ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾದಾಮಿ: ಸ್ಥಗಿತಗೊಂಡಿರುವ ಕುಡಿಯುವ ನೀರಿನ ಯೋಜನೆ

ದುರಸ್ತಿಗೆ ಕಾದಿರುವ ಶುದ್ಧ ನೀರಿನ ಘಟಕಗಳು
Published 4 ಏಪ್ರಿಲ್ 2024, 5:47 IST
Last Updated 4 ಏಪ್ರಿಲ್ 2024, 5:47 IST
ಅಕ್ಷರ ಗಾತ್ರ

ಬಾದಾಮಿ: ಅನೇಕ ದಶಕಗಳಿಂದ ಬರಗಾಲದ ಹಣೆಪಟ್ಟಿ ಹೊತ್ತಿರುವ ತಾಲ್ಲೂಕಿನ ಹಲವು ಗ್ರಾಮಗಳು ಕುಡಿಯುವ ನೀರಿನ ತೊಂದರೆ ಎದುರಿಸುತ್ತಿವೆ. ಸರ್ಕಾರ ಮಲಪ್ರಭಾ ನದಿ ದಂಡೆಯ ಮಂಗಳೂರು ಮತ್ತು ಬೇಲೂರ ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಂದ ನೀರು ಬಾರದ್ದರಿಂದ ಪರದಾಡುವಂತಾಗಿದೆ.

ಮಂಗಳೂರು ಮತ್ತು ಬೇಲೂರ ಗ್ರಾಮಗಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಅನುಷ್ಠಾನವಾಗಿಲ್ಲ ಎಂದು ಗ್ರಾಮಸ್ಥರು ಹೇಳಿದರೆ, ಅಧಿಕಾರಿಗಳು ದುರಸ್ತಿಯಲ್ಲಿವೆ ಎಂದು ವರ್ಷದಿಂದ ಹೇಳುತ್ತ ಬಂದಿದ್ದಾರೆ. 

ವಿಶ್ವ ಬ್ಯಾಂಕ್ ನೆರವಿನಿಂದ ₹1.05 ಕೋಟಿ ವೆಚ್ಚದಲ್ಲಿ 2012-13 ರಲ್ಲಿ ಮಂಗಳೂರು ಗ್ರಾಮದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ನಿರ್ಮಿಸಲಾಗಿದೆ.  ಮಂಗಳೂರ, ಗೋನಾಳ ಮತ್ತು ಶಿರಬಡಗಿ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆಯಾಗಬೇಕಿತ್ತು. ಆದರೆ, ಮಲಪ್ರಭಾ ನದಿ ನೆರೆ ಪ್ರವಾಹದಿಂದ ಜಾಕ್‌ವೆಲ್‌ನಲ್ಲಿ ಸಂಪೂರ್ಣವಾಗಿ ಹೂಳು ತುಂಬಿ ಸ್ಥಗಿತವಾಗಿದೆ.  ಇದರಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜನರಿಗೆ ಇದ್ದೂ ಇಲ್ಲದಂತಾಗಿದೆ.  ಬೇಸಿಗೆಯಲ್ಲಿ ಮಂಗಳೂರ ಗ್ರಾಮದ ಜನರಿಗೆ ಖಾಸಗಿ ಕೊಳವೆಬಾವಿಯಿಂದ ನೀರನ್ನು ಪೂರೈಕೆ ಮಾಡಲಾಗುತ್ತಿದೆ ಎಂದು ಗ್ರಾಮದ ಹಿರಿಯ ಸಂಗಯ್ಯ ವಸ್ತ್ರದ ಹೇಳಿದರು.

‘ಬೇಲೂರ-ಜಾಲಿಹಾಳ ಗ್ರಾಮದ ಹೊರವಲಯದ ಹೊಸೂರ ರಸ್ತೆ ಪಕ್ಕದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯು ಬೇಲೂರ, ಜಾಲಿಹಾಳ, ಹೊಸೂರ, ಗಿಡ್ಡನಾಯಕನಾಳ, ಮಣ್ಣೇರಿ, ಢಾಣಕಶಿರೂರ, ಮತ್ತು ಹಿರೇನಸಬಿ ಗ್ರಾಮಗಳಿಗೆ ಪೂರೈಕೆಯಾಗಬೇಕಿತ್ತು. ಕಾಮಗಾರಿ ಮುಗಿದು 13 ವರ್ಷಗಳಾದರೂ ಇದುವರೆಗೂ ನೀರು ಬಂದಿಲ್ಲ’ ಎಂದು ಜಾಲಿಹಾಳ ಗ್ರಾಮಸ್ಥರು ದೂರಿದರು.

‘ಮಲಪ್ರಭಾ ನದಿಯಿಂದ ಹೊಸೂರ ರಸ್ತೆಯಲ್ಲಿರುವ ಕುಡಿಯುವ ನೀರು ಯೋಜನೆಯ ನೀರು ಸಂಗ್ರಹಗಾರಕ್ಕೆ ನೀರು ಬರುತ್ತಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ನೀರು ಪೂರೈಕೆ ಸರಿಯಾಗಿ ಆಗುತ್ತಿಲ್ಲ’ ಎಂದು ಬೇಲೂರ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಸುರೇಶ ಯಲಿಗಾರ ಆರೋಪಿಸಿದರು.

‘ಮಂಗಳೂರ ಗ್ರಾಮದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ನದಿ ಪಕ್ಕದಲ್ಲಿಯೇ ಜಾಕ್‌ವೆಲ್ ನಿರ್ಮಿಸಿದ್ದರಿಂದ ಸಂಪೂರ್ಣವಾಗಿ ಹೂಳು ತುಂಬಿದೆ. ಮಂಗಳೂರು ಗ್ರಾಮ ಪಂಚಾಯ್ತಿ ಪಿಡಿಒಗೆ ತಿಳಿಸಲಾಗಿದೆ. ಹೊಸೂರ ರಸ್ತೆಯಲ್ಲಿರುವ ಯೋಜನೆ ಆರಂಭಿಸಲು ಮಲಪ್ರಭಾ ನದಿ ದಂಡೆಯ ಜಾಕ್‌ವೆಲ್‌ಗೆ ಹೊಸ ಮೋಟಾರ್ ಅಳವಡಿಸಿದೆ. ನೀರು ಸಂಗ್ರಹಗಾರದ ನೆಲಕ್ಕೆ ಸಂಪೂರ್ಣವಾಗಿ ಸಿಮೆಂಟ್ ಅಳವಡಿಸಿ ನೀರು ಸಂಗ್ರಹಿಸಿ ಗ್ರಾಮಗಳಿಗೆ ಪೂರೈಕೆ ಮಾಡಲಾಗುವುದು’ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಂಜಿನಿಯರ್ ಆರ್.ಎಸ್. ಬಂಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ಸರ್ಕಾರದಿಂದ ಕೋಟಿ ಕೋಟಿ ಹಣ ವೆಚ್ಚ ಮಾಡಲಾಗಿದೆ. ಯೋಜನೆಗಳ ಸದುಪಯೋಗ ಜನರಿಗೆ ತಲುಪಬೇಕಿದೆ. ಹೀಗೆಯೇ ಬಿಟ್ಟರೆ ಚಾಲುಕ್ಯರ ಸ್ಮಾರಕಗಳ ಪಟ್ಟಿಯ ಜೊತೆಗೆ ಸರ್ಕಾರದ ಸ್ಮಾರಕವೆಂದು ಸೇರಬಹುದು.

ತಾಲ್ಲೂಕಿನಲ್ಲಿ ಗ್ರಾಮ ಪಂಚಾಯ್ತಿ ವತಿಯಿಂದ ಖಾಸಗಿ ಸಂಸ್ಥೆಗಳ ಸಹಯೋಗದಲ್ಲಿ 180ಕ್ಕೂ ಅಧಿಕ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ತೆರೆಯಲಾಗಿದೆ. ಇವುಗಳಲ್ಲಿ ಹವಲಾರು ಘಟಕಗಳು ಬಂದ್ ಆಗಿವೆ. ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ’ ಎಂದು ಬಾಚಿನಗುಡ್ಡ ಗ್ರಾಮದ ಕುಮಾರ ಯಡಪ್ಪನವರ ದೂರಿದರು.

ಬಾದಾಮಿ: ‘ಮಳೆಯ ಕೊರತೆಯಿಂದ ಗ್ರಾಮೀಣ ಪ್ರದೇಶದಲ್ಲಿ ನೀರಿನ ಕೊರತೆಯಾಗಿದೆ. ಖಾಸಗಿ ಕೊಳವೆಬಾವಿಗಳಿಂದ  ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ’ ಎಂದು ತಹಶೀಲ್ದಾರ್ ಜೆ.ಬಿ. ಮಜ್ಜಗಿ ಹೇಳಿದರು.

‘ತಾಲ್ಲೂಕಿನ ಮಣ್ಣೇರಿ ಗ್ರಾಮದಲ್ಲಿ ರೈತರೊಬ್ಬರು ತಮ್ಮ ಕೊಳವೆಬಾವಿಯಿಂದ ಉಚಿತವಾಗಿ ನೀರು ಪೂರೈಕೆ ಮಾಡುತ್ತಿದ್ದಾರೆ. ಮಂಗಳೂರ, ಕೈನಕಟ್ಟಿ, ಢಾಣಕಶಿರೂರ, ನಂದಿಕೇಶ್ವರ, ಗಿಡ್ಡನಾಯಕನಾಳ, ಯರಗೊಪ್ಪ ಇನಾಂ ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿಗಳಿಂದ ನೀರು ಪೂರೈಕೆ ನಡೆದಿದೆ’ ಎಂದರು.

ಮುಂಬರುವ ದಿನಗಳಲ್ಲಿ ಹೆಬ್ಬಳ್ಳಿ, ಹನಮನೇರಿ ಇನಾಂ ಮತ್ತು ನರೇನೂರ ತಾಂಡೆಗೆ ನೀರಿನ ಕೊರತೆ ಎದುರಾಗಬಹುದು ಎಂದು ಗುರುತಿಸಲಾಗಿದೆ. ಇಲ್ಲಿಯೂ ಸಹ ಖಾಸಗಿ ಕೊಳವೆಬಾವಿಗಳಿಂದ ನೀರು ಪೂರೈಕೆ ಮಾಡಲಾಗುವುದು ಎಂದು ಪ್ರತಿಕ್ರಿಯಿಸಿದರು.

ಮಂಗಳೂರು ಮತ್ತು ಹೊಸೂರ ರಸ್ತೆಯಲ್ಲಿನ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸ್ಥಳಕ್ಕೆ ಭೇಟಿ ನೀಡುವುದಾಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT