ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ: ಹೃದಯಾಘಾತ, ಕುಸಿದುಬಿದ್ದು ಸೋಮಲಿಂಗೇಶ್ವರ ಶ್ರೀ ಸಾವು

ಕಾರ್ಯನಿಮಿತ್ತ ಜಿಲ್ಲಾಡಳಿತ ಭವನಕ್ಕೆ ಬಂದಾಗ ಘಟನೆ
Last Updated 11 ಸೆಪ್ಟೆಂಬರ್ 2018, 13:20 IST
ಅಕ್ಷರ ಗಾತ್ರ

ಬಾಗಲಕೋಟೆ:ಕಾರ್ಯನಿಮಿತ್ತ, ಇಲ್ಲಿನ ನವನಗರದ ಜಿಲ್ಲಾಡಳಿತ ಭವನಕ್ಕೆ ಬಂದಿದ್ದ ಶಂಭುಲಿಂಗೇಶ್ವರ ಮಠದ ಸೋಮಲಿಂಗೇಶ್ವರ ಸ್ವಾಮೀಜಿ (72) ಮಂಗಳವಾರ ದಿಢೀರನೇ ಕುಸಿದುಬಿದ್ದು ಸಾವಿಗೀಡಾಗಿದ್ದಾರೆ.

ಜಮಖಂಡಿ ತಾಲ್ಲೂಕಿನ ಇನಾಂಹಂಚಿನಾಳದ (ಹುಲ್ಯಾಳ ಕ್ರಾಸ್) ಪುನರ್ವಸತಿ ಕೇಂದ್ರದಲ್ಲಿರುವ ಮಠಕ್ಕೆ ಹೊಂದಿಕೊಂಡಂತೆ ರಸ್ತೆ ನಿರ್ಮಿಸುವಂತೆ ಸ್ವಾಮೀಜಿ ಜಿಲ್ಲಾಡಳಿತಕ್ಕೆ ಅರ್ಜಿ ಸಲ್ಲಿಸಿದ್ದರು. ಅದಕ್ಕೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮದ ಬಗ್ಗೆ ವಿಚಾರಿಸಲು ಬಂದಿದ್ದರು ಎನ್ನಲಾಗಿದೆ.

ಜಿಲ್ಲಾಧಿಕಾರಿ ಕೊಠಡಿ ಪಕ್ಕದ ಚುನಾವಣಾ ಶಾಖೆಯೊಳಗೆ ತೆರಳಿದ್ದ ಸ್ವಾಮೀಜಿ, ಅಲ್ಲಿನ ಸಿಬ್ಬಂದಿಯೊಂದಿಗೆ ಮಾತನಾಡುತ್ತಲೇ ಕುಸಿದು ಬಿದ್ದಿದ್ದಾರೆ. ತಕ್ಷಣ ಸ್ಥಳದಲ್ಲಿದ್ದವರು ನೀರು ಕುಡಿಸಿ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಆಂಬುಲೆನ್ಸ್ ತರಿಸಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಅಷ್ಟರೊಳಗೆ ಸ್ವಾಮೀಜಿ ಮೃತಪಟ್ಟಿದ್ದಾಗಿ ತಿಳಿದುಬಂದಿದೆ.

ಸ್ವಾಮೀಜಿ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ ಎಂದು ವೈದ್ಯರು ದೃಢೀಕರಿಸಿರುವುದಾಗಿ ಅವರ ಆಪ್ತ ಹೂವಪ್ಪ ಉಷಾಕರ ‘ಪ್ರಜಾವಾಣಿ’ಗೆ ತಿಳಿಸಿದರು. ಆಸ್ಪತ್ರೆಗೆ ಭೇಟಿ ನೀಡಿದ ವಿಧಾನಪರಿಷತ್ ಸದಸ್ಯ ಎಸ್.ಆರ್.ಪಾಟೀಲ ಹಾಗೂ ಮಾಜಿ ಸಚಿವ ಎಚ್.ವೈ.ಮೇಟಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.ನಂತರ ಶವವನ್ನು ಮಠಕ್ಕೆ ಕಳುಹಿಸಿಕೊಡಲಾಯಿತು. ಬುಧವಾರ ಮಧ್ಯಾಹ್ನ 12 ಗಂಟೆಗೆ ಹುಲ್ಯಾಳಕ್ರಾಸ್‌ನ ಮಠದಲ್ಲಿಯೇ ಅಂತ್ಯಕ್ರಿಯೆ ನೆರವೇರಲಿದೆ ಎಂದು ಹೂವಪ್ಪ ತಿಳಿಸಿದ್ದಾರೆ.

ತಕರಾರು ಇತ್ತು?:

ಮೂಲತಃ ಬೀಳಗಿ ತಾಲ್ಲೂಕು ಮುಂಡಗನೂರಿನವರಾದ ಸೋಮಲಿಂಗೇಶ್ವರ ಸ್ವಾಮೀಜಿ, ಮುಂಡಗನೂರು ಹಾಗೂ ಹುಲ್ಯಾಳ ಕ್ರಾಸ್‌ ಎರಡೂ ಕಡೆ ಮಠ ಹೊಂದಿದ್ದರು. ಆದರೆ ಹುಲ್ಯಾಳ ಕ್ರಾಸ್‌ನ ಮಠದ ಜಾಗಕ್ಕೆ ಸಂಬಂಧಿಸಿದಂತೆ ಸ್ಥಳೀಯರು ಸ್ವಾಮೀಜಿಯೊಂದಿಗೆ ತಕರಾರು ಹೊಂದಿದ್ದರು ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT