ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗವಿಕಲರ ಸ್ಕೂಟರ್‌ಗಳು ‘ಅನಾಥ’!

ಕಳೆದ ವರ್ಷವೇ ಫಲಾನುಭವಿಗಳು ಆಯ್ಕೆ: ಆರು ತಿಂಗಳ ಹಿಂದೆ ಪೂರೈಕೆ
Last Updated 5 ಜುಲೈ 2018, 11:29 IST
ಅಕ್ಷರ ಗಾತ್ರ

ಬಾಗಲಕೋಟೆ: ಜಿಲ್ಲೆಯಲ್ಲಿ ಅಂಗವಿಕಲರಿಗೆ ವಿತರಣೆ ಮಾಡಲು ಸರ್ಕಾರ ಪೂರೈಕೆ ಮಾಡಿದ್ದ 190 ಸ್ಕೂಟರ್‌ಗಳು, ಕಳೆದ ಆರು ತಿಂಗಳಿಂದ ಇಲ್ಲಿನ ನವನಗರದ ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿನ ಖಾಲಿ ಜಾಗದಲ್ಲಿ ಅನಾಥವಾಗಿ ಬಿದ್ದಿವೆ.

ಪ್ರತಿ ತಾಲ್ಲೂಕಿಗೆ 50 ವಾಹನಗಳನ್ನು ಹಂಚಿಕೆ ಮಾಡಲು ನಿರ್ಧರಿಸಿದ್ದ ಸರ್ಕಾರ, ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಗೆ ಕಳೆದ ಜನವರಿಯಲ್ಲಿಯೇ ಸ್ಕೂಟರ್‌ಗಳನ್ನು ಪೂರೈಕೆ ಮಾಡಿದೆ. ಅದರಲ್ಲಿ ಚುನಾವಣೆಗೆ ಮುನ್ನವೇ ಹುನಗುಂದ ತಾಲ್ಲೂಕಿಗೆ ಮೀಸಲಾದ ವಾಹನಗಳು ಹಂಚಿಕೆಯಾಗಿವೆ. ಉಳಿದವನ್ನು ತಂದು ಇಲ್ಲಿನ ಒಳಾಂಗಣ ಕ್ರೀಡಾಂಗಣದ ಕಟ್ಟಡದ ಹಿಂಬದಿಯ ಬಯಲಿನಲ್ಲಿ ಇಡಲಾಗಿದೆ. ಬಿಸಿಲು, ಮಳೆಗೆ ಸಿಲುಕಿ ಸ್ಕೂಟರ್‌ಗಳು ದಿನೇ ದಿನೇ ಹಾಳಾಗುತ್ತಿವೆ.

ಹಿಂದಿನ ವರ್ಷದ ಸ್ಕೂಟರ್‌:
ಹೀರೊ ಕಂಪೆನಿಗೆ ಸೇರಿದ ‘ಡುಯೆಟ್’ ಸ್ಕೂಟರ್‌ಗಳನ್ನು 2017–18ನೇ ಸಾಲಿನಲ್ಲಿ ಆಯ್ಕೆ ಮಾಡಲಾದ ಫಲಾನುಭವಿಗಳಿಗೆ ವಿತರಣೆ ಮಾಡಬೇಕಿದೆ. ಕಳೆದ ವರ್ಷವೇ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಕಾಸ್ ಸುರಳಕರ್ ಆಯ್ಕೆ ಮಾಡಿ ಫಲಾನುಭವಿಗಳ ಪಟ್ಟಿಯನ್ನು ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಗೆ ಕಳುಹಿಸಿದ್ದಾರೆ.

ಜೋಡಣೆಯಲ್ಲಿ ವಿಳಂಬ:
‘ಕಂಪೆನಿಯವರು ವಾಹನಗಳ ಬಿಡಿ–ಭಾಗಗಳನ್ನು ಇಲ್ಲಿಗೇ ತಂದು ಜೋಡಣೆ ಮಾಡಿಕೊಟ್ಟರು. ಅದೇ ವಿಳಂಬಕ್ಕೆ ಕಾರಣವಾಗಿದೆ. ಜೊತೆಗೆ ವಿಧಾನಸಭೆ ಚುನಾವಣೆ ನೀತಿ–ಸಂಹಿತೆಯೂ ಅಡ್ಡಿಪಡಿಸಿತು. ಎಲ್ಲ ಸ್ಕೂಟರ್‌ಗಳು ಜನವರಿಯಲ್ಲಿ ಬಂದಿಲ್ಲ. ಕೆಲವು ಮಾರ್ಚ್ ತಿಂಗಳಲ್ಲಿ ಪೂರೈಕೆಯಾಗಿವೆ. ಇನ್ನು ವಿಳಂಬ ಮಾಡುವುದಿಲ್ಲ. ಫಲಾನುಭವಿಗಳಿಗೆ ಕೂಡಲೇ ಸ್ಕೂಟರ್ ವಿತರಣೆ ಮಾಡುತ್ತೇವೆ ಎಂದು ಹೇಳಿದ ಜಿಲ್ಲಾ ಅಂಗವಿಕಲರ ಸಬಲೀಕರಣ ಇಲಾಖೆ ಅಧಿಕಾರಿ ಬಸವರಾಜ ಶಿರೂರ. ‘ವಾಹನಗಳ ವಿತರಣೆಗೆ ಯಾವುದೇ ಫಲಾನುಭವಿಯಿಂದ ನಾವು ಯಾರಿಂದಲೂ ಹಣ ಕೇಳಿಲ್ಲ’ ಎಂದರು.

ಪ್ರಭಾರಿ, ಗುತ್ತಿಗೆ ಸಿಬ್ಬಂದಿಯದ್ದೇ ಕಾರುಬಾರು...
ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿ ಸವಿತಾ ಕಾಳೆ ದೀರ್ಘ ರಜೆಯ ಮೇಲೆ ತೆರಳಿದ್ದಾರೆ. ಹಾಗಾಗಿ ವಯಸ್ಕರ ಶಿಕ್ಷಣ ಅಧಿಕಾರಿ ಬಸವರಾಜ ಶಿರೂರ ಅವರಿಗೆ ಪ್ರಭಾರ ನೀಡಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸೇರಿದಂತೆ ಮೂರು ಇಲಾಖೆಗಳಿಗೆ ಉಸ್ತುವಾರಿ ಅವರದ್ದೇ ಇದೆ. ಇನ್ನು ಅಂಗವಿಕಲರ ಇಲಾಖೆ ಕಚೇರಿಯಲ್ಲಿ ಒಬ್ಬರೂ ಕಾಯಂ ನೌಕರರು ಇಲ್ಲ. ಇರುವ ಏಳು ಮಂದಿ ಸಿಬ್ಬಂದಿಯೂ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವವರೇ ಆಗಿದ್ದಾರೆ. ‘ಗುತ್ತಿಗೆ ನೌಕರರಾದ ಕಾರಣ ಅವರಿಗೆ ಯಾವುದೇ ಉತ್ತರದಾಯಿತ್ವ ಇಲ್ಲ. ಅಲ್ಲಿ ಹಣವಿಲ್ಲದೇ ಯಾವುದೇ ಕೆಲಸ ನಡೆಯೊಲ್ಲ. ಸ್ಕೂಟರ್‌ಗಳ ವಿತರಣೆ ವಿಳಂಬಕ್ಕೂ ಅದೇ ಕಾರಣ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಫಲಾನುಭವಿಯೊಬ್ಬರು ಅಳಲು ತೋಡಿಕೊಳ್ಳುತ್ತಾರೆ.

10 ದಿನಗಳ ಹಿಂದೆಯೇ ಸ್ಕೂಟರ್‌ಗಳನ್ನು ವಿತರಣೆ ಮಾಡಲು ಸೂಚಿಸಿದ್ದೆ. ಈಗ ಮತ್ತೊಮ್ಮೆ ನಿರ್ದೇಶನ ನೀಡುತ್ತೇನೆ. ಆಯಾ ತಾಲ್ಲೂಕುಗಳಿಗೆ ಕಳುಹಿಸಿ ಇನ್ನೊಂದು ವಾರದಲ್ಲಿ ವಿತರಣೆಯಾಗಲಿವೆ
ವಿಕಾಸ್ ಸುರಳಕರ್, ಜಿಲ್ಲಾ ಪಂಚಾಯ್ತಿ ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT