ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಗಲಕೋಟೆ | ಡೆಂಗಿ ಹೆಚ್ಚಳ: ಇರಲಿ ಮುನ್ನೆಚ್ಚರಿಕೆ

Published 8 ಜುಲೈ 2024, 4:53 IST
Last Updated 8 ಜುಲೈ 2024, 4:53 IST
ಅಕ್ಷರ ಗಾತ್ರ

ಬಾಗಲಕೋಟೆ: ಮಳೆ ಒಂದೆಡೆ ಸಂಭ್ರಮವನ್ನು ತಂದರೆ, ಇನ್ನೊಂದೆಡೆ ಸಾಂಕ್ರಾಮಿಕ ರೋಗಗಳ ಭೀತಿಯನ್ನು ತರುತ್ತದೆ. ಜ್ವರ, ವಾಂತಿ ಭೇದಿ, ಡೆಂಗಿ ಮುಂತಾದ ರೋಗಗಳಿಂದ ಮಕ್ಕಳು, ದೊಡ್ಡವರು ತತ್ತರಿಸುತ್ತಾರೆ.

ಜಿಲ್ಲೆಯಲ್ಲಿ ಮುಂಗಾರು ಮಳೆ ಎಲ್ಲೆಡೆ ಆವರಿಸಿಕೊಂಡಿದೆ. ಹಳ್ಳ, ಗಟಾರುಗಳು ತುಂಬಿ ಹರಿಯುತ್ತಿವೆ. ಮಳೆ ನೀರು ನಿಂತಲ್ಲಿಯೇ ನಿಂತ ಪರಿಣಾಮ ಸೊಳ್ಳೆಗಳ ಸಂಖ್ಯೆ ಹೆಚ್ಚಿದೆ. ಕುಡಿಯುವ ನೀರಿನೊಂದಿಗೆ ಕಲುಷಿತ ನೀರೂ ಸೇರಿ ವಾಂತಿ ಭೇದಿ ಪ್ರಕರಣಗಳು ಹೆಚ್ಚಾಗಿವೆ. ಒಂದು ವರ್ಷದಲ್ಲಿ ಜಿಲ್ಲೆಯಲ್ಲಿ 117 ಡೆಂಗಿ ಪ್ರಕರಣಗಳು ಪತ್ತೆಯಾಗಿವೆ. ಜನವರಿಯಿಂದ ಇಲ್ಲಿಯವರೆಗೆ 53 ಪ್ರಕರಣಗಳು ವರದಿಯಾಗಿವೆ.

ಬಾಗಲಕೋಟೆ ತಾಲ್ಲೂಕಿನಲ್ಲಿಯೇ 48 ಪ್ರಕರಣಗಳು ಪತ್ತೆಯಾಗಿವೆ. ಜಿಲ್ಲಾಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಈಗ ಡೆಂಗಿ ಲಕ್ಷಣಗಳು ಇರುವ ರೋಗಿಗಳ ಸಂಖ್ಯೆ ಹೆಚ್ಚಾಗಿದೆ.

ಜಿಲ್ಲಾಸ್ಪತ್ರೆಯಲ್ಲಿ ಹೊರ ರೋಗಿಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡಿದೆ. ಪ್ರತಿಯೊಬ್ಬರಿಗೂ ಕೆಮ್ಮು, ಶೀತ, ಜ್ವರ, ಚಳಿ ಮುಂತಾದ ಸಾಮಾನ್ಯ ಕಾಯಿಲೆಗಳೇ ಕಾಡುತ್ತಿವೆ. ಸಾಮಾನ್ಯ ಜ್ವರ ಇದ್ದವರು ಹೆಚ್ಚಾಗಿದ್ದಾರೆ. ಡೆಂಗಿ ಅಥವಾ ಚಿಕೂನ್‌ ಗುನ್ಯ ಲಕ್ಷಣ ಕಂಡುಬಂದವರ ರಕ್ತದ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳಿಸಲಾಗುತ್ತಿದೆ. ಹೀಗೆ ಕಳಿಸಿದ ಸಾವಿರ ಮಾದರಿಗಳಲ್ಲಿ ಒಂದೆರಡು ಪಾಸಿಟಿವ್ ಬರುತ್ತಿವೆ.

ಬಹುಪಾಲು ಡೆಂಗಿ ಪ್ರಕರಣಗಳು ನಗರ ವ್ಯಾಪ್ತಿಯಲ್ಲೇ ಕಂಡುಬಂದಿವೆ. ಡೆಂಗಿ ಹರಡುವ ಸೊಳ್ಳೆ ಶುದ್ಧ ನೀರಿನಲ್ಲೇ ಹುಟ್ಟುತ್ತದೆ. ನಗರದ ಜನ ವಾರಗಟ್ಟಲೇ ಕುಡಿಯುವ ಹಾಗೂ ಬಳಕೆ ನೀರು ಸಂಗ್ರಹಿಸಿ ಇಟ್ಟುಕೊಳ್ಳುತ್ತಾರೆ. ಅದರಲ್ಲೇ ಈ ಸೊಳ್ಳೆಗಳು ಹುಟ್ಟುತ್ತಿವೆ ಎನ್ನುತ್ತಾರೆ ಅಧಿಕಾರಿಗಳು.

ಹೆಚ್ಚಲಿದೆಯಾ ಸೋಂಕು: ‘ಈಡೀಸ್‌ ಈಜಿಪ್ಟೈ’ ಎಂಬ ಸೊಳ್ಳೆ ಕಚ್ಚುವುದರಿಂದ ಡೆಂಗಿ ಬರುತ್ತದೆ. ಇದೊಂದೇ ಸೊಳ್ಳೆಯಿಂದ ಡೆಂಗಿ, ಚಿಕೂನ್‌ ಗುನ್ಯ ಹಾಗೂ ಜೀಕಾ (ಮಿದುಳು ಬೆಳವಣಿಗೆಗೆ ಸಮಸ್ಯೆ) ಸೋಂಕುಗಳು ಹುಟ್ಟುತ್ತವೆ. ಮಳೆ ಬಂದು ಎಲ್ಲೆಂದರಲ್ಲಿ ನೀರು ನಿಲ್ಲುತ್ತಿದೆ. ಟ್ಯೂಬ್‌, ಟಯರ್‌, ತೆಂಗಿನ ಚಿಪ್ಪು, ಗಣಿಗಾರಿಕೆಗೆ ಅಗೆದ ತಗ್ಗು ಮಾತ್ರವಲ್ಲ; ಬಹಳ ದಿನಗಳವರೆಗೆ ಮನೆಯಲ್ಲಿ ನೀರು ಸಂಗ್ರಹಿಸಿ ಇಟ್ಟ ಪಾತ್ರೆಗಳಲ್ಲೂ ಈ ಸೊಳ್ಳೆ ಹುಟ್ಟಿಕೊಳ್ಳುತ್ತದೆ.

ಒಡೆದ ಪ್ಲಾಸ್ಟಿಕ್‌ ಬಕೆಟ್‌, ಬುಟ್ಟಿ, ಕೊಡಗಳನ್ನು ಎಲ್ಲೆಂದರಲ್ಲಿ ಬಿಸಾಡಲಾಗುತ್ತದೆ. ಅವುಗಳಲ್ಲಿ ಮಳೆ ನೀರು ನಿಲ್ಲುತ್ತದೆ. ಸೊಳ್ಳೆ ಒಂದು ಹನಿ ನೀರಿನಲ್ಲಿಯೂ ಮೊಟ್ಟೆ ಇಡಬಲ್ಲದು. ಒಂದು ಬಾರಿಗೆ ಸೊಳ್ಳೆ 350 ಮೊಟ್ಟೆಗಳನ್ನು ಇಡುತ್ತದೆ. ವಾರದಲ್ಲಿ ಅವೆಲ್ಲವೂ ರೆಕ್ಕೆ ಬೆಳೆದು ಹಾರಾಡಲು ಶುರು ಮಾಡುತ್ತವೆ. 

ಪರಿಹಾರ ಮಾರ್ಗಗಳೇನು: ‘ಡೆಂಗಿ ಸೊಳ್ಳೆ ಹುಟ್ಟದಂತೆ ಎಚ್ಚರಿಕೆ ವಹಿಸಲು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಅರಿವು ಮೂಡಿಸಲಾಗುತ್ತಿದೆ. ಯಾವುದೇ ಊರಲ್ಲಿ ಪ್ರಕರಣ ಕಂಡುಬಂದರೂ ಸ್ಥಳ ಪರಿಶೀಲನೆ ನಡೆಸಿ, ನಿಂತ ನೀರಿನಲ್ಲಿ ಟೆಮಿಫಾಸ್‌ ದ್ರಾವಣ ಸುರಿದು ಸೊಳ್ಳೆಯ ಲಾರ್ವ ನಾಶ ಮಾಡಲಾಗುತ್ತಿದೆ. ಒಂದೇ ಸ್ಥಳದಲ್ಲಿ ಹೆಚ್ಚು ಪ್ರಕರಣ ಕಂಡುಬಂದರೆ ಫಾಗಿಂಗ್‌ ಮಾಡಲಾಗುತ್ತದೆ’ ಎಂದೂ ಅವರು ಹೇಳಿದರು.

ಬಾಗಲಕೋಟೆ ಜಿಲ್ಲೆಯ ಕೊಂಕಣಕೊಪ್ಪ ಗ್ರಾಮದಲ್ಲಿ ಲಾರ್ವಾ ಸಮೀಕ್ಷೆ ಮಾಡುತ್ತಿರುವ ಅಧಿಕಾರಿಗಳು

ಬಾಗಲಕೋಟೆ ಜಿಲ್ಲೆಯ ಕೊಂಕಣಕೊಪ್ಪ ಗ್ರಾಮದಲ್ಲಿ ಲಾರ್ವಾ ಸಮೀಕ್ಷೆ ಮಾಡುತ್ತಿರುವ ಅಧಿಕಾರಿಗಳು

ಸಾಂಕ್ರಾಮಿಕ ರೋಗಗಳ ತಡೆಗೆ ವೈದ್ಯರ ಸಲಹೆಗಳು

 • ಬಿಸಿ ನೀರು ಇಲ್ಲವೇ ಕುದಿಸಿ ಆರಿಸಿದ ನೀರು ಕುಡಿಯಿರಿ

 • ಶೀತ ಕೆಮ್ಮೆ ನೆಗಡಿ ಜ್ವರ ಇದ್ದಾಗ ಮನೆಯಲ್ಲೇ ವಿಶ್ರಾಂತಿ ಪಡೆಯಿರಿ

 • ಮನೆ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಿ

 • ಮನೆ ಮೇಲೆ ಟೈರ್ ತೆಂಗಿನ ಚಿಪ್ಪು ಎಸೆಯಬೇಡಿ

 • ಮನೆಗಳಲ್ಲಿ ಹೂಕುಂಡಗಳ ಕೆಳಗೆ ಪ್ಲೇಟ್‌ ಇಡಬೇಡಿ

 • ಮಲಗುವಾಗ ಸೊಳ್ಳೆ ಪರದೆ ಬಳಸಿ * ನೀರು ಶೇಖರಣಾ ತೊಟ್ಟಿಗಳನ್ನು ವಾರಕ್ಕೆ ಎರಡು ಬಾರಿ ಬದಲಾಯಿಸಿ

ಡೆಂಗಿ ಲಕ್ಷಣಗಳು

 • ತೀವ್ರ ಜ್ವರ

 • ತಲೆನೋವು ಕಣ್ಣಿನ ಹಿಂಭಾಗದಲ್ಲಿ ನೋವು

 • ಮೌಂಸಖಂಡ ಹಾಗೂ ಕೀಲುಗಳಲ್ಲಿ ನೋವು

 • ಬಾಯಿ ಮೂಗು ಮತ್ತು ಒಸಡುಗಳಿಂದ ರಕ್ತ ಸ್ರಾವ‌

 • ಚರ್ಮದ ಮೇಲೆ ರಕ್ತ ಸ್ರಾವದ ಗುರುತುಗಳು 

ಬಾಗಲಕೋಟೆ ಜನರೇ ಎಚ್ಚರ

ಬಾಗಲಕೋಟೆ: ಜಿಲ್ಲೆಯಲ್ಲಿ ಕಂಡು ಬಂದಿರುವ 117 ಡೆಂಗಿ ಪ್ರಕರಣಗಳಲ್ಲಿ ಬಾಗಲಕೋಟೆ ತಾಲ್ಲೂಕೊಂದರಲ್ಲೇ 48 ಪ್ರಕರಣಗಳು ಕಂಡು ಬಂದಿವೆ. ಕೇವಲ 762 ಜನರನ್ನು ತಪಾಸಣೆ ಮಾಡಿದಾಗ ಕಂಡು ಬಂದಿದ್ದು ತಪಾಸಣೆ ಪ್ರಮಾಣ ಹೆಚ್ಚಿಸಿದರೆ ರೋಗಿಗಳ ಸಂಖ್ಯೆಯಲ್ಲಿಯೂ ಹೆಚ್ಚಳವಾಗಲಿದೆ. ಜ್ವರ ನೆಗಡಿಯಿಂದ ಬಾಧಿತರ ಸಂಖ್ಯೆ ಹೆಚ್ಚಾಗಿದ್ದು ಮಕ್ಕಳು ದೊಡ್ಡವರು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಜ್ವರಕ್ಕೆ ನೀವೇ ಔಷಧ ತೆಗೆದುಕೊಳ್ಳದೇ ವೈದ್ಯರ ಸಲಹೆ ಪಡೆಯಿರಿ. ಆರೋಗ್ಯ ರಕ್ಷಣೆಗೆ ಅವಶ್ಯಕ ಕ್ರಮಗಳನ್ನು ಕೈಗೊಳ್ಳಿ.

ಬಾಗಲಕೋಟೆ ಜಿಲ್ಲೆಯ ಡೆಂಗಿ ಪ್ರಕರಣಗಳ ವಿವರ(ತಾಲ್ಲೂಕು;ಪರೀಕ್ಷಿಸಿದ ಮಾದರಿಗಳ ಸಂಖ್ಯೆ;ಖಚಿತ ಪ್ರಕರಣಗಳು)

ಬಾಗಲಕೋಟೆ;762;48

ಹುನಗುಂದ;282;23

ಮುಧೋಳ;202;14

ಬಾದಾಮಿ;297;12

ಜಮಖಂಡಿ;139;12

ಬೀಳಗಿ;150;08

ಜ್ವರ ನೆಗಡಿ ಕೆಮ್ಮು ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿವೆ. ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ. ಜನರು ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು.
ಪ್ರಕಾಶ ಬಿರಾದಾರ
ಜಿಲ್ಲೆಯಲ್ಲಿ ಡೆಂಗಿ ನಿಯಂತ್ರಣದಲ್ಲಿದೆ. ಜನರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಮಲೇರಿಯಾ ಪ್ರಕರಣ ವರದಿಯಾಗಿಲ್ಲ.
ಜಯಶ್ರೀ ಎಮ್ಮಿ, ಜಿಲ್ಲಾ ಆರೋಗ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT