ಗುರುವಾರ , ಅಕ್ಟೋಬರ್ 29, 2020
28 °C
ಜಮಖಂಡಿ ತಾಲ್ಲೂಕು: ಬಿಟ್ಟೂಬಿಡದೆ ಸುರಿಯುತ್ತಿರುವ ಮಳೆ

ಜಮಖಂಡಿ: ಬೆಳೆ ಹಾನಿ, ಧರೆಗುರುಳಿದ ಮನೆಗಳು

ಆರ್.ಎಸ್.ಹೊನಗೌಡ Updated:

ಅಕ್ಷರ ಗಾತ್ರ : | |

Prajavani

ಜಮಖಂಡಿ: ತಾಲ್ಲೂಕಿನಲ್ಲಿ ಬಿಟ್ಟೂಬಿಡದೆ ಸುರಿಯುತ್ತಿರುವ ಮಳೆಯಿಂದ ಕಟಾವಿಗೆ ಬಂದ ಪೈರಿಗೆ ತೀವ್ರ ಹಾನಿ ಉಂಟಾಗಿದೆ. ಹಲವು ಮನೆಗಳು ನೆಲಕ್ಕುರುಳಿವೆ.

ಮುಂಗಾರು ಹಂಗಾಮಿನ ಬೆಳೆ ಸೋಯಾಬೀನ್, ಹೆಸರು ಕಾಳು ಕಟಾವಿನ ಹಂತಕ್ಕೆ ಬಂದಿತ್ತು. ಆಳೆತ್ತರಕ್ಕೆ ಬೆಳೆದ ಕಬ್ಬು ಎಲ್ಲವೂ ಸಂಪೂರ್ಣ ನೆಲಕಚ್ಚಿವೆ. ಅಲ್ಲಲ್ಲಿ ಮೆಕ್ಕೆಜೋಳ, ತೊಗರಿ ಹೊಲಗಳು ಜಲಾವೃತವಾಗಿರುವುದು ರೈತರನ್ನು ಚಿಂತೆಗೆ ನೂಕಿದೆ. ಮಳೆಯು ಮುಂದುವರಿಯುವ ಸಾಧ್ಯತೆಯೂ ಇರುವುದರಿಂದ ರೈತರು ಕಂಗಾಲಾಗಿದ್ದಾರೆ.

ಕಳೆದ ವರ್ಷ ಪ್ರವಾಹದಿಂದ ಹಾನಿಯಾಗಿದ್ದು, ಅದು ಮಾಸುವ ಮುನ್ನವೇ ಈ ವರ್ಷ ಹೆಚ್ಚಿನ ಮಳೆಗೆ ಬೆಳೆಗಳು ಹಾನಿಗೀಡಾಗಿವೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಹ ಸ್ಥಿತಿ ಎದುರಾಗಿದೆ. ಹಲವಾರು ಮನೆಗಳು ಬಿದ್ದಿದ್ದು, ಪ್ರವಾಹದಿಂದ ಹಾನಿಗೀಡಾದ ಮನೆಗಳಿಗೆ ಇನ್ನು ಸಂಪೂರ್ಣ ಪರಿಹಾರ ದೊರೆತಿಲ್ಲ. ಈಗ ಮತ್ತೆ  ಮನೆಗಳು ಬೀಳುತ್ತಿರುವುದು ಸ್ಥಳೀಯರಿಗೆ ದಿಕ್ಕು ತೋಚದಂತಾಗಿದೆ.

ಹಲವು ಕಡೆಗಳಲ್ಲಿ ಒಡ್ಡುಗಳು ಒಡೆದು ಬೆಳೆ ನಾಶವಾಗಿವೆ. ಮೆಕ್ಕೆಜೋಳದ ತೆನೆಗಳು ನೀರಲ್ಲಿ ಬಿದ್ದು ಮೊಳಕೆ ಬರುತ್ತಿವೆ. ಶೇಂಗಾ ಹೆಚ್ಚು ಕಾಯಿಯಾಗದೇ ಮಳೆಯಿಂದ ಬಳ್ಳಿಮಾತ್ರ ಹಬ್ಬಿದೆ, ಜಮೀನುಗಳಲ್ಲಿ ಸಂಗ್ರಹವಾಗಿರುವ ನೀರನ್ನು ಹೊರ ಹಾಕುವುದು ರೈತರಿಗೆ ಸವಾಲಾಗಿದೆ.

ತಂಪು ಹವೆಯಿಂದ ತೊಗರಿ ಗಿಡಗಳು ಪ್ರತಿ ವರ್ಷಕ್ಕಿಂತ ಹೆಚ್ಚು ಎತ್ತರಕ್ಕೆ ಬೆಳೆದಿದ್ದು, ಕಾಯಿ ಮಾತ್ರ ಕಾಣುತ್ತಿಲ್ಲ. ತೊಗರಿ ಬೆಳೆಗೂ ರೋಗ ಕಾಣಿಸಿಕೊಂಡಿದೆ. ಅಲ್ಲದೇ, ನೀರು ನಿಂತು ತೊಗರಿ ಗಿಡ ಜಲಾವೃತವಾಗಿವೆ.

ಕಟಾವಿನ ಹಂತಕ್ಕೆ ಬಂದಿದ್ದ ಸೋಯಾಬೀನ್‌, ಹೆಸರು, ಗೋವಿನಜೋಳ ಹಾಗೂ ಕಬ್ಬಿಗೂ ಹಾನಿಯಾಗಿದೆ.

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.