ಬುಧವಾರ, ಜನವರಿ 22, 2020
25 °C
ಜಮಖಂಡಿ ಗ್ರಾಮೀಣ ಠಾಣೆ ಪೊಲೀಸರಿಂದ ಕುಖ್ಯಾತ ಮನೆಕಳ್ಳನ ಬಂಧನ

ಜಮಖಂಡಿ | ಬರೋಬ್ಬರಿ ಅರ್ಧ ಕಿ.ಲೋ ಚಿನ್ನ ವಶ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಗಲಕೋಟೆ: ಹಾಡುಹಗಲೇ ಮನೆ ಹಾಗೂ ದೇವಸ್ಥಾನಗಳಲ್ಲಿ ಕಳ್ಳತನ ಮಾಡುತ್ತಿದ್ದ ಕುಖ್ಯಾತ ಅಂತರರಾಜ್ಯ ಕಳ್ಳನನ್ನು ಜಮಖಂಡಿ ಗ್ರಾಮೀಣ ಠಾಣೆ ‍ಪೊಲೀಸರು ಮಂಗಳವಾರ ಬೆಳಿಗ್ಗೆ ಬಂಧಿಸಿದ್ದಾರೆ. ಆರೋಪಿಯಿಂದ ಬರೋಬ್ಬರಿ ಅರ್ಧ ಕೆ.ಜಿ ಚಿನ್ನಾಭರಣ ಸೇರಿದಂತೆ ₹23.31 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಮಹಾರಾಷ್ಟ್ರದ ಮೀರಜ್ ಸಮೀಪದ ಲಿಂಗನೂರಿನ ನಿವಾಸಿ ಲೋಕೇಶ ರಾವ್‌ಸಾಬ್ ಸುತಾರ ಬಂಧಿತ ಆರೋಪಿ. ಮುಧೋಳ ನಗರ, ಜಮಖಂಡಿ ತಾಲ್ಲೂಕಿನ ಹುನ್ನೂರು, ಮರೇಗುದ್ದಿ, ಕೊಣ್ಣೂರಿನಲ್ಲಿ ನಡೆದ ಒಟ್ಟು 10 ಮನೆಗಳ್ಳತನ ಪ್ರಕರಣದಲ್ಲಿ ಲೋಕೇಶ ಭಾಗಿಯಾಗಿದ್ದ.

ಕಾರಿನಲ್ಲಿ ಓಡಾಟ: ಲೋಕೇಶ ಕದ್ದ ಚಿನ್ನಾಭರಣ ಮಾರಿ ಐಷಾರಾಮಿ ಜೀವನ ನಡೆಸುತ್ತಿದ್ದ. ಮಹಾರಾಷ್ಟ್ರ ನೋಂದಣಿಯ ಫೋರ್ಡ್ ಅಕಾರ್ಡ್ ಕಾರಿನಲ್ಲಿ ಓಡಾಟ ನಡೆಸುತ್ತಿದ್ದ. ಜೊತೆಗೆ ₹1.5 ಲಕ್ಷ ಮೌಲ್ಯದ ರಾಯಲ್ ಎನ್‌ಫೀಲ್ಡ್ ಬುಲೆಟ್ ಕೊಂಡಿದ್ದನು. ಯಾರಿಗೂ ಅನುಮಾನ ಬಾರದಿರಲಿ ಎಂದು ಕೆಲವೊಮ್ಮೆ ಬುಲೆಟ್‌ ಬೈಕ್‌ನಲ್ಲಿ ಓಡಾಟ ನಡೆಸುತ್ತಿದ್ದನು. ಹಗಲು ಹೊತ್ತು ನಗರದ ಎಕ್ಸ್‌ಟೆನ್‌ಶನ್ ಪ್ರದೇಶ ಹಾಗೂ ಹಳ್ಳಿಗಳಲ್ಲಿ ಕಾರಿನಲ್ಲಿ ಓಡಾಟ ನಡೆಸುತ್ತಿದ್ದ ಆರೋಪಿ ಬೀಗ ಹಾಕಿದ್ದ ಮನೆಗಳನ್ನು ಗುರುತಿಸುತ್ತಿದ್ದನು. ರಾತ್ರಿ ಬೀಗ ಮುರಿದು ಕಳ್ಳತನ ಮಾಡುತ್ತಿದ್ದನು. ಕೆಲವು ಕಡೆ ಹಾಡುಹಗಲೇ ಮನೆಗಳ ಬೀಗ ಮುರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯಿಂದ 501.5 ಗ್ರಾಂ ಚಿನ್ನಾಭರಣ, 690 ಗ್ರಾಂ ಬೆಳ್ಳಿಯ ಆಭರಣ ವಶಪಡಿಸಿಕೊಳ್ಳಲಾಗಿದೆ. ಮಹಾರಾಷ್ಟ್ರದಲ್ಲೂ ನಡೆದ ಕಳ್ಳತನ ಪ್ರಕರಣಗಳಲ್ಲಿ ಲೋಕೇಶ ಭಾಗಿಯಾಗಿದ್ದಾನೆ ಎನ್ನಲಾಗಿದ್ದು, ಆರೋಪಿಯನ್ನು ಬಂಧಿಸಿದ ಜಮಖಂಡಿ ಗ್ರಾಮೀಣ ಠಾಣೆ ಪಿಎಸ್‌ಐ ಅನಿಲ್‌ಕುಮಾರ ರಾಠೋಡ, ಸಿಪಿಐ ಡಿ.ಕೆ.ಪಾಟೀಲ ಹಾಗೂ ಸಿಬ್ಬಂದಿಗೆ ಎಸ್ಪಿ ಲೋಕೇಶ ಜಗಲಾಸರ್ ಬಹುಮಾನ ಘೋಷಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು