ಶಿಕ್ಷಕರಿಗೆ ನೀಡುವ ಮನ್ನಣೆ ಕಡಿಮೆ: ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ್

7

ಶಿಕ್ಷಕರಿಗೆ ನೀಡುವ ಮನ್ನಣೆ ಕಡಿಮೆ: ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ್

Published:
Updated:
Deccan Herald

ಬಾಗಲಕೋಟೆ: ‘ಶಿಕ್ಷಕರನ್ನು ಗೇಲಿ ಮಾಡುವ ಹಾಗೂ ಅವರ ಬಗ್ಗೆ ಹಗುರವಾಗಿ ಮಾತನಾಡುವ ಮನೋಭಾವ ನಿಲ್ಲಬೇಕಿದೆ’ ಎಂದು ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ್ ಹೇಳಿದರು.

ಜಿಲ್ಲಾ ಪಂಚಾಯ್ತಿ, ಜಿಲ್ಲಾಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಇಂದು ಶಿಕ್ಷಣದ ಗುಣಮಟ್ಟ ಕುಸಿದಿದೆ ಎಂಬುದು ಚರ್ಚೆಯ ವಿಚಾರವಾಗಿದೆ.  ನನ್ನ ವೈಯಕ್ತಿಕ ಅಭಿಪ್ರಾಯದ ಪ್ರಕಾರ ಗುಣಮಟ್ಟ ಕುಸಿದಿಲ್ಲ, ಶಿಕ್ಷಕರಿಗೆ ನೀಡುವ ಮನ್ನಣೆ ಕಡಿಮೆಯಾಗಿದೆ’ ಎಂದರು.

‘ಜಗತ್ತಿನ ಯಾವುದೇ ದೇಶದ ಜನರು ಮಾತನಾಡುತ್ತಾರೆ ಎಂದರೆ ಅದಕ್ಕೆ ಕಾರಣ ಶಿಕ್ಷಕರು. ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರನ್ನು ಮಾಜಿ ರಾಷ್ಟ್ರಪತಿ ಎಂದಷ್ಟೇ ಗುರುತಿಸುತ್ತೇವೆ. ಅದರ ಬದಲಾಗಿ, ಶಿಕ್ಷಣ ಕ್ಷೇತ್ರದಲ್ಲಿ ಅವರು ಮಾಡಿದ ಸಾಧನೆಯನ್ನು ಸಮ್ಮಾನಿಸಬೇಕು’ ಎಂದರು.

‘ಶಿಕ್ಷಕರಿಗೆ ಅವನೊಬ್ಬ ವ್ಯಕ್ತಿಯಾಗಿ ಏನು ಮಾಡಬೇಕು ಎಂಬ ಕಾಳಜಿ ಬೆಳೆಸಿಕೊಳ್ಳಬೇಕು. ಶಿಕ್ಷಕರ ವ್ಯಕ್ತಿತ್ವ ಬೆಳವಣಿಗೆಗೆ ನಿರಂತರ ಅಭ್ಯಾಸದ ಅವಶ್ಯಕತೆಯಿದೆ. ಯಾವ ಮನುಷ್ಯನಲ್ಲಿ ಕುತೂಹಲ ಇರುತ್ತದೆಯೋ ಆ ವ್ಯಕ್ತಿ ಬದುಕಿದ ಹಾಗೆ, ಯಾವ ವ್ಯಕ್ತಿಯಲ್ಲಿ ಕುತೂಹಲ ಇರುವುದಿಲ್ಲವೋ ಅಂದೇ ಅವನ ಅಂತ್ಯ’ ಎಂದು ಮಾರ್ಮಿಕವಾಗಿ ಹೇಳಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಂಗೂಬಾಯಿ ಮಾನಕರ ಮಾತನಾಡಿ, ‘ಶಿಕ್ಷಕರಿಗೆ ಪಾಠದ ಜೊತೆಗೆ ಬಿಸಿಯೂಟ ಸೇರಿದಂತೆ ಬೇರೆ ಬೇರೆ ಹೊಣೆ ವಹಿಸಲಾಗಿದೆ. ಹಾಗಾಗಿ ಅವರಿಗೆ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿಲ್ಲ. ಆದರೂ ಅದನ್ನೆಲ್ಲಾ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಈ ಬಾರಿ ರಾಜ್ಯ ಮಟ್ಟದಲ್ಲಿ ಬಾಗಲಕೋಟೆ 25 ನೇ ಸ್ಥಾನ ಪಡೆದಿದೆ. ಮುಂದಿನ ವರ್ಷ ರ್ಯಾಂಕಿಂಗ್ ಇನ್ನಷ್ಟು ಉತ್ತಮಪಡಿಸಲು ಶಿಕ್ಷಕರು ಶ್ರಮ ಹಾಕಬೇಕು’ ಎಂದರು.

ಗೋಕಾಕ್ ತಾಲ್ಲೂಕಿನ ಕುಂದರಗಿ ಗ್ರಾಮದ ಅಡವಿಸಿದ್ದೇಶ್ವರ ಮಠದ ಅಮರಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಎಂ.ಆರ್.ಕಾಮಾಕ್ಷಿ, ಶಿಕ್ಷಣಾಧಿಕಾರಿಗಳಾದ ಎ.ಕೆ.ಬಸವಣ್ಣವರ, ಎನ್.ಬಿ.ಗೊರವಾರ, ಡಿ.ವೈ.ಪಿ.ಸಿ ಎನ್.ವೈ.ಕುಂದರಗಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !