ಪ್ರಭುದೇವ ಮೇಟಿ ಆತ್ಮಹತ್ಯೆ
Last Updated 18 ಜುಲೈ 2019, 8:55 IST
ಅಕ್ಷರ ಗಾತ್ರ

ಬಾಗಲಕೋಟೆ: ಬಾದಾಮಿ ತಾಲ್ಲೂಕಿನ ಫಕೀರಬೂದಿಹಾಳ ಗ್ರಾಮ ಪಂಚಾಯ್ತಿ ಸಿಬ್ಬಂದಿ ಪ್ರಭುದೇವ ಮೇಟಿ ಸಾವಿಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಸಿಐಟಿಯು ಸಂಯೋಜಿತ ಗ್ರಾಮ ಪಂಚಾಯ್ತಿ ನೌಕರರ ಸಂಘದಿಂದ ಮಂಗಳವಾರ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಲಾಯಿತು.

ಇಲ್ಲಿನ ಜಿಲ್ಲಾಡಳಿತ ಭವನಕ್ಕೆ ಪಾದಯಾತ್ರೆ ಮೂಲಕ ಬಂದ ಗ್ರಾಮ ಪಂಚಾಯ್ತಿ ನೌಕರರು, ಮೃತ ಪ್ರಭುದೇವ ಕುಟುಂಬಕ್ಕೆ ₹ 5 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಸಂಘದ ರಾಜ್ಯ ಉಪಾಧ್ಯಕ್ಷ ಎಂ.ಬಿ.ನಾಡಗೌಡ್ರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಪ್ರಭುದೇವ ಮೇಟಿ ಸಾವಿಗೆ ಕಾರಣರಾದ ಗ್ರಾಮ ಪಂಚಾಯ್ತಿಯ ಅಧ್ಯಕ್ಷೆ ಹಾಗೂ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ಆಗ್ರಹಿಸಿದರು.

‘ಫಕೀರಬೂದಿಹಾಳ ಗ್ರಾಮ ಪಂಚಾಯ್ತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಪ್ರಭುದೇವ ಮೇಟಿ ಅವರಿಗೆ ಕಳೆದ 27 ತಿಂಗಳಿಂದ ವೇತನ ನೀಡಿರಲಿಲ್ಲ. ಇದರಿಂದ ಕುಟುಂಬ ನಿರ್ವಹಣೆ ಸಾಧ್ಯವಾಗದಂತಾಗಿತ್ತು. ಜೊತೆಗೆ ಮೇಟಿ ಅವರ ತಮ್ಮನಿಗೆ ಮೆದುಳಿನ ಶಸ್ತ್ರ ಚಿಕಿತ್ಸೆ ಮಾಡಿಸಲು ₹ 90 ಸಾವಿರ ಹಣ ಜೋಡಿಸುವುದು ತುಂಬಾ ಕಷ್ಟವಾಗಿತ್ತು’ ಎಂದು ಗ್ರಾಮ ಪಂಚಾಯ್ತಿ ನೌಕರರು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

‘ಈ ಬಗ್ಗೆ ಅನೇಕ ಬಾರಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಿಗೆ, ತಾಲ್ಲೂಕು ಪಂಚಾಯ್ತಿ ಇಒ ಅವರಿಗೆ ಪತ್ರ ಬರೆದರೂ ಯಾವುದೆ ಪ್ರಯೋಜನವಾಗಿರಲಿಲ್ಲ.ವೇತನ ಕೊಡಿಸುವಂತೆ ಕಾರಣ ಮೇ 6 ರಂದು ಜಿಲ್ಲಾ ಪಂಚಾಯ್ತಿ ಸಿಇಒ ಅವರಿಗೆ ಲಿಖಿತವಾಗಿ ಮನವಿ ಮಾಡಿದರೂ ಪ್ರಯೋಜನವಾಗಿರಲಿಲ್ಲ’ ಎಂದು ಪ್ರತಿಭಟನಾಕಾರರು ಬೇಸರ ವ್ಯಕ್ತಪಡಿಸಿದರು.

‘ಗ್ರಾಮ ಪಂಚಾಯ್ತಿ ಅಧ್ಯಕ್ಷರು ಈ ಹಿಂದಿದ್ದ ಅಭಿವೃದ್ಧಿ ಅಧಿಕಾರಿ ಮೇಲೆ ದಬ್ಬಾಳಿಕೆ ಮಾಡಿದ್ದರಿಂದ ಅವರ ವಿರುದ್ಧ ಕೆರೂರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೊತೆಗೆ ಅಧ್ಯಕ್ಷರ ಮೇಲೆ ಇನ್ನು ಗುರುತರ ಆರೋಪವಿರುವ ಹಿನ್ನೆಲೆಯಲ್ಲಿ ಓಂಬಡ್ಸಮನ್‌ ಇವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ವರದಿ ನೀಡಿದ್ದಾರೆ. ಇಂತಹ ದುರ್ವತನೆ ತೋರುವ ಅಧ್ಯಕ್ಷರಿಂದ ಬೇಸತ್ತು ಪ್ರಭುದೇವ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದರು.

ಗ್ರಾಮ ಪಂಚಾಯ್ತಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸೈಯ್ಯದ ಮುದ್ದಾಪುರ ಮಾತನಾಡಿ, ‘ಪ್ರಭುದೇವ ಮೇಟಿ ಅವರ ಆತ್ಮಹತ್ಯೆಗೆ ಕಾರಣರಾದವರ ವಿರುದ್ಧ 15 ದಿನಗಳ ಹಿಂದೆ ಮೊಕದ್ದಮೆ ದಾಖಲಾಗಿದ್ದರೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ, ಜಿಲ್ಲಾಧಿಕಾರಿ ಮಧ್ಯಪ್ರವೇಶಿಸಿ ಮೇಟಿ ಕುಟುಂಬಕ್ಕೆ ನ್ಯಾಯ ಕೊಡಿಸಬೇಕು. ಜೊತೆಗೆ ₹ 5 ಲಕ್ಷ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಎಂ.ಬಿ.ನಾಡಗ್ರೌಡ, ಪ್ರಧಾನ ಕಾರ್ಯದರ್ಶಿ ಪುಟ್ಟು ಲಮಾಣಿ ಪ್ರತಿಭಟನೆ ನೇತೃತ್ವ ವಹಿಸಿದ್ದರು. ಮುಖಂಡರಾದ ಎ.ಎಂ.ಯಡಹಳ್ಳಿ, ಅಪ್ಪಣ್ಣ ಹಿಪ್ಪರಗಿ, ಮಾಂತೇಶ ಅಕ್ಕಿ, ಕೃಷ್ಣಪ್ಪ ಬೀರನ್ನವರ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT