ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮಖಂಡಿ: ಪಡಿತರ ಚೀಟಿ ತಿದ್ದುಪಡಿಗೆ ಜನರ ಅಲೆದಾಟ

Published 13 ಜೂನ್ 2023, 23:30 IST
Last Updated 13 ಜೂನ್ 2023, 23:30 IST
ಅಕ್ಷರ ಗಾತ್ರ

ಆರ್.ಎಸ್.ಹೊನಗೌಡ

ಜಮಖಂಡಿ: ನಮ್ಮ ಅತ್ತೆ ಮನೆಯಲ್ಲಿ ಇಲ್ಲ. ನಾನೇ ಈಗ ಮನೆಯ ಯಜಮಾನಿ, ನನ್ನ ಹೆಸರಿಗೆ ಕಾರ್ಡ್‌ ಬದಲಾಯಿಸಿ ಕೊಡಿ, ಕುಟುಂಬದ ಮುಖ್ಯಸ್ಥರು ಈಗ ಬದುಕಿಲ್ಲ. ನನ್ನ ಹೆಸರಿಗೆ ಕಾರ್ಡ್‌ ಮಾಡಿಕೊಡಿ, ಅಣ್ಣ ಮತ್ತು ನಾನು ಪ್ರತ್ಯೇಕವಾಗಿ ವಾಸಿಸುತ್ತಿದ್ದೇವೆ, ನಮಗೆ ಅವರಿಗೆ ಸಂಬಂಧವಿಲ್ಲ. ನಮಗೆ ಹೊಸ ಕಾರ್ಡ್‌ ನೀಡಿ...

ಹತ್ತಾರು ಕಾರಣಗಳನ್ನು ಹೇಳಿಕೊಂಡು ಪಡಿತರ ಚೀಟಿ ತಿದ್ದುಪಡಿಗಾಗಿ ಈ ಮೇಲಿನಂತೆ ಬೇಡಿಕೆ ಸಲ್ಲಿಸುತ್ತಿದ್ದಾರೆ. ರಾಜ್ಯ ಸರ್ಕಾರದ ಉಚಿತ ಗ್ಯಾರಂಟಿಗಳ ಅನುಷ್ಠಾನದ ಘೋಷಣೆಯ ಬೆನ್ನಲ್ಲೆ ಹೊಸ ಪಡಿತರ ಚೀಟಿ, ಕಾರ್ಡ್‌ ತಿದ್ದುಪಡಿಗೆ ಬೇಡಿಕೆ ಜೋರಾಗಿದೆ. ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಗೆ ಹಾಗೂ ಪಂಚಾಯಿತಿ ವ್ಯಾಪ್ತಿಯ ಇಂಟರ್ ನೆಟ್ ಸೆಂಟರ್‌ಗಳಿಗೆ ನಿತ್ಯ ಹಲವಾರು ಜನರು ಅಲೆದಾಡುತ್ತಿದ್ದಾರೆ.

ಚುನಾವಣಾ ನೀತಿ ಸಂಹಿತೆ ಕಾರಣಕ್ಕೆ ಹೊಸ ಪಡಿತರ ಚೀಟಿಗಳಿಗೆ ಅರ್ಜಿ ಸಲ್ಲಿಕೆ ಮತ್ತು ಪಡಿತರ ಚೀಟಿಗಳ ವಿತರಣೆ, ತಿದ್ದುಪಡಿ ಮಾಡುವ ವೆಬ್‌ಸೈಟ್ ಜನವರಿ ತಿಂಗಳ ಕೊನೆಯಲ್ಲಿ ಲಾಗಿನ್ ಬಂದ್ ಮಾಡಿರುವುದರಿಂದ ತಾಲ್ಲೂಕಿನಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ನೂತನ ಪಡಿತರ ಚೀಟಿ ಸಿಗುತ್ತಿಲ್ಲ. ಆಹಾರ ಇಲಾಖೆಗೆ ಅರ್ಜಿದಾರರು ನೂತನ ಪಡಿತರ ಚೀಟಿ ಪಡೆಯಲು, ಚೀಟಿಯಲ್ಲಿನ ತಿದ್ದುಪಡಿ, ಮೃತಪಟ್ಟವರ ಹೆಸರು ತೆಗೆಯಲು ಹಾಗೂ ಸೇರ್ಪಡೆ ಮಾಡಲು ಅಲೆದಾಡುವ ದುಃಸ್ಥಿತಿ ನಿರ್ಮಾಣವಾಗಿದೆ.

ಚುನಾವಣೆ ಮುಗಿದು ಹೊಸ ಸರ್ಕಾರ ಬಂದು ಒಂದು ತಿಂಗಳಾಗುತ್ತಿದೆ. ಆದರೆ, ಸರ್ಕಾರ ನೂತನ ಪಡಿತರ ಚೀಟಿ ಪಡೆಯಲು ಲಾಗಿನ್ ಆರಂಭಿಸದಕ್ಕೆ ಸರ್ಕಾರದ ವಿರುದ್ಧ ಜನರು ಹಿಡಿಶಾಪ ಹಾಕುತ್ತಿದ್ದು ಕೂಡಲೇ ಲಾಗಿನ್ ಆರಂಭಿಸಬೇಕೆಂದು ಒತ್ತಾಯಿಸಿದ್ದಾರೆ.

ಹೊಸ ಪಡಿತರ ಚೀಟಿ ನೀಡಲು ಸರ್ಕಾರ ಗುರಿ ನಿಗದಿ ಪಡಿಸಿದಂತೆ ಕಳೆದ ಜನವರಿಯಲ್ಲಿ ಹೊಸ ಕಾರ್ಡ್ ನೀಡಲಾಗಿದೆ. ಆ ನಂತರ ಕೆಲದಿನ ಅರ್ಜಿ ಸ್ವೀಕಾರ ಮತ್ತು ತಿದ್ದುಪಡಿಗೆ ಮಾತ್ರ ಅವಕಾಶ ಇತ್ತು. ಈ ಅವಧಿಯಲ್ಲಿ ತಾಲ್ಲೂಕಿನಲ್ಲಿ 3,500 ಅರ್ಜಿಗಳು ಸಲ್ಲಿಕೆಯಾಗಿದ್ದವು. ಅವುಗಳಲ್ಲಿ 2,938 ಅರ್ಜಿಗಳು ಸ್ವೀಕೃತವಾಗಿದ್ದರೆ, ಒಂದು ಸಾವಿರ ಕಾರ್ಡ್ ಸ್ಥಳ ಪರಿಶೀಲಿಸಿ ನೀಡಲಾಗಿದೆ, 1938 ಅರ್ಜಿಗಳು ಬಾಕಿ ಇವೆ.

ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ 54, ನಗರದಲ್ಲಿ 17 ನ್ಯಾಯಬೆಲೆ ಅಂಗಡಿಗಳಿದ್ದು, 4,292 ಅಂತ್ಯೋದಯ, 62,491 ಬಿಪಿಎಲ್‌, 8,094 ಎಪಿಎಲ್‌ ಸೇರಿ ಒಟ್ಟು 74,877 ಅರ್ಹ ಪಡಿತರ ಫಲಾನುಭವಿಗಳು ಇದ್ದಾರೆ.

ಕಳೆದ ನಾಲ್ಕು ತಿಂಗಳ ಹಿಂದೆ ನೂತನ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದೆ. ಆದರೆ, ಹೊಸ ಪಡಿತರ ಚೀಟಿ ಸಿಕ್ಕಿಲ್ಲ. ಇದರಿಂದಾಗಿ ಪಡಿತರ ವಸ್ತುಗಳು ಸಿಗುತ್ತಿಲ್ಲ. ನಮ್ಮಂತಹ ಬಡತನ ರೇಖೆಗಿಂತ ಕಡಿಮೆ ಇರುವ ಜನರಿಗೆ ಸರ್ಕಾರ ಅನುಕೂಲ ಮಾಡಬೇಕು ಎಂದು ಸುರೇಶ ದಾಶ್ಯಾಳ ಒತ್ತಾಯಿಸಿದರು.

ಸರ್ಕಾರ ಲಾಗಿನ್ ತೆರೆದ ನಂತರ ಪಡಿತರ ಚೀಟಿ ತಿದ್ದುಪಡಿ ಹೊಸ ಅರ್ಜಿ ತೆಗೆದುಕೊಳ್ಳಲಾಗುವುದು. ಮಾನದಂಡವನ್ನು ಪರಿಶೀಲಿಸಿ ಪಡಿತರ ಚೀಟಿ ನೀಡಲಾಗುತ್ತದೆ ಸುರೇಶ ದಳವಾಯಿ ಆಹಾರ ಶಿರಸ್ಥೇದಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT