ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೂಲ ಸೌಕರ್ಯ ವಂಚಿತ ಚಿಕ್ಕಶಲ್ಲಿಕೇರಿ

ರಸ್ತೆ, ಚರಂಡಿ ಸೇರಿದಂತೆ ಗ್ರಾಮದಲ್ಲಿ ಅಭಿವೃದ್ಧಿ ಕುಂಠಿತ
ಸಿಕಂದರ ಬಾವಾಖಾನ
Published 14 ಫೆಬ್ರುವರಿ 2024, 5:08 IST
Last Updated 14 ಫೆಬ್ರುವರಿ 2024, 5:08 IST
ಅಕ್ಷರ ಗಾತ್ರ

ಕಲಾದಗಿ: ಸಮೀಪದ ಚಿಕ್ಕಶಲ್ಲಿಕೇರಿ ಗ್ರಾಮ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ರಸ್ತೆ, ಚರಂಡಿ ಸೇರಿದಂತೆ ಗ್ರಾಮದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ.

ಗ್ರಾಮದ ಎಲ್ಲೆಂದರಲ್ಲಿ ಚರಂಡಿ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು. ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಕೊಳಚೆ ನೀರಿನಲ್ಲಿ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ. ರಸ್ತೆ ಮೇಲೆ ನಿಂತಿರುವ ಗಲೀಜು ನೀರು ಸೊಳ್ಳೆಗಳ ತಾಣವಾಗಿದೆ. ಇದರಿಂದ ರೋಗಗಳು ಹರಡುವ ಭೀತಿ ಜನರಲ್ಲಿ ಆವರಿಸಿದೆ ಎಂದು ಗ್ರಾಮಸ್ಥರು ದೂರಿದರು.

‘ಗ್ರಾಮದ ಅಂಗನವಾಡಿ ಕೇಂದ್ರ, ಕುಡಿಯುವ ನೀರಿನ ಟ್ಯಾಂಕ್ ಶಿಥಿಲಾವಸ್ಥೆಯಲಿದ್ದು, ಜಲ ಮಿಷನ್ ಯೋಜನೆಯಡಿಯಲ್ಲಿ ರಸ್ತೆಗಳನ್ನು ತೋಡಿರುವುದಿಂದ ಅವು ಮತ್ತಷ್ಟು ಹದಗೆಟ್ಟು ಹೋಗಿವೆ. ಜಲ ಮಿಷನ್ ಯೋಜನೆ ಕಾಮಗಾರಿ ಪೂರ್ಣಗೊಂಡಿರುವುದಿಲ್ಲ’ ಎನ್ನುತ್ತಾರೆ ಗ್ರಾಮಸ್ಥ ಮಲ್ಲಪ್ಪ ಹಡಪದ.

ಪೂರ್ಣಗೊಳ್ಳದ ರಸ್ತೆ ಡಾಂಬರೀಕರಣ ಕಾಮಗಾರಿ: ಚಿಕ್ಕ ಶಲ್ಲಿಕೇರಿ ಕ್ರಾಸ್‌ನಿಂದ ಕಳಸಕೊಪ್ಪ ಗ್ರಾಮದವರೆಗೆ ನಿರ್ಮಾಣವಾಗುತ್ತಿರುವ ರಸ್ತೆ ಡಾಂಬರೀಕರಣ ಕಾಮಗಾರಿ ಅರ್ಧಕ್ಕೆ ನಿಂತಿದೆ. ಶೀಘ್ರ ರಸ್ತೆ ಕಾಮಗಾರಿ ಮಾಡುವಂತೆ ಗ್ರಾಮಸ್ಥರು ಆಗ್ರಹಿಸಿದರು.

ಅಂತ್ಯಸಂಸ್ಕಾರ ಮಾಡಲು ಜಿಲ್ಲಾಡಳಿತ ಒಂದು ಎಕರೆ ಸರ್ಕಾರ ಜಮೀನು ಮಂಜೂರು ಮಾಡಿದ್ದು, ಆ ಜಮೀನು ಸಂಪೂರ್ಣ ಕಲ್ಲು ಮಿಶ್ರಿತ ಭೂಮಿ ಇದೆ. ಅದಕ್ಕೆ ಮಣ್ಣು ಹಾಕಿ ಭೂಮಿಯನ್ನು ಅಭಿವೃದ್ಧಿಪಡಿಸುವ ಕೆಲಸವನ್ನು ಗ್ರಾಮ ಪಂಚಾಯಿತಿ ಆಡಳಿತ ಮಾಡಬೇಕಿದೆ ಎನ್ನುತ್ತಾರೆ ಗ್ರಾಮಸ್ಥರು.

ಬಂದ್ ಆಗಿರುವ ನೀರಿನ ಘಟಕ: ಹಿರೇಶಲ್ಲಿಕೇರಿ ಗ್ರಾಮದಲ್ಲಿ ಶುದ್ಧಕುಡಿಯುವ ನೀರಿನ ಘಟಕ ಬಂದಾಗಿ ಐದು ತಿಂಗಳ ಕಳೆದರೂ ಅಧಿಕಾರಿಗಳು ನೀರಿನ ಘಟಕ ದುರಸ್ತಿ ಮಾಡದಿರುವುದು ಗ್ರಾಮಸ್ಥರು ಶುದ್ಧ ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ.

ಗ್ರಾಮಕ್ಕೆ ಹೆಚ್ಚುವರಿ ಬಸ್ ಬಿಡಲು ಆಗ್ರಹ: ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಹೆಚ್ಚುವರಿ ಬಸ್ಸುಗಳನ್ನು ಬಿಡಬೇಕು ಎಂಬುದು ವಿದ್ಯಾರ್ಥಿಗಳ ಆಗ್ರಹ.

ರಸ್ತೆಯ ಮೇಲೆ ಚರಂಡಿ ನೀರು ಹರಿಯುತ್ತಿದ್ದು, ಸ್ಥಳೀಯ ಆಡಳಿತ ಆದ್ಯತೆ ಮೇರೆಗೆ ಎಲ್ಲೆಡೆ ಕಾಂಕ್ರೀಟ್ ಚರಂಡಿ ನಿರ್ಮಾಣ ಹಾಗೂ ಗ್ರಾಮದ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮದ ನಿವಾಸಿ ವೀರಭದ್ರಪ್ಪ ಮಂಟೂರ ಒತ್ತಾಯಿಸಿದರು.

ರಸ್ತೆ ಮೇಲೆ ಚರಂಡಿ ನೀರು ಹರಿಯುವ ಕಾಮಗಾರಿಗೆ ಕ್ರಿಯಾಯೋಜನೆ ಸಲ್ಲಿಸಲಾಗಿದೆ. ಅನುಮೋದನೆಯಾದ ನಂತರ ಕಾಮಗಾರಿ ಮಾಡಲಾಗುವುದು. ಗ್ರಾಮದ ನೈರ್ಮಲ್ಯದ ಬಗ್ಗೆ ಕಾಳಜಿ ವಹಿಸಲಾಗುವುದು- ಗೀತಾ ದುಂಡಪ್ಪ ನಾಯ್ಕರ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಚಿಕ್ಕಶಲ್ಲಿಕೇರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT