ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ: ಬಸವ ತತ್ವ ಪ್ರವಚನಕಾರ ಡಾ.ಈಶ್ವರ ಮಂಟೂರ ಹೃದಯಾಘಾತದಿಂದ ನಿಧನ

Last Updated 9 ಡಿಸೆಂಬರ್ 2021, 10:19 IST
ಅಕ್ಷರ ಗಾತ್ರ

ಬಾಗಲಕೋಟೆ: ಜಮಖಂಡಿ ತಾಲ್ಲೂಕಿನ ಹುನ್ನೂರು–ಮಧುರಖಂಡಿಯ ಬಸವಜ್ಞಾನ ಗುರುಕುಲದ ಮುಖ್ಯಸ್ಥರಾದ ಡಾ.ಈಶ್ವರ ಮಂಟೂರ (49) ಗುರುವಾರ ಮಧ್ಯಾಹ್ನ ಹೃದಯಾಘಾತದಿಂದ ನಿಧನರಾದರು. ಅವರಿಗೆ ಪತ್ನಿ, ಇಬ್ಬರು ಮಕ್ಕಳು ಇದ್ದಾರೆ.

ಡಾ. ಈಶ್ವರ ಮಂಟೂರ ಬಸವ ತತ್ವ ಪ್ರಚಾರಕರಾಗಿ, ಕವಿಯಾಗಿ, ಚಿಂತಕರಾಗಿ, ಅನುಭಾವಿ ಪ್ರವಚನಕಾರರಾಗಿ, ಸಾಹಿತಿಗಳಾಗಿ, ಸಮಾಜೋದ್ಧಾರ್ಮಿಕ ಕಾರ್ಯಗಳ ಮೂಲಕ ಗುರುತಿಸಿಕೊಂಡಿದ್ದರು. ’ಪ್ರಜಾವಾಣಿ‘ಯಲ್ಲಿ ’ವಚನಾಮೃತ‘ ಅಂಕಣಕಾರರಾಗಿದ್ದರು.

ಹುನ್ನೂರಿನ ನೇಕಾರ ಕುಟುಂಬದಲ್ಲಿ 1972ರ ಮಾರ್ಚ್ 23 ರಂದುಶ್ರೀಶೈಲಪ್ಪ, ಅನ್ನಪೂರ್ಣ ದಂಪತಿ ಪುತ್ರನಾಗಿ ಜನಿಸಿದ್ದ ಈಶ್ವರ ಮಂಟೂರ ಬಾಲ್ಯದಲ್ಲಿಯೇ ಶಿಕ್ಷಣದೊಂದಿಗೆ ಸಂಗೀತ, ಸಾಹಿತ್ಯ, ಭಜನೆ, ಪುರಾಣ, ಪ್ರವಚನ ಮೈಗೂಡಿಸಿಕೊಂಡಿದ್ದರು.

ನಾಡಿನಲ್ಲಿ ದೇಸಿ ಕಲೆಗಳನ್ನು ಉಳಿಸಿ ಬೆಳೆಸಲು ‘ರಾಗರಶ್ಮಿ’ ಎಂಬ ಜಾನಪದ ಕಲಾವಿದರ ಬಳಗ ಕಟ್ಟಿಕೊಂಡು ಹಳ್ಳಿ-ಹಳ್ಳಿಗೆ ಸಂಚರಿಸಿದ್ದರು.ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶ, ಮಹಾರಾಷ್ಟ್ರ, ಗೋವಾದ ಗಡಿಭಾಗ, ಬಹರೇನ್, ದುಬೈ ರಾಷ್ಟ್ರಗಳಲ್ಲೂ ಶರಣ ಸಂಸ್ಕೃತಿಯ ಪ್ರಚಾರ-ಪ್ರಸಾರದ ಜೊತೆಗೆ ವಚನ ಪ್ರವಚನ ಮಾಡಿದ್ದರು.

ಡಾ. ಈಶ್ವರ ಮಂಟೂರ ಗೀತ ರಚನಕಾರರು ಆಗಿದ್ದರು. ಬಸವಭಾವ ಗೀತೆಗಳು, ಬಸವಭಾವ ಪೂಜೆ, ವಚನವಂದನೆ, ತವರಿನ ತಾವರೆ ಸೇರಿದಂತೆ ಹತ್ತಾರು ಧ್ವನಿಸುರಳಿಗಳು ಜನಪ್ರಿಯಗೊಂಡಿದ್ದವು. ಪ್ರತಿ ವರ್ಷ ಡಿಸೆಂಬರ್ ತಿಂಗಳಲ್ಲಿ ಮೂರು ದಿನ ಕಾಲ ‘ಶರಣ ಸಂಸ್ಕತಿ ಉತ್ಸವ ಹಾಗೂ ಜಾನಪದ ಕಲಾಮಹೋತ್ಸವ ವಿಜೃಂಭಣೆಯಿಂದ ಆಚರಿಸುತ್ತಿದ್ದರು.

ಡಾ.ಈಶ್ವರ ಮಂಟೂರ ನಿಧನಕ್ಕೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಸಂತಾಪ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT