ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊನ್ನಾಕಟ್ಟಿ: ಕಣ್ಸೆಳೆಯುವ ಸರ್ಕಾರಿ ಶಾಲೆ

ಶಿಕ್ಷಣ ಪ್ರೇಮಿಗಳ ನೆರವಿನಿಂದ ಶಾಲೆಯ ಚಿತ್ರಣ ಬದಲು
Published 21 ಮಾರ್ಚ್ 2024, 4:57 IST
Last Updated 21 ಮಾರ್ಚ್ 2024, 4:57 IST
ಅಕ್ಷರ ಗಾತ್ರ

ರಾಂಪುರ: ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವ ಕಾಲದಲ್ಲಿ ಶಿಕ್ಷಣ ಪ್ರೇಮಿ ಕುಟುಂಬವೊಂದು   ಸರ್ಕಾರಿ ಶಾಲೆಗೆ ಸುಣ್ಣ-ಬಣ್ಣ ಬಳಿಸಿ, ಕಲಿಕಾ ಕೊಠಡಿಗಳಿಗೆ ರೈಲಿನ ರೂಪ ನೀಡಿ ಆಕರ್ಷಕವಾಗಿಸಿದ್ದಲ್ಲದೇ, ಪಾಠೋಪಕರಣ, ಪೀಠೋಪಕರಣಗಳನ್ನು ನೀಡಿ ಮಕ್ಕಳ ಕಲಿಕೆಗೆ ಉತ್ತೇಜನ ನೀಡಿದ್ದಾರೆ.

ಬಾಗಲಕೋಟೆ ತಾಲ್ಲೂಕಿನ ಹೊನ್ನಾಕಟ್ಟಿ ಗ್ರಾಮದ ಸಂಗಮಕ್ರಾಸ್- ಮನ್ನಿಕಟ್ಟಿ ಕ್ರಾಸ್ ಮಧ್ಯದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ದಾನಿಗಳಾದ ಸುಭಾಸ ನರಗುಂದ ಕುಟುಂಬದವರು ನೀಡಿರುವ 3 ಗುಂಟೆ ಜಾಗ ನೀಡಿದ್ದಾರೆ. ಶಾಲೆಯ ವಾತಾವರಣ ಹಸಿರಿನಿಂದ ಕೂಡಿದ್ದು, ಮಕ್ಕಳ ಕಲಿಕೆಗೆ ಪೂರಕವಾಗಿದೆ.

2008ರಲ್ಲಿ ಆರಂಭಗೊಂಡ ಶಾಲೆ ಮೊದಲು ತೋಟದ ಮನೆಯೊಂದರಲ್ಲಿ ನಡೆಯುತ್ತಿತ್ತು. 2012ರಲ್ಲಿ  ದಾನಿಗಳು ಜಾಗ ನೀಡಿದ್ದರಿಂದ ಕಟ್ಟಡ ನಿರ್ಮಿಸಲಾಯಿತು. 30 ಮಕ್ಕಳು ಓದುತ್ತಿದ್ದು, ಇಬ್ಬರು  ಶಿಕ್ಷಕರಿದ್ದಾರೆ. ಅವರು ತೋಟದ ನಿವಾಸಿ ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ಬಹಳ ಮುತುವರ್ಜಿ ವಹಿಸಿದ್ದರಿಂದ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚು.

ಶಾಲೆಯ ಮೇಲುಸ್ತುವಾರಿ ಸಮಿತಿ ಸದಸ್ಯರು, ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಹಲವು ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಜತೆಗೆ  ಶಾಲೆಗೆ ಅಗತ್ಯವಾದ ಪೀಠೋಪಕರಣ, ಪಾಠೋಪಕರಣಗಳಿಗಾಗಿ ತಾವೂ ಸೇರಿ ಅನೇಕ ದಾನಿಗಳಿಂದ ನೆರವು ಪಡೆದಿದ್ದಾರೆ.

ದಾನಿಗಳ ನೆರವು: ಊರು ಬಿಟ್ಟು ಹೊಲಗಳಲ್ಲಿಯೇ ನೆಲೆಸಿರುವ ರೈತರ ಮಕ್ಕಳೂ ಶಿಕ್ಷಣ ಪಡೆದು,  ಉತ್ತಮ ಭವಿಷ್ಯ ಕಟ್ಟಿಕೊಳ್ಳಬೇಕು. ಮಕ್ಕಳ ಕಲಿಕೆಗೆ ಪೂರಕ ವಾತಾವರಣ ಇರಬೇಕು ಎನ್ನುವ ತುಡಿತ ಹೊಂದಿದ ಶಿಕ್ಷಣಪ್ರೇಮಿ ಯಾಮಿನಿ ಫಾರ್ಮ್‌ಹೌಸ್ ಕುಟುಂಬ ಈಗ ಶಾಲೆಯ ಚಿತ್ರಣವನ್ನೇ ಬದಲಾಯಿಸಿದೆ.

ಅಂದಾಜು ನಾಲ್ಕು ಲಕ್ಷ ವೆಚ್ಚದಲ್ಲಿ ಶಾಲೆಗೆ ಸುಣ್ಣ-ಬಣ್ಣ ಬಳಿಸಿ, ಕಲಿಕಾ ಕೊಠಡಿಗಳಿಗೆ ರೈಲಿನ ರೂಪ ಕೊಡಿಸಿದ್ದಲ್ಲದೇ ನಲಿ– ಕಲಿ ಮಕ್ಕಳಿಗೆ ರೌಂಡ್ ಟೇಬಲ್ಸ್, ಕುರ್ಚಿ, 4ಮತ್ತು 5ನೇ ತರಗತಿ ಮಕ್ಕಳಿಗೆ ಡೆಸ್ಕ್ ಸೌಲಭ್ಯ, ಶಾಲೆಗೆ ಅಲ್ಮೇರಾ, ಸ್ಟಾಪ್ ರೂಮ್‌ಗೆ ಕುರ್ಚಿಗಳು, ಮೂರೂ ಕೊಠಡಿಗಳಿಗೂ ಫ್ಯಾನ್, ಲ್ಯಾಪ್‌ಟಾಪ್, ಪ್ರಿಂಟರ್, ಮೈಕ್ ಸೆಟ್ ಹೀಗೆ ಅಗತ್ಯ ವಸ್ತುಗಳನ್ನು ನೀಡುವ ಮೂಲಕ ಯಾಮಿನಿ ಫಾರ್ಮ್‌ಹೌಸ್ ಕುಟುಂಬ ನೆರವು ನೀಡಿದೆ.

ಮಕ್ಕಳಿಗೆ ಡೆಸ್ಕ್ ಸೌಲಭ್ಯ
ಮಕ್ಕಳಿಗೆ ಡೆಸ್ಕ್ ಸೌಲಭ್ಯ
ಶಾಲೆಯ ಅಂದ ಹೆಚ್ಚಿಸಿದ್ದಲ್ಲದೇ ಮಕ್ಕಳ ಕಲಿಕೆಗೆ ಅಗತ್ಯವಾದ ಪಿಠೋಪಕರಣ ನೀಡಿರುವುದು ಸಂತಸ. ಎಸ್‌ಡಿಎಂಸಿ ಅಧ್ಯಕ್ಷ ಸುಭಾಸ ನರಗುಂದ ಯಾಮಿನಿ ಫಾರ್ಮ್‌ಹೌಸ್ ಕುಟುಂಬದ ಸಹಾಯ ಸ್ಮರಣೀಯ
ಲಕ್ಷ್ಮಿ, ಮುಖ್ಯಶಿಕ್ಷಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT