ರಸ್ತೆ ನೆಪ, ಕಂಬಕ್ಕೆ ಡಾಂಬರ್ ಭಾಗ್ಯ!

7
ಶಿರೂರು ತಾಂಡಾ–ನೀರಲಕೇರಿ 3.22 ಕಿ.ಮೀ ರಸ್ತೆ: ₨1.5 ಕೋಟಿ ವೆಚ್ಚ

ರಸ್ತೆ ನೆಪ, ಕಂಬಕ್ಕೆ ಡಾಂಬರ್ ಭಾಗ್ಯ!

Published:
Updated:
ಬಾಗಲಕೋಟೆ ತಾಲ್ಲೂಕು ಶಿರೂರು ತಾಂಡಾ–ನೀರಲಕೇರಿ ನಡುವಿನ ಸಂಪರ್ಕ ರಸ್ತೆಯ ಮಧ್ಯದಲ್ಲಿ ವಿದ್ಯುತ್ ಕಂಬಗಳು ಹಾದು ಹೋಗಿವೆ.ಪ್ರಜಾವಾಣಿ ಚಿತ್ರ

ಬಾಗಲಕೋಟೆ: ‘ಈ ರಸ್ತೆ ಮಾಡಿದ ಪುಣ್ಯಾತ್ಮರು ಯಾವ ಸಾಲ್ಯಾಗ (ಶಾಲೆ) ಕಲತಾರ, ಅವರ ಗುರುಗಳು ಯಾರ್ರೀ, ತೋರಿಸಿದರ ನೋಡಿ ನಮಗೂ ಪುಣ್ಯ ಬರ್ತದ... ಹೀಗೆಂದು ಬಾದಾಮಿ ತಾಲ್ಲೂಕು ಕೆರೂರಿನ ಹಿರಿಯರಾದ ನಿಂಗನಗೌಡರ ವ್ಯಂಗ್ಯವಾಗಿ ನಕ್ಕರು.

ಶಿರೂರು ತಾಂಡಾದಿಂದ ನೀರಲಕೇರಿ ಮಾರ್ಗದಲ್ಲಿ ಎದುರಿಗಿದ್ದ ಕರೆಂಟ್ ಕಂಬ ತಪ್ಪಿಸುತ್ತಲೇ ಟ್ರ್ಯಾಕ್ಟರ್‌ನ ಸ್ಟೇರಿಂಗ್‌ ತಿರುಗಿಸುತ್ತಾ ರಸ್ತೆ ಹುಡುಕುತ್ತಿದ್ದ ಅವರು, ‘ಪ್ರಜಾವಾಣಿ’ಗೆ ಎದುರಾದರು. ‘ಇದನ್ನು ರಸ್ತೆ ಎಂದು ಒಪ್ಪಿಕೊಂಡ ಆ ಎಂಜಿನಿಯರ್ ಹೊಟ್ಟೆಯೂ ತಣ್ಣಗಿರಲ್ರಿ. ಸಂಚಾರಕ್ಕೆ ಅಡ್ಡ ಮಾಡೋ ಕಂಬ ತೆಗೀದ ರಸ್ತೆ ಮಾಡು ಅಂತಾ ಯಾವ ಪುಸ್ತಕದಾಗ ಬರದಾರ. ಈಗ ಕಂಬ ಕಿತ್ತರೂ ಆ ರಸ್ತೆ ಪಾಡೇನು, ಇದಕ್ಕ ಒಪ್ಪಿಗಿ ಕೊಟ್ಟೋರು ಯಾರು’ ಎಂದು ಪ್ರಶ್ನಿಸಿದ ಅವರ ಮಾತಲ್ಲಿ ಆಕ್ರೋಶವೂ ತುಂಬಿತ್ತು.

‘ಸಂಜೆ ಮಬ್ಬುಗತ್ತಲಲ್ಲಿ ಇಲ್ಲವೇ ರಾತ್ರಿ ವೇಳೆ ಈ ರಸ್ತೆಯಲ್ಲಿ ವಾಹನಗಳು ವೇಗವಾಗಿ ಬಂದರೆ ಅಪಘಾತ ನಿಶ್ಚಿತ. ಜೀವ ಹೋದರೆ ಯಾರು ಹೊಣೆ’ ಎಂದು ಸ್ಥಳೀಯರಾದ ಮಹಾಂತೇಶ ಹೂಗಾರ ಕೇಳುತ್ತಾರೆ. ‘ಬೈಕ್, ಟ್ರ್ಯಾಕ್ಟರ್, ಚಕ್ಕಡಿ, ಲಾರಿ, ಕಾರು ಹೀಗೆ ಯಾರೇ ವಾಹನ ಸವಾರರು ಬಂದರೂ ಜೀವ ಕೈಯಲ್ಲಿ ಹಿಡಿದುಕೊಂಡೇ ಇಲ್ಲಿ ಸಂಚರಿಸಬೇಕು. ರಸ್ತೆಯ ಬಗ್ಗೆ ಗೊತ್ತಿದ್ದವರು ಮುನ್ನೆಚ್ಚರಿಕೆ ವಹಿಸುತ್ತಾರೆ. ಹೊಸದಾಗಿ ಬಂದವರ ಪಾಡೇನು’ ಎನ್ನುತ್ತಾರೆ.

ಜಲಸಂಪನ್ಮೂಲ ಇಲಾಖೆ ಕೃಷ್ಣಾ ಕಾಡಾದ ಅಡಿ ಶಿರೂರು ತಾಂಡಾದಿಂದ–ನೀರಲಕೇರಿವರೆಗೆ ಅಂದಾಜು ₨1.5 ಕೋಟಿ ವೆಚ್ಚದಲ್ಲಿ 3.22 ಕಿ.ಮೀ ರಸ್ತೆ ಸಿದ್ಧವಾಗುತ್ತಿದೆ. ಆಲಮಟ್ಟಿಯ ಹೊಲಗಾಲುವೆ ವಿಭಾಗ 3ರ ನಬಾರ್ಡ್ ಗ್ರಾಮೀಣ ಮೂಲ ಸೌಕರ್ಯ ನಿಧಿಯಡಿ ಈ ರಸ್ತೆ ನಿರ್ಮಿಸಲಾಗುತ್ತಿದೆ.

ನಮ್ಮ ಮಾತು ಕೇಳಲಿಲ್ಲ:

‘ಮೊದಲು ರಸ್ತೆ ವಿದ್ಯುತ್‌ ಕಂಬಗಳ ಪಕ್ಕದಲ್ಲಿತ್ತು. ಹೊಸದಾಗಿ ಸರ್ವೆ ಮಾಡಿದಾಗ ಕಂಬಗಳು ರಸ್ತೆ ಮಧ್ಯೆ ಬಂದಿವೆ’ ಎಂದು ಆಲಮಟ್ಟಿಯ ಕಾಡಾ ಹೊಲಗಾಲುವೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಸಂಗಮೇಶ ಮುಂಡಾಸ ಹೇಳುತ್ತಾರೆ. ‘ಕಂಬಗಳ ಸ್ಥಳಾಂತರದ ನಂತರ ರಸ್ತೆ ಮಾಡಿ. ಇಲ್ಲದಿದ್ದರೆ ವಾಹನ ಸವಾರರಿಗೆ ತೊಂದರೆಯಾಗಲಿದೆ. ನಾಳೆ ಕಂಬ ಕಿತ್ತರೆ, ರಸ್ತೆ ಹಾಳಾಗುತ್ತದೆ ಎಂದು ಗುತ್ತಿಗೆದಾರರಿಗೆ ಹೇಳಿದ್ದೆವು. ಅವರು ನಮ್ಮ ಮಾತು ಕೇಳಲಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

‘ಕಂಬಗಳ ಸ್ಥಳಾಂತರಿಸುವಂತೆ ಹೆಸ್ಕಾಂನವರಿಗೂ ಮನವಿ ಮಾಡಿದ್ದೇವೆ. ಅದರಲ್ಲಿ ಕರೆಂಟ್ ಇಲ್ಲ. ನೀವೇ ಕಿತ್ತು ಹಾಕಿ ಎಂದು ಹೇಳುತ್ತಾರೆ. ಹಾಗಾಗಿ ತಡವಾಗಿದೆ. ನಾವೇ ಕಂಬ ತೆಗೆಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡುತ್ತೇವೆ’ ಎಂದು ಮುಂಡಾಸ ‘ಪ್ರಜಾವಾಣಿ’ಗೆ ತಿಳಿಸಿದರು.

 

 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !