ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾವಿದರ ದಾಖಲೀಕರಣಕ್ಕೆ ಒತ್ತಾಯ

ಕನ್ನಡ ಜಾನಪದ ಪರಿಷತ್ ಪದಾಧಿಕಾರಿಗಳ ಪದಗ್ರಹಣ
Last Updated 30 ಮಾರ್ಚ್ 2022, 1:33 IST
ಅಕ್ಷರ ಗಾತ್ರ

ಇಳಕಲ್: ಜಾನಪದ ನಮ್ಮ ನೆಲ ಮೂಲದ ಸಂಸ್ಕೃತಿ. ನಿತ್ಯ ಬದುಕಿನಲ್ಲಿ ಜಾನಪದ ಹಾಸು ಹೊಕ್ಕಾಗಿದೆ. ಎಲೆಯಮರೆಯ ಕಾಯಿಯಂತಿರುವ ಜಾನಪದ ಕಲಾವಿದರನ್ನು ಗುರುತಿಸಿ, ಪ್ರೋತ್ಸಾಹಿಸುವ ಹಾಗೂ ದಾಖಲಿಸುವ ಕಾರ್ಯವನ್ನು ಸರ್ಕಾರ ಮಾಡಬೇಕು ಎಂದು ಕನ್ನಡ ಜಾನಪದ ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ಡಾ. ಎಸ್‍.ಬಾಲಾಜಿ ಹೇಳಿದರು.

ಇಲ್ಲಿಯ ವಿಜಯ ಮಹಾಂತೇಶ ದಾಸೋಹ ಭವನದಲ್ಲಿ ಕನ್ನಡ ಜಾನಪದ ಪರಿಷತ್ ಇಳಕಲ್ ತಾಲ್ಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ ಹಾಗೂ ಜಾನಪದ ಸಂಭ್ರಮ ಕಾರ್ಯಕ್ರಮವನ್ನು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ರಾಮನಗೌಡ ಸಂದಿಮನಿ ಮಾತನಾಡಿ, ಜಾನಪದಕ್ಕಿರುವ ಗತ್ತು, ಗಾಂಭೀರ್ಯ, ಗೇಯತೆ, ಆಕರ್ಷಣೆ ಜಗತ್ತಿನ ಬೇರೆ ಸಾಹಿತ್ಯಕ್ಕೂ ಇಲ್ಲ. ಜನಪದ ಸಾಹಿತ್ಯ ಎಲ್ಲ ಸಾಹಿತ್ಯಗಳಿಗೂ ತಾಯಿ ಬೇರು. ತಾಯಿಯಿಂದ ಬರುವ ಅಪ್ಪಟ ಹೃದಯದ ಭಾಷೆ ಇದು. ಜನಪದವೇ ಸತ್ಯ ಜನಪದವೇ ನಿತ್ಯ ಎಂದು ಅಭಿಪ್ರಾಯಪಟ್ಟರು.

ವಿಜಯಮಹಾಂತೇಶ ಸಂಸ್ಥಾನ ಮಠದ ಗುರುಮಹಾಂತ ಶ್ರೀ, ಸಜ್ಜಲಗುಡ್ಡ- ಕಂಬಳಿಹಾಳದ ದೊಡ್ಡಬಸವಾರ್ಯ ತಾತನವರು ಸಾನ್ನಿಧ್ಯ ವಹಿಸಿದ್ದರು. ಡಾ.ಶರಣಪ್ಪ ಗೋನಾಳ ಅಧ್ಯಕ್ಷತೆ ವಹಿಸಿದ್ದರು. ಪ್ರಗತಿಪರ ರೈತ ಶರಣಪ್ಪ ಲೆಕ್ಕಿಹಾಳ ಜೀವನ ಕುರಿತಾದ ‘ಸಹೃದಯಿ ಶರಣ’ ಪುಸ್ತಕದ ಹಸ್ತ ಪ್ರತಿಯನ್ನು ಉಭಯ ಶ್ರೀಗಳು ಬಿಡುಗಡೆ ಮಾಡಿದರು.

ಪ್ರಾಸ್ತಾವಿಕವಾಗಿ ಕನ್ನಡ ಜಾನಪದ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಚನ್ನಬಸಪ್ಪ ಲೆಕ್ಕಿಹಾಳ ಮಾತನಾಡಿ, ನಮ್ಮ ಜನಪದೀಯರು ಹೃದಯದಿಂದ ಹೃದಯಕ್ಕೆ ತೂರಿಬಿಟ್ಟ ಅಂದಂದಿನ ಅನುಭವಗಳನ್ನು ಮುಂದಿನ ಪೀಳಿಗೆಗೆ ದಾಟಿಸಬೇಕು ಎಂದರು.

ನಿಕಟಪೂರ್ವ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಸಂಗಣ್ಣ ಗದ್ದಿ 'ಸಹೃದಯಿ ಶರಣ' ಪುಸ್ತಕದ ಪರಿಚಯಿಸಿದರು.

ನಗರ ಸಭೆಯ ಅಧ್ಯಕ್ಷ ಮಂಜುನಾಥ ಶೆಟ್ಟರ್, ಇಳಕಲ್ಲ ಸಹಕಾರ ಬ್ಯಾಂಕ್ ನಿರ್ದೇಶಕ ಪ್ರವೀಣ ಹೂಲಗೇರಿ, ರಾಜ್ಯ ಪ್ರಶಸ್ತಿ ಪುರಸ್ಕೃತ ಜಾನಪದ ಕಲಾವಿದ ರಾಜನಗೌಡ ಪಾಟೀಲ, ಕೆ.ಸಿ. ಕಾಂತಪ್ಪ, ಸಾಹಿತಿ ಬಿ.ಎಸ್. ದುಂಡಾರಡ್ಡಿ, ಲೇಖಕ ರಾಜಶೇಖರ ಕಲ್ಮಠ, ನಿವೃತ್ತ ಪ್ರಾಚಾರ್ಯ ಶಿವಾನಂದ ಕಡಪಟ್ಟಿ, ವಿ.ಬಿ. ಜೀರಗಿ, ಶಿವಾನಂದ ರೂಳಿ, ವೀರಪ್ಪ ಗೋನಾಳ, ಸಂಗಣ್ಣ ಎಮ್ಮಿ, ರಂಗಕರ್ಮಿ ಮಹಾಂತೇಶ ಗಜೇಂದ್ರಗಡ ಉಪಸ್ಥಿತರಿದ್ದರು.

ವಿವಿಧ ಕಲಾವಿದರು, ಕಲಾ ತಂಡಗಳು ಹಾಡು, ನೃತ್ಯಗಳ ಮೂಲಕ ಜಾನಪದ ಸಂಭ್ರಮದ ಮೆರುಗು ಹೆಚ್ಚಿಸಿದರು. ಕಜಾಪ ಪದಾಧಿಕಾರಿಗಳಾದ ಕಾರ್ಯದರ್ಶಿ ಶ್ರೀಕಾಂತ ಚಿತ್ತರಗಿ, ಖಜಾಂಚಿ ಎಂ.ಆರ್. ಪಾಟೀಲ, ಮಾರ್ತಂಡರಾವ್ ಜೋಶಿ, ಮಹಾಂತೇಶ ಹೊಕ್ರಾಣಿ, ಮಹಾಂತೇಶ ಗೊರಜನಾಳ, ಗುರು ಗಾಣಿಗೇರ, ಮಲ್ಲಯ್ಯ ಗಣಾಚಾರಿ, ಪ್ರವೀಣ ಮುದಗಲ್, ಬಸವರಾಜ ಚಳಗೇರಿ, ಸವಿತಾ ಮಾಟೂರ, ಸಾವಿತ್ರಿ ಬೆಲ್ಲದ ಹಾಗೂಗಿ ಶಶಿಕಾಂತ ಬಂಡರಗಲ್ಲ ಪದಗ್ರಹಣ ಮಾಡಿದರು.

ಅಕ್ಕನ ಬಳಗದ ಅಧ್ಯಕ್ಷೆ ಗಿರಿಜಾ ಶಿವಬಲ್ ಸಂಗಡಿಗರು ಪ್ರಾರ್ಥಿಸಿದರು. ವಿದ್ಯಾಶ್ರೀ ಗಂಜಿ ಗುರುಪ್ರಸಾದ ಜಾನಪದ ಗೀತೆ ಹಾಡಿದರು. ಪ್ರವೀಣ ಮುದಗಲ್ಲ ನಿರೂಪಿಸಿದರು. ಶ್ರೀಕಾಂತ ಮಾರಾ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT