ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಗಲಕೋಟೆ: ಮೊಸರು, ಮಜ್ಜಿಗೆ, ಲಸ್ಸಿಗೆ ಭರ್ಜರಿ ಬೇಡಿಕೆ

ವಿಜುಯಪುರ ಮತ್ತು ಬಾಗಲಕೋಟೆ ಹಾಲು ಒಕ್ಕೂಟದ ಉತ್ಪನ್ನಗಳಿಗೆ ಶುಕ್ರದೆಸೆ
Published 30 ಮೇ 2024, 4:03 IST
Last Updated 30 ಮೇ 2024, 4:03 IST
ಅಕ್ಷರ ಗಾತ್ರ

ಬಾಗಲಕೋಟೆ: ಬಿಸಿಲಿನ ಬೇಗೆಯಿಂದ ತೊಂದರೆ ಅನುಭವಿಸದವರೇ ಇಲ್ಲ. ಆದರೆ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘದ ಒಕ್ಕೂಟ ಮಾತ್ರ ದಾಖಲೆ ಪ್ರಮಾಣದಲ್ಲಿ ಲಸ್ಸಿ, ಮೊಸರು, ಮಜ್ಜಿಗೆ ಮಾರಾಟ ಮಾಡಿದೆ.

ಮಾರ್ಚ್‌ ತಿಂಗಳ ಅಂತ್ಯದಿಂದಲೇ ಉಷ್ಣಾಂಶ ಏರಿಕೆ ಗತಿಯಲ್ಲಿತ್ತು. ಮೇ ತಿಂಗಳಿನಲ್ಲಿ ಜಿಲ್ಲೆಯ ಕರಡಿ ಗ್ರಾಮದಲ್ಲಿ ತಾಪಮಾನ 45 ಡಿಗ್ರಿ ಸೆಲ್ಸಿಯಸ್‌ ದಾಟಿ, ದಾಖಲೆ ಮಾಡಿತ್ತು. ನಿತ್ಯ 40 ಸೆಲ್ಸಿಯಸ್‌ಗೂ ಹೆಚ್ಚು ಉಷ್ಣಾಂಶ ಇರುತ್ತಿತ್ತು. 

ಬಿರು ಬಿಸಿಲಿನ ಜತೆಗೆ ಬಿಸಿಗಾಳಿ ಜೋರಾಗಿತ್ತು. ಪರಿಣಾಮ ಮಧ್ಯಾಹ್ನದ ವೇಳೆ ಜನ ಸಂಚಾರ ವಿರಳವಾಗಿತ್ತು. ವಾರದಿಂದ ಅಲ್ಲಲ್ಲಿ ಮಳೆಯಾಗಿ ಬಿಸಿಲು ತಗ್ಗಿದೆಯಾದರೂ ಸೆಕೆ ಕಡಿಮೆಯಾಗಿಲ್ಲ. ಜನರು ಈಗಲೂ ಉಸ್ಸಪ್ಪಾ ಎನ್ನುವುದು ತಪ್ಪಿಲ್ಲ.

ಬಿಸಿಲಿನ ತಾಪದಿಂದ ತಪ್ಪಿಸಿಕೊಳ್ಳಲು ಜನರು ಹಾಲು, ಮಜ್ಜಿಗೆ, ಮೊಸರಿನ ಮೊರೆ ಹೋಗಿದ್ದರು. ಖಾಸಗಿ ಕಂಪನಿಗಳ ಮೊಸರು, ಮಜ್ಜಿಗೆ ಮಾರಾಟದ ಜತೆಗೆ ವಿಜಯಪುರ, ಬಾಗಲಕೋಟೆ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ತಂಪು ಪಾನೀಯ ಬೇಡಿಕೆ ಜೋರಾಗಿತ್ತು. ಹವಾನಿಯಂತ್ರಿತ ಯಂತ್ರ, ಏರ್‌ ಕೂಲರ್‌ಗಳ ಮಾರಾಟವೂ ಭರ್ಜರಿಯಾಗಿ ನಡೆದಿದೆ. ಸೋಡಾ, ಶರಬತ್, ಲಸ್ಸಿ, ಐಸ್‌ಕ್ರೀಂ ಮಾರಾಟದ ಮಳಿಗೆಗಳಲ್ಲೂ ಜನಸಂದಣಿ ಕಾಣುತ್ತಿತ್ತು.

ಮೂರು, ನಾಲ್ಕು ದಿನಗಳಿಂದ ಮೋಡ ಕವಿದ ವಾತಾವರಣವಿರುವುದರಿಂದ ಗಾಳಿಯೂ ಇರುವುದಿಲ್ಲ. ಮಧ್ಯಾಹ್ನದ ವೇಳೆ ಸೆಕೆ ಎಂದಿನಂತೆಯೇ ಇದೆ. ರಾತ್ರಿ ಸ್ವಲ್ಪ ಪರವಾಗಿಲ್ಲ ಎನ್ನುವ ವಾತಾವರಣವಿದೆ.

ಒಕ್ಕೂಟದಲ್ಲಿ 1.80 ಲಕ್ಷ ಹಾಲು ನಿತ್ಯ ಸಂಗ್ರಹವಾಗುತ್ತದೆ. ಅದರಲ್ಲಿ ಬಾಗಲಕೋಟೆ ಜಿಲ್ಲೆಯ ಪಾಲೇ ಲಕ್ಷ ಲೀಟರ್‌ಗೂ ಹೆಚ್ಚಿದೆ. ಆದರೆ, ಮಾರಾಟದಲ್ಲಿ ಕಡಿಮೆ ಇತ್ತು. ಜೊತೆಗೆ ಹಾಲು ಮಾರಾಟ ಪೂರ್ಣ ಪ್ರಮಾಣದಲ್ಲಿ ಆಗದ್ದರಿಂದ ಮಾರಾಟಕ್ಕೆ ಪರ್ಯಾಯ ಮಾರ್ಗಗಳನ್ನು ಒಕ್ಕೂಟ ಹುಡುಕಿಕೊಂಡಿತ್ತು. ಮೊಸರು, ಮಜ್ಜಿಗೆ ಮಾರಾಟದಿಂದ ಒಕ್ಕೂಟಕ್ಕೆ ಲಾಭದ ಪ್ರಮಾಣ ಹೆಚ್ಚಿದೆ.

‘ಬಿಸಿಲಿನ ಪ್ರಮಾಣ ಹೆಚ್ಚಾಗಿರುವುದರಿಂದ ಮೊಸರು, ಮಜ್ಜಿಗೆ, ಲಸ್ಸಿಗೆ ಬೇಡಿಕೆ ಹೆಚ್ಚಿದೆ. ಮೂರು ತಿಂಗಳಲ್ಲಿ ಜನರು ಹೆಚ್ಚಿನ ಪ್ರಮಾಣದಲ್ಲಿ ಖರೀದಿ ಮಾಡಿದ್ದಾರೆ’ ಎಂದು ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಪೀರಾ ನಾಯಕ ತಿಳಿಸಿದರು.

ಮಜ್ಜಿಗೆ ಲಸ್ಸಿಗಿಂತ ಮೊಸರಿಗೆ ಹೆಚ್ಚಿನ ಬೇಡಿಕೆ ಇದೆ. ಗ್ರಾಹಕರ ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡು ಉಪಉತ್ಪನ್ನಗಳನ್ನು ಸಿದ್ಧಪಡಿಸಲಾಗುತ್ತಿದೆ. ಪೀರಾ ನಾಯಕ ಎಂ.ಡಿ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT