ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛ ಸರ್ವೇಕ್ಷಣೆ: ರ‍್ಯಾಂಕಿಂಗ್‌ ಕುಸಿತ

203ರಿಂದ 321ನೇ ಸ್ಥಾನಕ್ಕೆ ಇಳಿದ ಮುಳುಗಡೆ ನಗರಿ
Last Updated 25 ಜೂನ್ 2018, 15:22 IST
ಅಕ್ಷರ ಗಾತ್ರ

ಬಾಗಲಕೋಟೆ: ಕೇಂದ್ರ ಸರ್ಕಾರವು ಸ್ವಚ್ಛ ಭಾರತ ಅಭಿಯಾನದಲ್ಲಿ ನಡೆಸಿದ ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆಯ ರ‍್ಯಾಂಕಿಂಗ್ ಪಟ್ಟಿಯಲ್ಲಿ ಬಾಗಲಕೋಟೆ ನಗರ ರಾಷ್ಟ್ರಮಟ್ಟದಲ್ಲಿ 203ನೇ ಸ್ಥಾನದಿಂದ 321ನೇ ಸ್ಥಾನಕ್ಕೆ ಕುಸಿದಿದೆ.

ಕೇಂದ್ರ ಸರ್ಕಾರ ಕಳೆದ ನಾಲ್ಕು ವರ್ಷಗಳಿಂದ ಸ್ವಚ್ಛ ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತಿದೆ. ರಾಜ್ಯಮಟ್ಟದಲ್ಲಿ ಕಳೆದ ವರ್ಷ ಏಳನೇ ರ‍್ಯಾಂಕ್‌ ಪಡೆದಿದ್ದ ಮುಳುಗಡೆ ನಗರಿ, ಈ ಬಾರಿ 20ನೇ ಸ್ಥಾನಕ್ಕೆ ಕುಸಿದಿದೆ. ಉಳಿದಂತೆ ಜಿಲ್ಲೆಯಲ್ಲಿ ಜಮಖಂಡಿ ನಗರ 407ನೇ ರ‍್ಯಾಂಕ್‌, ಬೀಳಗಿ ಪಟ್ಟಣ 816, ಹುನಗುಂದ ಪಟ್ಟಣ 927, ಬಾದಾಮಿ 861, ಮುಧೋಳ 928, ಕೆರೂರು ಪಟ್ಟಣ 1088 ಹಾಗೂ ಅಮೀನಗಡ ಪಟ್ಟಣ 1113ನೇ ರ‍್ಯಾಂಕ್‌ ಪಡೆದಿವೆ.

ಸ್ವತಂತ್ರ ಸಂಸ್ಥೆಗಳ ಅಧಿಕಾರಿಗಳು ಆಯಾ ಸ್ಥಳೀಯ ಸಂಸ್ಥೆಗಳಿಗೆ ಭೇಟಿ ನೀಡಿ ಸ್ವಚ್ಛತೆ ಪರಿಶೀಲನೆ ನಡೆಸುತ್ತಾರೆ. ಪರಿಶೀಲನೆ ಸಂದರ್ಭದಲ್ಲಿ ಮಾರುಕಟ್ಟೆ ಪ್ರದೇಶ, ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ, ಸಾರ್ವಜನಿಕ ಶೌಚಾಲಯಗಳ ಸ್ಥಿತಿಗತಿ, ತ್ಯಾಜ್ಯ ವಸ್ತುಗಳ ವಿಲೇವಾರಿ, ಗಟಾರ, ಒಳಚರಂಡಿ ವ್ಯವಸ್ಥೆ, ಕಸ ಸಂಗ್ರಹಣೆ ವ್ಯವಸ್ಥೆಯನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಸಮೀಕ್ಷೆ, ನೇರ ಭೇಟಿಯ ಜೊತೆಗೆ ಸಾರ್ವಜನಿಕರಿಂದಲೂ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ.

2011ರ ಜನಗಣಗಿ ಅನ್ವಯ ಬಾಗಲಕೋಟೆ ನಗರಸಭೆ ವ್ಯಾಪ್ತಿಯ 35 ವಾರ್ಡ್ ಹಾಗೂ ನವನಗರದ 64 ಸೆಕ್ಟರ್‌ಗಳಲ್ಲಿ ಒಟ್ಟು 1.24 ಲಕ್ಷ ಜನಸಂಖ್ಯೆ ಇದೆ. ‘ಸ್ವಚ್ಛತೆಯ ವಿಚಾರದಲ್ಲಿ ನಾವು ಚೆನ್ನಾಗಿಯೇ ಕೆಲಸ ಮಾಡಿದ್ದೇವೆ. ಸಮೀಕ್ಷೆಗೆ ಬಂದವರು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿದಾಗ ನಮ್ಮ ಬಗ್ಗೆ ಉತ್ತಮ ಅಭಿಪ್ರಾಯವೇ ವ್ಯಕ್ತವಾಗಿದೆ. ಆದರೆ ದಾಖಲೀಕರಣದಲ್ಲಿ ನಾವು ಹಿಂದುಳಿದೆವು’ ಎನ್ನುತ್ತಾರೆ ನಗರಸಭೆ ಪರಿಸರ ಅಧಿಕಾರಿ ಹನುಮಂತ ಕಲಾದಗಿ.

‘ಮುಂದಿನ ಬಾರಿ ದಾಖಲೀಕರಣ ಚೆನ್ನಾಗಿ ಮಾಡಲಿದ್ದೇವೆ. ಅದಕ್ಕೆ ಈಗಿನಿಂದಲೇ ಸಿದ್ಧತೆ ನಡೆಸಲಾಗುವುದು. ಕಳೆದ ಬಾರಿ ಸ್ವಚ್ಛ ಸರ್ವೇಕ್ಷಣೆಗೆ ಕೇವಲ 500 ನಗರ ಆಯ್ಕೆ ಮಾಡಿಕೊಂಡಿದ್ದರು. ಈ ಬಾರಿ ಅದು 4022 ನಗರಗಳಿಗೆ ಹೆಚ್ಚಳಗೊಂಡಿದೆ. ಅದು ಕೂಡ ರ‍್ಯಾಂಕಿಂಗ್ ಪಟ್ಟಿಯಲ್ಲಿ ಸ್ಥಾನ ಕುಸಿಯಲು ಕಾರಣವಾಗಿದೆ’ ಎಂದು ಕಲಾದಗಿ ವಿವರಣೆ ನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT