ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬದಲಾವಣೆ ಇದ್ದರೆ ಪರಿಶೀಲಿಸೋಣ’

ವೈದ್ಯರ ದಿನಾಚರಣೆ: ಖಾಸಗಿ ವೈದ್ಯರಿಗೆ ಆರೋಗ್ಯ ಸಚಿವ ಶಿವಾನಂದ ಪಾಟೀಲ ಅಭಯ
Last Updated 8 ಜುಲೈ 2018, 13:43 IST
ಅಕ್ಷರ ಗಾತ್ರ

ಬಾಗಲಕೋಟೆ: ‘ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ತರಲು ಹಿಂದಿನ ಸಚಿವ ರಮೇಶಕುಮಾರ ಕೆಲವು ನಿಯಮಗಳನ್ನು ಜಾರಿಗೊಳಿಸಿದ್ದಾರೆ. ಅದರಿಂದ ನಿಮಗೆ ತೊಂದರೆಯಾಗಿದ್ದರೆ ಆ ಬಗ್ಗೆ ನನ್ನ ಬಳಿ ಚರ್ಚಿಸಿ, ಯಾವುದಾದರೂ ಬದಲಾವಣೆ ಇದ್ದರೆ ಪರಿಶೀಲಿಸೋಣ’ ಎಂದು ಖಾಸಗಿ ವೈದ್ಯರಿಗೆ ಆರೋಗ್ಯ ಸಚಿವ ಶಿವಾನಂದ ಪಾಟೀಲ ಅಭಯ ನೀಡಿದರು.

ಇಲ್ಲಿನ ಜಿಲ್ಲಾಡಳಿತ ಭವನದ ಸಭಾಭವನದಲ್ಲಿ ಭಾರತೀಯ ವ್ಯದೈಕೀಯ ಸಂಘ (ಐಎಂಎ) ಬಾಗಲಕೋಟೆ ಘಟಕದಿಂದ ಭಾನುವಾರ ಆಯೋಜಿಸಿದ್ದ ವೈದ್ಯರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ರಮೇಶಕುಮಾರ ತಂದಿದ್ದ ಬದಲಾವಣೆಯಿಂದ ಜನಸಾಮಾನ್ಯರಿಗೆ ಬಹಳ ಅನುಕೂಲವಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ತಮ್ಮ ಕಷ್ಟಗಳನ್ನು ದೂರ ಮಾಡುತ್ತಾರೆ ಎಂಬ ಕಾರಣಕ್ಕೆ ವೈದ್ಯರು ಹಾಗೂ ನ್ಯಾಯಾಧೀಶರನ್ನು ಜನತೆ ದೇವರು ಎಂದು ನಂಬುತ್ತಾರೆ. ಆ ಭಾವನೆ ಉಳಿಸಿಕೊಳ್ಳಲು ಪ್ರಾಮಾಣಿಕವಾಗಿ ಜನಸೇವೆ ಮಾಡಬೇಕು’ ಎಂದು ಸಲಹೆ ನೀಡಿದ ಸಚಿವರು, ‘ವೈದ್ಯ ವೃತ್ತಿಯಲ್ಲಿನ ಶೇ 90 ರಷ್ಟು ವೈದ್ಯರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಯಾರೋ ಒಂದಿಬ್ಬರೂ ಮಾಡುವ ತಪ್ಪಿಗೆ ಇಡೀ ವೈದ್ಯ ಸಮೂಹವನ್ನು ದೂಷಿಸಲಾಗುತ್ತದೆ. ಆ ಬಗ್ಗೆ ತಲೆಕೆಡಿಸಿಕೊಳ್ಳದೇ ನಿಸ್ವಾರ್ಥ ಸೇವೆ ಮುಂದುವರೆಸುವಂತೆ’ ಹೇಳಿದರು.

‘ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದ ಡಾ. ಬಿ.ಸಿ.ರಾಯ್ ಅವರ ಜನ್ಮದಿನ ಜು.1 ರಂದು ವೈದ್ಯರ ದಿನಾಚರಣೆ ಆಚರಿಸಲಾಗುತ್ತದೆ. ಡಾ.ರಾಯ್ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡಿದ್ದರು. ದಶಕಗಳ ಕಾಲ ಮುಖ್ಯಮಂತ್ರಿಯಾಗಿದ್ದರೂ ವೈದ್ಯಕೀಯ ರಂಗದ ನಂಟು ಬಿಟ್ಟಿರಲಿಲ್ಲ. ಜನರಿಗಾಗಿ ನಿಸ್ವಾರ್ಥ ಸೇವೆ ಮಾಡಿದ್ದಾರೆ’ ಎಂದರು.

‘ಪ್ರಪಂಚದ ಉಳಿದ ದೇಶಗಳಿಗಿಂತ ಹೆಚ್ಚಿನ ಸಂಖ್ಯೆಯ ವೈದ್ಯರು ನಮ್ಮಲ್ಲಿರುವುದು ಹೆಮ್ಮೆಯ ವಿಚಾರ. ಬಾಗಲಕೋಟೆ ವೈದ್ಯ ಡಾ.ಅಶೋಕ ಸೊನ್ನದ ಹಲವು ವರ್ಷಗಳ ಕಾಲ ಅಮೆರಿಕದಲ್ಲಿ ಕೆಲಸ ಮಾಡಿ ನಂತರ ತಾಯ್ನಾಡಿನ ಸೇವೆಗಾಗಿ ಅಲ್ಲಿಂದ ಮರಳಿದ್ದಾರೆ. ಅವರು ಇಲ್ಲಿನ ಜನರ ಸೇವೆ ಮಾಡುತ್ತಿರುವುದು ಶ್ಲಾಘನೀಯ’ ಎಂದರು.

ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ‘ಜಗತ್ತಿನಲ್ಲಿ ಹೆಚ್ಚಿನ ಸಂಖೈಯಲ್ಲಿ ವೈದ್ಯರು ಹಾಗೂ ಎಂಜಿನಿಯರ್‌ಗಳು ನಮ್ಮ ದೇಶದಲ್ಲಿಯೇ ಇದ್ದಾರೆ. ಆದರೆ ಅವರು ಮಾಡಿದ ಸಾಧನೆ ನಗಣ್ಯ’ ಎಂದರು. ‘ರಾಜ್ಯದಲ್ಲಿರುವ ಸರ್ಕಾರಿ ಆಸ್ಪತ್ರೆಗಳು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿವೆ. ಅವುಗಳನ್ನು ಸರಿಪಡಿಸಬೇಕಾದ ಜವಾಬ್ದಾರಿ ಸಚಿವರ ಮೇಲಿದೆ’ ಎಂದರು.

ಈ ಸಂದರ್ಭದಲ್ಲಿ ಹಿರಿಯ ವೈದ್ಯರನ್ನು ಭಾರತೀಯ ವೈದ್ಯಕೀಯ ಸಂಘದಿಂದ ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಡಾ.ಶೇಖರ ಮಾನೆ ಮಾತನಾಡಿದರು. ಜಿಲ್ಲಾ ಆರೋಗ್ಯ ಅಧಿಕಾರಿ ಎ.ಎನ್.ದೇಸಾಯಿ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಕಾಸ್ ಸುರಳಕರ್, ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಉಪವಿಭಾಗಾಧಿಕಾರಿ ಶಂಕರಗೌಡ ಸೋಮನಾಳ, ಬಿ.ವಿ.ವಿ ಸಂಘದ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಅಶೋಕ ಮಲ್ಲಾಪುರ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT