ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿ ಸಿಗುವವರೆಗೂ ಹೋರಾಟ ನಿಲ್ಲದು: ಬಸವಜಯ ಮೃತ್ಯುಂಜಯ ಸ್ವಾಮೀಜಿ

ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿಕೆ
Published 27 ಅಕ್ಟೋಬರ್ 2023, 13:26 IST
Last Updated 27 ಅಕ್ಟೋಬರ್ 2023, 13:26 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ‘ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಆರಂಭಿಸಿರುವ ಹೋರಾಟ ಮೀಸಲಾತಿ ಪಡೆಯುವರೆಗೂ ನಿಲ್ಲಿಸುವುದಿಲ್ಲ’ ಎಂದು ಕೂಡಲಸಂಗಮದ ಪಂಚಮಸಾಲಿ ಗುರುಪೀಠಾಧ್ಯಕ್ಷ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಈ ಕುರಿತು ಲಕ್ಷ್ಮೇಶ್ವರದ ಬಸವರಾಜ ಉಮಚಗಿ ಅವರ ನಿವಾಸದಲ್ಲಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ಆಗ್ರಹಿಸಿ ಗದಗ ಜಿಲ್ಲೆಯ ಅಸುಂಡಿ ಕ್ರಾಸ್‌ನಲ್ಲಿ ಅ.30ರಂದು ನಡೆಯಲಿರುವ ಲಿಂಗಪೂಜೆಯ ಪೂರ್ವಭಾವಿ ಸಭೆಯ ಅಂಗವಾಗಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದರು.

’ಸರ್ಕಾರದ ಯಾವುದೇ ಇರಲಿ ಕೊನೆಗೆ ನಮ್ಮ ಸಮುದಾಯವರೇ ಸಿಎಂ ಆದರೂ ಸಹ ನ್ಯಾಯಸಮ್ಮತವಾಗಿರುವ ಬೇಡಿಕೆಯಿಂದ ಹಿಂದೆ ಸರಿಯುವದಿಲ್ಲ. ಸಿದ್ದರಾಮಯ್ಯ ಅವರು ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಭೇಟಿಯಾಗಿ ಮೀಸಲಾತಿ ಕುರಿತು ಮಾತನಾಡಿದಾಗ ಬಜೆಟ್ ಅಧಿವೇಶನದವರೆಗೆ ಸಮಯ ನೀಡಿ ಎಂದಿದ್ದರು. ಆದರೆ ಬಜೆಟ್ ಅಧಿವೇಶನ ಮುಗಿದು ನಾಲ್ಕು ತಿಂಗಳಾದರೂ ಕೂಡ ಅವರು ನಮ್ಮ ಬೇಡಿಕೆಯತ್ತ ಗಮನ ಹರಿಸುತ್ತಿಲ್ಲ ಎಂದರು.

‘ಅವರನ್ನು ಮತ್ತೆ ಭೇಟಿಯಾದರೆ ದೀಪಾವಳಿ, ಸಂಕ್ರಾಂತಿ ಇಲ್ಲವೇ ಲೋಕಸಭಾ ಚುನಾವಣೆ ಮುಗಿಯಲಿ ಎನ್ನಬಹುದು. ಲೋಕಸಭಾ ಚುನಾವಣೆ ಗೆಲ್ಲಬೇಕು ಎಂದು ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಹಠವಿದೆ. ಹೀಗಾಗಿ ಲೋಕಸಭಾ ಚುನಾವಣೆ ಒಳಗೆ ನ್ಯಾಯಸಮ್ಮತವಾದ 2ಎ ಮೀಸಲಾತಿಯನ್ನು ಪಂಚಮಸಾಲಿ ಸಮಾಜಕ್ಕೆ ನೀಡಲು ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸೋಣ’ ಎಂದರು.

‘ಡಿ.4ರಿಂದ 15ರ ವರೆಗೆ ಸುವರ್ಣಸೌಧದಲ್ಲಿ ಅಧಿವೇಶನ ನಡೆಯಲಿದೆ. ಅಧಿವೇಶನ ಆರಂಭವಾಗುವದರೊಳಗೆ ನಮ್ಮ ಬೇಡಿಕೆ ಈಡೇರಿಸಬೇಕು ಎಂದು ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಿಂಗಪೂಜೆ ಮಾಡುವ ಮೂಲಕ ಸರ್ಕಾರಕ್ಕೆ ಒತ್ತಾಯಿಸೋಣ’ ಎಂದರು.

’ರಾಜ್ಯದಲ್ಲಿ 2ಎ ಹಾಗೂ ಕೇಂದ್ರದಲ್ಲಿ ಒಬಿಸಿಗೆ ಸೇರಿಸುವಂತೆ ಒತ್ತಾಯಿಸುತ್ತಿದ್ದೇವೆ ಹೊರತು ನಾವು ಯಾರ ವಿರುದ್ಧ ಅಥವಾ ಮತ್ತೊಬ್ಬರ ಹಕ್ಕನ್ನು ಕಸಿದಿಕೊಳ್ಳಲು ಹೋರಾಟವನ್ನು ನಡೆಸುತ್ತಿಲ್ಲ. ರಾಜ್ಯ ಸರ್ಕಾರದಲ್ಲಿ ಇಬ್ಬರು ಮಂತ್ರಿಗಳು ಸೇರಿ 11 ಜನ ಶಾಸಕರು ವಿಧಾನಸಭೆಯಲ್ಲಿ ಗುಡುಗಿದರೆ ನಮ್ಮ ಬೇಡಿಕೆ ನೂರಕ್ಕೆ ನೂರರಷ್ಟು ಈಡೇರಲಿದೆ ಎನ್ನುವ ವಿಶ್ವಾಸವಿದೆ’ ಎಂದರು.

ಜಾಮದಾರ ಹೇಳಿಕೆಗೆ ಅಸಮಾಧಾನ: ಗದಗನಲ್ಲಿ ಈಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಮಹಾಪ್ರಧಾನ ಕಾರ್ಯದರ್ಶಿ ಎಸ್‌.ಎಂ.ಜಾಮದಾರ ‘ಲಿಂಗಾಯತ ಜಾತಿಗಳಿಗೆ ಮೀಸಲಾತಿ ಸಿಗುವುದು ಅಸಾಧ್ಯ. ಆದರೂ ಮಠಾಧೀಶರು ಮತ್ತು ಸಂಸ್ಥೆಗಳು ಮೀಸಲಾತಿ ಹೋರಾಟಕ್ಕೆ ಇಳಿದಿರುವುದು ಕೇವಲ ರಾಜಕೀಯ ಸ್ಟಂಟ್ ಆಗಿದೆ’ ಎಂದು ಹೇಳಿದ್ದಕ್ಕೆ ಪಂಚಮಸಾಲಿಗಳು ಪ್ರತಿಕ್ರಿಯಿಸಿ ‘ಜಾಮದಾರ ಅವರು ಹಿಂದಿನ ಆಯೋಗಗಳ ಕುರಿತು ಹೇಳಿದ್ದಾರೆ. ಅವರಿಗೆ ಈಗಿನ ಲಿಂಗಾಯತ ಧರ್ಮದ ವಿದ್ಯಾರ್ಥಿಗಳು ಉದ್ಯೋಗ ಮತ್ತು ಶಿಕ್ಷಣದಿಂದ ವಂಚಿತರಾಗುತ್ತಿರುವುದು ತಿಳಿದಿಲ್ಲ’ ಎಂದು ಪ್ರತಿಕ್ರಿಯಿಸಿದರು. ‘ಈಗ ಗುರುಗಳಾದವರೇ (ಜಂಗಮರು) ಮೀಸಲಾತಿ ಕೇಳುತ್ತಿದ್ದಾರೆ. ಹೀಗಾಗಿ ನ್ಯಾಯಸಮ್ಮತವಾಗಿ ನಾವು ಮೀಸಲಾತಿ ಕೇಳುವುದರಲ್ಲಿ ತಪ್ಪಿಲ್ಲ. ಈಗಿನ ಕಾಲದಲ್ಲಿ ಮೀಸಲಾತಿ ಅನಿವಾರ್ಯವಾಗಿದೆ. ಈ ವಿಚಾರವೂ ಕೂಡ ಜಾಮದಾರ ಅವರಿಗೆ ಗೊತ್ತಿಲ್ಲವೆಂದು ಅನ್ನಿಸುತ್ತದೆ. ಇಪ್ಪತ್ತನೇ ಶತಮಾನದಲ್ಲಿ ಲಿಂಗಾಯತರು ಬಡವರಾಗಿದ್ದಾರೆ. ಈ ಕಾರಣಕ್ಕಾಗಿ ಮೀಸಲಾತಿ ಕೇಳುತ್ತಿದ್ದೇವೆ. ಹೀಗಾಗಿ ಜಾಮದಾರ ಅವರು ಸಾಧ್ಯವಾದರೆ ಈ ಹೋರಾಟಕ್ಕೆ ಬೆಂಬಲ ಕೊಡಲಿ. ಇಲ್ಲವೆ ಮೌನವಾಗಿರಲಿ’ ಎಂದು ಸೂಚ್ಯವಾಗಿ ಹೇಳಿದರು. ಈಶ್ವರಪ್ಪ ಉಮಚಗಿ ರುದ್ರಪ್ಪ ಉಮಚಗಿ ಪ್ರಕಾಶ ಮೆಣಸಿನಕಾಯಿ ಬಸವರಾಜ ಪರಪ್ಪ ಉಮಚಗಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT